ETV Bharat / city

ಮರು ಪರಿಷ್ಕರಣೆಗೊಂಡ ಪಠ್ಯಪುಸ್ತಕ ಹಿಂಪಡೆಯಿರಿ: ಸಿಎಂಗೆ ಪತ್ರ ಬರೆದ ದೇವೇಗೌಡರು

author img

By

Published : Jun 21, 2022, 1:23 PM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದೇವೇಗೌಡರು ಪತ್ರ ಬರೆದು, ಮರು ಪರಿಷ್ಕರಣೆಗೊಂಡ ಪಠ್ಯಪುಸ್ತಕಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಸಿಎಂಗೆ ಪತ್ರ ಬರೆದ ದೇವೇಗೌಡರು
ಸಿಎಂಗೆ ಪತ್ರ ಬರೆದ ದೇವೇಗೌಡರು

ಬೆಂಗಳೂರು: ಮರು ಪರಿಷ್ಕರಣೆಗೊಂಡ ಪಠ್ಯಪುಸ್ತಕಗಳನ್ನು ಹಿಂಪಡೆಯಬೇಕು ಎಂದು ಮಾಜಿ ಪ್ರಧಾನಿ, ಜೆಡಿಎಸ್‍ ವರಿಷ್ಠ ಹೆಚ್.ಡಿ.ದೇವೇಗೌಡರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದೇವೇಗೌಡರು ಪತ್ರ ಬರೆದಿದ್ದಾರೆ.

'ಪಠ್ಯಪುಸ್ತಕಗಳ ಮರು ಪರಿಷ್ಕರಣೆಗೆ ನೇಮಿಸಿದ ಸಮಿತಿಯ ಅಧ್ಯಕ್ಷರು ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಗೆ ಅವಮಾನ ಮಾಡಿರುತ್ತಾರೆ. ನಾಡಗೀತೆಯನ್ನು ಅಸಭ್ಯವಾಗಿ ತಿರುಚಿದವರಿಗೆ ಬಹುಮಾನ ನೀಡುತ್ತೇನೆಂದು ಹೇಳಿದ್ದು ಕೂಡಾ ಕುವೆಂಪು ಅವರಿಗೆ ಮಾಡಿದ ದೊಡ್ಡ ಅವಮಾನವೇ ಆಗಿದೆ. ನಾಡಧ್ವಜವನ್ನು ಒಳ ಉಡುಪಿಗೆ ಹೋಲಿಸಿದ್ದೂ ನಾಡ ಅಸ್ಮಿತೆಗೆ ಮಾಡಿದ ಅವಮಾನವಾಗಿದೆ' ಎಂದು ಹೇಳಿದ್ದಾರೆ.

'ಜೊತೆಗೆ ಡಾ.ಅಂಬೇಡ್ಕರ್ ಅವರನ್ನೂ ಹಂಗಿಸಿದ್ದಾರೆ. ಇಂಥ ವ್ಯಕ್ತಿಯ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಲು ಸರ್ಕಾರ ನಿರ್ಧರಿಸಿದ್ದೇ ಮೊದಲ ತಪ್ಪು. ಇನ್ನು ಮರು ಪರಿಷ್ಕರಣೆಯಲ್ಲಿ ಮಾಡಿರುವ ತಪ್ಪುಗಳಂತೂ ಅಸಂಖ್ಯಾತ, ಸಮಾಜ ವಿಜ್ಞಾನ ಪಠ್ಯಪುಸ್ತಕದ ಏಕೀಕರಣ ಪಾಠದಿಂದ ಕುವೆಂಪು ಅವರ ಭಾವಚಿತ್ರವನ್ನು ತೆಗೆದು ಹಾಕಲಾಗಿದೆ.

