ಮೀಸಲಾತಿಗೆ ಪಟ್ಟು: ಆಡಳಿತ ಪಕ್ಷದ ಯತ್ನಾಳ್‌, ಬೆಲ್ಲದರಿಂದಲೇ ಸದನದಲ್ಲಿ ಧರಣಿ

author img

By

Published : Sep 23, 2021, 1:59 PM IST

BJP MLA Basanagouda yatnal and Arvind Bellad Protest in Assembly Session
ಮೀಸಲಾತಿಗೆ ಪಟ್ಟು; ಆಡಳಿತ ಪಕ್ಷದ ಯತ್ನಾಳ್‌, ಬೆಲ್ಲದ್‌ರಿಂದಲೇ ಸದನದಲ್ಲಿ ಧರಣಿ ()

ವೀಸಲಾತಿಗಾಗಿ ಆಗ್ರಹಿಸಿ ಆಡಳಿತ ಪಕ್ಷದ ಸದಸ್ಯರಾದ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಅರವಿಂದ್‌ ಬೆಲ್ಲದ್‌ ವಿಧಾನಸಭೆ ಕಲಾಪದಲ್ಲಿ ಧರಣಿ ನಡೆಸಿದ್ದಾರೆ. ಸದನದ ಬಾವಿಗಿಳಿದು ಮೀಸಲಾತಿಗಾಗಿ ಒತ್ತಾಯಿಸಿದರು.

ಬೆಂಗಳೂರು: ಮೀಸಲಾತಿಗೆ ಆಗ್ರಹಿಸಿ ಆಡಳಿತ ಪಕ್ಷದ ಸದಸ್ಯರೇ ಸರ್ಕಾರದ ವಿರುದ್ಧ ಧರಣಿ ನಡೆಸಿದ ಘಟನೆ ವಿಧಾನಸಭೆಯಲ್ಲಿ ನಡೆಯಿತು. ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಸನಗೌಡ ಯತ್ನಾಳ್, ಪಂಚಮಸಾಲಿ ಸಮುದಾಯವನ್ನು 2Aಗೆ ಸೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಈ ಹಿಂದಿನ ಸಿಎಂ ಆರು ತಿಂಗಳ ಸಮಯ ಕೇಳಿದ್ದರು.

ಸೆಪ್ಟೆಂಬರ್‌ನಲ್ಲಿ ಆ ಗಡುವು ಮುಗಿದಿದೆ. ಸದನದಲ್ಲಿ ಈ ಹಿಂದೆ ಭರವಸೆ ಕೊಟ್ಟಂತೆ, ಎಲ್ಲ ಸಮುದಾಯಗಳಿಗೆ ಸಾಮಾಜಿಕ‌ ನ್ಯಾಯ ಒದಗಿಸುತ್ತಾರಾ ಎಂದು ಹೇಳಬೇಕು. ಮಾಜಿ ಸಿಎಂ ಕೊಟ್ಟ ಭರವಸೆಯನ್ನು ಈಡೇರಿಸುತ್ತಾರೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಯತ್ನಾಳ ಆಗ್ರಹಿಸಿದರು.

