ETV Bharat / city

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಬೀಳ್ಕೊಡುಗೆ: ಭಾವೋದ್ವೇಗದಿಂದ ಕಣ್ಣೀರಿಟ್ಟ ನ್ಯಾ.ಬಿ.ವಿ.ನಾಗರತ್ನ

author img

By

Published : Aug 28, 2021, 5:24 AM IST

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ಹಾಗೂ ನ್ಯಾ.ಬಿ.ವಿ.ನಾಗರತ್ನ ಅವರಿಗೆ ಶುಕ್ರವಾರ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಬೀಳ್ಕೊಡುಗೆ
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಬೀಳ್ಕೊಡುಗೆ

ಬೆಂಗಳೂರು: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಪದೋನ್ನತಿ ಪಡೆದಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ಹಾಗೂ ನ್ಯಾ.ಬಿ.ವಿ.ನಾಗರತ್ನ ಅವರಿಗೆ ಶುಕ್ರವಾರ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.


ಹೈಕೋರ್ಟ್‌ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ರಾಜ್ಯ ನ್ಯಾಯಾಂಗದ ಪರವಾಗಿ ಅಭಿನಂದನೆ ಸಲ್ಲಿಸಿ, ಇಬ್ಬರು ನ್ಯಾಯಮೂರ್ತಿಗಳ ಸೇವೆಯನ್ನು ಸ್ಮರಿಸಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಿಜೆ ಎ.ಎಸ್. ಓಕ, ಕರ್ನಾಟಕ ಹೈಕೋರ್ಟ್​ಗೆ ಬಂದ ಮೇಲೆ ಸಾಕಷ್ಟು ಕಲಿತಿದ್ದೇನೆ. ನ್ಯಾಯಮೂರ್ತಿಯಾಗಿ ನನಗೆ ಅಪೇಕ್ಷಿಸಿದ್ದಕ್ಕಿಂತ ಹೆಚ್ಚಿನದ್ದು ಸಿಕ್ಕಿದೆ. ಅಂತಿಮವಾಗಿ ಜನರು ಮತ್ತು ಕಕ್ಷಿದಾರರೇ ನಮ್ಮ ಕಾರ್ಯವನ್ನು ಅಳೆಯುವ ತೀರ್ಪುಗಾರರು ಎಂದರು.


ಅಲ್ಲದೇ, ಕೋವಿಡ್ ನಡುವೆಯೂ ರಾಜ್ಯದಲ್ಲಿ ನ್ಯಾಯದಾನ ಅಭಾದಿತವಾಗಿ ಸಾಗಿದೆ. ಹೈಕೋರ್ಟ್, ತಂತ್ರಜ್ಞಾನ ಬಳಕೆ ಮೂಲಕ ವಿಡಿಯೋ ಕಾನರೆನ್ಸ್ ವಿಚಾರಣೆಗೆ ಒತ್ತು ನೀಡಿದ್ದು ಪ್ರಕರಣಗಳ ಇತ್ಯರ್ಥದಲ್ಲೂ ಸಾಧನೆ ಮಾಡಿದೆ. ಹೊಸ ತಂತ್ರಜ್ಞಾನ ಅಳವಡಿಕೆಯಲ್ಲಿ ಕರ್ನಾಟಕ ಹೈಕೋರ್ಟ್ ದೇಶದಲ್ಲೇ ಮುಂದಿದೆ. ನ್ಯಾಯಾಂಗದ ಮೇಲೆ ಜನರು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಹೋಗುವ ದೊಡ್ಡ ಸವಾಲು ನಮ್ಮ ಮುಂದಿದೆ. ಆತ್ಮಸಾಕ್ಷಿಯ ಕೋರ್ಟ್ ಗಿಂತ ದೊಡ್ಡ ಕೋರ್ಟ್ ಮತ್ತೊಂದಿಲ್ಲ ಎಂದು ಮಹಾತ್ಮ ಗಾಂಧೀಜಿಯವರ ಮಾತನ್ನು ಉಲ್ಲೇಖಿಸಿದರು. ಹಾಗೆಯೇ, ನ್ಯಾಯಮೂರ್ತಿಗಳಾದವರು ಕಟ್ಟುನಿಟ್ಟಾಗಿರಬೇಕು, ಆದರೆ ಒರಟಾಗಿರಬಾರದು. ಅಚಲವಾಗಿರದೆ ದೃಢವಾಗಿರಬೇಕು, ನ್ಯಾಯಮೂರ್ತಿಗಳು ಯಾರನ್ನೂ ಖುಷಿಪಡಿಸುವ ಅಗತ್ಯವಿಲ್ಲ. ನ್ಯಾಯದಾನವೇ ಅಂತಿಮ ಗುರಿಯಾಗಿರಬೇಕು ಎಂದು ಅಭಿಪ್ರಾಯಪಟ್ಟರು.


