ETV Bharat / city

ತನಿಖೆ ಮಾಡಿದ್ರೂ ಚಾರ್ಜ್ ಶೀಟ್ ಸಲ್ಲಿಸುವಂತಿಲ್ಲ.. ಸಿಸಿಬಿಗೆ ಆಘಾತ !

author img

By

Published : Feb 11, 2021, 7:45 PM IST

ಹಲವು ಪ್ರಕರಣಗಳ ತನಿಖೆ ಪೂರ್ಣಗೊಳಿಸಿ ಚಾರ್ಜ್ ಶೀಟ್ ಸಿದ್ದಮಾಡಿಕೊಂಡಿದ್ದ ಸಿಸಿಬಿಗೆ ಆಘಾತವಾಗಿದ್ದು, ತಮ್ಮ ಬಳಿಯಿರುವ ಪ್ರಕರಣಗಳ ತನಿಖೆ ನಡೆಸಿ ಪೊಲೀಸ್ ಠಾಣೆಗೆ ವರ್ಗಾಯಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ccb
ಸಿಸಿಬಿ

ಬೆಂಗಳೂರು: ನಗರದ ಗಂಭೀರ ಅಪರಾಧ ಪ್ರಕರಣಗಳ ತನಿಖೆ ನಡೆಸುವ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸುವ ಪರಮಾಧಿಕಾರ ಕಳೆದುಕೊಂಡಿದ್ದಾರೆ‌. ತನಿಖೆ ಮುಗಿದಿದ್ದರೂ ಸಿಸಿಬಿ ಚಾರ್ಜ್ ಶೀಟ್ ಹಾಕುವಂತಿಲ್ಲ ಎಂದು ಪ್ರಕರಣವೊಂದರ ವಿಚಾರಣೆ ವೇಳೆ ಇತ್ತೀಚೆಗೆ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿತ್ತು. ಎಫ್ಐಆರ್ ದಾಖಲಿಸಿದ ಠಾಣೆಯವರೇ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸಬೇಕು ಎಂದೂ ಹೇಳಿತ್ತು. ಆದರೆ, ಇದೀಗ ಹೈಕೋರ್ಟ್, ಸಿಸಿಬಿಗೆ ಶಾಕ್​ ಕೊಟ್ಟಿದೆ.

ಹಲವು ಪ್ರಕರಣಗಳ ತನಿಖೆ ಪೂರ್ಣಗೊಳಿಸಿ ಚಾರ್ಜ್ ಶೀಟ್ ಸಿದ್ದಮಾಡಿಕೊಂಡಿದ್ದ ಸಿಸಿಬಿಗೆ ಆಘಾತವಾಗಿದ್ದು, ತಮ್ಮ ಬಳಿಯಿರುವ ಪ್ರಕರಣಗಳ ತನಿಖೆ ನಡೆಸಿ ಪೊಲೀಸ್ ಠಾಣೆಗೆ ವರ್ಗಾಯಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಪ್ರಕರಣ ದಾಖಲಾದ ಠಾಣೆಗೆ ತನಿಖಾ ವರದಿ ನೀಡುವ ಪರಿಸ್ಥಿತಿ ಎದುರಾಗಿದೆ.

ನಾಲ್ಕು ಪ್ರಕರಣಗಳ ತನಿಖೆ ಅಂತಿಮ ಹಂತಕ್ಕೆ ತಂದಿದ್ದ ಸಿಸಿಬಿ ಇನ್ನು ಕೆಲವೇ ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಸಿದ್ದತೆ ನಡೆಸಿತ್ತು. ಮೊದಲನೆಯದಾಗಿ ಸ್ಯಾಂಡಲ್​ವುಡ್ ನಟಿಯರು ಭಾಗಿಯಾದ ಡ್ರಗ್ ಡೀಲ್ ತನಿಖೆ ಅಂತಿಮ ಹಂತಕ್ಕೆ ತಂದಿದ್ದರು. ಅದಕ್ಕೆ ಸಂಬಂಧಿಸಿದಂತೆ ಕೆಲವೇ ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸುವ ತಯಾರಿಯಲ್ಲಿತ್ತು.

