ETV Bharat / city

ಪಕ್ಷದ ವರಿಷ್ಠರ ಜೊತೆ ಸಂಘರ್ಷಕ್ಕೆ ಸಜ್ಜಾದ್ರಾ ಸಿಎಂ ಯಡಿಯೂರಪ್ಪ?

author img

By

Published : Jun 8, 2021, 12:36 PM IST

ವರಿಷ್ಠರು ಬಯಸಿದರೆ ರಾಜೀನಾಮೆ ಕೊಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದರು. ಅದೇ ಕಾಲಕ್ಕೆ ಪರ್ಯಾಯ ನಾಯಕತ್ವ ಇಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪರ್ಯಾಯ ನಾಯಕರಿದ್ದಾರೆ ಎಂದಿದ್ದರು. ಅವರು ಆಡಿದ ಆ ಮಾತೇ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದಲ್ಲದೆ, ಇದು ಪ್ರಧಾನಿ ನರೇಂದ್ರ ಮೋದಿ ಅವರಿಗೇ ಬಿಟ್ಟ ಬಾಣವೇ ಎಂದು ವ್ಯಾಖ್ಯಾನಿಸಲಾಗುತ್ತಿದೆ.

CM Yeddyurappa
ಸಿಎಂ ಯಡಿಯೂರಪ್ಪ

ಬೆಂಗಳೂರು: ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪರ್ಯಾಯ ನಾಯಕರಿದ್ದಾರೆ ಎನ್ನುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಕ್ಷದ ವರಿಷ್ಠರ ಜೊತೆ ಸಂಘರ್ಷಕ್ಕೆ ಸಜ್ಜಾದರೆ?. ಹೀಗೊಂದು ಪ್ರಶ್ನೆ ಇದೀಗ ರಾಜಕೀಯ ವಲಯಗಳಲ್ಲಿ ಕುತೂಹಲಕಾರಿ ಚರ್ಚೆಗೆ ಗ್ರಾಸವಾಗಿದೆ.

ವಿಧಾನಸೌಧದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ, ವರಿಷ್ಠರು ಬಯಸಿದರೆ ರಾಜೀನಾಮೆ ಕೊಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದರು. ಅದೇ ಕಾಲಕ್ಕೆ ಪರ್ಯಾಯ ನಾಯಕತ್ವ ಇಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪರ್ಯಾಯ ನಾಯಕರಿದ್ದಾರೆ ಎಂದಿದ್ದರು. ಅವರು ಆಡಿದ ಆ ಮಾತೇ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದಲ್ಲದೆ, ಇದು ಪ್ರಧಾನಿ ನರೇಂದ್ರ ಮೋದಿ ಅವರಿಗೇ ಬಿಟ್ಟ ಬಾಣವೇ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ದೇಶದಲ್ಲಿ ನರೇಂದ್ರ ಮೋದಿ ಅವರಿಗೆ ಪರ್ಯಾಯ ನಾಯಕರಿಲ್ಲ ಎಂದು ಬಿಜೆಪಿ ದೇಶಾದ್ಯಂತ ಪ್ರತಿಬಿಂಬಿಸುತ್ತಲೇ ಬರುತ್ತಿದೆ. ಇದು ಬಿಜೆಪಿಯ ನಂಬರ್ ಒನ್ ಅಜೆಂಡಾ ಆಗಿದ್ದು, ಇಂತಹ ಸಂದರ್ಭದಲ್ಲೇ ರಾಷ್ಟ್ರದಲ್ಲಿ ಪರ್ಯಾಯ ನಾಯಕರಿದ್ದಾರೆ ಎಂಬ ಯಡಿಯೂರಪ್ಪ ಅವರ ಮಾತು ಬಿಜೆಪಿ ಅಜೆಂಡಾಕ್ಕೆ ತಿವಿದಂತೆ ಮಾಡಿದೆ. ತಮ್ಮ ನಾಯಕತ್ವಕ್ಕೆ ಪರ್ಯಾಯವಿಲ್ಲ ಎಂಬಂತೆಯೇ ನಡೆದುಕೊಂಡು ಬಂದಿದ್ದ ಬಿ.ಎಸ್.ಯಡಿಯೂರಪ್ಪ ಅದಕ್ಕೆ ಏಟು ಬೀಳುತ್ತಿದ್ದಂತೆಯೇ ಆಕ್ರೋಶಗೊಂಡಿರುವಂತೆ ಕಾಣುತ್ತಿದೆ.