ಬಸವಣ್ಣನವರ ಚಳವಳಿಯ ಆಶಯವುಳ್ಳ ಭಾಗಗಳನ್ನು ಕೈಬಿಡಲಾಗಿದೆ. ಸಿದ್ಧಗಂಗೆ ಮತ್ತು ಆದಿಚುಂಚನಗಿರಿ ಶ್ರೀಗಳ ಸೇವೆಯ ವಿವರಗಳನ್ನು ತೆಗೆಯಲಾಗಿದೆ. ಅಂಬೇಡ್ಕರ್ ಅವರಿಗೆ 'ಸಂವಿಧಾನ ಶಿಲ್ಪಿ' ಎಂದಿದ್ದ ವಿಶೇಷಣವನ್ನು ತೆಗೆಯಲಾಗಿದೆ. ಅಕ್ಕ, ಕನಕ, ಪುರಂದರ, ಶರೀಫ ಅವರಂತಹ ಮಹಾನ್ ದಾರ್ಶನಿಕ ಸಂತರ ಪಠ್ಯಗಳನ್ನೇ ತೆಗೆಯಲಾಗಿದೆ. ಕೆಂಪೇಗೌಡ, ಸುರಪುರ ನಾಯಕರ ವಿಷಯಗಳನ್ನು ಕಡಿತಗೊಳಿಸಲಾಗಿದೆ. ಡಾ.ಅಂಬೇಡ್ಕರ್ ಮತ್ತು ಕುವೆಂಪು ಅವರು ಸಾರಿದ ಸಾಮಾಜಿಕ ನ್ಯಾಯ, ಸಮಾನತೆ, ಜಾತ್ಯತೀತತೆ ಮತ್ತು ವಿಶ್ವಮಾನವತ್ವದ ಪರಿಕಲ್ಪನೆಗಳನ್ನು ಕಡೆಗಣಿಸಿರುವುದು ಮನ‌ ಪರಿಷ್ಕರಣೆಯಲ್ಲಿ ಎದ್ದು ಕಾಣುತ್ತದೆ' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ದೇವೇಗೌಡರ ಪತ್ರ
ದೇವೇಗೌಡರ ಪತ್ರ

'ಪಠ್ಯಪುಸ್ತಕಗಳಲ್ಲಿನ ಅಸಂಖ್ಯಾತ ದೋಷ ಮತ್ತು ಅನ್ಯಾಯಗಳನ್ನು ಕೇವಲ ತಮ್ಮೇಲೆ ಅಥವಾ ಪ್ರತ್ಯೇಕ ಪುಟಗಳ ಮುದ್ರಣದಿಂದ ಸರಿಪಡಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪುನರ್ ಪರಿಷ್ಕರಣೆಯ ಪಠ್ಯಪುಸ್ತಕಗಳನ್ನು ವಾಪಸ್ ಪಡೆದು, ಹಿಂದೆ ಇದ್ದ ಬರಗೂರು ರಾಮಚಂದ್ರಪ್ಪರವರ ನೇತೃತ್ವದ 27 ಸಮಿತಿಗಳು ಪರಿಷ್ಕರಿಸಿದ ಪಠ್ಯಪುಸ್ತಕಗಳನ್ನೇ ಈ ವರ್ಷ ಮುಂದುವರೆಸುವುದು ಸೂಕ್ತವೆಂದು' ಎಂದು ದೇವೇಗೌಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಈಗ ತಮಗೆ ಕಳುಹಿಸುತ್ತಿರುವ "ವಿಶ್ವಮಾನವ ಕುವೆಂಪು ಹೋರಾಟ ಸಮಿತಿ"ಯ ಹಕ್ಕೊತ್ತಾಯ ಪತ್ರದ ಅಂಶಗಳನ್ನು ನಾನು ಕೂಡ ಬೆಂಬಲಿಸುತ್ತಾ, ಈ ವಿಷಯವಾಗಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಶಿಸುತ್ತೇನೆ' ಎಂದು ಪತ್ರದಲ್ಲಿ ತಿಳಿಸಿದ್ದಾರೆ.

(ಇದನ್ನೂ ಓದಿ: ರಾಷ್ಟ್ರಪತಿ ಹುದ್ದೆ: ಪ್ರತಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಆಯ್ಕೆ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.