ETV Bharat / city

'ಅಪ್ಪರ್ ಭದ್ರಾ ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ'

author img

By

Published : Apr 6, 2022, 7:20 AM IST

ಕೇಂದ್ರ ಸಚಿವರೊಂದಿಗೆ ನಾಲ್ಕೈದು ಯೋಜನೆಗಳ ಬಗ್ಗೆ ವಿವರವಾಗಿ ಚರ್ಚೆಯಾಗಿದೆ. ಮಹದಾಯಿ, ಮೇಕೆದಾಟು, ಕೃಷ್ಣಾ ಮೇಲ್ದಂಡೆ ಹಾಗೂ ಭದ್ರಾ ಮೇಲ್ದಂಡೆ ಕುರಿತು ಚರ್ಚೆಯಾಗಿದೆ. ಈ ಯೋಜನೆಗಳ ಬಗ್ಗೆ ರಾಜ್ಯದ ನಿಲುವು ಹಾಗೂ ವಿಧಾನಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಮಾಹಿತಿ ನೀಡಲಾಗಿದೆ ಅಂತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Chief Minister Basavaraj Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಗೆ ಈಗಾಗಲೇ ಅನುಮೋದನೆ ದೊರೆತಿದ್ದು, ಆರ್ಥಿಕ ಇಲಾಖೆ ಒಪ್ಪಿಗೆ ಪಡೆದ ಕೂಡಲೇ ಸಚಿವ ಸಂಪುಟದಲ್ಲಿ ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಸರ್ವ ಪ್ರಯತ್ನಗಳನ್ನು ಮಾಡುವುದಾಗಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭರವಸೆ ನೀಡಿದ್ದಾರೆ ಅಂತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನವದೆಹಲಿಯಲ್ಲಿ ನಿನ್ನೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ಇಂಧನ ಸಚಿವರನ್ನು ಭೇಟಿಯಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವರೊಂದಿಗೆ ನಾಲ್ಕೈದು ಯೋಜನೆಗಳ ಬಗ್ಗೆ ವಿವರವಾಗಿ ಚರ್ಚೆಯಾಗಿದೆ. ಮಹದಾಯಿ, ಮೇಕೆದಾಟು, ಕೃಷ್ಣಾ ಮೇಲ್ದಂಡೆ ಹಾಗೂ ಭದ್ರಾ ಮೇಲ್ದಂಡೆ ಕುರಿತು ಚರ್ಚೆಯಾಗಿದೆ.

ಈ ಯೋಜನೆಗಳ ಬಗ್ಗೆ ರಾಜ್ಯದ ನಿಲುವು ಹಾಗೂ ವಿಧಾನಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಮೇಕೆದಾಟು ಯೋಜನೆಯ ಡಿಪಿಆರ್ ಅನುಮೋದಿಸುವುದು ಹಾಗೂ ಮಹದಾಯಿ ಯೋಜನೆಯ ಸಾಧ್ಯತಾ ವರದಿಗೆ ಒಪ್ಪಿಗೆ ನೀಡುವುದನ್ನು ಆದಷ್ಟು ಬೇಗನೆ ಮಾಡಲಾಗುವುದು ಎಂದರು.

ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮೇಕೆದಾಟು ಯೋಜನೆ: ಮೇಕೆದಾಟು ಯೋಜನೆಯಿಂದ ನಮಗೆ ನ್ಯಾಯ ಸಮ್ಮತವಾಗಿ ದೊರೆಯಬೇಕಾದ ನೀರು ದೊರೆಯುತ್ತದೆ. ಇದರಿಂದ ತಮಿಳುನಾಡಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ. ಪ್ರತಿ ವರ್ಷ ತಮಿಳುನಾಡಿಗೆ ಅವರ ಪಾಲಿನ ನೀರಿಗಿಂತಲೂ ಹೆಚ್ಚುವರಿ ನೀರು ಹೋಗುತ್ತಿದೆ. ಅದು ಎಲ್ಲಿ ಕಡಿಮೆಯಾಗುತ್ತದೆ ಎನ್ನುವ ಆತಂಕ ಅವರದ್ದು. ನ್ಯಾಯಾಧೀಕರಣದ ತೀರ್ಮಾನದಂತೆ ಅವರ ಪಾಲನ್ನು ಒದಗಿಸಲಾಗುವುದು ಎಂದರು.

ಕೃಷ್ಣಾ ಮೇಲ್ದಂಡೆ: ಯು.ಕೆ.ಪಿ 3 ನೇ ಹಂತದ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣವಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಅಫಿಡೆವಿಟ್ ಸಲ್ಲಿಸಬೇಕಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು. ನಮ್ಮ ವಕೀಲರು ಸಹ ನ್ಯಾಯಾಲಯದಲ್ಲಿ ವಾದ ಮಾಡಿದ್ದಾರೆ. ಜೊತೆಗೆ ನ್ಯಾಯಮೂರ್ತಿಗಳ ನೇಮಕಾತಿ ಆದಷ್ಟು ಶೀಘ್ರವಾಗಿ ಮಾಡಲು ಪ್ರಯತ್ನ ಗಳು ನಡೆದಿದೆ ಎಂದು ತಿಳಿಸಿದರು.