ಮೀಸಲಾತಿಗೆ ಪಟ್ಟು; ಆಡಳಿತ ಪಕ್ಷದ ಯತ್ನಾಳ್‌, ಬೆಲ್ಲದ್‌ರಿಂದಲೇ ಸದನದಲ್ಲಿ ಧರಣಿ
ಇಂದು ಈ ಬಗ್ಗೆ ಉತ್ತರ ಕೊಡುವುದಾಗಿ ಕಾನೂನು ಸಚಿವರು ಭರವಸೆ ನೀಡಿದ್ದರು. ಆದರೆ, ಅವರು ಸದನಕ್ಕೆ ಬಂದಿಲ್ಲ, ಸಿಎಂ ಕೂಡ ಇಲ್ಲ ಎಂದು ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದರು.
ಸ್ಪೀಕರ್​ ಉತ್ತರಕ್ಕೆ ತೃಪ್ತರಾಗದೇ ಸದನದ ಬಾವಿಗಿಳಿದ ಯತ್ನಾಳ್​
ಸಿಎಂ ಅವರನ್ನು ಕರೆಸಿ ಉತ್ತರ ಕೊಡಿಸುವಂತೆ ಯತ್ನಾಳ್ ಆಗ್ರಹಿಸಿದರು. ಸಿಎಂ ಅವರನ್ನು ಕರೆಸಿ ಉತ್ತರ ಕೊಡುವುದಾಗಿ ಸ್ಪೀಕರ್ ಭರವಸೆ ನೀಡಿದರೂ ತೃಪ್ತರಾಗದ ಯತ್ನಾಳ್ ಹಾಗೂ ಅರವಿಂದ್‌ ಬೆಲ್ಲದ್ ಸದನದ ಬಾವಿಗಿಳಿದು ಧರಣಿ ನಡೆಸಿದರು.
ಇತ್ತ ಕಾಂಗ್ರೆಸ್ ಶಾಸಕ ಕಂಪ್ಲಿ ಗಣೇಶ್ ಕೂಡ ಎಸ್‌ಟಿ ಮೀಸಲಾತಿಗಾಗಿ ಆಗ್ರಹಿಸಿ ಸದನದ ಬಾವಿಗಿಳಿದು ಧರಣಿ ನಡೆಸಿದರು.
ಅವಕಾಶ ಕೊಡದಿದ್ದಕ್ಕೆ ರಾಜೂಗೌಡ ಅಸಮಾಧಾನ...ಸ್ಪೀಕರ್​ ಗರಂ
ಬಿಜೆಪಿ ಶಾಸಕ ರಾಜೂಗೌಡ, ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದರು. ರಮೇಶ್ ಕುಮಾರ್ ಅವರಿಗೆ ಅವಕಾಶ ಕೊಡ್ತೀರಿ, ನಮಗೆ ಮಾತಾಡಲು ಕೊಡಲ್ಲ ಎಂದು ದೂರಿದರು. ಈ ವೇಳೆ ರಾಜೂಗೌಡ ಬೆಂಬಲಕ್ಕೆ ಶಾಸಕ ಅರವಿಂದ ಲಿಂಬಾವಳಿ ನಿಂತರು. ನಮಗೆ ಏಕೆ ಇಷ್ಟೊಂದು ಸತಾಯಿಸ್ತಾ ಇದೀರಿ. ರಾಮನ ಹೆಸರು ಹೇಳಿ ಅಧಿಕಾರಕ್ಕೆ ಬರೋದು ಗೊತ್ತಿದೆ.
ರಾಮನನ್ನು ಬೆಳಕಿಗೆ ತಂದ ವಾಲ್ಮೀಕಿ ಜನಾಂಗದ ಬಗ್ಗೆ ಏಕೆ ಇಷ್ಟು ನಿರ್ಲಕ್ಷ್ಯ? 7.5ರಷ್ಟು ಮೀಸಲಾತಿ ಕೊಡಬೇಕು, ನ್ಯಾಯಮೂರ್ತಿ ನಾಗಮೋಹನ್ ದಾಸ್ ಶಿಫಾರಸಿನಂತೆ ಅನುಷ್ಠಾನ ಮಾಡಬೇಕು. ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದಂತೆ ಮೀಸಲಾತಿ ಬಗ್ಗೆ ಸರ್ಕಾರ ನಿರ್ಧಾರ ಮಾಡಬೇಕು ಅಂತ ರಾಜೂಗೌಡ ಆಗ್ರಹಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವ ಸಿ.ಸಿ.ಪಾಟೀಲ್ ಉತ್ತರಿಸುವುದಾಗಿ ಹೇಳಿದ್ದಾರೆ.
ಸದನದ ಸಮಯ ಹಾಳು ಮಾಡಬೇಡಿ: ಸಿದ್ದರಾಮಯ್ಯ
ಸಿಎಂ ಬಂದು ಉತ್ತರಿಸಬೇಕು ಎಂದು ನೀವು ಕೇಳುತ್ತಿದ್ದೀರಿ. ಇದು ಸಾಮೂಹಿಕ ಜವಾಬ್ದಾರಿ, ಸಿಎಂ ಮೇಲ್ಮನೆಗೆ ಹೋಗಿದ್ದಾರೆ. ಅವರು ಬರುವ ತನಕ ಕಾಯಿರಿ. ಇಲ್ಲಾ ಸಚಿವರು ನೀಡುವ ಉತ್ತರ ಕೇಳಿ. ಇಲ್ಲವಾದರೆ ಸದನದ ಸಮಯ ಹಾಳಾಗುತ್ತದೆ. ದಯವಿಟ್ಟು ನಿಮ್ಮ ಆಸನಕ್ಕೆ ಹೋಗಿ ಕುಳಿತುಕೊಳ್ಳಿ ಎಂದು ಮನವಿ ಮಾಡಿದರು. ಪ್ರತಿಪಕ್ಷ ನಾಯಕರ ಮನವಿಯನ್ನು ಪುರಸ್ಕರಿಸಿದ ಯತ್ನಾಳ್, ಬೆಲ್ಲದ್ ಹಾಗೂ ಕಂಪ್ಲಿ ಗಣೇಶ್ ಧರಣಿಯಿಂದ ಹಿಂದೆ ಸರಿದರು.


ಇನ್ನು, ಆಡಳಿತ ಪಕ್ಷದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕೂಡ ಕಾಡುಗೊಲ್ಲ ಮೀಸಲಾತಿ ಸಂಬಂಧದ ಚರ್ಚೆಗೆ ನಮಗೂ ಅವಕಾಶ ಕೊಡಿ. ನಿಯಮ 69ರ ಅಡಿ ಚರ್ಚೆಗೆ ಹಾಕಿದ್ದೀರಿ, ಆಗ ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.