ETV Bharat / city

ಕೌಟುಂಬಿಕ ಕಿರುಕುಳ: ಪತ್ನಿ ಜೀವನಾಂಶಕ್ಕೆ ಅರ್ಹಳು- ಹೈಕೋರ್ಟ್

author img

By

Published : May 6, 2022, 6:46 AM IST

ಮಾನಸಿಕ, ದೈಹಿಕ ಕಿರುಕುಳದಿಂದ ಬೇಸತ್ತು ಗಂಡನ ಮನೆ ತೊರೆದು ಪ್ರತ್ಯೇಕವಾಗಿ ವಾಸಿಸುತ್ತಿರುವ ಪತ್ನಿ ಜೀವನಾಂಶ ಪಡೆಯಲು ಅರ್ಹಳು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

High Court
ಹೈಕೋರ್ಟ್

ಬೆಂಗಳೂರು: ಕೌಟುಂಬಿಕ ಕಿರುಕುಳದ ಕಾರಣಕ್ಕೆ ಪತ್ನಿ ಗಂಡನ ಮನೆ ತೊರೆದ ಸಂದರ್ಭದಲ್ಲಿ ಆಕೆಯು ಪರಸ್ಪರ ಒಪ್ಪಿಗೆ ಮೇರೆಗೆ ಪ್ರತ್ಯೇಕ ವಾಸವಿದ್ದಾಳೆ ಎಂದು ಪತಿಗೆ ವಾದಿಸಲು ಅವಕಾಶವಿಲ್ಲ ಎಂದಿರುವ ಹೈಕೋರ್ಟ್, ಇಂತಹ ಸಂದರ್ಭಗಳಲ್ಲಿ ಪತ್ನಿ ಜೀವನಾಂಶ ಪಡೆಯಲು ಅರ್ಹಳಿರುತ್ತಾಳೆ ಎಂದು ಹೇಳಿತು. ಜೀವನಾಂಶ ಕೋರಿ ಪತ್ನಿ ಅಂಬಿಕಾ ದೊಡ್ಡಬಳ್ಳಾಪುರದ ಜೆಎಂಎಫ್‌ಸಿ ಕೋರ್ಟ್​ನಲ್ಲಿ ದಾಖಲಿಸಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಪತಿ ಸತೀಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪೀಠ ತನ್ನ ಆದೇಶದಲ್ಲಿ, ವಿಚಾರಣಾ ನ್ಯಾಯಾಲಯಕ್ಕೆ ಜೀವನಾಂಶ ಕೋರಿ ಪತ್ನಿ ಸಲ್ಲಿಸಿರುವ ಅರ್ಜಿಯಲ್ಲಿ ತನಗೆ ಪತಿ ಹಾಗೂ ಅತ್ತೆಯಿಂದ ಕಿರುಕುಳವಿತ್ತು. ತಾಯಿ ಸೂಚನೆ ಮೇರೆಗೆ ಪತಿ ತನ್ನನ್ನು ಮನೆಯಿಂದ ಹೊರಹಾಕಿದ್ದಾರೆ. ಅವರ ಕಿರುಕುಳ ಸಹಿಸಲಾಗದೆ ಪತಿಯ ಮನೆಯನ್ನು ತೊರೆದು ಬೇರೊಂದು ಮನೆಯಲ್ಲಿ ವಾಸ ಮಾಡುತ್ತಿದ್ದೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಪರಸ್ಪರ ಒಪ್ಪಂದದ ಮೇರೆಗೆ ಪತ್ನಿಯು ಪತಿಯ ಮನೆ ತೊರೆದಿದ್ದಾರೆ ಹಾಗೂ ಬೇರೊಂದು ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂಬ ಪತಿಯ ವಾದವನ್ನು ಒಪ್ಪಲಾಗದು. ಇಂತಹ ಸಂದರ್ಭದಲ್ಲಿ ಪತ್ನಿಯು ಜೀವನಾಂಶ ಕೇಳಲು ಅರ್ಹಳಿರುತ್ತಾಳೆ. ಜೊತೆಗೆ ಜೀವನಾಂಶ ನೀಡುವ ಬಾಧ್ಯತೆಯನ್ನು ಪತಿ ನಿರಾಕರಿಸಲು ಸಾಧ್ಯವಿಲ್ಲ ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2016ರ ನ.1ರಂದು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದ ದಂಪತಿ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿತ್ತು. 2020ರ ಡಿಸೆಂಬರ್ 7ರಂದು ಪತ್ನಿ ಪತಿಯ ವಿರುದ್ಧ ಐಪಿಸಿ ಸೆಕ್ಷನ್ 498ಎ (ಕಿರುಕುಳ) ಹಾಗೂ 504 (ಶಾಂತಿಭಂಗ ಮಾಡಲು ಉದ್ರೇಕಿಸಲಿಕ್ಕಾಗಿ ಉದ್ದೇಶಪೂರ್ವಕ ಅವಮಾನ) ಆರೋಪದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಪತಿಯಿಂದ ಜೀವನಾಂಶ ಕೊಡಿಸುವಂತೆ ಕೋರಿ ದೊಡ್ಡಬಳ್ಳಾಪುರ ಜೆಎಂಎಫ್‌ಸಿಗೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಆ ಬಳಿಕ ಹೈಕೋರ್ಟ್ ಮೆಟ್ಟಿಲೇರಿದ್ದ ಪತಿ ತನ್ನ ಪತ್ನಿ ಸ್ವಯಿಚ್ಛೆಯಿಂದ ಮನೆ ತೊರೆದಿದ್ದಾಳೆ. ಸಿಆರ್​ಪಿಸಿ ಸೆಕ್ಷನ್ 125(4)ರ ಪ್ರಕಾರ ದಂಪತಿ ಪರಸ್ಪರ ಒಪ್ಪಂದದ ಮೇರೆಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ, ಪತ್ನಿ ಗಂಡನಿಂದ ಜೀವನಾಂಶ ಪಡೆಯಲು ಅರ್ಹಳಾಗಿರುವುದಿಲ್ಲ. ಅದರಂತೆ ಪತ್ನಿಗೆ ಜೀವನಾಂಶ ಕೊಡಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.

ಇದನ್ನೂ ಓದಿ: ಚುನಾವಣೆ ನಡೆಸದೆ ನೇರವಾಗಿ ಜನಪ್ರತಿನಿಧಿಗಳ ಆಯ್ಕೆ ಕೋರಿ ಅರ್ಜಿ: ವಜಾಗೊಳಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.