ಕಲ್ಲಿದ್ದಲು ಸಾಗಣೆ ದರ‌ ದುಬಾರಿ: ಆರ್ಥಿಕ ಸಂಕಷ್ಟದಲ್ಲಿರುವ ಕೆಪಿಸಿಎಲ್​​ಗೆ ಕೋಟಿ ಕೋಟಿ ಬಾಕಿ ಬಿಲ್!

author img

By

Published : Dec 1, 2021, 2:37 AM IST

Coal Transport rate hike, Financial crises for KPCL,ಕೆಪಿಸಿಎಲ್​​ಗೆ ಆರ್ಥಿಕ ಸಂಕಷ್ಠ

ಹಣದ ಕೊರತೆ ಎದುರಿಸುತ್ತಿರುವ ಕೆಪಿಸಿಎಲ್​​ಗೆ ಕಲ್ಲಿದ್ದಲಿನ ದುಬಾರಿ ಸಾಗಾಟವೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇತ್ತ ಎಸ್ಕಾಂಗಳಿಂದ ಕೆಪಿಸಿಎಲ್​ಗೆ 18 ಸಾವಿರಕ್ಕೂ ಹೆಚ್ಚು ಬಾಕಿ ಬಿಲ್ ಬರಬೇಕಿದೆ.

ಬೆಂಗಳೂರು: ಕಲ್ಲಿದ್ದಲು ಕೊರತೆಯಿಂದ ರಾಜ್ಯ ಕತ್ತಲ ಕೂಪದ ಅಂಚಿಗೆ ಹೋಗಿತ್ತು. ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಧ್ಯ ಪ್ರವೇಶದ ಬಳಿಕ ಕಲ್ಲಿದ್ದಲು ಪೂರೈಕೆಯಲ್ಲಿ ಸ್ವಲ್ಪ ಚೇತರಿಕೆ ಕಂಡಿತು.‌ ಇದೀಗ ಸಾಗಣೆ ದರ ದುಬಾರಿಯಾಗಿದ್ದು, ಕಲ್ಲಿದ್ದಲನ್ನು ತುರ್ತಾಗಿ ತರಿಸಿಕೊಳ್ಳುವ ಅನಿವಾರ್ಯತೆಯಲ್ಲಿ ರಾಜ್ಯ ಸರ್ಕಾರ ಸಿಲುಕಿದೆ. ಇತ್ತ ಹಣದ ಕೊರತೆ ಎದುರಿಸುತ್ತಿರುವ ಕೆಪಿಸಿಎಲ್​​ಗೆ ಕಲ್ಲಿದ್ದಲಿನ ದುಬಾರಿ ಸಾಗಾಟವೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಮಹಾರಾಷ್ಟ್ರದ ವೆಸ್ಟರ್ನ್ ಗಣಿಗಳಿಂದ 1.50 ಲಕ್ಷ ಟನ್ ಮತ್ತು ಓಡಿಶಾದ ಮಹಾನದಿ ಗಣಿಗಳಿಂದ 1.24 ಲಕ್ಷ ಟನ್ ಹೆಚ್ಚುವರಿ ಕಲ್ಲಿದ್ದಲು ಮಂಜೂರಾಗಿದೆ. ಎರಡೂ ಕಂಪನಿಗಳಿಂದ ಕಲ್ಲಿದ್ದಲು ತ್ವರಿತವಾಗಿ ಎತ್ತುವಳಿ ಮಾಡುವಂತೆ ಕೇಂದ್ರ ಸರ್ಕಾರ ಹಲವು ಬಾರಿ ರಾಜ್ಯಕ್ಕೆ ಸೂಚಿಸಿದೆ. ಮಳೆಯ ಕಾರಣಕ್ಕೆ ಸದ್ಯ ವಿದ್ಯುತ್ ಬೇಡಿಕೆ ಹಾಗೂ ಬಳಕೆ ತಾತ್ಕಾಲಿಕವಾಗಿ ತಗ್ಗಿದೆ. ಆದರೆ ಮುಂದೆ ವಿದ್ಯುತ್ ಬೇಡಿಕೆ ಹೆಚ್ಚುವ ಸಾಧ್ಯತೆ ಇದ್ದು, ಆ ಪರಿಸ್ಥಿತಿಯನ್ನು ಸರಿದೂಗಿಸಲು ಕರ್ನಾಟಕ ವಿದ್ಯುತ್ ನಿಗಮ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಆದರೆ ಸಾಗಣೆ ವೆಚ್ಚ ಹೆಚ್ಚಾಗಿರುವ ಕಾರಣ ಈಗಲೇ ಆರ್ಥಿಕ ಸಂಕಷ್ಟದಲ್ಲಿರುವ ಕೆಪಿಸಿಎಲ್​​ಗೆ ಮತ್ತಷ್ಟು ಹೊರೆ ಬೀಳಲಿದೆ.

