ETV Bharat / city

ಸ್ವಾತಂತ್ರ್ಯ ಬಂದು 75 ವರ್ಷಗಳಾದ್ರೂ ಬಡವರಿಗೆ ಒಪ್ಪೊತ್ತಿನ ಊಟ ಕೊಡಲು ಸಾಧ್ಯವಾಗ್ತಿಲ್ಲ: ಹೆಚ್‌ಡಿಕೆ

author img

By

Published : Sep 16, 2021, 8:17 PM IST

ಪೆಟ್ರೋಲ್‌, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ವಿಧಾನಸಭೆ ಕಲಾಪದಲ್ಲಿಂದು ಮಾತನಾಡಿದ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ, ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ನಾವು ಬಡವರಿಗೆ ಒಂದು ಹೊತ್ತಿನ ಊಟ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ex cm hd kumaraswamy speech in assembly session
ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಬಡವರಿಗೆ ಒಂದು ಹೊತ್ತಿನ ಊಟ ಕೊಡಲು ಸಾಧ್ಯವಾಗುತ್ತಿಲ್ಲ - ಹೆಚ್‌ಡಿಕೆ ಬೇಸರ

ಬೆಂಗಳೂರು: ಶಾಲಾ ಮಕ್ಕಳು ಕೊರೊನಾ ಸಂಕಷ್ಟದಿಂದ ಶಾಲೆಯಿಂದ ಹೊರಗುಳಿದಿರುವುದಕ್ಕೆ ಕಾರಣ ಕೇಳಿದರೆ ಅವರು ಊಟ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ದೇಶದ ಪ್ರತಿಯೊಬ್ಬ ಯಾವುದೋ ರೀತಿಯಲ್ಲಿ ಕನಿಷ್ಠ 1 ಲಕ್ಷ ರೂ. ತೆರಿಗೆ ಕಟ್ಟುತ್ತಾನೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ನಾವು ಬಡವರಿಗೆ ಒಂದು ಹೊತ್ತಿನ ಊಟ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಹೆಚ್‌.ಡಿ.ಕುಮಾರಸ್ವಾಮಿ ಕಾಲಪದಲ್ಲಿಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಿಯಮ 69ರ ಅಡಿ ಮಾತನಾಡಿದ ಅವರು, ಗ್ಯಾಸ್‍ ಹಾಗೂ ಪೆಟ್ರೋಲ್‍ ಬೆಲೆ ಹೆಚ್ಚಿಸಿ ತೆರಿಗೆ ಸಂಗ್ರಹಿಸಿದ ಹಣವನ್ನು ಸಾಮಾನ್ಯ ಬಡವರ ನೆರವಿಗೆ ನೀಡಿ, ದೊಡ್ಡ ದೊಡ್ಡ ಯೋಜನೆಗಳನ್ನು ಬದಿಗಿಟ್ಟು ಬಡವರ ಮಕ್ಕಳಿಗೆ ಅನುಕೂಲವಾಗುವಂತಹ ಯೋಜನೆ ರೂಪಿಸಬೇಕು. ಕೇಂದ್ರ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಉಜ್ವಲ ಯೋಜನೆ ಘೋಷಣೆ ಮಾಡಿದೆ. ಆದರೆ, ಒಂದು ಲಕ್ಷ ಗ್ಯಾಸ್ ಕನೆಕ್ಷನ್‍ ಕೊಡಲು ಕನಿಷ್ಠ 10 ವರ್ಷ ಬೇಕಾಗುತ್ತದೆ. ನಾವು ನಮ್ಮ ವೈಯಕ್ತಿಕ ಹಿತಾಸಕ್ತಿಗೆ ಯೋಜನೆಗಳನ್ನು ಘೋಷಣೆ ಮಾಡಿ ಸಾಮಾನ್ಯ ಜನರ ಮೇಲೆ ತೊಂದರೆ ಕೊಡುವುದು ಎಷ್ಟು ಸರಿ? ಎಂದರು.

