ETV Bharat / city

ಹಾನಗಲ್ ಯಾರಿಗೂ ಹೋಳಿಗೆ ಅಲ್ಲ.. ಆಂತರಿಕ ಸಮೀಕ್ಷೆಗೆ BJP ಹೈಕಮಾಂಡ್ ಅಲರ್ಟ್.. BSY-BSB ಜಂಟಿ ಕ್ಯಾಂಪೇನ್..

author img

By

Published : Oct 23, 2021, 2:45 PM IST

Updated : Oct 23, 2021, 3:31 PM IST

ಹಾನಗಲ್ ಕ್ಷೇತ್ರದಲ್ಲಿ ಯಡಿಯೂಪ್ಪ, ಬೊಮ್ಮಾಯಿ ಒಟ್ಟಿಗೆ ಪ್ರಚಾರ ನಡೆಸುವ ಕಾರ್ಯಕ್ರಮ ನಿಗದಿಯಾಗಿರಲಿಲ್ಲ. ಸಿಎಂ ಈ ಸಮಯದಲ್ಲಿ ದೆಹಲಿಗೆ ಹೋಗಬೇಕಿತ್ತು. ಯಡಿಯೂರಪ್ಪ ಏಕಾಂಗಿ ಪರ ಪ್ರಚಾರ ಮಾಡಬೇಕಿತ್ತು. ಆದರೆ, ಕೊನೆ ಕ್ಷಣದಲ್ಲಿ ಎಲ್ಲ ಬದಲಾವಣೆ ಆಗಿದೆ. ಆಂತರಿಕ ಸಮೀಕ್ಷೆಯಿಂದ ಅಲರ್ಟ್ ಆಗಿರುವ ಬಿಜೆಪಿ ಹೈಕಮಾಂಡ್ ದೆಹಲಿಗೆ ಬಾರದಂತೆ ಸಿಎಂ ಬೊಮ್ಮಾಯಿಗೆ ಸಂದೇಶ ರವಾನಿಸಿ, ಯಡಿಯೂರಪ್ಪ ಅವರ ಜತೆ ಜಂಟಿ ಪ್ರಚಾರ ಕಾರ್ಯ ನಡೆಸುವಂತೆ ಸೂಚಿಸಿದೆ..

Joint Campaign for Hanagal by-election
ಹಾನಗಲ್ ಶಿಕಾರಿಗೆ ಬಿಎಸ್​​ವೈ ಬೊಮ್ಮಾಯಿ ಜಂಟಿ ಪ್ರಚಾರ

ಬೆಂಗಳೂರು : ಅನುಕಂಪದ ಅಲೆಯ ಲಾಭ ಬದಿಗೊತ್ತಿ ಅಭ್ಯರ್ಥಿ ಕಣಕ್ಕಿಳಿಸಿರುವ ಬಿಜೆಪಿ ಹೈಕಮಾಂಡ್​​​ಗೆ ಇದೀಗ ಹಾನಗಲ್ ಕ್ಷೇತ್ರ ಕಬ್ಬಿಣದ ಕಡಲೆಯಾಗಿದೆ. ಆಂತರಿಕ ಸಮೀಕ್ಷೆಗೆ ಅಲರ್ಟ್ ಆದ ಹೈಕಮಾಂಡ್ ಶತಾಯ-ಗತಾಯ ಕ್ಷೇತ್ರವನ್ನು ತೆಕ್ಕೆಯಲ್ಲೇ ಉಳಿಸಿಕೊಳ್ಳಲು ಮಾಸ್ಟರ್ ಪ್ಲಾನ್ ರೂಪಿಸಿದೆ.

ಹಾನಗಲ್ ಶಿಕಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜಂಟಿ ಪ್ರಚಾರದ ಮೂಲಕ ಮತದಾರರನ್ನು ಸೆಳೆಯುವ ತಂತ್ರ ಅನುಸರಿಸುತ್ತಿದ್ದಾರೆ. ಬಿಜೆಪಿ ಹಿರಿಯ ನಾಯಕ ಸಿಎಂ ಉದಾಸಿ ನಿಧನದಿಂದ ತೆರವಾಗಿರುವ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಕಣಕ್ಕೆ ಬಿಜೆಪಿ ಹೈಕಮಾಂಡ್ ಹೊಸ ತಂತ್ರ ರಚಿಸಿದೆ.

