ETV Bharat / city

ವಿನ್ಯಾಸ ಸಂಬಂಧಿ ಕಲಿಕೆ: ಬ್ರಿಟನ್​ ವಿವಿ-ಕೌಶಲ್ಯಾಭಿವೃದ್ಧಿ ನಿಗಮ ಒಡಂಬಡಿಕೆ

author img

By

Published : Jun 9, 2022, 5:07 PM IST

ಬ್ರಿಟನ್​ ವಿಶ್ವವಿದ್ಯಾಲಯ ಮತ್ತು ಅಂತಾರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ ವಿನ್ಯಾಸ ಸಂಬಂಧಿ ಕೋರ್ಸ್​ಗಳ ಗುಣಮಟ್ಟದ ಕಲಿಕೆಗಾಗಿ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿವೆ.

university-and-skills-development-corporation-treaty-for-designing-course
ಬ್ರಿಟನ್​ ವಿವಿ, ಕೌಶಲ್ಯಾಭಿವೃದ್ಧಿ ನಿಗಮ ಒಡಂಬಡಿಕೆ

ಬೆಂಗಳೂರು: ಅಂತಾರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ (ಐಎಸ್​ಡಿಸಿ) ಮತ್ತು ಬ್ರಿಟನ್​ನ ಪ್ರತಿಷ್ಠಿತ ಲಿವರ್ ಪೂಲ್ ಜಾನ್ ಮೂರ್ಸ್ ವಿಶ್ವವಿದ್ಯಾಲಯ (ಎಲ್ ಜೆಎಂಯು)ಗಳು ವಿನ್ಯಾಸ ಸಂಬಂಧಿ ಕೋರ್ಸುಗಳ ಗುಣಮಟ್ಟದ ಕಲಿಕೆಯನ್ನು ರೂಪಿಸಲು ಒಡಂಬಡಿಕೆ ಮಾಡಿಕೊಂಡಿವೆ. ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಮ್ಮುಖದಲ್ಲಿ ಗುರುವಾರ ಖಾಸಗಿ ಹೋಟೆಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಭಯ ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಿವೆ.

ವಿನ್ಯಾಸ ಕೋರ್ಸ್​ ಕಲಿಕೆ ಸುಲಭ: ಬಳಿಕ ಮಾತನಾಡಿದ ಸಚಿವ ಅಶ್ವತ್ಥ್​ನಾರಾಯಣ, ಐಎಸ್​ಡಿಸಿ ಮತ್ತು ಎಲ್​ಜೆಎಂಯು ನಡುವಿನ ಒಪ್ಪಂದದಿಂದಾಗಿ ವಿನ್ಯಾಸ ಮತ್ತು ಕಲೆಗಳಿಗೆ ಸಂಬಂಧಿಸಿದ ಅತ್ಯಾಧುನಿಕ ಪದವಿ ಮತ್ತು ಸ್ನಾತಕೋತ್ತರ ಕೋರ್ಸುಗಳ ಕಲಿಕೆ ಸಾಧ್ಯವಾಗಲಿದೆ.

ಈ ಸಹಭಾಗಿತ್ವದ ಅನ್ವಯ ಎಲ್​ಜೆಎಂಯು ವಿದ್ಯಾರ್ಥಿಗಳು ಕೂಡ ಭಾರತಕ್ಕೆ ಬಂದು ಇಲ್ಲಿನ ಪ್ರತಿಷ್ಠಿತ ವಿವಿಗಳಲ್ಲಿ ಕಲಿಯಲಿದ್ದಾರೆ. ಅಲ್ಲಿನ ಇನ್ನೂ ಹಲವು ವಿವಿಗಳು ಭಾರತದೊಂದಿಗೆ ಕೈಜೋಡಿಸಲು ಉತ್ಸುಕವಾಗಿವೆ. ಇತ್ತೀಚೆಗೆ ಲಂಡನ್​ಗೆ ತೆರಳಿದ್ದಾಗ ಈ ನಿಟ್ಟಿನಲ್ಲಿ ಅಲ್ಲಿನ ಹಲವು ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಐಎಸ್​ಡಿಸಿ ಕೇರಳದ ಕೊಚ್ಚಿನ್​ನಲ್ಲಿರುವ ಕ್ಯಾಂಪಸ್​​ನಲ್ಲಿ ಈ ಕೋರ್ಸುಗಳನ್ನು ವ್ಯವಸ್ಥೆ ಮಾಡಲಿದೆ ಎಂದು ತಿಳಿಸಿದರು.

ಎನ್ಇಪಿ ನೀತಿಯಲ್ಲಿ ಅಂತರ್ಶಿಸ್ತೀಯ ಸಂಶೋಧನೆ, ಉದ್ಯಮಗಳೊಂದಿಗೆ ಸಕ್ರಿಯ ಸಂಪರ್ಕ ಮತ್ತು ಶಿಕ್ಷಣದ ಅಂತಾರಾಷ್ಟ್ರೀಕರಣಕ್ಕೆ ಒತ್ತು ಕೊಡಲಾಗಿದೆ. ಇಂತಹ ಒಡಂಬಡಿಕೆಗಳಿಂದ ಎರಡೂ ದೇಶಗಳ ಆರ್ಥಿಕ ಬೆಳವಣಿಗೆಗೆ ನೆರವು ಸಿಗಲಿದೆ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಐಎಸ್ಡಿಸಿ ಮುಖ್ಯಸ್ಥ ಡಾ.ಟಾಮ್ ಜೋಸೆಫ್, ಬ್ರಿಟನ್​ನ 20 ವಿದ್ಯಾರ್ಥಿಗಳು ಮುಂದಿನ ತಿಂಗಳು ರಾಜ್ಯಕ್ಕೆ ಬರಲಿದ್ದಾರೆ. ಇಲ್ಲಿ ಅವರು ವಿವಿಧ ವಿವಿಗಳಲ್ಲಿ ಒಂದು ತಿಂಗಳು ಇರಲಿದ್ದು, ಉದ್ಯಮಿಗಳು ಮತ್ತು ಶಿಕ್ಷಣ ತಜ್ಞರ ಜತೆ ವಿಚಾರ ವಿನಿಮಯ ಕೈಗೊಳ್ಳಲಿದ್ದಾರೆ. ಜತೆಯಲ್ಲಿ ಸಾಂಸ್ಕೃತಿಕ ವಿನಿಮಯವೂ ನಡೆಯಲಿದೆ ಎಂದರು. ಕಾರ್ಯಕ್ರಮದಲ್ಲಿ ಲಿವರ್ಪೂಲ್ ವಿ.ವಿ.ಯ ಸಮಕುಲಾಧಿಪತಿ ಪ್ರೊ.ಜೋ ಯೇಟ್ಸ್ ಉಪಸ್ಥಿತರಿದ್ದರು.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆಗೆ ವಿಧಾನಸೌಧದ ಮತಕೇಂದ್ರದಲ್ಲಿ ಸಕಲ ಸಿದ್ಧತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.