ಪಕ್ಷದ ವಿರುದ್ಧ ಹೇಳಿಕೆ: ಶಾಸಕ ಶ್ರೀನಿವಾಸ ಗೌಡ ವಿರುದ್ಧ ಕ್ರಮ ಕೈಗೊಳ್ಳುತ್ತಾ ಜೆಡಿಎಸ್?

author img

By

Published : Sep 9, 2021, 8:51 PM IST

Disciplinary_action_against_JDS_MLA Srinivas gowda

ಜೆಡಿಎಸ್‌ಗೆ ಹಾನಿಯಾಗುವಂತಹ ಹೇಳಿಕೆ ನೀಡಿರುವ ಪಕ್ಷದ ಶಾಸಕ ಶ್ರೀನಿವಾಸ ಗೌಡ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಪರಿಶೀಲನೆ ನಡೆಸಲಾಗುತ್ತಿದೆ. ಕ್ರಮಕ್ಕೆ ಮಾಜಿ ಪ್ರಧಾನಿ, ಪಕ್ಷದ ವರಿಷ್ಠ ದೇವೇಗೌಡರೂ ಸೂಚಿಸಿದ್ದಾರೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್‌.ಕೆ.ಕುಮಾರಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರು: ಪಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಬಹಿರಂಗ ಟೀಕೆ ಮಾಡುತ್ತಿರುವ ಕೋಲಾರದ ಜೆಡಿಎಸ್‌ ಶಾಸಕ ‌ಶ್ರೀನಿವಾಸ ಗೌಡ ವಿರುದ್ಧ ಶಿಸ್ತುಕ್ರಮಕ್ಕೆ ಪಕ್ಷ ಮುಂದಾಗುವುದೇ? ಎಂಬ ಪ್ರಶ್ನೆ ಕೇಳಿಬರುತ್ತಿದೆ.

ಶ್ರೀನಿವಾಸ ಗೌಡ ವಿರುದ್ಧ ಕ್ರಮ ಕೈಗೊಳ್ಳಲು ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಅವರಿಗೆ ವರಿಷ್ಠ ಹೆಚ್.ಡಿ.ದೇವೇಗೌಡರು ಸೂಚನೆ ನೀಡಿದ್ದಾರೆಯೇ?, ಪಕ್ಷದಿಂದ ಶ್ರೀನಿವಾಸಗೌಡರನ್ನು ಉಚ್ಛಾಟಿಸಲಾಗುತ್ತದೆಯೇ ಎಂಬ ಚರ್ಚೆ ಆರಂಭವಾಗಿವೆ.

ಕಾಂಗ್ರೆಸ್ ಮುಖಂಡರ ಜೊತೆ ಸೇರಿ ಜೆಡಿಎಸ್ ಪಕ್ಷಕ್ಕೆ ಹಾನಿಯಾಗುವಂತೆ ಮಾತನಾಡುತ್ತಿರುವ ಶಾಸಕರವಿರುದ್ಧ ಕ್ರಮ ಜರುಗಿಸುವಂತೆ ಕೋಲಾರದ ಜೆಡಿಎಸ್‌ ಜಿಲ್ಲಾಧ್ಯಕ್ಷರು ಈಗಾಗಲೇ ದೂರು ನೀಡಿದ್ದಾರೆ.

'ಪರಿಶೀಲಿಸಿ ಕ್ರಮ'

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಶ್ರೀನಿವಾಸ ಗೌಡ ಅವರು ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವ ರೀತಿ ಮಾತನಾಡಿದ್ದಾರೆಂಬ ದೂರು ಬಂದಿದ್ದು, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಧ್ಯಕ್ಷರು ನೀಡಿರುವ ದೂರನ್ನು ಪರಿಶೀಲನೆ ಮಾಡಲಾಗುತ್ತಿದೆ. ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಕ್ರಮ ಕೈಗೊಳ್ಳಲು ಈಗಾಗಲೇ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ಶ್ರೀನಿವಾಸ ಗೌಡ ಅವರು ಯಾವ ರೀತಿ ಮಾತನಾಡಿದ್ದಾರೆ, ಅದರಿಂದ ಪಕ್ಷಕ್ಕೆ ಆಗುತ್ತಿರುವ ಹಾನಿ ಏನು ಎಂಬ ವಿಚಾರಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ. ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂತೆ ಮಾತನಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಈಗಾಗಲೇ ದೇವೇಗೌಡರು ಹೇಳಿದ್ದು, ಶಿಸ್ತು ಕ್ರಮ ಅನಿವಾರ್ಯವಾಗಲಿದೆ ಎಂದಿದ್ದಾರೆ. ಹೀಗಾಗಿ ಜಿಲ್ಲಾಧ್ಯಕ್ಷರು ನೀಡಿರುವ ದೂರನ್ನು ಪರಿಶೀಲಿಸಿ ಶ್ರೀನಿವಾಸಗೌಡರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬುದನ್ನು ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.

ಕೋಲಾರ ಶಾಸಕರ ವಿಚಾರದಲ್ಲಿ ಇನ್ನು ಸಹಿಸಲು ಆಗುವುದಿಲ್ಲ. ನೇರವಾಗಿ ಪಕ್ಷಕ್ಕೆ ಹಾನಿಯಾಗುವ ರೀತಿಯಲ್ಲಿ ಅವರು ಮಾತನಾಡಿದ್ದರೆ, ಪಕ್ಷದ ರಾಜ್ಯಾಧ್ಯಕ್ಷರು ಸೂಕ್ತ ಕ್ರಮ ಜರುಗಿಸುತ್ತಾರೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಇತ್ತೀಚೆಗೆ ಹೇಳಿದ್ದರು.

ಇದನ್ನೂ ಓದಿ: ರಾಜ್ಯ ಪ್ರವಾಸ ಮಾಡುವುದರಿಂದ ಏನೂ ಉಪಯೋಗವಿಲ್ಲ: ಮಾಜಿ ಸಿಎಂ ಹೆಚ್​ಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.