ETV Bharat / city

ದಕ್ಷಿಣ ಭಾರತದ ಕೃಷಿ ವಿವಿಗಳಲ್ಲಿ ಬೆಂಗಳೂರು ಕೃಷಿ ವಿವಿಗೆ ಪ್ರಥಮ ಸ್ಥಾನ

author img

By

Published : Dec 8, 2021, 6:08 PM IST

ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ 2020-21ನೇ ಸಾಲಿನಲ್ಲಿ ದಕ್ಷಿಣ ಭಾರತ ಮತ್ತು ರಾಜ್ಯದ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ.

Bangalore agriculture university got first place in South India universities
ದಕ್ಷಿಣ ಭಾರತದ ಕೃಷಿ ವಿವಿಗಳಲ್ಲಿ ಬೆಂಗಳೂರು ಕೃಷಿ ವಿವಿಗೆ ಪ್ರಥಮ ಸ್ಥಾನ

ಬೆಂಗಳೂರು: ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ ತನ್ನ ಗುಣಮಟ್ಟದ ಚಟುವಟಿಕೆಗಳಿಂದಾಗಿ 2020-21ನೇ ಸಾಲಿನಲ್ಲಿ ದಕ್ಷಿಣ ಭಾರತ ಮತ್ತು ರಾಜ್ಯದ ಕೃಷಿ ವಿಶ್ವವಿದ್ಯಾನಿಲಯಗಳ ಪೈಕಿ ಪ್ರಥಮ ಸ್ಥಾನವನ್ನು ಪಡೆದಿದೆ.

ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ರಾಷ್ಟ್ರ ಮಟ್ಟದಲ್ಲಿ ಕೃಷಿ ಮತ್ತು ಸಂಬಂಧಿಸಿದ ವಿಶ್ವವಿದ್ಯಾನಿಲಯಗಳ ಗುಣಮಟ್ಟವನ್ನು ಹೆಚ್ಚಿಸಲು ಶ್ರೇಯಾಂಕವನ್ನು ನೀಡುತ್ತಿದೆ. ಶ್ರೇಯಾಂಕವು ವಿದ್ಯಾರ್ಥಿಗಳು ಅತ್ಯುತ್ತಮ ಕೃಷಿ ವಿಶ್ವವಿದ್ಯಾನಿಲಯಗಳನ್ನು ಆಯ್ಕೆ ಮಾಡಿಕೊಳ್ಳಲು ಸಹಕಾರಿಯಾಗಲಿದೆ‌. ಹಾಗೇ ಕೃಷಿ ವಿಶ್ವವಿದ್ಯಾನಿಲಯಗಳು ಸ್ವಯಂ-ಮೌಲ್ಯಮಾಪನ ಮಾಡಿ ಗುಣಮಟ್ಟ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವಲ್ಲಿ ಸಹಾಯವಾಗುತ್ತದೆ. ಕೃಷಿ ವಿಶ್ವವಿದ್ಯಾನಿಲಯಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಏರ್ಪಡಿಸಿ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ.

2020-21ನೇ ಸಾಲಿನಲ್ಲಿ ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು, ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ರಾಷ್ಟ್ರದ 67 ಕೃಷಿ ವಿಶ್ವವಿದ್ಯಾನಿಲಯಗಳ ಶಿಕ್ಷಣ, ಸಂಶೋಧನೆ, ವಿಸ್ತರಣೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧಿಸಿದ ಗಣನೀಯ ಸೇವೆಯನ್ನು ಮೌಲ್ಯಮಾಪನ ಮಾಡಿ ಕೃಷಿ ವಿಶ್ವವಿದ್ಯಾನಿಲಯಗಳನ್ನು ಶ್ರೇಣಿಕರಿಸಿದೆ. ಈ ಪೈಕಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ 2020-21ನೇ ಸಾಲಿನಲ್ಲಿ ದಕ್ಷಿಣ ಭಾರತ ಮತ್ತು ರಾಜ್ಯದ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ. ರಾಷ್ಟ್ರಮಟ್ಟದ ರಾಜ್ಯ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ 3ನೇ ಸ್ಥಾನದಲ್ಲಿದೆ.

ಸಿಬ್ಬಂದಿ - ವಿದ್ಯಾರ್ಥಿಗಳ ಅನುಪಾತ, ವಿದ್ಯಾರ್ಥಿವೇತನ ಮತ್ತು ಪ್ರವೇಶಕ್ಕೆ ಸಂಬಂಧಿಸಿದಂತೆ ಸ್ನಾತಕೋತ್ತರ ವಿದ್ಯಾರ್ಥಿಗಳ ಸಾಧನೆ, ಫೆಲೋಶಿಪ್, ಮತ್ತು ಪ್ರವೇಶಕ್ಕೆ ಸಂಬಂಧಿಸಿದಂತೆ ಸ್ನಾತಕ ವಿದ್ಯಾರ್ಥಿಗಳ ಕಾರ್ಯಕ್ಷಮತೆ, ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಶೇಕಡವಾರು ವಿದ್ಯಾರ್ಥಿಗಳು, ಸಂಶೋಧನಾ ಉತ್ಪಾದಕತೆ ಮತ್ತು ಪ್ರಭಾವ, ಸಂಶೋಧನಾ ಶ್ರೇಷ್ಟತೆ, ಬಾಹ್ಯ ಮೂಲಗಳ ಮೂಲಕ ಪಡೆದ ನಿಧಿಗಳು, ವಿಸ್ತರಣೆ ಚಟುವಟಿಕೆಗಳು ಮತ್ತು ಪಡೆದ ಪ್ರಶಸ್ತಿಗಳು - ಇವು ಕೃಷಿ ವಿಶ್ವವಿದ್ಯಾನಿಲಯಗಳ ಶ್ರೇಯಾಂಕಕ್ಕೆ ಪರಿಗಣಿಸಲಾದ ಮಾನದಂಡಗಳು.

ಇದನ್ನೂ ಓದಿ: ಅರ್ಜಿ ಹಾಕಿದ ಒಂದೇ ದಿನದಲ್ಲಿ ಭೂ ಪರಿವರ್ತನೆ: ಸಚಿವ ಅಶೋಕ್ ಘೋಷಣೆ

ಕಳೆದ ವರ್ಷ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಸಂಶೋಧನಾ ಶ್ರೇಷ್ಠತೆ, ವಿದ್ಯಾರ್ಥಿ ವೇತನ ಮತ್ತು ಪ್ರವೇಶಕ್ಕೆ ಸಂಬಂಧಿಸಿದಂತೆ ಸ್ನಾತಕೋತ್ತರ ವಿದ್ಯಾರ್ಥಿಗಳ ಸಾಧನೆ ಹಾಗೂ ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡದ ಶೇಕಡವಾರು ವಿದ್ಯಾರ್ಥಿಗಳ ಮಾನದಂಡಗಳಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿದೆ.‌ ಕೃಷಿಯಲ್ಲಿ ಐದು ನೂತನ ತಳಿಗಳು ಮತ್ತು 10 ಕೃಷಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದ್ದು, ರೈತರ ಮತ್ತು ಕೃಷಿ ಅಭಿವೃದ್ಧಿಗೆ ಸಹಕಾರಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.