ಸದನದಲ್ಲಿ ಹೆಚ್‌ಡಿಕೆ ಮಾತು

'ಊಟವಿಲ್ಲದೆ ಮಲಗುವ ಪರಿಸ್ಥಿತಿ ಇದೆ'

ಕಳೆದ ಎರಡು ವರ್ಷಗಳಿಂದಲೂ ಶಾಲೆ ಮುಚ್ಚಿರುವುದರಿಂದ ಗ್ರಾಮೀಣ ಭಾಗದ ಶೇ.52 ರಷ್ಟು ಮಕ್ಕಳಿಗೆ ಆನ್‍ಲೈನ್ ಹಾಗೂ ಆಫ್‌ಲೈನ್‍ ಮಾದರಿಯ ಯಾವುದೇ ಮಾದರಿಯ ಶಿಕ್ಷಣ ದೊರೆತಿಲ್ಲ. ಬೆಂಗಳೂರಿನಲ್ಲಿ ಸುಮಾರು 17 ಸಾವಿರ ಸ್ಕೂಲ್‍ ಕ್ಯಾಬ್‍ ಚಾಲಕರು ಇದ್ದಾರೆ. ಅವರಿಗೆ ಕಳೆದ ಎರಡು ವರ್ಷದಿಂದ ಯಾವುದೇ ರೀತಿಯ ಆದಾಯ ಇಲ್ಲ. ಶಾಲಾ ಮ್ಯಾನೇಜ್‍ಮೆಂಟ್‍ಗಳು ಅವರಿಗೆ ಯಾವುದೇ ರೀತಿಯ ವೇತನ ನೀಡಿಲ್ಲ. ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಸಮೀಕ್ಷೆ ಪ್ರಕಾರ, ಪ್ರತಿ 20 ಮನೆಗಳಲ್ಲಿ ಒಂದು ಮನೆಯಲ್ಲಿ ಊಟ ವಿಲ್ಲದೆ ಮಲಗುತ್ತಿರುವ ಪರಿಸ್ಥಿತಿ ಇದೆ ಎಂದು ವಿವರಿಸಿದರು.

ಇದು ಬಿಜೆಪಿ ಸರ್ಕಾರ ಅಂತ ನಾನು ಹೇಳುವುದಿಲ್ಲ. ಆರೂವರೆ ಕೋಟಿಯ ನಮ್ಮ ಸರ್ಕಾರ ಅಂತ ನಾನು ಹೇಳುತ್ತೇನೆ. ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ಕೊಡಲು ಸಿದ್ದವಿದ್ದೇವೆ ಎಂದು ಹೆಚ್‌ಡಿಕೆ ತಮ್ಮ ಭಾಷಣದಲ್ಲಿ ಸರ್ಕಾರದ ಬಗ್ಗೆ ಮೃದು ಧೋರಣೆ ತೋರಿಸಿದರು.

ಕೊರೊನಾ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಲಕ್ಷಾಂತರ ರೂ. ಬಿಲ್‍ ವಸೂಲಿ ಮಾಡಲಾಗುತ್ತಿದೆ. ಓಲಾ, ಊಬರ್ ಓಡಿಸುತ್ತಿದ್ದವರು ದುಡಿಮೆ ಇಲ್ಲದೇ ಅವರ ವಾಹನಗಳನ್ನು ಬ್ಯಾಂಕ್‍ನವರು ಸೀಜ್‍ ಮಾಡಿಕೊಂಡಿದ್ದಾರೆ. ಬಾಗಲಕೋಟೆಯ ವ್ಯಾಪಾರಿಯೊಬ್ಬ ಒಂದೂವರೆ ಕೋಟಿ ರೂ. ನಷ್ಟ ಆಗಿದೆ. ನಾನು ಹೇಗಾದರೂ ಬದುಕಬೇಕು ಸಹಾಯ ಮಾಡಿ ಎಂದು ಅಂಗಲಾಚುತ್ತಾನೆ. ಅವರಿಗೆ ಏನು ಭರವಸೆ ನೀಡುವುದು? ಎಂದರು.

ನಾನೀಗ ತಾಜ್‍ ವೆಸ್ಟೆಂಡ್‍ನಲ್ಲಿ ಇಲ್ಲ. ಬಿಡದಿಯ ತೋಟದ ಮನೆಯಲ್ಲಿದ್ದೇನೆ ಎಂದು ಟೀಕಾಕಾರರಿಗೆ ಟಾಂಗ್ ನೀಡಿದ ಹೆಚ್‌ಡಿಕೆ, ಬಿಡದಿ ತೋಟದ ಮನೆಗೆ ಎಲ್ಲಾ ವರ್ಗದ ನೂರಾರು ಜನ ಸಹಾಯ ಕೇಳಿಕೊಂಡು ಬರುತ್ತಾರೆ. ಇಂತಹ ಜನರ ನೆರವಿಗೆ ಬರುವ ತೀರ್ಮಾನ ಸರ್ಕಾರ ಮಾಡಬೇಕಿದೆ. ಬೀದಿ ಬದಿ ವ್ಯಾಪಾರಿಗಳು, ಸಣ್ಣ ಅಂಗಡಿಗಳು, ಮಾಲ್ ಸಿಬ್ಬಂದಿ, ಥಿಯೇಟರ್ ಮುಚ್ಚಿವೆ. ಲಕ್ಷಾಂತರ ಕುಟುಂಬಗಳ ಬದುಕು ಸರಿಪಡಿಸುವ ಕೆಲಸ ಸರ್ಕಾರ ಮಾಡಬೇಕು ಎಂದು ಹೇಳಿದರು.

