ETV Bharat / city

ಯಶಸ್ವಿನಿ ಯೋಜನೆ ಮರು ಜಾರಿ : ಸಿಎಂ ಬೊಮ್ಮಾಯಿ ಘೋಷಣೆ

author img

By

Published : Mar 20, 2022, 7:35 PM IST

ಈ ಹಿಂದೆ ಇದ್ದ ಯಶಸ್ವಿನಿ ಯೋಜನೆಯನ್ನು ಮರು ಜಾರಿ ಮಾಡಿ ರೈತರ ಅಭ್ಯುದಯಕ್ಕೆ ಶ್ರಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ..

yashshvini-scheme
ಸಿಎಂ ಬೊಮ್ಮಾಯಿ

ಬೆಂಗಳೂರು : ದೇಶದಲ್ಲಿ ಹಸಿರು ಕ್ರಾಂತಿಯಾಗಿದೆ. ಆದರೆ, ಕೃಷಿಗೆ ತಕ್ಕಂತೆ ರೈತ ಬೆಳೆದಿಲ್ಲ. ಹೀಗಾಗಿ, ಯಶಸ್ವಿನಿ ಯೋಜನೆಯನ್ನು ಮರು ಜಾರಿ ಮಾಡಿ ರೈತರ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ರಾಜ್ಯ ಸಹಕಾರ ಮಹಾಮಂಡಳ, ರಾಜ್ಯ ಸಹಕಾರ ವಸತಿ ಮಹಾಮಂಡಳ ಮತ್ತು ಸಹಕಾರ ಇಲಾಖೆಯಿಂದ ಕೆಂಗೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಹಕಾರಿಗಳಿಗೆ 'ಸಹಕಾರ ರತ್ನ' ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಯಶಸ್ವಿನಿ ಯೋಜನೆಯನ್ನು ಮರು ಜಾರಿ ಮಾಡುವುದರ ಜೊತೆಗೆ, ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡಲಾಗುತ್ತಿದೆ. ಇದರಿಂದ ರೈತರ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ಯಶಸ್ವಿನಿ ಯೋಜನೆ ಮರು ಜಾರಿಗೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಈ ಯೋಜನೆಗಾಗಿ 300 ಕೋಟಿ ರೂ. ಹಣವನ್ನು ಬಜೆಟ್​ನಲ್ಲಿ ಮೀಸಲಿಡಲಾಗಿದೆ. ರಾಜ್ಯಾದ್ಯಂತ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆ ಮಾಡಲಾಗುವುದು. ರೈತರಿಗೆ ಯಂತ್ರೋಪಕರಣಕ್ಕೆ ಅಗತ್ಯವಿರುವ ಡೀಸೆಲ್, ಪೆಟ್ರೋಲ್‌ಗೆ 500 ಕೋಟಿ ರೂ. ಹಣವನ್ನು ಬಜೆಟ್​ನಲ್ಲಿ ಮೀಸಲಿಡಲಾಗಿದೆ ಎಂದರು.

33 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 24 ಸಾವಿರ ಕೋಟಿ ರೂ. ಸಾಲ ವಿತರಣೆ ಮಾಡಲಾಗುವುದು. ಕೃಷಿಯಲ್ಲಿ ಬಂಡವಾಳ ಹೂಡಿಕೆ ಆಗಬೇಕು. ಕೃಷಿ ಆರ್ಥಿಕತೆಯ ಮೂಲ. ರೈತರು ಕೇವಲ ಉತ್ಪಾದಕರಲ್ಲ, ಅವರು ಬಳಕೆದಾರರು ಕೂಡ ಎಂದು ಹೇಳಿದರು.

16 ಸಾವಿರ ಕೋಟಿ ಸಾಲ ವಿತರಣೆ : ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, 2021ನೇ ಸಾಲಿನಲ್ಲಿ 20,810 ಕೋಟಿ ರೂ. ಶೂನ್ಯ ಬಡ್ಡಿ ಸಾಲ ನೀಡುವ ಗುರಿ ನೀಡಲಾಗಿದೆ. ಈಗಾಗಲೇ 16 ಸಾವಿರ ಕೋಟಿ ರೂ. ಹಣ ವಿತರಣೆಯಾಗಿದೆ. ತಿಂಗಳ ಅಂತ್ಯದ ವೇಳೆಗೆ ನಿಗದಿತ ಗುರಿ ತಲುಪಲಾಗುವುದು ಎಂದರು.

ಸಹಕಾರ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ 60 ಹಿರಿಯ ಸಹಕಾರಿಗಳಿಗೆ 2021ನೇ ಸಾಲಿನ 'ಸಹಕಾರ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದರ ಜೊತೆಗೆ ನಟ ಪುನೀತ್ ರಾಜಕುಮಾರ್ ಹಾಗೂ ಕರೇಗೌಡ ಸಿದ್ಲಿಂಗಪ್ಪಗೌಡ ಸಣ್ಣಗೌಡ್ರ ಅವರಿಗೆ ಮರಣೋತ್ತರ ಪ್ರಶಸ್ತಿ ಘೋಷಣೆ ಮಾಡಲಾಯಿತು. ಇದೇ ಸಮಾರಂಭದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಾಲ್ಕು ಪೊಲೀಸ್ ಠಾಣೆಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ವರ್ಚ್ಯುವಲ್ ಮೂಲಕ ಉದ್ಘಾಟನೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಗೃಹ ಸಚಿವ ಅರಗ ಜ್ಞಾನೇೆಂದ್ರ, ಆರೋಗ್ಯ ಸಚಿವ ಡಾ. ಕೆ. ಸುಧಾಕರ, ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಅಬಕಾರಿ ಸಚಿವ ಗೋಪಾಲಯ್ಯ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಸಂಸದ ಡಿ. ವಿ. ಸದಾನಂದಗೌಡ, ಸಹಕಾರ ಮಹಾಮಂಡಳ ಅಧ್ಯಕ್ಷ ಜಿ. ಟಿ. ದೇವೇಗೌಡ ಮತ್ತು ವಿವಿಧ ಸಹಕಾರ ಮಂಡಳಿಗಳ ಪದಾಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.

ಓದಿ: ಆರ್​ಎಸ್​ಎಸ್​ ಮುಖ್ಯಸ್ಥರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಯೋಗಿ ಅದಿತ್ಯನಾಥ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.