ETV Bharat / city

ಆಜಾದಿ ಕಾ ಅಮೃತ ಮಹೋತ್ಸವ.. ಸಿಎಂ ಸಮ್ಮುಖದಲ್ಲಿ ನಡುರಾತ್ರಿ ಧ್ವಜಾರೋಹಣ

author img

By

Published : Aug 15, 2022, 6:55 AM IST

ಮಲ್ಲೇಶ್ವರಂ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡುರಾತ್ರಿ ಧ್ವಜಾರೋಹಣ ನೆರವೇರಿಸಿದರು.

CM Bommai hoisted the flag in Malleswaram
ಮಲ್ಲೇಶ್ವರಂನಲ್ಲಿ ನಡುರಾತ್ರಿ ಧ್ವಜಾರೋಹಣ ನೆರವೇರಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ವೇದಿಕೆಯ ಮೇಲೆಲ್ಲ ತಿರಂಗಾದ ಝಗಮಗ ಬಣ್ಣಗಳ ಬಳುಕು, ಸಭಾಂಗಣದಲ್ಲಿ ನೆರೆದಿದ್ದವರ ಕೈಯಲ್ಲಿ ಅರಳಿದ್ದ ರಾಷ್ಟ್ರಧ್ವಜಗಳು, ಶಾಸ್ತ್ರೀಯ ನೃತ್ಯ ಮತ್ತು ಸಂಗೀತಗಳ ಹದವಾದ ಸಮ್ಮಿಲನದಲ್ಲಿ ತಾಯಿ ಭಾರತಿಯ ಸ್ತುತಿ, ಬಳಿಕ ಸಮಕಾಲೀನ ಚಿತ್ರಗೀತೆಗಳ ಮೂಲಕ ಜನರಲ್ಲಿ ಉತ್ಸಾಹದ ಅಲೆ ಎಬ್ಬಿಸಿದ ಹೆಸರಾಂತ ಗಾಯಕಿ ಮಂಗ್ಲಿ (ಸತ್ಯವತಿ) ಮತ್ತು ಅವರ ತಂಗಿ ಇಂದಿರಾವತಿ. ಇವೆಲ್ಲಕ್ಕೆ ಕಳಶವಿಟ್ಟಂತೆ ನಟ್ಟ ನಡುರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರಿಂದ ಧ್ವಜಾರೋಹಣ.

ಇವು ಡಾ.ಸಿ ಎನ್ ಅಶ್ವತ್ಥ ನಾರಾಯಣ ಪ್ರತಿಷ್ಠಾನದ ವತಿಯಿಂದ ಮಲ್ಲೇಶ್ವರಂ 18ನೇ ಅಡ್ಡ ರಸ್ತೆಯ ಸರಕಾರಿ ಕಾಲೇಜು ಮೈದಾನದಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಝಲಕ್. ಮಲ್ಲೇಶ್ವರ ಕ್ಷೇತ್ರದ ಶಾಸಕರೂ ಆದ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಮಲ್ಲೇಶ್ವರಂನಲ್ಲಿ ನಡುರಾತ್ರಿ ಧ್ವಜಾರೋಹಣ ನೆರವೇರಿಸಿದ ಸಿಎಂ ಬೊಮ್ಮಾಯಿ

ರಾತ್ರಿ ಒಂಬತ್ತು ಗಂಟೆ ಹೊತ್ತಿಗೆ ಕಾರ್ಯಕ್ರಮ ಶುರುವಾಗಿದ್ದು, ಕ್ಷಣಗಳು ಉರುಳಿದಂತೆ ವಿವಿಧ ನೃತ್ಯಪಟುಗಳು ಭಾರತಾಂಬೆಯನ್ನು ವಿವಿಧ ಭಾವಗಳಲ್ಲಿ ಗ್ರಹಿಸಿ, ಅಭಿವ್ಯಕ್ತಿಸಿದರು. ಭಾರತ ಮಾತೆಯನ್ನು 'ಸೂರ್ಯ ಚಂದ್ರ ಕರ್ಣಾವತಂಸಂ ತಾರಾಗಣ' ಎಂದು ದಿವ್ಯವಾದ ಪ್ರಭಾವಳಿಯಲ್ಲಿ ಬೆಳಗಿಸಿದರು. ಇದಕ್ಕೆ ಭರತನಾಟ್ಯ, ಒಡಿಸ್ಸಿ, ಕಥಕ್ ಮುಂತಾದ ನೃತ್ಯ ಪ್ರಕಾರಗಳು ಆಸರೆಯಾಗಿದ್ದವು.

ಮೋಡಿ ಮಾಡಿದ ಮಂಗ್ಲಿ: ದೇಶಾಭಿಮಾನದಿಂದ ಜಮಾಯಿಸಿದ್ದ 10 ಸಾವಿರಕ್ಕೂ ಹೆಚ್ಚು ಜನರನ್ನು ಬೇರೊಂದು ಲೋಕಕ್ಕೆ ಕರೆದೊಯ್ದಿದ್ದು ಗಾಯಕಿ ಮಂಗ್ಲಿ ಮತ್ತು ಅವರ ತಂಡ. 'ಕಣ್ಣು ಹೊಡಿಯಾಕ ಕಲಿತಾನ' ಎಂದುಕೊಂಡು ಜನಪದ ಲಯದಿಂದ ಆರಂಭಿಸಿದ ಮಂಗ್ಲಿ, ಬಳಿಕ 'ಏಳು ಬೆಟ್ಟಾದ ಒಡೆಯನೇ...' ಎನ್ನುತ್ತ ಮಲೆ ಮಾದಪ್ಪನಿಂದ ಹಿಡಿದು ಕಾಶಿ ವಿಶ್ವನಾಥನವರೆಗೂ ಭಾರತದ ವಿಹಾರ ಮಾಡಿಸಿದರು

ದೇಶಕ್ಕೆ 75 ವರ್ಷಗಳ ಹಿಂದೆ ನಟ್ಟ ನಡುರಾತ್ರಿ ಸ್ವಾತಂತ್ರ್ಯ ಬಂತತೆ. ಆ ದಿವ್ಯ ಘಳಿಗೆಯನ್ನು ಕಾರ್ಯಕ್ರಮದಲ್ಲಿ ಭರ್ಜರಿ ಪಟಾಕಿ, ಬಾಣ-ಬಿರುಸು ಮತ್ತು ಸಿಡಿಮದ್ದುಗಳ ನಯನ‌ ಮನೋಹರ ಪ್ರದರ್ಶನದ ಮೂಲಕ ಮರುಸೃಷ್ಟಿ ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಅಶ್ವತ್ಥ ನಾರಾಯಣ ಸೇರಿದಂತೆ ಹಲವರ ಚಿತ್ತಾರಗಳ ಬೆಡಗಿನ ಲೋಕವು ಗಮನ ಸೆಳೆಯಿತು.

ಇದನ್ನೂ ಓದಿ: ಯಾರೋ ಒಬ್ಬರಿಂದ ಸ್ವಾತಂತ್ರ್ಯ ಬಂದಿಲ್ಲ : ನೆಹರೂ ಫೋಟೋ ಕೈಬಿಟ್ಟಿದ್ದಕ್ಕೆ ಸಿಎಂ ಸಮರ್ಥನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.