ಹೀಗಾಗಿಯೇ ತಮ್ಮ ನಾಯಕತ್ವಕ್ಕೆ ಪರ್ಯಾಯ ಹೆಸರುಗಳು ಕೇಳಿ ಬರುತ್ತಿದ್ದಂತೆಯೇ ರಾಷ್ಟ್ರ ನಾಯಕತ್ವಕ್ಕೂ ಪರ್ಯಾಯವಿದೆ ಎಂದು ಗುಡುಗಿದ್ದಾರೆ. ಅವರ ಈ ಮಾತು ಹೈಕಮಾಂಡ್ ಜತೆ ಸಂಘರ್ಷಕ್ಕಿಳಿಯಲು ಅವರು ತಯಾರಾಗಿದ್ದಾರೆ ಎಂಬ ಮುನ್ಸೂಚನೆ ಎಂಬುದು ಪ್ರಸ್ತುತದ ವ್ಯಾಖ್ಯಾನವಾಗಿದೆ. ಈ ಮಧ್ಯೆ ವಾಟ್ಸಪ್ ಗ್ರೂಪ್​ಗಳಲ್ಲಿ ಕಳೆದೊಂದು ವಾರದಿಂದ ಸಂದೇಶವೊಂದು ಹರಿದಾಡುತ್ತಿದ್ದು, ಅದು ಯಡಿಯೂರಪ್ಪ ಅವರ ಪರ ಮತ್ತು ಬಿ.ಎಲ್.ಸಂತೋಷ್ ಹಾಗೂ ಹೈಕಮಾಂಡ್ ವಿರುದ್ಧ ಆರ್ಭಟಿಸಿದೆ. ಬಿಎಸ್​ವೈ ಅಭಿಮಾನಿಗಳ ಹೆಸರಿನಲ್ಲಿ ಫೇಸ್​ಬುಕ್​ನಲ್ಲೂ ಹರಿದಾಡುತ್ತಿರುವ ಈ ಸಂದೇಶದ ಬೆನ್ನಲ್ಲೇ ಯಡಿಯೂರಪ್ಪ ಅವರ ಈಗಿನ‌ ಮಾತುಗಳನ್ನು ಹೋಲಿಸಿ ನೋಡಲಾಗುತ್ತಿದೆ.

ಏನಿದು ಸಂದೇಶ? :

''ವೀರಶೈವ-ಲಿಂಗಾಯತ ಸಮಾಜವನ್ನು ಛಿದ್ರ ಛಿದ್ರ ಮಾಡಿ, ಆ ಮೂಲಕ ರಾಜ್ಯ ರಾಜಕಾರಣದ ಧಿಕ್ಕು ದೆಸೆಯನ್ನು ನಿರ್ಧರಿಸಬಲ್ಲ ರಾಜ್ಯದ ಬಹುಸಂಖ್ಯಾತ ವೀರಶೈವ-ಲಿಂಗಾಯತ ಸಮಾಜದ ರಾಜಕೀಯ ಶಕ್ತಿಯನ್ನು ಕುಂದಿಸುವ ಮತ್ತು ಸಮಾಜದ ಮೇರು ನಾಯಕ ಯಡಿಯೂರಪ್ಪನವರನ್ನು ರಾಜಕೀಯವಾಗಿ ಮುಗಿಸುವ ಅತಿ ದೊಡ್ಡ ರಾಜಕೀಯ ಷಡ್ಯಂತ್ರವನ್ನು ಕುತಂತ್ರ ನೀತಿಯ ಪಿತಾಮಹ ಬಿ.ಎಲ್.ಸಂತೋಷ್ ನಡೆಸಿದ್ದಾರೆ. ಆ ಷಡ್ಯಂತ್ರದ ಭಾಗವೇ ವೀರಶೈವ-ಲಿಂಗಾಯತ ಸಮಾಜವನ್ನು ಒಡೆದು ಆಳುವ ನೀತಿ''.

