ETV Bharat / city

ನಾವು ಹೋರಾಟಗಾರರ ಗುರುತಿಸುವ ಕೆಲಸ ಮಾಡಿದರೆ ಇವರಿಗೆ ನೆಹರು ಫೋಟೋ ಇಲ್ಲ ಎನ್ನುವ ಚಿಂತೆ : ಸಿಎಂ ವ್ಯಂಗ್ಯ

author img

By

Published : Aug 15, 2022, 4:19 PM IST

ನನ್ನನ್ನು ಆರ್​ಎಸ್​ಎಸ್ ಅಡಿಯಾಳು ಎಂದಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಚಾರ, ಆದರ್ಶ, ದೇಶಭಕ್ತಿಗೆ ನಾನು ತಲೆ ಬಾಗಿದ್ದೇನೆ, ಆರ್​ಎಸ್​ಎಸ್ ತತ್ವ ಆದರ್ಶದ ಹಿನ್ನೆಲೆಯಲ್ಲಿ ದೇಶ ಕಟ್ಟಲು ಬದ್ಧನಾಗಿದ್ದೇನೆ. ಸಂಘದ ನಗ್ಗೆ ನನಗೆ ಅಭಿಮಾನ ಇದೆ ಎಂದು ಆರ್​ಎಸ್​ಎಸ್​ನ ಮುಖ್ಯಮಂತ್ರಿ ಎನ್ನುವ ಆರೋಪಕ್ಕೆ ಸಿಎಂ ಟಾಂಗ್ ನೀಡಿದರು.

basavaraj-bommai
ಬಸವರಾಜ ಬೊಮ್ಮಾಯಿ‌

ಬೆಂಗಳೂರು : ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ ಮಹನೀಯರ ಗುರುತಿಸುವ ಕೆಲಸ ಮಾಡಿದ ನಮ್ಮನ್ನು ಶ್ಲಾಘಿಸುವ ಬದಲು ನಮ್ಮ ನಾಯಕರ ಫೋಟೋ ಕೈಬಿಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ದುಃಖಪಡುತ್ತಿದ್ದಾರೆ. ಜಾಹೀರಾತಿನಲ್ಲಿ ನೆಹರೂ ಫೋಟೋ ಕೈಬಿಟ್ಟಿದ್ದಕ್ಕೆ ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿರುಗೇಟು ನೀಡಿದರು. ವೇದಿಕೆ ಕಾರ್ಯಕ್ರಮದಲ್ಲಿಯೂ ಹೋರಾಟಗಾರರ ಪಟ್ಟಿ ಉಲ್ಲೇಖಿಸುವಾಗ ನೆಹರೂ ಹೆಸರು ಕೈಬಿಟ್ಟು ಮತ್ತೊಮ್ಮೆ ಕೈ ನಾಯಕರಿಗೆ ಟಾಂಗ್ ನೀಡಿದರು.

75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಜ್ಯ ಬಿಜೆಪಿಯಿಂದ ಅಮೃತ ಭಾರತಿಗೆ ಕರುನಾಡ ಜಾತ್ರೆ ಕಾರ್ಯಕ್ರಮ ನಡೆಸಲಾಯಿತು. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಧ್ವಜಾರೋಹಣ ನೆರವೇರಿಸಿದರು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಗಣ್ಯರು ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.

