ETV Bharat / city

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರನ್ನು ತನ್ನತ್ತ ಸೆಳೆಯಲು ಮುಂದಾಗಿದೆಯೇ ಜೆಡಿಎಸ್‍!?

author img

By

Published : Apr 20, 2022, 12:51 PM IST

2018ರಲ್ಲಿ ಅನ್ಸಾರಿ ಸೋಲಿಗೆ ಪ್ರಮುಖ ಕಾರಣವಾಗಿದ್ದು ಇದೇ ಧರ್ಮದ ರಾಜಕಾರಣ. ಇನ್ನು ಅನ್ಸಾರಿಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್‌ನಲ್ಲಿ ಬಂಡಾಯ ಏಳುವ ಸಾಧ್ಯತೆಗಳು ಹೆಚ್ಚಾಗಿದ್ದು, ಗಂಗಾವತಿಯ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಬದಲಾವಣೆಗೆ ಕಾಂಗ್ರೆಸ್‌ನ ಬಣವೊಂದು ಪಟ್ಟು ಹಿಡಿದಿದೆ‌. ಇಕ್ಬಾಲ್ ಅನ್ಸಾರಿ ವಿರುದ್ಧ ಸಜ್ಜಾಗಿರುವ ಕೆಲ ಕಾಂಗ್ರೆಸ್ ಮುಖಂಡರಿಂದ ಅನ್ಸಾರಿಗೆ ಟಿಕೆಟ್ ತಪ್ಪಿಸಲು ಭರ್ಜರಿ ಪ್ಲಾನ್ ನಡೆದಿದೆ..

former-minister-iqbal-ansari-will-join-jds
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರನ್ನು ತನ್ನತ್ತ ಸೆಳೆಯಲು ಮುಂದಾಗಿದೆಯೇ ಜೆಡಿಎಸ್‍?

ಬೆಂಗಳೂರು : ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ನೀಡಬಾರದು ಎಂದು ಕಾಂಗ್ರೆಸ್‌ನ ಒಂದು ಬಣ ಲಾಬಿ ನಡೆಸುತ್ತಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್‌ನ ಹಲವು ಮುಖಂಡರನ್ನು ಭೇಟಿ ಮಾಡಿ ಮನವಿ ಮಾಡಿರುವುದಾಗಿ ತಿಳಿದು ಬಂದಿದೆ. ಕಳೆದ ಚುನಾವಣೆಯಲ್ಲಿ ಸೋತಿರುವ ಅನ್ಸಾರಿ ಬದಲಿಗೆ ಬೇರೆ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಒತ್ತಡ ಹೇಳಲಾಗುತ್ತಿದೆ ಎಂದು ತಿಳಿದು ಬಂದಿದೆ.

ಇದರ ಲಾಭವನ್ನು ಪಡೆದುಕೊಳ್ಳಲು ಮುಂದಾಗಿರುವ ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ, ಅನ್ಸಾರಿ ಅವರನ್ನು ಪಕ್ಷಕ್ಕೆ ಕರೆ ತರಲು ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದಾರೆ. ಒಂದು ವೇಳೆ ಅನ್ಸಾರಿ ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ಭರವಸೆ ದೊರೆಯದಿದ್ದರೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಈ ಹಿಂದೆ ಜೆಡಿಎಸ್‌ನಿಂದ ಗೆದ್ದಿದ್ದ ಇಕ್ಬಾಲ್ ಅನ್ಸಾರಿ ಟಿಕೆಟ್ ಕೊಡುವ ಪಕ್ಷಕ್ಕೆ ಗುಳೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಜಗಳವನ್ನು ಲಾಭವಾಗಿ ಪರಿವರ್ತಿಸಿಕೊಳ್ಳಲು ಬಿಜೆಪಿ ನಾಯಕರು ಇನ್ನೊಂದೆಡೆ ರಣತಂತ್ರ ರೂಪಿಸಿದ್ದಾರೆ. ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಹಣಾಹಣಿ ಇದ್ದು, ಜೆಡಿಎಸ್ ಕೂಡ ಇಲ್ಲಿ ತನ್ನ ತಂತ್ರಗಾರಿಕೆ ಅನುಸರಿಸುವ ಸಾಧ್ಯತೆಯಿದೆ. ಹೀಗಾಗಿ, ಕೊಪ್ಪಳದಲ್ಲಿ ಅಂಜನಾದ್ರಿ ಹನುಮನ ಹೆಸರಿನಲ್ಲಿ ನಡೆಯುತ್ತಿರುವ ರಾಜಕಾರಣ ಕುತೂಹಲ ಕೆರಳಿಸಿದೆ.

ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿಗೆ ಸ್ವಪಕ್ಷೀಯರಿಂದಲೇ ಧರ್ಮ ಸಂಕಟ ಎದುರಾಗಿದೆ. ಅನ್ಸಾರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ತಪ್ಪಿಸಲು ಮಾಜಿ ಸಂಸದರೊಬ್ಬರ ತಂಡ ಟೊಂಕಕಟ್ಟಿ ನಿಂತಿರುವುದಾಗಿ ಹೇಳಲಾಗುತ್ತಿದೆ. ಇದರಿಂದ ಗಂಗಾವತಿ ಕಾಂಗ್ರೆಸ್‌ನಲ್ಲಿ ಯಾವುದೂ ಸರಿಯಿಲ್ಲ ಎನ್ನುವ ಅಪಸ್ವರಗಳು ಶುರುವಾಗಿವೆ.