''ಕೆಲವು ವೀರಶೈವ-ಲಿಂಗಾಯತ ಶಾಸಕರಿಗೆ ವಿಧಾನಸೌಧದ ಮೂರನೇ ಮಹಡಿಯ ಆಸೆ ಹುಟ್ಟಿಸಿ, ಇನ್ನೂ ಕೆಲವರಿಗೆ ಭವಿಷ್ಯದ ನಾಯಕತ್ವದ ಅಮಲು ಏರಿಸಿ ಒಂದೇ ಪಕ್ಷದಲ್ಲಿನ ಲಿಂಗಾಯತ ಶಾಸಕರುಗಳ ಮೂರ್ನಾಲ್ಕು ಗುಂಪಾಗುವಂತೆ ಮಾಡಿ, ಯಡಿಯೂರಪ್ಪನವರ ವಿರುದ್ಧ ಮಾತಾಡುವಂತೆ, ನಾಯಕತ್ವ ಬದಲಾವಣೆಗೆ ಆಗ್ರಹಿಸುವಂತೆ ಪ್ರೇರೇಪಿಸುವ ಮೂಲಕ ಒಂದು ಹಂತದವರೆಗೆ ವೀರಶೈವ-ಲಿಂಗಾಯತರ ಒಗ್ಗಟ್ಟನ್ನು ಕುತಂತ್ರ ನೀತಿಯ ಪಿತಾಮಹ ಸಂತೋಷ್ ಬೆಲ್ ಹೊಡೆದಾಗಿದೆ''.

''ಸೋತ ಸವದಿಯನ್ನು ಯಡಿಯೂರಪ್ಪನವರ ವಿರುದ್ಧ ಬೆಳೆಸಲು ಉಪಮುಖ್ಯಮಂತ್ರಿ ಮಾಡಿದರು. ಯತ್ನಾಳ್​ಗೂ ಮುಖ್ಯಮಂತ್ರಿ ಖುರ್ಚಿಯನ್ನು ಎತ್ತಿ ಕೊಡ್ತೀನಿ ಎಂದು ಭರವಸೆ ನೀಡಿ, ಯಡಿಯೂರಪ್ಪನವರ ವಿರುದ್ಧ ಮಾತಾಡುವಂತೆ ಮಾಡಿದರು. ಅರವಿಂದ ಬೆಲ್ಲದ್​ಗೂ ಮುಖ್ಯಮಂತ್ರಿಯೆಂಬ ಬೆಲ್ಲ ಹಚ್ಚಿ ಯಡಿಯೂರಪ್ಪನವರ ವಿರುದ್ಧ ಕೆಲಸ ಮಾಡುವಂತೆ ಪ್ರೇರಿಪಿಸಿದರು. ನೀನೇ ಕಣೋ ಕರ್ನಾಟಕದ ಮುಖ್ಯಮಂತ್ರಿ ಎಂದು ನಿರಾಣಿ ಶುಗರ್ಸ್​ನ ಸಕ್ಕರೆಯನ್ನು ಆತನಿಗೆ ತಿನ್ನಿಸಿ, ಬಂಗಾಳ ಚುನಾವಣೆಗೆ ಹೂಡಿಕೆ ಸಹ ಮಾಡಿಸಿಕೊಂಡರು. ಯಡಿಯೂರಪ್ಪನವರ ವಿರುದ್ಧ ಶಾಸಕರನ್ನು ಒಟ್ಟು ಮಾಡುವಂತೆ ಸೋಮಣ್ಣನಿಗೆ ಸುಪಾರಿ ಕೊಟ್ಟರು''.

ಒಡೆದು ಆಳುವ ನೀತಿಯ ಫಲವಾಗಿ ಯಡಿಯೂರಪ್ಪನವರ ನಾಯಕತ್ವ ಬದಲಾವಣೆ ಎಂಬೆಲ್ಲ ಮಾತುಗಳ ನಡುವೆ ಯಡಿಯೂರಪ್ಪನವರ ನಂತರ ಯಾರು ಮುಖ್ಯಮಂತ್ರಿ ಆಗಬೇಕು ಎಂಬ ಹೆಸರುಗಳಲ್ಲಿ ಈಗ ಸವದಿ ಇಲ್ಲ, ಯತ್ನಾಳ್ ಮಾಯಾ, ಹೊಸ ಮುಖದ ಬೆಲ್ಲದ್ ನಾಪತ್ತೆ, ಇನ್ನೆಲ್ಲಿ ನಿರಾಣಿ, ಸೋಮಣ್ಣ, ನಿನಗೆ ಪಂಗನಾಮ ಕಣಣ್ಣ. ಈಗ ತೇಲಿ ಬರುತ್ತಿರುವ ಹೆಸರು Once Again ಮಹಾರಾಷ್ಟ್ರದಲ್ಲಿ ಬಹುಸಂಖ್ಯಾತ ಮರಾಠರ ಮತವನ್ನು ಪಡೆದು ಅಧಿಕಾರಕ್ಕೆ ಬಂದ ನಂತರ ಬ್ರಾಹ್ಮಣ ಸಮುದಾಯದ ದೇವೇಂದ್ರ ಫಡ್ನವಿಸ್​ರನ್ನು ಪ್ರತಿಷ್ಠಾಪಿಸಿದಂತೆ ಇಲ್ಲೂ ಸಹ ಬ್ರಾಹ್ಮಣನಾದ ಪ್ರಹ್ಲಾದ್ ಜೋಷಿನ ಪ್ರತಿಷ್ಠಾಪಿಸುವುದು ಅಥವಾ ಸ್ವತಃ ಸಂತೋಷ್. ಕರ್ನಾಟಕದ ಮುಖ್ಯಮಂತ್ರಿ ಆಗುವುದು. ಇದೇ ತಾನೆ ಒಡೆದು ಆಳುವ ಕುತಂತ್ರ ನೀತಿ''.

