ETV Bharat / city

ಬಿಜೆಪಿ ಪದಾಧಿಕಾರಿಗಳ ಸಭೆ ಆರಂಭ: ಸೋಲಿನ ಆತ್ಮಾವಲೋಕನ ಮಾಡುತ್ತಿದೆ ಕೇಸರಿ ಪಡೆ

author img

By

Published : Nov 9, 2021, 12:42 PM IST

ಉಪಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆಯಾಗಿದ್ದ ಹಾನಗಲ್​ ಕಳೆದುಕೊಂಡ ಹಿನ್ನೆಲೆ ಭಾರತೀಯ ಜನತಾ ಪಾರ್ಟಿ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಇಂದು ರಾಜ್ಯ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಸಭೆಯಲ್ಲಿ ಭವಿಷ್ಯದ ಚುನಾವಣೆಗೆ ಸಂಘಟನೆ ಬಲಪಡಿಸುವ ಕುರಿತು ಹಾಗೂ ಇನ್ನಿತರ ಮಹತ್ವದ ಚರ್ಚೆ ನಡೆಸಲಾಗುತ್ತಿದೆ.

bjp-state-office-bearers-meeting-in-bangalore
ಬಿಜೆಪಿ ಪದಾಧಿಕಾರಿಗಳ ಸಭೆ

ಬೆಂಗಳೂರು: ಉಪ ಚುನಾವಣೆಯಲ್ಲಿ ಮಿಶ್ರ ಫಲಿತಾಂಶದ ಬೆನ್ನಲ್ಲೇ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ಆರಂಭಗೊಂಡಿದ್ದು, ಸೋಲಿನ ಆತ್ಮಾವಲೋಕನ, ಭವಿಷ್ಯದ ಚುನಾವಣೆಗೆ ಸಂಘಟನೆ ಬಲಪಡಿಸುವ ಕುರಿತು ಮಹತ್ವದ ಸಮಾಲೋಚನೆ ನಡೆಸಲಾಗುತ್ತಿದೆ.

ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯುತ್ತಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಿದ್ದಾರೆ. ಸಭೆಯ ಆರಂಭದಲ್ಲಿ ಬಿಜೆಪಿ ಹಿರಿಯ ನಾಯಕ ಸಿಎಂ ಉದಾಸಿ, ನಟ ಪುನೀತ್ ರಾಜ್‍ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ನಂತರ ಇತ್ತೀಚೆಗೆ ನಡೆದ ಐದು ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಪಕ್ಷದ ಸಾಧನೆ ಬಗ್ಗೆ ಪ್ರಸ್ತಾಪಿಸಿದ ಕಟೀಲ್, ರಾಜ್ಯದ ಜನತೆ ಬಿಜೆಪಿ ಪರ ಇದ್ದಾರೆ ಎನ್ನುವುದಕ್ಕೆ ನಮಗೆ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚು ಸ್ಥಾನ ಬಂದಿದ್ದೇ ಸಾಕ್ಷಿ ಎಂದರು.

ಸಂಘಟನೆ ಬಲಪಡಿಸಬೇಕು, ಬೆಲೆ ಏರಿಕೆ ವಿಚಾರದಲ್ಲಿ ಪ್ರತಿ ಪಕ್ಷಗಳ ಆರೋಪಗಳಿಗೆ ತಕ್ಕ ಉತ್ತರ ನೀಡಬೇಕು, ಬಿಜೆಪಿ ಆಡಳಿತ ಇರುವ ರಾಜ್ಯಗಳು ತೈಲ ಬೆಲೆ ಇಳಿಕೆ ಮಾಡಿವೆ ಆದರೆ ಬಿಜೆಪಿಯೇತರ ಆಡಳಿತರವಿರುವ ರಾಜ್ಯದಲ್ಲಿ ತೈಲ ಬೆಲೆ ಇಳಿಕೆ ಮಾಡಿಲ್ಲ, ತೆರಿಕೆ ಕಡಿತ ಮಾಡಿಲ್ಲ ಇದನ್ನೆಲ್ಲಾ ಜನತೆಯ ಮುಂದಿಟ್ಟು ಪ್ರತಿಪಕ್ಷಗಳಿಗೆ ತಿರುಗೇಟು ನೀಡಬೇಕು ಎಂದು ಕಟೀಲ್ ಕರೆ ನೀಡಿದರು.

ನಂತರ ಇತ್ತೀಚೆಗೆ ನಡೆದ ಉಪ ಚುನಾವಣೆ ಕುರಿತು ಸಭೆಯಲ್ಲಿ ಆತ್ಮಾವಲೋಕನ ಮಾಡಲಾಯಿತು ಎನ್ನಲಾಗಿದೆ. ಪಕ್ಷದ ಅಭ್ಯರ್ಥಿ ಹಿನ್ನಡೆಗೆ ಕಾರಣಗಳನ್ನು ಹುಡುಕುವ ಪ್ರಯತ್ನ ನಡೆಸಲಾಯಿತು.ಎಲ್ಲಿ ಎಡವಲಾಯಿತು? ಲೋಪಗಳೇನು? ಭವಿಷ್ಯದಲ್ಲಿ ಕ್ಷೇತ್ರ ಮರಳಿ ಪಡೆಯಲು ಮಾಡಬೇಕಿರುವ ತಂತ್ರಗಳ ಕುರಿತು ಸಮಾಲೋಚನೆ ನಡೆಸಲಾಗುತ್ತದೆ ಎನ್ನಲಾಗಿದೆ.

ಪದಾಧಿಕಾರಿಗಳ ಸಭೆ ನಂತರ ಬಿಬಿಎಂಪಿ ಚುನಾವಣೆ ತಯಾರಿ ಕುರಿತು ಅರುಣ್ ಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಕಳೆದ ಬಾರಿ ಅತಿದೊಡ್ಡ ಪಕ್ಷವಾದರೂ ಅಧಿಕಾರ ಹಿಡಿಯಲು ವಿಫಲವಾಗಿ ಕಡೆಯ ಅವದಿಯ ಒಂದು ವರ್ಷಕ್ಕೆ ತೃಪ್ತಿಪಟ್ಟುಕೊಂಡಿತ್ತು ಹಾಗಾಗಿ ಈ ಬಾರಿ ಶತಾಯ ಗತಾಯ ಬಿಬಿಎಂಪಿ ಗದ್ದುಗೆ ಪಡೆಯಲು ಸರ್ಕಸ್ ನಡೆಸುತ್ತಿದ್ದು, ಪಾಲಿಕೆ ಚುನಾವಣಾ ಸಿದ್ದತೆ ಕುರಿತು ಸಭೆ ನಡೆಸಲಾಗುತ್ತದೆ.

ಸರಣಿ ಸಭೆಗಳ ನಂತರ ಸಂಜೆ 7 ಗಂಟೆಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಬೆಳಗ್ಗೆಯಿಂದ ನಡೆದ ಸಭೆಗಳ ನಿರ್ಣಯ ಅವಲೋಕನ ಮಾಡಲಿದ್ದು, ಪರಿಷತ್ ಚುನಾವಣೆ ಸೇರಿ ಹಲವು ವಿಷಯಗಳ ಕುರಿತು ಮಹತ್ವದ ಚರ್ಚೆ ನಡೆಸಲಾಗುತ್ತದೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.