ಈ ಬಾರಿ ಇಕ್ಬಾಲ್ ಅನ್ಸಾರಿಗೆ ಟಿಕೆಟ್ ಬೇಡ ಎಂದು ಕಾಂಗ್ರೆಸ್ ಮುಖಂಡರಿಂದ ಒತ್ತಾಯಿಸುವುದಕ್ಕೆ ಕಾರಣ ಕೊಪ್ಪಳದಲ್ಲಿ ಹನುಮನ ಹೆಸರಿನಲ್ಲಿ ಚುನಾವಣೆಗೆ ಸಿದ್ಧತೆ ಶುರುವಾಗಿದೆ. ಧರ್ಮದ ಹೆಸರಿನಲ್ಲಿ ಮತದಾರರನ್ನು ಸೆಳೆಯಲು ಬಿಜೆಪಿ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆಲ್ಲಲು ಧರ್ಮ ಒಂದೇ ಅಸ್ತ್ರ. ಹಾಗಾಗಿ, ಬೇರೆ ಅಭ್ಯರ್ಥಿಗೆ ಟಿಕೆಟ್ ಕೊಡಿ, ಇಕ್ಬಾಲ್ ಅನ್ಸಾರಿಗೆ ಟಿಕೆಟ್ ಕೊಟ್ಟರೆ ಸೋಲು ಖಚಿತ ಎಂದು ಸ್ವಪಕ್ಷಿಯ ಕಾರ್ಯಕರ್ತರೇ ಹೇಳುತ್ತಿದ್ದಾರೆ ಎಂದು ಹೇಳಲಾಗಿದೆ.

2018ರಲ್ಲಿ ಅನ್ಸಾರಿ ಸೋಲಿಗೆ ಪ್ರಮುಖ ಕಾರಣವಾಗಿದ್ದು ಇದೇ ಧರ್ಮದ ರಾಜಕಾರಣ. ಇನ್ನು ಅನ್ಸಾರಿಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್‌ನಲ್ಲಿ ಬಂಡಾಯ ಏಳುವ ಸಾಧ್ಯತೆಗಳು ಹೆಚ್ಚಾಗಿದ್ದು, ಗಂಗಾವತಿಯ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಬದಲಾವಣೆಗೆ ಕಾಂಗ್ರೆಸ್‌ನ ಬಣವೊಂದು ಪಟ್ಟು ಹಿಡಿದಿದೆ‌. ಇಕ್ಬಾಲ್ ಅನ್ಸಾರಿ ವಿರುದ್ಧ ಸಜ್ಜಾಗಿರುವ ಕೆಲ ಕಾಂಗ್ರೆಸ್ ಮುಖಂಡರಿಂದ ಅನ್ಸಾರಿಗೆ ಟಿಕೆಟ್ ತಪ್ಪಿಸಲು ಭರ್ಜರಿ ಪ್ಲಾನ್ ನಡೆದಿದೆ.

ಕಾಂಗ್ರೆಸ್ ನಾಯಕರ ನಡೆ ಕಂಡು ಅಸಮಾಧಾನಗೊಂಡಿರುವ ಅನ್ಸಾರಿ ಜೆಡಿಎಸ್‌ನತ್ತ ಮುಖ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹನುಮನ ಜನ್ಮ ಸ್ಥಳವೆಂದು ಪ್ರತೀತಿ ಇರುವ ಅಂಜನಾದ್ರಿಯ ಗಂಗಾವತಿ ಕ್ಷೇತ್ರದ ಮೇಲೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಾಜಕೀಯ ತಂತ್ರಗಾರಿಕೆ ಆರಂಭಿಸಿವೆ. ಧರ್ಮದ ಹೆಸರಿನಲ್ಲಿ ಅನ್ಸಾರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ತಪ್ಪಿಸಲು ಸ್ವಪಕ್ಷಿಯ ಮುಖಂಡರ ಪಟ್ಟು ಅನ್ಸಾರಿ ಬಣದ ಬೆಂಬಲಿಗರನ್ನು ಕಣ್ಣು ಕೆಂಪಾಗಿಸಿದೆ. ಮುಂದಿನ ದಿನಗಳಲ್ಲಿ ರಾಜಕೀಯ ಲೆಕ್ಕಾಚಾರ ಯಾವ ದಿಕ್ಕಿಗೆ ತಿರುಗಲಿದೆ ಎಂಬುದು ಕಾದುನೋಡಬೇಕಿದೆ.

ಓದಿ : ಈಶ್ವರಪ್ಪ ವಿರುದ್ಧ ಐದು ದಿನಗಳ ಪ್ರತಿಭಟನೆ ನಂತರ ಕಾಂಗ್ರೆಸ್ ಪಕ್ಷದ ಮುಂದಿನ ನಡೆ ಏನು ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.