ಕಾನೂನು ಎಲ್ಲರಿಗೂ ಒಂದೆ: ಹಲಾಲ್ ಮತ್ತು ಹಿಜಾಬ್ ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾನೂನು ಎಲ್ಲರಿಗೂ ಒಂದೆ. ಎಲ್ಲರೂ ಅದಕ್ಕೆ ತಲೆಬಾಗಿ ನಡೆಯಲೇಬೇಕು. ನಮ್ಮ ಸರ್ಕಾರ, ಕಾನೂನು ಮತ್ತು ಸುವ್ಯವಸ್ಥೆ, ಶಾಂತಿ ಕಾಪಾಡಲು ಪ್ರಾಮುಖ್ಯತೆ ನೀಡುತ್ತದೆ. ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳು ನಮ್ಮ ಸಮಾಜದಲ್ಲಿ ಯಾವ ರೀತಿ ಆಚರಿಸಬೇಕು ಎನ್ನುವುದು ಧಾರ್ಮಿಕ- ಸಾಮಾಜಿಕ ವಿಚಾರ ಎಂದರು.

ಸಮಾಜದಲ್ಲಿ ಶಾಂತಿ ಕದಡುತ್ತಿರುವ ಬಗ್ಗೆ ಸರ್ಕಾರ ಕೈ ಕಟ್ಟಿ ಕುಳಿತಿದೆ, ಏನೂ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ವೈಯಕ್ತಿಕ ವಿಚಾರಗಳನ್ನು ಜನ ತೀರ್ಮಾನ ಮಾಡುತ್ತಾರೆ.

ಅವರು ಯಾವಾಗ ಮೂಕರಾಗಿದ್ದರು, ಯಾವಾಗ ಏನು ಮಾತನಾಡುತ್ತಾರೆ. ನಾನು ಏನು ಮಾತನಾಡುತ್ತೇನೆ ಎನ್ನುವುದನ್ನು ಜನ ತೀರ್ಮಾನಿಸುತ್ತಾರೆ. ನಾನು ಅದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ನಾವು ಯಾವಾಗ ಕೆಲಸ ಮಾಡಬೇಕಿತ್ತೋ ಆಗ ಮಾಡಿದ್ದೇವೆ.

ಹಿಜಾಬ್ ವಿಚಾರದಲ್ಲಿ ನ್ಯಾಯಾಲಯ ಏನು ಹೇಳಬೇಕೋ ಅದನ್ನು ಹೇಳಿದೆ. ಹಲವಾರು ವಿಚಾರಗಳು ಬಂದಾಗ ಅಧಿಕಾರಿಗಳಿಗೆ ಸೂಚನೆ ಕೊಟ್ಟು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದೇವೆ. ಹೇಳಿಕೆ ಕೊಟ್ಟರಷ್ಟೇ ಆಡಳಿತ ಅಲ್ಲ. ಆಡಳಿತ ಮಾಡಲು ರೀತಿ- ನೀತಿಗಳಿವೆ. ಅದರಂತೆ ನಾವು ಆಡಳಿತ ಮಾಡುತ್ತೇವೆ ಎಂದರು.

ಸಚಿವ ಸಂಪುಟ ವಿಸ್ತರಣೆ ಮಾತುಕತೆಗೆ ಬಂದಿಲ್ಲ: ಸಚಿವ ಸಂಪುಟ ವಿಸ್ತರಣೆ ಕುರಿತು ಮಾತುಕತೆಗೆ ಬರುವಂತೆ ಪಕ್ಷದ ವರಿಷ್ಠರು ನನಗೆ ಆಹ್ವಾನ ನೀಡಿಲ್ಲ. ವಿವಿಧ ಯೋಜನೆಗಳ ಚರ್ಚೆಗೆಂದು ನಾನು ಇಲ್ಲಿಗೆ ಬಂದಿರುವ ಈ ಸಂದರ್ಭವನ್ನು ಉಪಯೋಗಿಸಿಕೊಂಡು ಜೆ.ಪಿ.ನಡ್ಡಾ ಅವರಿಗೆ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗುತ್ತೇನೆ. ಆ ಸಂದರ್ಭದಲ್ಲಿ ಪಕ್ಷ ಸಂಘಟನೆ ಕುರಿತಂತೆ ಚರ್ಚಿಸಲಾಗುವುದು ಎಂದು ಬೊಮ್ಮಾಯಿ ಹೇಳಿದರು.

ವರಿಷ್ಠರನ್ನು ಭೇಟಿಯಾಗಲು ಸಮಯ ಇನ್ನೂ ನಿಗದಿಯಾಗಿಲ್ಲ. ಹೈ ಕಮಾಂಡ್ ಜತೆ ಚರ್ಚೆಗೆ ಕುಳಿತ ಸಂದರ್ಭದಲ್ಲಿ ಪುನರ್ ರಚನೆಯೊ, ವಿಸ್ತರಣೆಯೋ ಎನ್ನುವುದು ತಿಳಿಯುತ್ತದೆ ಎಂದರು.

ಇದನ್ನೂ ಓದಿ: ರಾಜಕಾರಣಿಗಳಿಗೆ ಮಾತ್ರವಲ್ಲ ಮಾವಿನ ಗಿಡಕ್ಕೂ ಭದ್ರತೆ!..ಭೋಪಾಲ್​ನಲ್ಲಿವೆ ವಿವಿಐಪಿ ಮರಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.