ETV Bharat / city

ಯುಕೆಪಿ, ತಮಿಳುನಾಡು ನದಿ ಜೋಡಣೆ ವಿರುದ್ಧ ಹೊಸ ಪಿಟಿಷನ್ ಸಲ್ಲಿಸಲು ನಿರ್ಧಾರ: ಸಿಎಂ ಬೊಮ್ಮಾಯಿ

author img

By

Published : Aug 26, 2021, 11:49 AM IST

Updated : Aug 26, 2021, 1:11 PM IST

ತಮಿಳುನಾಡಿನ ಕಾನೂನು ಬಾಹಿರ ಕಾವೇರಿ-ಗುಂಡಾರ್ ನದಿ ಜೋಡಣೆ ಯೋಜನೆ ಮತ್ತು ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ವಿಚಾರವಾಗಿ ಸುಪ್ರೀಂಕೋರ್ಟ್​ಗೆ ಮತ್ತೊಂದು ಪಿಟಿಷನ್ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ತಿಳಿಸಿದ್ದಾರೆ.

cm-bommai-about-upper-krishna-project-and-cauvery
ಯುಕೆಪಿ, ತಮಿಳುನಾಡು ನದಿ ಜೋಡಣೆ ವಿರುದ್ಧ ಹೊಸ ಪಿಟಿಷನ್ ಸಲ್ಲಿಸಲು ನಿರ್ಧಾರ: ಸಿಎಂ ಬೊಮ್ಮಾಯಿ

ನವದೆಹಲಿ/ಬೆಂಗಳೂರು: ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ನೋಟಿಫಿಕೇಷನ್ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮತ್ತೊಂದು ಪಿಟಿಷನ್ ಮತ್ತು ತಮಿಳುನಾಡಿನ ಕಾನೂನು ಬಾಹಿರ ಕಾವೇರಿ-ಗುಂಡಾರ್ ನದಿ ಜೋಡಣೆ ಯೋಜನೆ ಬಗ್ಗೆ ಸುಪ್ರೀಂ ಕೋರ್ಟ್​​​ಗೆ ಮತ್ತೊಂದು ಪಿಟಿಷನ್ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕೃಷ್ಣಾ, ಕಾವೇರಿ, ಮಹದಾಯಿ ಸೇರಿದಂತೆ ಅಂತಾರಾಜ್ಯ ಜಲವಿವಾದಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಂದು ನವದೆಹಲಿಯಲ್ಲಿ ಕಾನೂನು ಮತ್ತು ತಾಂತ್ರಿಕ ತಜ್ಞರ ಜೊತೆ ಮಹತ್ವದ ಸಭೆ ನಡೆಯಿತು. ಜಲ ವಿವಾದಗಳ ಕುರಿತು ಮಹತ್ವದ ಚರ್ಚೆ ನಡೆಸಿ ಸರ್ಕಾರ ಇಡಬೇಕಿರುವ ಹೆಜ್ಜೆಗಳ ಕುರಿತು ಸಮಾಲೋಚನೆ ನಡೆಸಲಾಯಿತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸಭೆ ನಂತರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಮ್ಮ ಕಾನೂನು ತಂಡದೊಂದಿಗೆ ಸುಪ್ರೀಂಕೋರ್ಟ್​​ನಲ್ಲಿರುವ ವಿವಿಧ ವಿವಾದಗಳ ಕುರಿತು ನಮ್ಮ ಕಾನೂನು ತಂಡದ ಜೊತೆಯಲ್ಲಿ ಚರ್ಚೆ ನಡೆಸಲಾಗಿದೆ. ನಿನ್ನೆ ನಮ್ಮ ಹಿರಿಯ ನ್ಯಾಯವಾದಿ ಮೋಹನ್ ಕಾತರಿಕಿ ಅವರನ್ನು ಭೇಟಿಯಾಗಿ ಅವರಿಂದ ಎಲ್ಲಾ ವಿವರಗಳನ್ನು ಪಡೆಯಲಾಗಿದೆ. ಶ್ಯಾಮ್ ದಿವಾನ್ ಅವರನ್ನು ಇಂದು ಬೆಳಗ್ಗೆ ಭೇಟಿಯಾಗಿ ಕೆಲವೊಂದು ವಿಷಯಗಳನ್ನು ಪ್ರಸ್ತಾಪ ಮಾಡಿದ್ದೇನೆ ಎಂದು ಸಿಎಂ ತಿಳಿಸಿದ್ದಾರೆ.

