ETV Bharat / city

ಪತಿ ತೀರಿಕೊಂಡ ಕಾರಣಕ್ಕೆ ಪತ್ನಿ ವಿರುದ್ಧದ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಪ್ರಕರಣ ರದ್ದು ಮಾಡಲು ಆಗಲ್ಲ: ಹೈಕೋರ್ಟ್

author img

By

Published : Dec 24, 2021, 6:07 PM IST

ಭ್ರಷ್ಟಾಚಾರ ಪ್ರಕರಣದಲ್ಲಿ ಪತ್ನಿಗೆ ಕುಮ್ಮಕ್ಕು ನೀಡಿದ ಆರೋಪ ಪ್ರಕರಣದಲ್ಲಿ ಪತಿ ತೀರಿಕೊಂಡ ಕಾರಣಕ್ಕೆ ಪತ್ನಿ ವಿರುದ್ಧದ ಪ್ರಕರಣ ರದ್ದುಪಡಿಸಲಾಗದು ಎಂದು ರಾಜ್ಯ ಹೈಕೋರ್ಟ್ ತೀರ್ಪು ನೀಡಿದೆ. ಇದೇ ವೇಳೆ ಈಗಾಗಲೇ ದಾಖಲಾಗಿರುವ ಪ್ರಕರಣದ ವಿಚಾರಣೆಯನ್ನು ಮುಂದುವರೆಸುವಂತೆ ಸಿಬಿಐಗೆ ನಿರ್ದೇಶನ ನೀಡಿದೆ.

Case against wife for husband's death cannot be quashed: HC
ಪತಿ ತೀರಿಕೊಂಡ ಕಾರಣಕ್ಕೆ ಪತ್ನಿ ವಿರುದ್ಧದ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಪ್ರಕರಣ ರದ್ದುಪಡಿಸಲಾಗದು: ಹೈಕೋರ್ಟ್

ಬೆಂಗಳೂರು: ಭ್ರಷ್ಟಾಚಾರ ಆರೋಪಕ್ಕೆ ಸಿಲುಕಿದ್ದ ಪತಿ ತೀರಿಕೊಂಡಿದ್ದಾರೆ ಎಂಬ ಕಾರಣಕ್ಕೆ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ್ದ ಆರೋಪಿ ಪತ್ನಿ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಎಫ್ಐಆರ್ ಹಾಗೂ ಭ್ರಷ್ಟಾಚಾರ ಕಾಯ್ದೆ ಅಡಿ ದೋಷಾರೋಪಣೆ ಸಲ್ಲಿಸುವಂತೆ ಸಿಬಿಐ ವಿಶೇಷ ನ್ಯಾಯಾಲಯ ಹೊರಡಿಸಿರುವ ಆದೇಶ ಹಾಗೂ ಸಿಬಿಐ ಸಲ್ಲಿಸಿರುವ ದೋಷಾರೋಪ ಪಟ್ಟಿ ರದ್ದುಪಡಿಸುವಂತೆ ಕೋರಿ ಪ್ರಕರಣದ ಎರಡನೇ ಆರೋಪಿ ಕೋರ್ಟ್‌ ಮೊರೆ ಹೋಗಿದ್ದಾರೆ.

ಎರಡನೇ ಆರೋಪಿ ವಿ.ಎಂ. ಸರಸ್ವತಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ಧ ಏಕಸದಸ್ಯ ಪೀಠ ಪ್ರಕರಣ ರದ್ದು ಮಾಡಲು ಆಗುವುದಿಲ್ಲ ಎಂದು ಆದೇಶ ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿರುವ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯ ತರಬೇತಿ ಕೇಂದ್ರದ ಉಪ ನಿರ್ದೇಶಕರಾಗಿದ್ದ ಎಂ ಸೆಲ್ವಕುಮಾರ್ ಹಾಗೂ ಪತ್ನಿ ಸರಸ್ವತಿ ವಿರುದ್ಧ ಸಿಬಿಐ 2014ರಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆ-1988ರ ಸೆಕ್ಷನ್ 13(1)ಇ, 13(2) ಹಾಗೂ ಐಪಿಸಿ ಸೆಕ್ಷನ್ 109ರ ಅಡಿ ಎಫ್ಐಆರ್ ದಾಖಲಿಸಿತ್ತು. ಈ ವೇಳೆ ಪತಿಯ ಭ್ರಷ್ಟಾಚಾರಕ್ಕೆ ಪತ್ನಿ ಕುಮ್ಮಕ್ಕು ನೀಡಿದ್ದಾರೆ ಎಂದು ಸಿಬಿಐ ಆರೋಪ ಮಾಡಿತ್ತು. ಅಲ್ಲದೇ, ಪತಿಯ ಅಕ್ರಮ ಸಂಪಾದನೆಯಿಂದಲೇ ಸಾಕಷ್ಟು ಚರ ಮತ್ತು ಸ್ಥಿರಾಸ್ತಿಗಳನ್ನು ಪತ್ನಿ ಸರಸ್ವತಿ ಹೆಸರಲ್ಲಿ ಖರೀದಿಸಲಾಗಿದೆ ಎಂದಿತ್ತು.