ಉಭಯ ನಾಯಕರಿಂದ ಒಟ್ಟಿಗೆ ಪ್ರಚಾರ : ಈವರೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಪ್ರತ್ಯೇಕ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಆದರೆ, ಅದು ತೃಪ್ತಿ ತಾರದ ಹಿನ್ನೆಲೆ ಉಭಯ ನಾಯಕರಿಂದ ಒಟ್ಟಿಗೆ ಪ್ರಚಾರ ಮಾಡಿಸುವ ಮೂಲಕ ಮತಗಳಿಕೆ ಹೆಚ್ಚಿಸಿಕೊಳ್ಳುವ ಲೆಕ್ಕಾಚಾರ ನಡೆಸಿದೆ.

ಈಗಾಗಲೇ ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳ ಆಂತರಿಕ ಸಮೀಕ್ಷೆ ನಡೆಸಿದ್ದು, ಹಾನಗಲ್​​ನಲ್ಲಿ ಕಠಿಣ ಸ್ಪರ್ಧೆ ಇದೆ. ಕಾಂಗ್ರೆಸ್ ಜತೆ ನೆಕ್ ಟು ನೆಕ್ ಪೈಪೋಟಿ ಇದೆ. ಗೆಲುವು ಯಾರಿಗೆ ಬೇಕಾದರೂ ದಕ್ಕಬಹುದು. ಎರಡೂ ರಾಷ್ಟ್ರೀಯ ಪಕ್ಷಗಳಿಗೂ ಗೆಲುವಿಗೆ ಸಮಾನ ಅವಕಾಶವಿದೆ ಎಂದು ವರದಿ ನೀಡಿದೆ. ಈ ವರದಿ ಹೈಕಮಾಂಡ್ ಕೈ ಸೇರುತ್ತಿದ್ದಂತೆ ಪ್ಲಾನ್ 'ಬಿ' ಅನುಷ್ಠಾನಗೊಳಿಸಿ ನೆಕ್ ಟು ನೆಕ್ ಫೈಟ್‌ನಲ್ಲಿ ಅಲ್ಪ ಮುನ್ನಡೆಗಳಿಸುವ ತಂತ್ರಕ್ಕೆ ಯತ್ನಿಸುತ್ತಿದೆ.

ಪ್ರಚಾರದಲ್ಲಿ ತೊಡಗಲು ಬಿಎಸ್​​ವೈಗೆ ಮನವಿ : ರಾಜ್ಯ ಪ್ರವಾಸಕ್ಕೆ ಅಡ್ಡಿಪಡಿಸಿದ್ದರಿಂದ ಮುನಿಸಿಕೊಂಡು ಉಪ ಚುನಾವಣಾ ಪ್ರಚಾರ ಕಣದಿಂದ ದೂರ ಉಳಿದಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರ ಮನವೊಲಿಸಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಆಗಮಿಸಿದ್ದರು. ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಮನವಿ ಮಾಡಿದ್ದರು. ಆ ನಂತರವೇ ಯಡಿಯೂರಪ್ಪ ಉಪ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುವ ಘೋಷಣೆ ಮಾಡಿದ್ದರು.

ಹಾನಗಲ್ ಮತ್ತು ಸಿಂದಗಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸುವ ಕಾರ್ಯಕ್ರಮ ನಿಗದಿಪಡಿಸಿಕೊಂಡು ತಲಾ ಎರಡೆರಡು ದಿನ ಪ್ರಚಾರ ಕಾರ್ಯ ಮುಗಿಸಿದರೂ ನಂತರ ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಹಾನಗಲ್ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ಜಂಟಿ ಪ್ರಚಾರ ನಡೆಸಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಪರ ಮತ ಬೇಟೆಯಾಡುತ್ತಿದ್ದಾರೆ.

ಈಗಾಗಲೇ ಹಾನಗಲ್ ಕ್ಷೇತ್ರದ ಬಮ್ಮನಹಳ್ಳಿ, ಬೆಳಗಾಲಪೇಟೆ, ಅಕ್ಕಿಆಲೂರು ವ್ಯಾಪ್ತಿಯಲ್ಲಿ ಭರ್ಜರಿಯಾಗಿ ಜಂಟಿ ಪ್ರಚಾರ ಕಾರ್ಯ ನಡೆಸಿರುವ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಇಂದು ಚಿಕ್ಕಾಂಶಿ ಹೊಸೂರ, ಮಕರವಳ್ಳಿ, ಹೇರೂರು ವ್ಯಾಪ್ತಿಯಲ್ಲಿ ಜಂಟಿ ಪ್ರಚಾರ ನಡೆಸಿ ಬಿಜೆಪಿ ಅಭ್ಯರ್ಥಿ ಪರ ಮತ ಯಾಚಿಸಲಿದ್ದಾರೆ.