ಇದರ ಜೊತೆಗೆ ನಮ್ಮ ಅಡ್ವೊಕೇಟ್ ಜನರಲ್, ಹಿರಿಯ ವಕೀಲರ ತಂಡದ ಜೊತೆ ಅಂತಾರಾಜ್ಯ ಜಲ ವ್ಯಾಜ್ಯಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಯ ನೋಟಿಫಿಕೇಷನ್ ಬಗ್ಗೆ ತೆಲಂಗಾಣ ಹಾಕಿರುವ ಅರ್ಜಿ ವಿಚಾರಣೆಗೆ ಬರುತ್ತಿದೆ. ನಾವು ಕೂಡ ಕೂಡಲೇ ನ್ಯಾಯಾಧಿಕರಣ ತೀರ್ಪಿನ ನೋಟಿಫಿಕೇಷನ್ ಹೊರಡಿಸಬೇಕು ಎನ್ನುವ ಆಜ್ಞೆಯನ್ನು ಕೊಡಬೇಕು ಎಂದು ಮನವಿ ಮಾಡಲು ನಿರ್ಧರಿಸಿದ್ದೇವೆ. ಈ ಬಗ್ಗೆ ಎಲ್ಲಾ ವಿಚಾರವನ್ನು ಕಾನೂನು ತಂಡದೊಂದಿಗೆ ಚರ್ಚಿಸಲಾಗಿದೆ ಎಂದರು‌.

ತಮಿಳುನಾಡಿನ ಕಾವೇರಿ-ಗುಂಡಾರ್ ನದಿ ಜೋಡಣೆ ಯೋಜನೆ ಕಾನೂನು ಬಾಹಿರವಾಗಿದೆ. ಅದರ ಬಗ್ಗೆ ಒರಿಜಿನಲ್ ಸೂಟ್ ಹಾಕಿದ್ದೇವೆ. ಅದರ ಲೀಗಲ್ ಇಶ್ಯೂ ಮಾಡಿ ಅದರ ವಿಚಾರಣೆ ಮಾಡಿಸಬೇಕು ಎಂದು ನಿರ್ಧರಿಸಲಾಗಿದೆ. ಮೇಕೆದಾಟು ಯೋಜನೆಯಲ್ಲಿ ಯಾವುದೇ ತಡೆಯಾಜ್ಞೆ ಇಲ್ಲ. ಆದರೆ ತಮಿಳುನಾಡು ಸರ್ಕಾರ ಹಾಕಿರುವ ಅರ್ಜಿ ವಿಚಾರಣೆ ಬಂದಾಗ ನಮ್ಮ ನಿಲುವನ್ನು ಹೇಳಬೇಕಾಗಲಿದೆ. ಮಧುರೈ ಕೋರ್ಟ್​​ನಲ್ಲಿ ಸ್ಥಳೀಯರೊಬ್ಬರು ಅರ್ಜಿ ಹಾಕಿಕೊಂಡಿದ್ದಾರೆ. ಅದರಲ್ಲಿ ಯಾವುದೇ ಹುರುಳಿಲ್ಲ, ಅವರ ವ್ಯಾಪ್ತಿಗೆ ಬರುವುದೂ ಇಲ್ಲ. ಹಾಗಾಗಿ ಆ ಅರ್ಜಿಯಲ್ಲಿ ನಾವು ಪಾರ್ಟಿಯಾಗಿ ಸೇರಿಕೊಂಡು ಆ ಅರ್ಜಿಯನ್ನು ವಜಾಗೊಳಿಸಬೇಕಿದೆ. ಅದಕ್ಕೆ ಅಗತ್ಯ ಕ್ರಮಕ್ಕೆ ನಿರ್ಧರಿಸಲಾಯಿತು ಸ್ಪಷ್ಟನೆ ನೀಡಿದ್ದಾರೆ.