'ಅಮೃತ ಯೋಜನೆ ನಿಲ್ಲಿಸಿ, ಕೋವಿಡ್ ವರ್ಷ ಎಂದು ಘೋಷಿಸಿ'

ಅಮೃತ ಯೋಜನೆ ಘೋಷಣೆ ಮಾಡಿದ್ದೀರಿ. ಅದನ್ನು ನಿಲ್ಲಿಸಿ, ಬಡವರ ಹೊಟ್ಟೆಗೆ ಊಟ ಕೊಡುವ ಕೆಲಸ ಮಾಡಿ. ಬಡವರಿಗೆ ಯಾವುದೇ ಕಂಪನಿಗಳು ನೆರವು ನೀಡುವುದಿಲ್ಲ. ಸಣ್ಣಪುಟ್ಟ ಕೈಗಾರಿಕೆಗಳಿಗೆ ಆದ್ಯತೆ ನೀಡಿದರೆ, ಅವರು ಲಕ್ಷಾಂತರ ಜನರಿಗೆ ಉದ್ಯೋಗ ನೀಡುತ್ತಾರೆ. ಕೋವಿಡ್ ವರ್ಷ ಎಂದು ಘೋಷಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

ಅಕ್ಕಿಭಾಗ್ಯದ ಅಸಲಿ ವಿಷಯ:

ತಮ್ಮ ನೇತೃತ್ವದಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ನಡೆದ ಅಕ್ಕಿಭಾಗ್ಯದ ಅಸಲಿ ಕಥೆಯನ್ನು ಸದನದಲ್ಲಿ ಬಿಚ್ಚಿಟ್ಟ ಕುಮಾರಸ್ವಾಮಿ, ನನ್ನ ಸರ್ಕಾರ ಬಂದಾಗ ಜನರಿಗೆ ಐದು ಕೆಜಿ ಅಕ್ಕಿಯನ್ನು ನೀಡಲಾಯಿತು. ಇದ್ದಕ್ಕಿದ್ದಂತೆ ಕಾಂಗ್ರೆಸ್ ನಾಯಕರು ದೊಡ್ಡ ಹುಯಿಲೆಬ್ಬಿಸಿದರು. ಐದು ಕೆಜಿ ಬದಲು ಏಳು ಕೆಜಿಯನ್ನೇ ಕೊಡಬೇಕು ಎಂದು ಹಠಕ್ಕೆ ಬಿದ್ದರು. ಆದರೆ, ಹಣಕಾಸು ಲಭ್ಯತೆ ನೋಡಿದರೆ ಕೇವಲ ಐದು ಕೆಜಿ ಅಕ್ಕಿಗೆ ಮಾತ್ರ ಹಣ ತೆಗೆದಿರಿಸಲಾಗಿತ್ತು. ಉಳಿದ ಎರಡು ಕೆಜಿ ಅಕ್ಕಿಗೆ ಹಣ ತರುವುದು ಎಲ್ಲಿಂದ?

