ETV Bharat / city

ರಸ್ತೆ ನಿರ್ಮಾಣಕ್ಕೆ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಕಾರ್ಯಪಡೆ ರಚನೆ: ಸಿಎಂ ಬೊಮ್ಮಾಯಿ

author img

By

Published : Dec 23, 2021, 3:48 PM IST

ಪರಿಣಿತರನ್ನು ಒಳಗೊಂಡ 3ನೇ ಏಜೆನ್ಸಿಯಿಂದ ಪರಿಶೀಲನೆ ಮಾಡಲಾಗುತ್ತಿದೆ. ಕಾಮಗಾರಿ ಆರಂಭದಿಂದ ಮುಗಿಯುವವರೆಗೆ ಎಲ್ಲಾ ಹಂತದಲ್ಲಿಯೂ ಗುಣಮಟ್ಟ ಕುರಿತು ಥರ್ಡ್ ಪಾರ್ಟಿ ಪರಿಶೀಲನೆಗೂ ಸೂಚನೆ ಕೊಡಲಾಗಿದೆ. ರಸ್ತೆ ನಿರ್ಮಾಣ ಮಾಡುವ ಮೊದಲೇ ಎಲ್ಲ ಪರಿಶೀಲಿಸಿ ಆರಂಭಿಸಲು ಸೂಚನೆ ನೀಡಿದ್ದು, ಎಲ್ಲಾ ಇಲಾಖೆ‌ ಜತೆ ಸಮನ್ವಯ ಸಾಧಿಸಲು ಕಾರ್ಯಪಡೆ ರಚಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ.

CM Basavaraj Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಬೆಂಗಳೂರಿನ ರಸ್ತೆಗಳ ನಿರ್ಮಾಣ ಮತ್ತು ದುರಸ್ತಿ ಕಾರ್ಯದಲ್ಲಿ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಪ್ರತ್ಯೇಕ ಕಾರ್ಯಪಡೆ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ‌.

ಪರಿಷತ್ ಕಲಾಪದಲ್ಲಿ ಮಾತನಾಡುತ್ತಿರುವ ಸಿಎಂ ಬೊಮ್ಮಾಯಿ

ರಸ್ತೆ ನಿರ್ಮಾಣ ಎಂದರೆ ಬರೀ ಟಾರ್ ಹಾಕುವುದಲ್ಲ:

ಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಸಿಎಂ, ಬೆಂಗಳೂರು ರಸ್ತೆ ನಿರ್ಮಾಣದ ಬಗ್ಗೆ ಹಲವಾರು ಬಾರಿ ಚರ್ಚೆಯ ಆಗಿದೆ. ಬೆಂಗಳೂರು ರಸ್ತೆ ನಿರ್ಮಾಣ ಎಂದರೆ ಬರೀ ಟಾರ್ ಹಾಕುವುದಲ್ಲ. ಗ್ಯಾಸ್ ಸಂಪರ್ಕ ಮಾರ್ಗ, ನೀರು ಪೂರೈಕೆ ಪೈಪ್, ಚರಂಡಿ‌ ಸೇವೆ ಬರಲಿದೆ. ದೊಡ್ಡ ತಾಂತ್ರಿಕ ಸವಾಲಿದೆ. ಭೂ ಸ್ವಾಧೀನ, ಸಂಚಾರ ಸಮಸ್ಯೆ, ಚರಂಡಿ ಸಮಸ್ಯೆ ಇದೆ. ಇದೆಲ್ಲವನ್ನೂ ನೋಡಿಕೊಂಡು ಮಾಡಬೇಕಿದೆ ಎಂದರು.

ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಕಾರ್ಯಪಡೆ ರಚನೆ:

ಈಗಾಗಲೇ ಗುಣಮಟ್ಟದ ಬಗ್ಗೆ ಹಲವಾರು ಕ್ರಮ ತೆಗೆದುಕೊಂಡಿದ್ದೇವೆ. ಪರಿಣಿತರನ್ನು ಒಳಗೊಂಡ 3ನೇ ಏಜೆನ್ಸಿಯಿಂದ ಪರಿಶೀಲನೆ ಮಾಡಲಾಗುತ್ತಿದೆ. ಕಾಮಗಾರಿ ಆರಂಭದಿಂದ ಮುಗಿಯುವವರೆಗೆ ಎಲ್ಲಾ ಹಂತದಲ್ಲಿಯೂ ಗುಣಮಟ್ಟ ಕುರಿತು ಥರ್ಡ್ ಪಾರ್ಟಿ ಪರಿಶೀಲನೆಗೂ ಸೂಚನೆ ಕೊಡಲಾಗಿದೆ. ರಸ್ತೆ ನಿರ್ಮಾಣ ಮಾಡುವ ಮೊದಲೇ ಎಲ್ಲ ಪರಿಶೀಲಿಸಿ ಆರಂಭಿಸಲು ಸೂಚನೆ ನೀಡಿದ್ದು, ಎಲ್ಲಾ ಇಲಾಖೆ‌ ಜತೆ ಸಮನ್ವಯ ಸಾಧಿಸಲು ಕಾರ್ಯಪಡೆ ರಚಿಸಲಾಗಿದೆ ಎಂದರು.

ರಸ್ತೆ ಮೇಲಿನ ಲೋಡ್ ಹೆಚ್ಚಳದಿಂದ ರಸ್ತೆ ಹಾಳಾಗುತ್ತಿವೆ:

ರಸ್ತೆ ವಿನ್ಯಾಸಗೊಂಡಿರುವ ಸಾಮರ್ಥ್ಯಕ್ಕಿಂತ‌ 10-20 ಪಟ್ಟು ಹೆಚ್ಚಿನ ಲೋಡ್ ಬೀಳುತ್ತಿರುವುದರಿಂದ ರಸ್ತೆಗಳು ಹಾಳಾಗುತ್ತಿವೆ.‌ ಇದನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ‌ಸದಸ್ಯ ಗೋವಿಂದ ರಾಜು ಪ್ರಶ್ನೆಗೆ ಉತ್ತರಿಸಿದ ಸಿಎಂ, ರಸ್ತೆ ಗುಂಡಿ ಸಮಸ್ಯೆಗೆ ಮುಖ್ಯ ಕಾರಣ ರಸ್ತೆ ಮಾಡುವಾಗಿನ ವಿನ್ಯಾಸ, ಯಾವ ಗುಣಮಟ್ಟದ ಉತ್ಪನ್ನ ಬಳಕೆ ಮಾಡಿದ್ದಾರೆ ಎಂಬುವುದಾಗಿದೆ.

ಮೂಲ ಸಮಸ್ಯೆ ರಸ್ತೆ ನಿರ್ಮಾಣದ ಆರಂಭದಲ್ಲೇ ಇದೆ. ಯಾವ ಲೋಡ್​​​ಗೆ ವಿನ್ಯಾಸ ಆಗಿರುತ್ತದೆಯೋ ಅದಕ್ಕಿಂತ 10-20 ಪಟ್ಟು ಲೋಡ್ ಹೆಚ್ಚಾಗಿದೆ. ಆದರಿಂದ ರಸ್ತೆ ಹಾಳಾಗುತ್ತಿದೆ. ಮಳೆ‌ ಬಿದ್ದ ತಕ್ಷಣ ಗುಂಡಿ ಮುಚ್ಚಿದರೆ ವಾರದಲ್ಲಿ ಮತ್ತೆ ಹಾಳಾಗಲಿದೆ. ಹಾಗಾಗಿ ಮಳೆ ನಿಂತ ನಂತರವೇ ಗುಂಡಿ ಮುಚ್ಚಬೇಕು ಎಂದು ಸೂಚಿಸಲಾಗಿದೆ ಎಂದರು.