ಈ ಸಂಬಂಧ ತನಿಖೆ ನಡೆಸಿ ಸಿಬಿಬಿ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಈ ಮೇರೆಗೆ ಸ್ಪೆಷಲ್ ಕೋರ್ಟ್ ಆರೋಪಗಳನ್ನು ರೂಪಿಸುವ (ಚಾರ್ಜ್ ಫ್ರೇಮ್ ಮಾಡುವ) ಮುನ್ನವೇ ಪತಿ ಸೆಲ್ವಕುಮಾರ್ 2017ರ ಮಾರ್ಚ್‌ನಲ್ಲಿ ಮೃತಪಟ್ಟರು. ಇದರಿಂದಾಗಿ ಸೆಲ್ವಕುಮಾರ್ ವಿರುದ್ಧ ಆರೋಪಗಳು ರದ್ದಾಗಿದ್ದವು.

ಬಳಿಕ ತಮ್ಮ ವಿರುದ್ಧದ ಪ್ರಕರಣವನ್ನು ಕೈಬಿಡುವಂತೆ ಕೋರಿ ವಿ.ಎಂ ಸರಸ್ವತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಸಿಬಿಐ ಕೋರ್ಟ್ 2018ರ ಜೂನ್ 6ರಂದು ಆರೋಪಿತ ಪತ್ನಿ ವಿರುದ್ಧ ಐಪಿಸಿ ಸೆಕ್ಷನ್ 109 (ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪ) ಬದಲಿಗೆ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(1)ಎ ಹಾಗೂ 13(2) ಅಡಿಯಲ್ಲಿ ಪ್ರಕರಣ ದಾಖಲಿಸಿ ವರದಿ ಸಲ್ಲಿಸುವಂತೆ ಸಿಬಿಐಗೆ ಆದೇಶಿಸಿತ್ತು.

ಈ ಆದೇಶ ಪ್ರಶ್ನಿಸಿ ಆರೋಪಿ ಸರಸ್ವತಿ ಹಾಗೂ ಸಿಬಿಐ ಇಬ್ಬರೂ ಹೈಕೋರ್ಟ್ ಮೆಟ್ಟಿಲೇರಿದ್ದರು. ಸರಸ್ವತಿ ವಿರುದ್ಧ ಕುಮ್ಮಕ್ಕು ನೀಡಿದ ಆರೋಪ ಕೈಬಿಟ್ಟ ಕ್ರಮ ಸರಿಯಲ್ಲ ಎಂದು ಸಿಬಿಐ ಆಕ್ಷೇಪಿಸಿದ್ದರೆ, ತಮ್ಮ ವಿರುದ್ಧ ವಿಚಾರಣೆ ನಡೆಸುವುದೇ ಸೂಕ್ತವಲ್ಲ. ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಪತಿ ತೀರಿಕೊಂಡಿದ್ದಾರೆ. ಇನ್ನು ತನ್ನ ವಿರುದ್ಧ ಕುಮ್ಮಕ್ಕು ನೀಡಿದ ಆರೋಪದ ವಿಚಾರಣೆ ಸೂಕ್ತವಲ್ಲ ಎಂದು ಆಕ್ಷೇಪಿಸಿದ್ದರು.

ಸೆಕ್ಷನ್‌ ಬದಲಿಸುವಂತೆ ಸಿಬಿಐ ವಿಶೇಷ ಕೋರ್ಟ್‌ ಆದೇಶವೂ ರದ್ದು
ವಾದ, ಪ್ರತಿವಾದಗಳನ್ನು ಆಲಿಸಿದ ಪೀಠ, ನ್ಯಾಯಾಲಯ ಭ್ರಷ್ಟಾಚಾರ ಪ್ರಕರಣವನ್ನು ವಿಚಾರಣೆ ಮಾಡುವ ವೇಳೆ ಅಥವಾ ಆರೋಪ ನಿಗದಿ ಮಾಡುವ ಮುನ್ನ ಆರೋಪಿ ಸಾವನ್ನಪ್ಪಿದರೆ, ಸಹ ಆರೋಪಿಯಾಗಿರುವ ಪತ್ನಿ ವಿರುದ್ಧದ ವಿಚಾರಣೆಯನ್ನು ಕೈಬಿಡಲಾಗದು.

ಅದೇ ರೀತಿ ಆರೋಪಿ ಪತ್ನಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 109ರ ಅಡಿಯಲ್ಲಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪದ ವಿರುದ್ಧದ ವಿಚಾರಣೆಯು ಮುಕ್ತಾಯವಾಗುವುದಿಲ್ಲ. ಅದರಂತೆ ಐಪಿಸಿ ಸೆಕ್ಷನ್ 109ರ ಅಡಿಯಲ್ಲಿ ಪ್ರಕರಣದ ವಿಚಾರಣೆ ಮುಂದುವರೆಸಬಹುದು ಎಂದು ಆದೇಶಿಸಿದೆ. ಅಲ್ಲದೇ, ಆರೋಪಿ ಮಹಿಳೆ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(1)ಇ ಹಾಗೂ 13(2) ರ ಅಡಿ ಪ್ರಕರಣ ದಾಖಲಿಸುವಂತೆ ನಿರ್ದೇಶಿಸಿದ್ದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.

ಇದನ್ನೂ ಓದಿ: ಹಿರಿಯ ನಾಗರಿಕರ ಕಾಯ್ದೆ ಪೂರ್ವಾನ್ವಯ ಆಗುವುದಿಲ್ಲ : ಹೈಕೋರ್ಟ್

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.