ಕೆಪಿಸಿಎಲ್ ಮೇಲೆ ಸಾಗಣೆ ವೆಚ್ಚದ ಹೊರೆ:
ವೆಸ್ಟರ್ನ್ ಕಂಪನಿ ಎರಡು ಗಣಿಗಳಲ್ಲಿನ ಕಲ್ಲಿದ್ದಲು ಶಾಖೋತ್ಪನ್ನ ಸ್ಥಾವರಕ್ಕೆ ಸಾಗಣೆ ಮಾಡಲು ಎರಡು ತಿಂಗಳ ಅವಧಿಗೆ ಗುತ್ತಿಗೆ ನೀಡಲೆಂದು ಕೆಪಿಸಿಎಲ್ ಟೆಂಡರ್ ಕರೆದಿತ್ತು. ಮೂರು ಕಂಪನಿಗಳ ಸಲ್ಲಿಸಿದ್ದ ಬಿಡ್‌ಗಳಲ್ಲಿ ಎರಡು ತಿರಸ್ಕೃತವಾಗಿದ್ದು, ನಾಗ್ಪುರ ಮೂಲದ ಮೆ: ಕೊಹ್ಲಿ ರೋಡ್ ಲೈನ್ಸ್ ಏಜನ್ಸಿಯದು ಮಾತ್ರ ಅರ್ಹತೆ ಗಿಟ್ಟಿಸಿಕೊಂಡಿತು.

ತ್ವರಿತವಾಗಿ ಎತ್ತುವಳಿಗೆ ಕೇಂದ್ರ ತಾಕೀತು ಮಾಡಿರುವ ಕಾರಣಕ್ಕೆ ಟೆಂಡರ್ ಪರಿಶೀಲನಾ ಸಮಿತಿ ಹಾಗೂ ಟೆಂಡರ್ ಆಹ್ವಾನ ಪ್ರಾಧಿಕಾರದ ಸಮ್ಮತಿ ಪಡೆದು, ಏಕೈಕ ಏಜನ್ಸಿಗೆ ಸಾಗಣೆ ಗುತ್ತಿಗೆ ನೀಡುವುದು ಅನಿವಾರ್ಯವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ನಿಗಮದ ನಿರ್ದೇಶಕರ ಆಡಳಿತ ಮಂಡಳಿ ಸಭೆಯು ಈ ವಿಷಯ ಚರ್ಚಿಸಿ, ಅಸ್ತು ಎಂದಿದೆ. ಕಲ್ಲಿದ್ದಲು ಖರೀದಿ ಹಾಗೂ ಸಾಗಣೆ ಸೇರಿ ಪ್ರತಿ ಟನ್‌ಗೆ 4,426.36 ರೂ. ವೆಚ್ಚ ಅಂದಾಜಿಸಿದ್ದು, ಪ್ರತಿ ಯೂನಿಟ್ ವಿದ್ಯುತ್ ಉತ್ಪಾದನಾ ವೆಚ್ಚ 3.10 ರೂ.ಗಳಾಗಲಿದೆ.

ಎರಡು ಗಣಿಗಳಿಂದ 1.50 ಲಕ್ಷ ಟನ್ ಕಲ್ಲಿದ್ದಲು ಸಾಗಣೆಗೆ ಒಟ್ಟು 4.66 ಕೋಟಿ ರೂ. ಖರ್ಚಾಗಲಿದೆ ಎಂದು ಲೆಕ್ಕ ಹಾಕಲಾಗಿದ್ದು, ಸಾಗಣೆ ಏಜನ್ಸಿಯೇ ಗುಣಮಟ್ಟ ಮತ್ತು ಪ್ರಮಾಣದ ಮೇಲ್ವಿಚಾರಣೆ ಜವಾಬ್ದಾರಿ ಹೊತ್ತುಕೊಂಡಿದೆ. ಒಡಿಶಾದ ಮಹಾನದಿ ಐದು ಗಣಿಗಳಿಂದ ಒಟ್ಟು 1.24 ಲಕ್ಷ ಟನ್ ಸಾಗಣೆ ವೆಚ್ಚವು ಅತ್ಯಧಿಕವೆಂಬ ಕಾರಣ ಸದ್ಯಕ್ಕೆ 62,000 ಟನ್ ತರಿಸಿಕೊಳ್ಳಲು ನಿಗಮ ನಿರ್ಧರಿಸಿದೆ.