ರಸ್ತೆ ನಿರ್ಮಿಸುವ ಏಜೆನ್ಸಿಯೇ ರಸ್ತೆ ನಿರ್ವಹಣೆ ಮಾಡಬೇಕು:

ಯಾವ ಏಜೆನ್ಸಿಗೆ ರಸ್ತೆಗಳ ನಿರ್ಮಾಣ ಗುತ್ತಿಗೆ ನೀಡಲಾಗಿರುತ್ತದೆಯೋ ಅದೇ ಏಜೆನ್ಸಿ 3 ವರ್ಷ ರಸ್ತೆ ನಿರ್ವಹಣೆ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್ ರಮೇಶ್ ಪ್ರಶ್ನೆಗೆ ಉತ್ತರಿಸಿದ ಸಿಎಂ, ಹೈ ಡೆನ್ಸಿಟಿ ಕಾರಿಡಾರ್ ನಡಿ ಬೆಂಗಳೂರಿಗೆ ಸಂಪರ್ಕಿಸುವ ಮುಖ್ಯ ರಸ್ತೆಗಳು ಬರಲಿವೆ. ಹೈದರಾಬಾದ್, ಚೆನ್ನೈ, ಹುಬ್ಬಳ್ಳಿ-ಧಾರವಾಡ, ಹೊಸೂರು ಮಾರ್ಗದ ರಸ್ತೆಗಳು ಹೈಡೆನ್ಸಿಡಿ ರಸ್ತೆಗಳು, ಒಟ್ಟು 12 ರಸ್ತೆ ಇವೆ. 190 ಕಿ.ಮೀ ರಸ್ತೆ ಅಭಿವೃದ್ಧಿ ಮಾಡಬೇಕು ಎನ್ನುವ ಪ್ರಸ್ತಾವನೆ ಬಂದಿದೆ.

67 ಕಿ.ಮೀ ಈಗಾಗಲೇ ಅಭಿವೃದ್ಧಿ ಮಾಡಲಾಗಿದೆ. ಉಳಿದದ್ದನ್ನು ಪರಿಶೀಲಿಸುತ್ತೇನೆ. ರಸ್ತೆ ನಿರ್ಮಾಣದಲ್ಲಿ ಕಳಪೆ ಇದ್ದಲ್ಲಿ ಕ್ರೆಡಲ್​​ಗೆ ಕೊಡುವ ನಿರ್ಧಾರದ ಕುರಿತು ಪರಿಶೀಲನೆ ಮಾಡಲಾಗುತ್ತದೆ ಎಂದರು.

336 ಕೋಟಿ ರೂ. ರಸ್ತೆ ಅಭಿವೃದ್ಧಿಗೆ‌ ಇರಿಸಿದ್ದರೆ, 785 ಕೋಟಿಯನ್ನು 5 ವರ್ಷದ ನಿರ್ವಹಣೆಗೆ ಇರಿಸಲಾಗಿದೆ. 5 ವರ್ಷದಲ್ಲಿ ಮೂರು ವರ್ಷ ನಿರ್ಮಾಣ ಮಾಡಿದವರೆ, ನಿರ್ವಹಣೆ ಮಾಡಿದರೂ ಇಷ್ಟು ದೊಡ್ಡ ಹಣ ಯಾಕೆ?. ಕಪ್ಪು ಪಟ್ಟಿ ಇದ್ದವರಿಗೂ ಗುತ್ತಿಗೆ ಕೊಡಲಾಗಿದೆ.

ಇದನ್ನೆಲ್ಲ ನೋಡಿ ನ್ಯೂನತೆ ಸರಿಪಡಿಸಲು ಸೂಚನೆ ನೀಡಿದ್ದೇನೆ. ಯಾರು ರಸ್ತೆ ಮಾಡಬೇಕು ಎಂದು ಪರಿಶೀಲಿಸಿ ಕ್ರಮ ವಹಿಸಲಾಗುತ್ತದೆ. ಯಾರು ರಸ್ತೆ ಮಾಡುತ್ತಾರೋ ಅವರೇ ನಿರ್ವಹಣೆ ಮಾಡಬೇಕು. ನಿರ್ಮಾಣ ಮಾಡುವ ಏಜೆನ್ಸಿಯೇ ನಿರ್ವಹಣೆ ಮಾಡಬೇಕು ಎಂದು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಮತಾಂತರ ನಿಷೇಧ ವಿಧೇಯಕ ಮೇಲಿನ ಚರ್ಚೆ: ಸಚಿವ ಮಾಧುಸ್ವಾಮಿ - ಸಿದ್ದರಾಮಯ್ಯ ಮಧ್ಯೆ ಸವಾಲು, ಪ್ರತಿ ಸವಾಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.