ಇದನ್ನೂ ಓದಿ...ಬೆಂಗಳೂರಿನ 210ರ ಪೈಕಿ 21 ಕೆರೆಗಳ ನೀರಷ್ಟೇ ಕುಡಿಯಲು ಯೋಗ್ಯ: ಹೈಕೋರ್ಟ್​ಗೆ 'ನೀರಿ' ವರದಿ

ಇನ್ನು ಬಹುಕೋಟಿ ವಂಚಕ ಯುವರಾಜ್ ಅಲಿಯಾಸ್ ಸ್ವಾಮಿ ಪ್ರಕರಣದಲ್ಲಿ ಕಳೆದ 50 ದಿನಗಳಿಂದ ಪ್ರಕರಣದ ಬೆನ್ನು ಬಿದ್ದಿದ್ದ ಸಿಸಿಬಿ, ಆರು ಪ್ರಕರಣಗಳ ತನಿಖೆ ನಡೆಸಿ ಚಾರ್ಜ್ ಶೀಟ್ ಸಿದ್ದಪಡಿಸಿಕೊಂಡಿತ್ತು. ಇನ್ನೇನು 15 ದಿನದಲ್ಲಿ ಕೋರ್ಟ್​ಗೆ ಸಲ್ಲಿಸಲಿದ್ದರು.

ಹಾಗೆಯೇ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮಾಜಿ ಮೇಯರ್ ಸಂಪತ್ ರಾಜ್, ಮಾಜಿ ಕಾರ್ಪೊರೇಟರ್ ಜಾಕೀರ್​ ತನಿಖೆ ಪೂರ್ಣಗೊಳಿಸಿ ಚಾರ್ಜ್ ಶೀಟ್ ಸಲ್ಲಿಸಲು ಮುಂದಾಗಿದ್ದರು. ಡಾರ್ಕ್ ನೆಟ್ ಡ್ರಗ್ ಪ್ರಕರಣದಲ್ಲಿ ಶ್ರೀಕೃಷ್ಣನನ್ನು ಬಂಧಿಸಿದ್ದ ಸಿಸಿಬಿ, ತನಿಖೆಯಲ್ಲಿ ಮಹತ್ವದ ಮಾಹಿತಿ ಕಲೆ ಹಾಕಿ ಚಾರ್ಜ್ ಶೀಟ್ ಸಿದ್ದಪಡಿಸಿಕೊಂಡರು.

ಸದ್ಯ ಸಿಸಿಬಿ ಪೊಲೀಸರ ಕೈಯಲ್ಲಿ ನಾಲ್ಕು ಪ್ರಮುಖ ಪ್ರಕರಣಗಳಿದ್ದರೂ, ಹೈಕೋರ್ಟ್ ಆದೇಶದಂತೆ ಪ್ರಕರಣಗಳ ಚಾರ್ಜ್ ಶೀಟ್ ಸಿಸಿಬಿ ಸಲ್ಲಿಸುವಂತಿಲ್ಲ. ಯಾವ ಠಾಣೆಯಲ್ಲಿ ಕೇಸ್​​ ದಾಖಲಾಗಿದೆಯೋ ಆ ಠಾಣೆಯ ಪೊಲೀಸರೇ ಚಾರ್ಜ್ ಶೀಟ್ ಹಾಕಬೇಕು. ಅಲ್ಲದೆ, ನಿರ್ದಿಷ್ಟ ಅವಧಿಯೊಳಗೆ ಚಾರ್ಜ್ ಶೀಟ್ ಸಲ್ಲಿಸಬೇಕು ಎಂದು ಹೈಕೋರ್ಟ್​ ಹೇಳಿತ್ತು.

ಆದರೆ, ಪೊಲೀಸ್​ ಠಾಣೆಯಿಂದ ಚಾರ್ಜ್ ಶೀಟ್ ಸಲ್ಲಿಕೆಯಾದರೂ ಅವರು ತನಿಖೆ ಮಾಡಬಾರದು. ಹೀಗಾಗಿ, ತನಿಖೆ ಮಾಡಿ, ಸಾಕ್ಷ್ಯಾಧಾರವಿದ್ದರೂ ಏನೂ ಮಾಡಲಾಗದ ಪರಿಸ್ಥಿತಿಗೆ ಬಂದು ತಲುಪಿದೆ. ಹೀಗಾಗಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಿಸಿಬಿ ಮೇಲ್ಮನವಿ ಸಲ್ಲಿಸಿ, ಮುಂದಿನ ಆದೇಶಕ್ಕಾಗಿ ಕಾದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.