ಹೈಕಮಾಂಡ್ ತಂತ್ರ : ಹಾನಗಲ್ ಕ್ಷೇತ್ರದಲ್ಲಿ ಯಡಿಯೂಪ್ಪ, ಬೊಮ್ಮಾಯಿ ಒಟ್ಟಿಗೆ ಪ್ರಚಾರ ನಡೆಸುವ ಕಾರ್ಯಕ್ರಮ ನಿಗದಿಯಾಗಿರಲಿಲ್ಲ. ಸಿಎಂ ಈ ಸಮಯದಲ್ಲಿ ದೆಹಲಿಗೆ ಹೋಗಬೇಕಿತ್ತು. ಯಡಿಯೂರಪ್ಪ ಏಕಾಂಗಿ ಪರ ಪ್ರಚಾರ ಮಾಡಬೇಕಿತ್ತು. ಆದರೆ, ಕೊನೆ ಕ್ಷಣದಲ್ಲಿ ಎಲ್ಲ ಬದಲಾವಣೆ ಆಗಿದೆ. ಆಂತರಿಕ ಸಮೀಕ್ಷೆಯಿಂದ ಅಲರ್ಟ್ ಆಗಿರುವ ಬಿಜೆಪಿ ಹೈಕಮಾಂಡ್ ದೆಹಲಿಗೆ ಬಾರದಂತೆ ಸಿಎಂ ಬೊಮ್ಮಾಯಿಗೆ ಸಂದೇಶ ರವಾನಿಸಿ, ಯಡಿಯೂರಪ್ಪ ಅವರ ಜತೆ ಜಂಟಿ ಪ್ರಚಾರ ಕಾರ್ಯ ನಡೆಸುವಂತೆ ಸೂಚಿಸಿದೆ.

ಪ್ರಬಲ ಲಿಂಗಾಯತ ಸಮುದಾಯದ ಮತಗಳು ಬಿಜೆಪಿ ಕೈ ತಪ್ಪದಂತೆ ನೋಡಿಕೊಳ್ಳಬೇಕು. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡದ ಮತಗಳನ್ನು ತನ್ನತ್ತ ಸೆಳೆದು ಕಾಂಗ್ರೆಸ್ ಮತ ಬುಟ್ಟಿಗೆ ಕೈ ಹಾಕಬೇಕು ಎನ್ನುವ ತಂತ್ರ ಅನುಸರಿಸಿ ಹೊಸ ಟಾಸ್ಕ್ ನೀಡಿದೆ. ಹಾಗಾಗಿ, ಯಡಿಯೂರಪ್ಪ ಮತ್ತು ಬೊಮ್ಮಾಯಿ ಜಂಟಿ ಪ್ರಚಾರ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮಾಸ್ ಇಮೇಜ್ : ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದರೂ ಅವರಿಗಿರುವ ಮಾಸ್ ಇಮೇಜ್ ಇನ್ನು ಕಡಿಮೆಯಾಗಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗಿಂತಲೂ ಹೆಚ್ಚಿನ ಸಂಖ್ಯೆಯ ಜನರು ಯಡಿಯೂರಪ್ಪ ಅವರ ಸಭೆಗಳಿಗೆ ಸೇರುತ್ತಿದ್ದಾರೆ.

ಜನ ಸಾಗರ ಬಿಎಸ್​ವೈ ಸಮಾವೇಶಗಳತ್ತ ಹರಿದು ಬರುತ್ತಿದೆ. ಹಾಗಾಗಿ, ಸಿಎಂಗೆ ಇಮೇಜ್ ಇಲ್ಲ ಎನ್ನುವ ಸಂದೇಶ ರವಾನೆಯಾಗಬಾರದು ಮತ್ತು ಮತಗಳು ಬಿಜೆಪಿ ಕೈ ತಪ್ಪಬಾರದು ಎನ್ನುವ ಕಾರಣಕ್ಕೆ ಹೈಕಮಾಂಡ್ ಜಂಟಿ ಪ್ರಚಾರ ಕಾರ್ಯ ಆಯೋಜಿಸಿ, ಕ್ಷೇತ್ರವನ್ನು ತನ್ನ ತೆಕ್ಕೆಯಲ್ಲಿ ಉಳಿಸಿಕೊಳ್ಳಬೇಕು ಎನ್ನುವ ಮಾಸ್ಟರ್ ಪ್ಲಾನ್ ರೂಪಸಿದೆ ಎಂದು ಹೇಳಲಾಗ್ತಿದೆ.