ಚುನಾವಣೆಗೆ ಹೋಗುವ ಮುನ್ನ ಸಿದ್ದರಾಮಯ್ಯ ಅವರು ಫೆಬ್ರವರಿಯಲ್ಲಿ ಬಜೆಟ್ ಮಂಡಿಸಿ ಐದು ಕೆಜಿ ಅಕ್ಕಿಗಷ್ಟೇ ಹಣ ಮೀಸಲಿಟ್ಟು ಹೋಗಿದ್ದರು. ಸಮ್ಮಿಶ್ರ ಸರ್ಕಾರ ಬಂದಾಗ ಇದೇ ಜನ ಏಳು ಕೆಜಿ ಅಕ್ಕಿ ಕೊಡಬೇಕು ಎಂದು ಬೊಬ್ಬೆ ಹೊಡೆದರು. ಕೇವಲ ಚುನಾವಣೆಯಲ್ಲಿ ಮತ ಪಡೆಯುವ ಉದ್ದೇಶದಿಂದ ಮಾಡಿದ ಕೆಲಸಕ್ಕೆ ಜನ ನಮ್ಮನ್ನು ಟೀಕೆ ಮಾಡುವಂತಾಯಿತು. ಆಗ ನನಗೆ ಎಂಥ ಸಂದಿಗ್ಧತೆ ಎಂದರೆ, ಏಳು ಕೆಜಿ ಅಕ್ಕಿ ಕೊಡಲೇಬೇಕು, ಕೊಡೋಕೆ ದುಡ್ಡಿಲ್ಲ. ನಾವು ಘೋಷಣೆ ಮಾಡಿದ್ದೇವೆ, ನಿಲ್ಲಿಸುವಂತಿಲ್ಲ ಎನ್ನುವ ಒತ್ತಡ ತಂತ್ರ ಬೇರೆ. ರಾಜ್ಯದ ಜನರಿಗೆ ಈ ಸತ್ಯಸಂಗತಿ ಗೊತ್ತಿಲ್ಲ. ಈಗ ಹೇಳುತ್ತಿದ್ದೇನೆ" ಎಂದು ಅವರು ಅಕ್ಕಿಭಾಗ್ಯದ ಅಸಲಿ ವಿಷಯ ಬಯಲು ಮಾಡಿದರು. ಇದಕ್ಕೆ ಸ್ಪಂದಿಸಿದ ಕಂದಾಯ ಸಚಿವ ಆರ್.‌ಅಶೋಕ್‌, ಈ ಸತ್ಯ ರಾಜ್ಯದ ಜನರಿಗೆ ಗೊತ್ತಾಗಲಿ. ಇದುವರೆಗೂ ಈ ವಿಷಯ ನಮಗೂ ಗೊತ್ತಿರಲಿಲ್ಲ ಎಂದು ಹೇಳಿದರು.

ಆಶ್ರಯ ಮನೆ ಯೋಜನೆಗಳನ್ನು 15 ಲಕ್ಷ ಮನೆಗಳನ್ನು ಘೋಷಣೆ ಮಾಡಿ ಹೋಗಿದ್ದರು. ಅದಕ್ಕೆ 29 ಸಾವಿರ ಕೋಟಿ ರೂ. ಅಗತ್ಯವಿತ್ತು. ಆದರೆ, ಇವರು ಮೀಸಲಿಟ್ಟಿದ್ದು ಕೇವಲ 2,900 ಕೋಟಿ ರೂ. ಮಾತ್ರ. ಅದನ್ನು ಹೇಗೆ ತೀರಿಸುವುದು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು

ನಾನು ಸಿಎಂ ಆಗಿದ್ದಾಗ ಪೆಟ್ರೋಲ್‍, ಡೀಸೆಲ್‍ ಸೆಸ್‍ 1.5 ರೂ ಹೆಚ್ಚಳ ಮಾಡಿದ್ದೆ. ನಾನು ಅದನ್ನು ಜಾರಿಗೆ ತಂದಿರಲಿಲ್ಲ. ಮತ್ತೆ 2 ರೂ. ಸೆಸ್‍ ಕಡಿಮೆ ಮಾಡಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹದಲ್ಲಿ ಮನೆ ಕಳೆದುಕೊಂಡವರ ಬಗ್ಗೆ ಮರು ಸಮೀಕ್ಷೆ ನಡೆಸುವಂತೆ ಸೂಚನೆ ನೀಡಿದೆ. ಬೆಳಗಾವಿಯ ಅಥಣಿ ತಾಲೂಕಿನ ಅಶೋಕ್ ಕಾಂಬ್ಳೆ ಎನ್ನುವ ರೈತನ ಮನೆ ಬಿದ್ದ ಸಂದರ್ಭದಲ್ಲಿ ಆಗ ಸಿಎಂ ಆಗಿದ್ದ ಯಡಿಯೂರಪ್ಪ ಹಾಗೂ ಡಿಸಿಎಂ ಭೇಟಿ ನೀಡಿ 5 ಲಕ್ಷ ರೂ. ಚೆಕ್‍ ನೀಡಿ ಬರುತ್ತಾರೆ. ಅವರು ವಾಪಸ್ ಬಂದ ಅರ್ಧ ಗಂಟೆಯಲ್ಲಿಯೇ ಪಂಚಾಯತಿಯವರು ಅದನ್ನು ವಾಪಸ್‍ ಪಡೆದುಕೊಳ್ಳುತ್ತಾರೆ. ಈ ರೀತಿಯ ಪರಿಹಾರ ಪರಿಸ್ಥಿತಿ ಇದೆ ಎಂದು ಸದನದಲ್ಲಿ ಉದಾಹರಣೆ ನೀಡಿದರು.