ಮೆ:ಅಂಬೆ ಮೈನಿಂಗ್ ಪ್ರೈವೇಟ್ ಲಿಮಿಟೆಡ್‌ಗೆ ಸಾಗಣೆ ಗುತ್ತಿಗೆ ನೀಡಲಿದ್ದು, ಕಲ್ಲಿದ್ದಲು ಖರೀದಿ ಸಹಿತ 14.32 ಕೋಟಿ ರೂ. ಖರ್ಚಾಗುವ ಅಂದಾಜಿದೆ. ಈ ಲೆಕ್ಕದ ಪ್ರಕಾರ ಪ್ರತಿ ಯೂನಿಟ್ ವಿದ್ಯುತ್ ಉತ್ಪಾದನಾ ವೆಚ್ಚ 4.10 ರೂ.ಗಳಾಗಲಿದೆ ಎಂದು ಮೂಲಗಳು ತಿಳಿಸಿವೆ.

ಅಲ್ಪ ದಾಸ್ತಾನಿನ‌ ಭೀತಿ:
ಕೇಂದ್ರೀಯ ವಿದ್ಯುತ್ ಪ್ರಾಧಿಕಾರ (ಸಿಇಎ)ದ ನಿಯಮಾವಳಿ ಪ್ರಕಾರ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ 20 ದಿನಗಳಿಗೆ ಬೇಕಾಗುವಷ್ಟು ಕಲ್ಲಿದ್ದಲು ದಾಸ್ತಾನಿರಬೇಕು. ಆದರೆ ಸದ್ಯ ವಿದ್ಯುತ್ ಸ್ಥಾವರಗಳಲ್ಲಿ ಅಲ್ಪ ದಾಸ್ತಾನು ಇದೆ. ಆರ್‌ಟಿಪಿಎಸ್‌ನಲ್ಲಿ 54,648 ಟನ್, ಬಿಟಿಪಿಎಸ್-75,905 ಟನ್ ಸಂಗ್ರಹವಿದೆ. ಇದು ಎರಡು ದಿನಗಳಿಗೆ ಸಾಲುತ್ತದೆ. ವೈಟಿಪಿಎಸ್‌ನಲ್ಲಿ 7,441 ಟನ್ ದಾಸ್ತಾನಿದ್ದು, ಒಂದು ದಿನಕ್ಕೂ ಸಾಕಾಗದು.

ಸದ್ಯ ಆರ್‌ಟಿಪಿಎಸ್ ನಾಲ್ಕು, ಬಿಟಿಪಿಎಸ್‌ನ ಎರಡು ಘಟಕಗಳು ಚಾಲನೆಯಲ್ಲಿವೆ. ಬೇಡಿಕೆ ಇಳಿಮುಖವಾಗಿರುವ ಕಾರಣ ವೈಟಿಪಿಎಸ್‌ನಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಕೆಪಿಸಿಎಲ್​​ಗೆ ಬಾಕಿ ಬಿಲ್ ಸಂಕಟ:
ಹೌದು, ಕೆಪಿಸಿಎಲ್​​ಗೆ ಕೋಟ್ಯಂತರ ರೂ. ಪಾವತಿಯಾಗಬೇಕಿದೆ. ಇದರಿಂದ ಕೆಪಿಸಿಎಲ್ ತೀವ್ರ ಹಣದ ಕೊರತೆ ಎದುರಿಸುತ್ತಿದೆ. ಕೆಪಿಸಿಎಲ್​​ಗೆ ವಿವಿಧ ಎಸ್ಕಾಂಗಳಿಂದ ಬರೋಬ್ಬರಿ 18,478 ಕೋಟಿ ರೂ. ಪಾವತಿಯಾಗಬೇಕಿದೆ.

ಬೆಸ್ಕಾಂ ಕೆಪಿಸಿಎಲ್​​ಗೆ 10,265 ಕೋಟಿ ರೂ. ಪಾವತಿಸದೇ ಹಾಗೇ ಉಳಿಸಿಕೊಂಡಿದೆ. ಮೆಸ್ಕಾಂ 2,104 ಕೋಟಿ ರೂ. ಪಾವತಿಸದೇ ಬಾಕಿ ಉಳಿಸಿಕೊಂಡಿದೆ. ಚೆಸ್ಕಾಂ 2,395 ಕೋಟಿ ರೂ. ಪಾವತಿಸಬೇಕಾಗಿದೆ. ಇನ್ನು ಹೆಸ್ಕಾಂ 2,051 ಕೋಟಿ ರೂ.‌ ಪಾವತಿಸಬೇಕಾಗಿದೆ. ಇನ್ನು ಜೆಸ್ಕಾಂ 1,663 ಕೋಟಿ ರೂ. ಪಾವತಿಸದೇ ಬಾಕಿ ಉಳಿಸಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.