ನಾವು ಹೋರಾಟಗಾರರ ಗುರುತಿಸುವ ಕೆಲಸ ಮಾಡಿದರೆ ಇವರಿಗೆ ನೆಹರೂ ಫೋಟೋ ಇಲ್ಲ ಎನ್ನುವ ಚಿಂತೆ

ಈ ವೇಳೆ ಮಾತನಾಡಿದ ಸಿಎಂ, ನಮ್ಮ ದೇಶದ ಏಕತೆ, ಅಖಂಡತೆ ಕಾಪಾಡಿಕೊಳ್ಳುವುದು ಇಂದು ಬಹಳ ದೊಡ್ಡ ಸವಾಲಾಗಿದೆ. ಇಂದು ಸ್ವಾತಂತ್ರ್ಯ ಯಾರು ತಂದರು ಎಂದು ಪೈಪೋಟಿ ನಡೆಸುತ್ತಿದ್ದಾರೆ. ಆದರೆ ನಿಜವಾದ ಸ್ವಾತಂತ್ರ್ಯ ತಂದುಕೊಟ್ಟವರು ಅನಾಮಿಕ ಹೋರಾಟಗಾರರು. ಅವರ ನೇತೃತ್ವ ವಹಿಸಿದ್ದು, ಬಾಲಗಂಗಾಧರ ತಿಲಕ್, ವೀರ ಸಾವರ್ಕರ್, ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಎಲ್ಲರ ಕೊಡುಗೆ ಇದೆ. ಸ್ವಾತಂತ್ರ್ಯ ಬಂದ ನಂತರ ದೇಶ ಒಗ್ಗೂಡಿಸಿದ್ದು ಸರ್ದಾರ್ ವಲ್ಲಭಭಾಯಿ ಪಟೇಲ್ ಎಂದು ಸಾಲು ಸಾಲು ಹೆಸರು ಉಲ್ಲೇಖಿಸಿದರು. ಆದರೆ ಇಲ್ಲಿಯೂ ನೆಹರು ಹೆಸರು ಉಲ್ಲೇಖ ಮಾಡದೆ ಕಾಂಗ್ರೆಸ್​ಗೆ ಟಾಂಗ್ ನೀಡಿದರು.

ನೆಹರೂ ಅವರಿಗೆ ಗೌರವ ಕೊಟ್ಟಿದ್ದು ನಮ್ಮ ಪ್ರಧಾನಿ ನರೇಂದ್ರ ಮೋದಿ. ಮೊದಲ ಪ್ರಧಾನಿ ನೆಹರೂ ಅವರಿಂದ ಹಿಡಿದು ವಾಜಪೇಯಿ ಅವರ ವರೆಗೂ ಏನೆಲ್ಲ ಕೊಡುಗೆ ನೀಡಿದ್ದಾರೆ. ಅದರ ಪ್ರದರ್ಶನ ದೆಹಲಿಯಲ್ಲಿ ಮಾಡಿದ್ದಾರೆ. ಅಂಬೇಡ್ಕರ್ ಅವರನ್ನು ಯಾರೂ ಸ್ಮರಿಸಿರಲಿಲ್ಲ. ಅವರು ಸತ್ತಾಗ ಜಾಗ ಕೊಟ್ಟಿರಲಿಲ್ಲ. ಇಂದು ಅಂಬೇಡ್ಕರ್ ಸ್ಮಾರಕ ಮಾಡಲು 25 ಕೋಟಿ ಹಣ ಕೊಟ್ಟಿದ್ದೇವೆ ಎಂದರು.

ಆರ್.ಎಸ್.ಎಸ್ ವಿಚಾರಧಾರೆಗೆ ತಲೆಬಾಗಿದ್ದೇನೆ : ಭಾರತ ದೇಶವೇ ಧರ್ಮ, ಸಂವಿಧಾನವೇ ನಮ್ಮ ಗ್ರಂಥ ಅಂತ ನಮ್ಮ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮುಂದಿನ 25ವರ್ಷ ಭಾರತವನ್ನು ಉನ್ನತಿಗೆ ತೆಗೆದುಕೊಂಡು ಹೋಗಬೇಕು. ಆದರೆ ಒಬ್ಬರು ನನ್ನನ್ನು ಆರ್​ಎಸ್​ಎಸ್ ಅಡಿಯಾಳು ಎಂದಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಚಾರ, ಆದರ್ಶ, ದೇಶಭಕ್ತಿಗೆ ನಾನು ತಲೆ ಬಾಗಿದ್ದೇನೆ. ಆರ್.ಎಸ್.ಎಸ್ ತತ್ವ ಆದರ್ಶದ ಹಿನ್ನೆಲೆಯಲ್ಲಿ ದೇಶ ಕಟ್ಟಲು ಬದ್ಧನಾಗಿದ್ದೇನೆ. ಸಂಘದ ಬಗ್ಗೆ ನನಗೆ ಅಭಿಮಾನ ಇದೆ ಎಂದು ಆರ್.ಎಸ್.ಎಸ್ ನ ಮುಖ್ಯಮಂತ್ರಿ ಎನ್ನುವ ಆರೋಪಕ್ಕೆ ಸಿಎಂ ಟಾಂಗ್ ನೀಡಿದ್ದಾರೆ.

