ETV Bharat / city

ಬದ್ಧತೆ ಇಲ್ಲದವರು ಪಾದಯಾತ್ರೆ ಮಾಡಿದರೇನು, ತಲೆಕೆಳಗಾಗಿ ನಿಂತರೇನು?: ಕಾಂಗ್ರೆಸ್ ಪಾದಯಾತ್ರೆ ಟೀಕಿಸಿದ ಸಿ.ಟಿ. ರವಿ

author img

By

Published : Nov 9, 2021, 2:27 PM IST

Updated : Nov 9, 2021, 6:39 PM IST

ನಾವು ಜಾತಿ ರಾಜಕಾರಣ ಮಾಡಿರುವ ಕಾರಣಕ್ಕಾಗಿಯೇ ನಮ್ಮ ಪ್ರಧಾನಿ ಎಲ್ಲರಿಗೂ ಬೇಕಿರುವ ಯೋಜನೆಗಳನ್ನು ರೂಪಿಸಿದ್ದಾರೆ. ಸಬ್ ಕಾ ಸಾಥ್​, ಸಬ್ ಕಾ ವಿಕಾಸ್ ಎಂದಿದ್ದಾರೆ. ಕಾಂಗ್ರೆಸ್​ನವರು ಒಂದು ಕೋಮಿನವರಿಗೆ ಶಾದಿಭಾಗ್ಯ ಮಾತ್ರ ಕೊಟ್ಟಿದ್ದರು. ಮಕ್ಕಳ ಪ್ರವಾಸ ಯೋಜನೆಯಲ್ಲೂ ಜಾತಿ ತಂದಿದ್ದರು ಎಂದು ಸಿ.ಟಿ. ರವಿ ಟೀಕಿಸಿದರು.

c t ravi raction about congress mekedatu rally
ಸಿ.ಟಿ ರವಿ

ಬೆಂಗಳೂರು: ಮೇಕೆದಾಟು ವಿಚಾರದಲ್ಲಿ ನಮಗೆ ಸಿಗಬೇಕಾದ ನ್ಯಾಯ ಸಿಕ್ಕೇ ಸಿಗುತ್ತದೆ. ಬದ್ಧತೆಯಿಲ್ಲದ ಜನ ಪಾದಯಾತ್ರೆ ಮಾಡಿದರೇನು? ತಲೆಕೆಳಗಾಗಿ ನಿಂತರೇನು ಎಂದು ಕಾಂಗ್ರೆಸ್ ಪಾದಯಾತ್ರೆಯನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟೀಕಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ನವರು ರಾಜಕಾರಣಕ್ಕೆ ಮೇಕೆದಾಟು ವಿಚಾರ ಎತ್ತಿಕೊಂಡಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನೂ ಮಾಡಿಲ್ಲ. ಕಾಂಗ್ರೆಸ್​ಗೆ ಬದ್ಧತೆ ಇಲ್ಲ. ಕಾಂಗ್ರೆಸ್​ನ ಕೃತಿ ಮತ್ತು ಮಾತಿಗೂ ಸಂಬಂಧವಿಲ್ಲ. ಬಿಜೆಪಿ ಹೇಳಿದ್ದನ್ನೇ ಮಾಡುತ್ತದೆ ಎಂದು ಹೇಳಿದರು.

ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ಇಲ್ಲೊಂದು ನಿಲುವು ತಮಿಳುನಾಡಿನಲ್ಲಿ ಒಂದು ನಿಲುವು ತೆಗೆದುಕೊಳ್ಳುತ್ತಿದೆ. ಈಗಾಗಲೇ ಮುಖ್ಯಮಂತ್ರಿಗಳು ಮೇಕೆದಾಟು ವಿಚಾರದಲ್ಲಿ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಕಾಂಗ್ರೆಸ್​ ನವರ ಮಾತಿಗೂ, ಕೃತಿಗೂ ಅಜ-ಗಜಾಂತರ ವ್ಯತ್ಯಾಸವಿದೆ. ಅದಕ್ಕಾಗಿಯೇ ಎತ್ತಿನಹೊಳೆ ನೀರು ಚಿಕ್ಕಬಳ್ಳಾಪುರಕ್ಕೆ ಬರಲಿಲ್ಲ. ಬದ್ಧತೆಯಿಲ್ಲದ ಜನ ಪಾದಯಾತ್ರೆ ಮಾಡಿದರೇನು? ತಲೆಕೆಳಗಾಗಿ ನಿಂತರೇನು ಎಂದು ವ್ಯಂಗ್ಯವಾಡಿದರು.

ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯ ಸಿಕ್ಕೇ ಸಿಗಲಿದೆ. ಕರ್ನಾಟಕದ ಪ್ರಶ್ನೆ ಬಂದಾಗ ಕನ್ನಡಿಗನೇ ಸಾರ್ವಭೌಮ. ದೇಶದ ಹಿತದ ಪ್ರಶ್ನೆ ಬಂದಾಗ ನಾವೆಲ್ಲಾ ಭಾರತೀಯರು ಎಂದು ಸಿ ಟಿ ರವಿ ಹೇಳಿದ್ರು.

ಕಾಂಗ್ರೆಸ್​ ವಿರುದ್ಧ ಸಿ ಟಿ ರವಿ ಟೀಕೆ

ಕೊಳಕು ಮನಸ್ಸಿನವರಿಗೆ ಕೊಳಕೇ ಕಾಣಿಸುತ್ತದೆ:
ಯಾರ ಕನ್ನಡಕ ಕೊಳಕಾಗಿರುತ್ತದೆಯೋ ಅವರು ನೋಡುವುದೆಲ್ಲ ಕೊಳಕು, ಯಾರ ಮನಸ್ಸು ಕೊಳಕಾಗಿರುತ್ತದೆಯೋ ಅವರು ಕಾಣುವುದೆಲ್ಲಾ ಕೊಳಕಾಗಿರಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಿ.ಟಿ. ರವಿ ಟಾಂಗ್​ ನೀಡಿದರು.

ಅವರ ದೃಷ್ಟಿಯಲ್ಲಿ ಬಿಜೆಪಿಯವರು ಕೊಳಕು ಮನಸ್ಸಿನವರು. ನಾವು ಜಾತಿ ರಾಜಕಾರಣ ಮಾಡಿದ್ದಕ್ಕೆ ಅಬ್ದುಲ್ ಕಲಾಂ ರಾಷ್ಟ್ರಪತಿಯಾದರು. ಕಾಲಿಗೆ ಚಪ್ಪಲಿಯೂ ಹಾಕದ ಹಾಜಬ್ಬ, ತುಳಸಿ ಗೌಡರಿಗೆ ಪದ್ಮ ಪ್ರಶಸ್ತಿ ಸಿಕ್ಕಿತು. ಕಾಂಗ್ರೆಸ್ ಅಧಿಕಾರದಲ್ಲಿ ಬಹಳ ಜನ ಹಿಂಬಾಲಕರಿಗೆ ಸಿಗುತ್ತಿತ್ತು. ಈಗ ಕೆಳಮಟ್ಟದಲ್ಲಿ ಕೆಲಸ ಮಾಡುವವರಿಗೆ ಸಿಕ್ಕಿದೆ. ಹಾಗಾಗಿ ನಾವು ಕೊಳಕು ಮನಸ್ಸಿನವರು ಎಂದು ವ್ಯಂಗ್ಯವಾಡಿದರು.

ನಾವು ಜಾತಿ ರಾಜಕಾರಣ ಮಾಡಿರುವ ಕಾರಣಕ್ಕಾಗಿಯೇ ನಮ್ಮ ಪ್ರಧಾನಿ ಎಲ್ಲರಿಗೂ ಬೇಕಿರುವ ಯೋಜನೆಗಳನ್ನು ರೂಪಿಸಿದ್ದಾರೆ. ಸಬ್ ಕಾ ಸಾಥ್​, ಸಬ್ ಕಾ ವಿಕಾಸ್ ಎಂದಿದ್ದಾರೆ. ಕಾಂಗ್ರೆಸ್​ನವರು ಒಂದು ಕೋಮಿನವರಿಗೆ ಶಾದಿಭಾಗ್ಯ ಮಾತ್ರ ಕೊಟ್ಟಿದ್ದರು. ಮಕ್ಕಳ ಪ್ರವಾಸ ಯೋಜನೆಯಲ್ಲೂ ಜಾತಿ ತಂದಿದ್ದರು ಎಂದು ಸಿ.ಟಿ ರವಿ ಟೀಕಿಸಿದರು.

Last Updated : Nov 9, 2021, 6:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.