''ತಾಕತ್ತಿದ್ದರೆ ಜೋಷಿ ಹೆಸರಲ್ಲಿ ಬಿ.ಎಲ್.ಸಂತೋಷ್ ಹೆಸರಲ್ಲಿ ಚುನಾವಣೆ ನಡೆಸಿ ಅಧಿಕಾರಕ್ಕೆ ಬಂದು ರಾಜ್ಯಭಾರ ನಡೆಸಲಿ. ಅದನ್ನು ಬಿಟ್ಟು ಯಡಿಯೂರಪ್ಪನವರ ಹೆಸರಲ್ಲಿ ಅಧಿಕಾರಕ್ಕೆ ಬಂದು, ನಂತರ ತಮ್ಮ ಮೆರವಣಿಗೆ ನಡೆಸಿಕೊಳ್ಳುವುದು. ಈಗಲಾದರು ಬಿಜೆಪಿ ಪಕ್ಷದಲ್ಲಿನ ವೀರಶೈವ-ಲಿಂಗಾಯತ ಸಮಾಜದ ರಾಜಕೀಯ ನಾಯಕರು ಇವರ ಕುತಂತ್ರ ಬುದ್ಧಿಯನ್ನು ಅರಿತು, ರಾಜಕೀಯ ಸ್ಥಾನಮಾನದ ಹುಸಿ ಭರವಸೆಯನ್ನು ನಂಬದೆ, ಇವರ ಕುತಂತ್ರ ನೀತಿಗೆ ಬಲಿಯಾಗದೇ ಒಗ್ಗಟ್ಟಾಗಿರಬೇಕಾಗಿ ವಿನಂತಿ"

"ಸ್ವಾಭಿಮಾನ ಮುಂದೆ ಹಣ, ಅಧಿಕಾರ, ಸ್ಥಾನ-ಮಾನ ಎಲ್ಲಾ ನಗಣ್ಯ. ಹಾರುತಿರಲಿ ಕನ್ನಡದ ಬಾವುಟ. ನಿಲ್ಲದಿರಲಿ ವೀರಶೈವ-ಲಿಂಗಾಯತರ ಆರ್ಭಟ, ನಮ್ಮ ಯಡಿಯೂರಪ್ಪ ನಮ್ಮ ಹೆಮ್ಮೆ" ಎಂದು ಬಿಎಸ್​​​​​​​​​ವೈ ಅಭಿಮಾನಿಗಳ ಹೆಸರಿನಲ್ಲಿ ಫೇಸ್​ಬುಕ್​ನಲ್ಲಿ ‌ಬರೆಯಲಾಗಿದೆ.

ಒಟ್ಟಾರೆ ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ದೆಹಲಿ ಭೇಟಿ ನಂತರ ರಾಜ್ಯ ರಾಜಕರಣದಲ್ಲಿ ಸಂಚಲನ ಮೂಡಿರುವುದಂತೂ ಸತ್ಯ. ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಎಂಬುದನ್ನು ಕಾದು ನೋಡಬೇಕು.

ಓದಿ: IBPS,RRB, PO ಕ್ಲರ್ಕ್​ ಹುದ್ದೆಗಳ ನೇಮಕಾತಿ: ಅರ್ಜಿ ಸಲ್ಲಿಕೆ, ಶುಲ್ಕ, ವಯಸ್ಸಿನ ಮಾಹಿತಿ ಇಲ್ಲಿದೆ...

ETV Bharat Logo

Copyright © 2024 Ushodaya Enterprises Pvt. Ltd., All Rights Reserved.