ಶ್ರೀನಿವಾಸ ಮಾನೆ ಹಿಡಿತ : ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರೂ, ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕನ ಹಿಡಿತ ಹೆಚ್ಚಾಗಿತ್ತು. ಸಿಎಂ ಉದಾಸಿ ಅನಾರೋಗ್ಯಕ್ಕೆ ತುತ್ತಾದ ನಂತರ ಸಕ್ರಿಯವಾಗಿದ್ದ ಕಾಂಗ್ರೆಸ್ ಮುಖಂಡ ಶ್ರೀನಿವಾಸ ಮಾನೆ ಅವರು ಕೊರೊನಾ ವೇಳೆ ಜನರೊಂದಿಗೆ ಗುರುತಿಸಿಕೊಂಡು ಸಹಾಯ, ಸಹಕಾರ ನೀಡುವ ಮೂಲಕ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಹೀಗಾಗಿ, ಕ್ಷೇತ್ರದಲ್ಲಿ ಶ್ರೀನಿವಾಸ ಮಾನೆ ಪರ ಇಮೇಜ್ ಹೆಚ್ಚಾಗಿದೆ. ಈಗ ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಮಾನೆ ಪರ ಜನತೆಯ ಒಲವಿದ್ದು, ಅಭ್ಯರ್ಥಿ ಪ್ರಬಲ ಪೈಪೋಟಿ ನೀಡುವ ಸುಳಿವು ಕೊಟ್ಟಿದ್ದಾರೆ. ಇದರಿಂದ ಬಿಜೆಪಿ ನಾಯಕರು ತಳಮಳಗೊಂಡಿದ್ದು, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಕರೆತಂದು ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಪ್ರತ್ಯೇಕ ಪ್ರಚಾರ, ಜಂಟಿ ಪ್ರಚಾರ ಕಾರ್ಯ ನಡೆಸಿ ಕ್ಷೇತ್ರ ಉಳಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ.

ಇಮೇಜ್ ಡ್ಯಾಮೇಜ್ ಆತಂಕ : ಒಂದು ವೇಳೆ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋತರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಕತ್ವ ಹಾಗೂ ವಚ್ಚಸ್ಸು ವೈಫಲ್ಯಕ್ಕೆ ಸಿಲುಕಿದ ಅಪವಾದಕ್ಕೆ ಗುರಿಯಾಗಬೇಕಾಗಲಿದೆ. ತವರು ಜಿಲ್ಲೆಯ ಕ್ಷೇತ್ರದ ಉಪ ಚುನಾವಣೆಯಲ್ಲಿ ಕ್ಷೇತ್ರವನ್ನು ಉಳಿಸಿಕೊಳ್ಳಲಾಗದ ಮುಖ್ಯಮಂತ್ರಿ ಎನ್ನುವ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗಲಿದೆ.

ತವರಿನ ಜನತೆಯೇ ಬೊಮ್ಮಾಯಿ ನಾಯಕತ್ವ ತಿರಸ್ಕರಿಸಿದ್ದಾರೆ ಎನ್ನುವ ಟೀಕೆಗೂ ಸಿಎಂ ಗುರಿಯಾಗಬೇಕಾಗಲಿದೆ. ಹಾಗಾಗಿ, ಕ್ಷೇತ್ರ ಕೈತಪ್ಪದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸಿಎಂ ಮೇಲೆ ಹೆಚ್ಚಾಗಿದೆ. ತಮ್ಮ ರಾಜಕೀಯ ಗುರುವಿನ ಕ್ಷೇತ್ರವನ್ನು ಉಳಿಸಿಕೊಳ್ಳಲು ಈಗಿನ ಗುರು ಯಡಿಯೂರಪ್ಪ ಅವರ ಬೆಂಬಲ ಪಡೆದುಕೊಂಡು ಪ್ರಚಾರ ಕಾರ್ಯಕ್ಕೆ ಸಿಎಂ ಮುಂದಾಗಿದ್ದಾರೆ.

Last Updated : Oct 23, 2021, 3:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.