ಮಹದಾಯಿ ವಿವಾದ ಇತ್ಯರ್ಥಕ್ಕೆ ನಿರ್ಧಾರ

ಮಹದಾಯಿ ವಿವಾದ ಪ್ರಕರಣದ ವಿಚಾರಣೆ ಸೆಪ್ಟೆಂಬರ್ ತಿಂಗಳಿನಲ್ಲಿ ನಿಗದಿಯಾಗಿದೆ. ವಿವಾದದಲ್ಲಿನ ಮುಖ್ಯ ವಿಷಯಗಳನ್ನು ಇತ್ಯರ್ಥ ಮಾಡಬೇಕು ಎನ್ನುವುದನ್ನು ತೀರ್ಮಾನ ಮಾಡಿದ್ದೇವೆ. ಅದಕ್ಕೆ ಮಾಡಬೇಕಿರುವ ಸಿದ್ಧತೆಗಳನ್ನು ಚರ್ಚಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ವಿವರಿಸಿದರು.

ಸುಪ್ರೀಂಗೆ ಮತ್ತೊಂದು ಪಿಟಿಷನ್ ಸಲ್ಲಿಸಲು ತಯಾರು

ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ನೋಟಿಫಿಕೇಷನ್ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮತ್ತೊಂದು ಪಿಟಿಷನ್ ಅನ್ನು ಮತ್ತು ತಮಿಳುನಾಡಿನ ಕಾನೂನು ಬಾಹಿರ ಕಾವೇರಿ-ಗುಂಡಾರ್ ನದಿ ಜೋಡಣೆ ಯೋಜನೆ ಬಗ್ಗೆ ಸುಪ್ರೀಂ ಕೋರ್ಟ್​​ಗೆ ಮತ್ತೊಂದು ಪಿಟಿಷನ್ ಸಲ್ಲಿಸಲು ತಯಾರು ಮಾಡಲು ಹೇಳಿದ್ದೇವೆ. ಸುಪ್ರೀಂಕೋರ್ಟ್​​ಗೆ ಒಂದು ಕೇಂದ್ರ ಸರ್ಕಾರಕ್ಕೆ ಒಂದು ಪಿಟಿಷನ್ ಹಾಕಬೇಕು ಎನ್ನುವ ತೀರ್ಮಾನವನ್ನು ಇಂದಿನ ಸಭೆಯಲ್ಲಿ ತೆಗೆದುಕೊಂಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ಇಂದಿನ ಸಭೆಯಲ್ಲಿ ಮಹತ್ವದ ವಿಚಾರಗಳ ಚರ್ಚೆ ಆಗಿದೆ. ಇದರ ಪ್ರಗತಿಯ ವರದಿಯನ್ನು ಇನ್ನೊಂದು ವಾರದಲ್ಲಿ ನೀಡುವಂತೆ ರಾಜ್ಯದ ಅಡ್ವೊಕೇಟ್ ಜನರಲ್​ಗೆ ಹೇಳಿದ್ದೇನೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳ ತ್ವರಿತ ಇತ್ಯರ್ಥ ಮಾಡಲು ನಮ್ಮ ಸರ್ಕಾರ ನಿರಂತರ ಪ್ರಯತ್ನ ಮಾಡಲಿದೆ‌ ಎಂದರು.

ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಸಂಸದ ಶಿವಕುಮಾರ್ ಉದಾಸಿ, ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಮತ್ತು ಇತರರು ಸಭೆಯಲ್ಲಿ ಭಾಗವಹಿಸಿದ್ದರು.‌

ಇದನ್ನೂ ಓದಿ: ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ಸ್ಥಳಕ್ಕೆ ಎಡಿಜಿಪಿ ಪ್ರತಾಪ್ ರೆಡ್ಡಿ ಭೇಟಿ

Last Updated : Aug 26, 2021, 1:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.