'ಸಾಮಾನ್ಯ ಜನರಿಂದ ಈಗ ಲಕ್ಷ ಕೋಟಿ ರೂ.ತೆರಿಗೆ ಸಂಗ್ರಹ

ಒಂದು ವರ್ಷದಲ್ಲಿ ಪೆಟ್ರೋಲ್‍ ಡೀಸೆಲ್ ತೆರಿಗೆಯಿಂದ 19 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕಾರ್ಪೋರೇಟ್ ಕಂಪನಿಯವರಿಗೆ ಅನುಕೂಲ ಮಾಡಿದ್ದಾರೆ ಎನ್ನುತ್ತಾರೆ. ಕಾರ್ಪೊರೇಟ್‌ ಕಂಪನಿಗಳಿಂದ 5.6 ರಿಂದ 4.2 ಕ್ಕೆ ತೆರಿಗೆ ಸಂಗ್ರಹ ಇಳಿಕೆಯಾಗಿದೆ. ಒಂದು ಲಕ್ಷ ಕೋಟಿ ಕಾರ್ಪೊರೇಟ್‌ ಕಂಪನಿಗಳಿಂದ ತೆರಿಗೆ ಸಂಗ್ರಹವಾಗಿದೆ. ಆದರೆ, ಸಾಮಾನ್ಯ ಜನರಿಂದ 2 ಲಕ್ಷ ಕೋಟಿ ರೂ. ಸಂಗ್ರಹವಾಗುತ್ತಿತ್ತು. ಈಗ ಮೂರು ಲಕ್ಷ ಕೋಟಿ ಸಂಗ್ರಹ ಮಾಡಿದ್ದಾರೆ. ರೈತರಿಗೆ ಸಬ್ಸಿಡಿ ಕೊಡುತ್ತೇವೆ ಎಂದು ರಸಗೊಬ್ಬರ ಬೆಲೆ ಹೆಚ್ಚಳ ಮಾಡಿ ರೈತರಿಗೆ ಬರೆ ಹಾಕುವುದು ಯಾವ ನ್ಯಾಯ ಎಂದು ಹೆಚ್‌ಡಿಕೆ ಪ್ರಶ್ನಿಸಿದರು.

ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ತಲಾ 25 ಲಕ್ಷ ಪರಿಹಾರ ನೀಡಿ ಒಟ್ಟು 50 ಲಕ್ಷ ಕುಟುಂಬಗಳಿವೆ. ಅಂಥವರ ಬದುಕಿಗೆ ಆಸರೆಯಾಗಿ, ಇಷ್ಟೊಂದು ತೆರಿಗೆ ಸಂಗ್ರಹ ಮಾಡಿದ್ದೀರಿ, ಅದನ್ನು ಬಡವರಿಗೆ ತಲುಪಿಸುವ ಕೆಲಸ ಮಾಡಿ, ವಿಮಾನ ನಿಲ್ದಾಣ ಮಾಡುವ ಕೆಲಸ ನಿಲ್ಲಿಸಿ, ರೈತರ ಬದುಕು ಉಳಿಸಿ, ಯಾವುದು ಅಧಿಕಾರ ಶಾಶ್ವತ ಅಲ್ಲ. ಏಳು ಬೀಳು ಇದ್ದೇ ಇರುತ್ತದೆ. ಬಹುಶ ಯಡಿಯೂರಪ್ಪ ಅವರು ಇದ್ದಿದ್ದರೆ ಇದನ್ನು ಒಪ್ಪಿಕೊಳ್ಳುತ್ತಿದ್ದರು ಅನಿಸುತ್ತದೆ. ಅವರ ಜೊತೆ 20 ತಿಂಗಳು ಕೆಲಸ ಮಾಡಿದಾಗ ಅವರಿಗಿರುವ ಕಾಳಜಿಯ ಬಗ್ಗೆ ಅರಿವಿದೆ. ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಒಂದು ಯೋಜನೆ ಘೋಷಣೆ ಮಾಡಿ, ಬಡವರ ಪರ ಸದನದಲ್ಲಿಯೇ ಘೋಷಣೆ ಮಾಡಲಿ ಎಂದು ಬಿಎಸ್‌ವೈ ಅವರನ್ನು ಶ್ಲಾಘಿಸಿದರು.