ಭಾವುಕರಾದ ನ್ಯಾ.ನಾಗರತ್ನ: ನ್ಯಾ. ಬಿ.ವಿ.ನಾಗರತ್ನ ಮಾತನಾಡಿ ಜೇಷ್ಠತೆ, ಪರಿಶ್ರಮ ಮತ್ತು ಬದ್ಧತೆ ನಮ್ಮನ್ನು ಈ ಸ್ಥಾನಕ್ಕೆ ಏರುವಂತೆ ಮಾಡಿದೆ. ದೇಶದ ಅತ್ಯುನ್ನತ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ. ದೇಶದಲ್ಲಿ ಕೋಟ್ಯಂತರ ಜನರಿದ್ದಾರೆ, ವೈವಿಧ್ಯತೆ ಇದೆ, ಆದರೂ ಭಾರತೀಯ ಸಂವಿಧಾನ ಎಲ್ಲರನ್ನೂ ಒಟ್ಟಿಗೆ ಹಿಡಿದಿಟ್ಟಿದೆ. ಇಲ್ಲಿನ ನ್ಯಾಯಾಂಗ ವ್ಯವಸ್ಥೆ ಅತ್ಯುತ್ತಮವಾಗಿದೆ. ಸಮಾಜದ ಎಲ್ಲ ವರ್ಗದವರ ಹಿತವನ್ನು ಪ್ರಜಾಪ್ರಭುತ್ವದ ಅಡಿ ಕಾಯಲಾಗುತ್ತಿದೆ. ದೇಶದ ನ್ಯಾಯದಾನ ವ್ಯವಸ್ಥೆ ವಿಶ್ವಕ್ಕೆ ಮಾದರಿಯಾಗಿದೆ ಎಂದರು.


ಇಂಗಳಗುಪ್ಪೆಯಿಂದ ಬಂದಿದ್ದು, ತಂದೆ ಸುಪ್ರೀಂಕೋರ್ಟ್ ಜಡ್ಜ್ ಆಗಿದ್ದರೂ ಬೆಂಗಳೂರಿಗೆ ಬಂದು ವಕೀಲಿ ವೃತ್ತಿ ಕೈಗೊಂಡಿದ್ದು ಸೇರಿದಂತೆ ತಮ್ಮ ವೃತ್ತಿ ಬದುಕಿನ ಪಯಣವನ್ನು ಸ್ಮರಿಸಿಕೊಂಡರು. ಮಹಿಳಾ ವಕೀಲರು ತಮಗೆ ಸಿಗುವ ಅವಕಾಶಗಳನ್ನು ಹೆಚ್ಚು ಹೆಚ್ಚು ಬಳಸಿಕೊಂಡು ಆತ್ಮವಿಶ್ವಾಸ ದೃಢ ಚಿತ್ತದಿಂದ ಮುನ್ನಡೆದರೆ ಖಂಡಿತಾ ಯಶಸ್ಸು ಸಿಗುತ್ತದೆ. ಇದೇ ವೇಳೆ ತಮ್ಮ ಕಾರ್ಯ ನಿರ್ವಹಣೆಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಹೇಳಲು ಮುಂದಾದ ನ್ಯಾ. ಬಿ ವಿ ನಾಗರತ್ನ ಭಾಷಣದ ನಡುವೆ ಭಾವೋದ್ವೇಗಕ್ಕೆ ಒಳಗಾದರು. ಕಣ್ಣಲ್ಲಿ ನೀರು ತುಂಬಿಕೊಂಡೇ ಎಲ್ಲರಿಗೂ ವಂದನೆ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.