ಪ್ರಾಣತ್ಯಾಗ ಮಾಡಿದವರ ಹೆಸರು ಇತಿಹಾಸದಲ್ಲಿ ಬರೆದಿಲ್ಲ: ಸ್ವಾತಂತ್ರ್ಯ ಹೋರಾಟದ ಇತಿಹಾಸ ಬದಲಾಗಲ್ಲ, ಆದರೆ ಹೋರಾಟದ ಇತಿಹಾಸ ಬರೆಯುವವರು ಇತಿಹಾಸ ಬದಲಾಯಿಸುವ ಕಾಲ ಬಂದಿದೆ. ಸತ್ಯ ಹೇಳುವ ಕಾಲ ಬಂದಿದೆ. ಜಲಿಯನ್ ವಾಲಾಬಾಗ್ ನಲ್ಲಿ ನೂರಾರು ಜನ ಸತ್ತರೂ ಅವರೆಲ್ಲರ ಹೆಸರು ಯಾಕೆ ಬರಲ್ಲ? ಇತಿಹಾಸಕಾರರು ಬರೆಯಲಿಲ್ಲ. ನಾರಾಯಣ ಡೋಣಿ ಎನ್ನುವ 12 ವರ್ಷದ ಬಾಲಕ ವಂದೇ ಮಾತರಂ ಹೇಳಿದ್ದಕ್ಕೆ ಬ್ರಿಟಿಷರ ಗುಂಡೇಟಿಗೆ ಬಲಿಯಾಗಿದ್ದ. ಅದನ್ನು ಇತಿಹಾಸಕಾರರು ಬರೆಯಲಿಲ್ಲ ಎಂದು ಇತಿಹಾಸದಲ್ಲಿ ಮರೆಯಾದ ಸತ್ಯದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದರು.

ಆಹಾರ ಭದ್ರತೆ ಇದೆ : ದೇಶಕ್ಕೆ ಸ್ವಾತಂತ್ರ್ಯ ಬಂದ ದಿನವೇ ವಿಭಜನೆ ಆಯಿತು, ಇದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ, 10 ಲಕ್ಷ ಜನ ನಿರಾಶ್ರಿತರಾಗಿ ದೇಶಕ್ಕೆ ಬಂದರು. 33 ಕೋಟಿ ಜನಸಂಖ್ಯೆ ಇತ್ತು ಸ್ವಾತಂತ್ರ್ಯ ಬಂದಾಗ, ಇಂದು 130 ಕೋಟಿ ಜನ ಆದರೂ ಎಲ್ಲರಿಗೂ ಆಹಾರ ಕೊಡುವ ಭದ್ರತೆ ಇದೆ. ಇದಕ್ಕೆ ನಮ್ಮ ರೈತರು ಕಾರಣ ಎಂದು ಸಿಎಂ ಹೇಳಿದ್ದಾರೆ.

ಚೀನಾ ವಿರುದ್ಧ ಸೋಲಿಗೆ ಯಾರು ಕಾರಣ..? ನಮ್ಮ ದೇಶ ಎಲ್ಲ ಹೋರಾಟದಲ್ಲೂ ಮುನ್ನಡೆ ಪಡೆದುಕೊಂಡಿದೆ. ಚೀನಾ ವಿಚಾರದಲ್ಲಿ ಮಾತ್ರ ನಮಗೆ ಹಿನ್ನಡೆಯಾಯಿತು. ಅಂದಿನ ನಾಯಕರು ದಿಟ್ಟತನ ತೋರಿ ಸೈನಿಕರಿಗೆ ಶಕ್ತಿ ಕೊಟ್ಟಿದ್ದರೆ, ಸಕಾಲಕ್ಕೆ ಸೈನಿಕ ಪಡೆ ಕಳುಹಿಸಿಕೊಟ್ಟಿದ್ದರೆ ಚೀನಾ ಯುದ್ಧದಲ್ಲಿ ನಮಗೆ ಹಿನ್ನಡೆಯಡಗುತ್ತಿರಲಿಲ್ಲ ಎಂದರು.

ಇದನ್ನೂ ಓದಿ : ದೆಹಲಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಕೇಂದ್ರಕ್ಕೆ ಪತ್ರ: ಸಿಎಂ ಬಸವರಾಜ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.