'55 ಲಕ್ಷ ಕುಟುಂಬಗಳಿಗೆ ತಲಾ 25,000 ರೂ. ಪರಿಹಾರ ನೀಡಿ'

ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ನಿರಂತರವಾಗಿ ಏರಿಸುವ ಮೂಲಕ ಉರಿವ ಮನೆಯಲ್ಲಿ ಗಳ ಹಿರಿಯುವ ಕೆಲಸ ಆಗುತ್ತಿದೆ. ಅಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಇಂಧನ ಬೆಲೆ ಏರಿಕೆ ಹಾಗೂ ಕೋವಿಡ್ ನಿಂದ ತತ್ತರಿಸಿರುವ ಜನರ ಬದುಕು ಕಟ್ಟಲು ಒಂದು ಬಾರಿಗೆ ಅನ್ವಯವಾಗುವಂತೆ 55 ಲಕ್ಷ ಕುಟುಂಬಗಳಿಗೆ ತಲಾ 25,000 ರೂ. ಪರಿಹಾರ ನೀಡಬೇಕು. ನೆರೆ, ಕೋವಿಡ್ʼನಿಂದ ಸಾಮಾನ್ಯ ಜನ ತತ್ತರಿಸಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ನಿರಂತರ ಬೆಲೆ ಏರಿಕೆಯಿಂದ ರೈತರು, ಬಡವರು ಮತ್ತು ಶ್ರಮಿಕರ ಮನೆಗಳಲ್ಲಿ ಬೆಂಕಿ ಬಿದ್ದಿದೆ. ಆ ಬೆಂಕಿ ಬಿದ್ದಿರುವ ಮನೆಗಳಲ್ಲಿ ಎಷ್ಟು ಗಳ ಹಿರಿಯಬಹುದು ಎಂಬ ಉದ್ದೇಶದಿಂದ ಇಷ್ಟು ತೆರಿಗೆ ಹಾಕಿದಂತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಸರ್ಕಾರಕ್ಕೆ ಆದಾಯವೂ ಮುಖ್ಯ, ನಿಜ. ಅದೇ ರೀತಿ ಜನರ ಕಲ್ಯಾಣವೂ ಮುಖ್ಯ. ಹಾಗಂತ ಮನಸೋ ಇಚ್ಛೆ ತೆರಿಗೆ ಹಾಕುವುದಲ್ಲ. ಜನರಿಗೆ ಬದುಕೇ ದುಸ್ಥರವಾಗಿದೆ. ಎರಡು ಹೊತ್ತು ಊಟಕ್ಕೂ ಕಷ್ಟವಾಗಿದೆ. ಇಂಥ ತೀವ್ರ ಸಂಕಷ್ಟದ ಸಮಯದಲ್ಲಿ ಜನರ ಮೇಲೆ ಬೆಲೆ ಏರಿಕೆ ಪ್ರಹಾರ ಮತ್ತು ತರಿಗೆ ಪ್ರಹಾರ ನಡೆಸುವುದು ಎಷ್ಟು ಸರಿ? ಬೆಲೆ ಏರಿಕೆ ಮಾಡುವುದು ಎಂದರೆ ನಿರಂತರವಾಗಿ ಹತೋಟಿ ಇಲ್ಲದೆ ಮಾಡುವುದಲ್ಲ. ಅದಕ್ಕೆ ಒಂದು ವೈಜ್ಞಾನಿಕ ಮಾನದಂಡದ ಜತೆಗೆ ಜನರ ಪರಿಸ್ಥಿತಿಯನ್ನೂ ನೋಡಿ ನಿರ್ಧಾರ ಕೈಗೊಳ್ಳುವ ವಿವೇಚನೆ ಇರಬೇಕು. ಅದು ಬಿಟ್ಟು ಇಷ್ಟಬಂದ ಹಾಗೆ ಬೆಲೆ ಏರಿಕೆ ಮಾಡುತ್ತಾ ಹೋದರೆ ಸಾಮಾನ್ಯ ಜನರ ಪಾಡೇನು ಎಂದು ಇದೇ ವೇಳೆ ಕುಮಾರಸ್ವಾಮಿ ಪ್ರಶ್ನಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.