ETV Bharat / city

ಎಜಿ, ಹಣಕಾಸು, ಕಾನೂನು ಇಲಾಖೆಗಳ ಬಲವಾದ ಆಕ್ಷೇಪ ಇದ್ದರೂ ಕೆಟಿಟಿಪಿ ಕಾಯ್ದೆಗೆ ತಿದ್ದುಪಡಿ ಏಕೆ?

author img

By

Published : Jul 5, 2021, 6:54 AM IST

ರಾಜ್ಯ ಸರ್ಕಾರ ವಿವಿಧ ವರ್ಗಗಳಿಂದ ವ್ಯಕ್ತವಾದ ವಿರೋಧವನ್ನು ಮಾತ್ರವಲ್ಲದೇ, ಅಡ್ವೊಕೇಟ್ ಜನರಲ್, ಕಾನೂನು ಇಲಾಖೆ ಮತ್ತು ಹಣಕಾಸು ಇಲಾಖೆಯ ವಿರೋಧವನ್ನೂ ಕಡೆಗಣಿಸಿ ಕೆಟಿಟಿಪಿ ಕಾಯ್ದೆ ತಿದ್ದುಪಡಿಗೆ ಗ್ರೀನ್ ಸಿಗ್ನಲ್ ನೀಡಿದೆ.

KTTP Act amendment
ಕೆಟಿಟಿಪಿ ಕಾಯ್ದೆಗೆ ತಿದ್ದುಪಡಿ

ಬೆಂಗಳೂರು: ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ (ಕೆಟಿಟಿಪಿ) ಕಾಯ್ದೆ ತಿದ್ದುಪಡಿಗೆ ಹಲವರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು.‌ ವಿರೋಧದ ಮಧ್ಯೆಯೂ ತಿದ್ದುಪಡಿಗೆ ಸಂಪುಟ ಸಭೆ ಅನುಮತಿ ನೀಡಿತ್ತು. ರಾಜ್ಯ ಸರ್ಕಾರ ಕಾನೂನು ಇಲಾಖೆ ಹಾಗೂ ಹಣಕಾಸು ಇಲಾಖೆಯ ಆಕ್ಷೇಪವನ್ನೂ ಕಡೆಗಣಿಸಿ ಕೆಟಿಪಿಪಿ, ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿರುವುದು ಬೆಳಕಿಗೆ ಬಂದಿದೆ.

KTTP Act amendment
ಕೆಟಿಟಿಪಿ ಕಾಯ್ದೆಗೆ ತಿದ್ದುಪಡಿ

ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ವಿವಾದಿತ ಕೆಟಿಟಿಪಿ ಕಾಯ್ದೆ ತಿದ್ದುಪಡಿಗೆ ಅನುಮೋದನೆ ನೀಡಿತ್ತು. ತಿದ್ದುಪಡಿ ಪ್ರಕಾರ 2 ಕೋಟಿ ರೂ. ವರೆಗಿನ ಕಾಮಗಾರಿಗಾಗಿ ಟೆಂಡರ್ ಪ್ರಕ್ರಿಯೆಯಿಂದ ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್‌) ವಿನಾಯಿತಿ ನೀಡಲಾಗುತ್ತದೆ. ಇದಕ್ಕೆ ಹಲವು ವರ್ಗದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ತಿದ್ದುಪಡಿಗೆ ತಮ್ಮ ಬಲವಾದ ಆಕ್ಷೇಪ ವ್ಯಕ್ತಪಡಿಸಿದ್ದರು. ಅದರ ಜೊತೆಗೆ ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್‌) 2 ಕೋಟಿ ರೂ. ವರೆಗಿನ ಕಾಮಗಾರಿಯನ್ನು ನೇರವಾಗಿ ವಹಿಸುವ ನಿಟ್ಟಿನಲ್ಲಿ ಈ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಹೊರಟಿದೆ. ಇದು ಗುತ್ತಿಗೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರ ಮೀಸಲಾತಿ ಸವಲತ್ತು ದುರ್ಬಲಗೊಳಿಸುವ ಹುನ್ನಾರ ಎಂದು ಎಸ್‌ಸಿ/ಎಸ್‌ಟಿ ಗುತ್ತಿಗೆದಾರರ ಸಂಘ ಪ್ರತಿಭಟನೆಯನ್ನೂ ನಡೆಸಿತ್ತು. ಈ ಮಧ್ಯೆ ಕೆಟಿಟಿಪಿ ಕಾಯ್ದೆಗೆ ತಿದ್ದುಪಡಿ ತರಲು ಸಚಿವ ಸಂಪುಟ ಸಭೆ ಅಸ್ತು ನೀಡಿದೆ.

ಎಜಿ, ಕಾನೂನು, ಹಣಕಾಸು ಇಲಾಖೆಯ ಆಕ್ಷೇಪಕ್ಕೂ ಡೋಂಟ್ ಕೇರ್

ರಾಜ್ಯ ಸರ್ಕಾರ ವಿವಿಧ ವರ್ಗಗಳಿಂದ ವ್ಯಕ್ತವಾದ ವಿರೋಧವನ್ನು ಮಾತ್ರವಲ್ಲದೇ ಅಡ್ವೊಕೇಟ್ ಜನರಲ್, ಕಾನೂನು ಇಲಾಖೆ ಮತ್ತು ಹಣಕಾಸು ಇಲಾಖೆಯ ವಿರೋಧವನ್ನೂ ಕಡೆಗಣಿಸಿ ತಿದ್ದುಪಡಿಗೆ ಗ್ರೀನ್ ಸಿಗ್ನಲ್ ನೀಡಿದೆ. ಆರ್​ಟಿಐ ಮಾಹಿತಿಯಿಂದ ಈ ಅಸಲಿಯತ್ತು ಬಯಲಾಗಿದೆ. ಅಡ್ವೊಕೇಟ್ ಜನರಲ್ (ಎಜಿ) ಪ್ರಭುಲಿಂಗ್ ನಾವಡ್ಗಿ ತಿದ್ದುಪಡಿಗೆ ಬಲವಾದ ಆಕ್ಷೇಪ ವ್ಯಕ್ತಪಡಿಸಿ ಈ ತಿದ್ದುಪಡಿ ಕೆಟ್ಟ ನಿದರ್ಶನಕ್ಕೆ ಕಾರಣವಾಗಲಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

KTTP Act amendment
ಕೆಟಿಟಿಪಿ ಕಾಯ್ದೆಗೆ ತಿದ್ದುಪಡಿ

ಕೆಆರ್​ಐಡಿಎಲ್ ಒಂದಕ್ಕೆ ವಿನಾಯಿತಿ ನೀಡಿದರೆ, ಮುಂದಿನ ದಿನಗಳಲ್ಲಿ ಇತರೆ ನಿಗಮ ಮಂಡಳಿಗಳೂ ಈ ರೀತಿಯ ವಿನಾಯಿತಿ ಒದಗಿಸುವಂತೆ ಪ್ರಸ್ತಾಪ ಸಲ್ಲಿಸಲಿದೆ. ಇದರಿಂದ ಕೆಟಿಟಿಪಿ ಕಾಯ್ದೆಯ ಮೂಲ ಉದ್ದೇಶ ವಿಫಲವಾಗಲಿದೆ. ನನ್ನ ಪ್ರಕಾರ ಕೆಆರ್​ಐಡಿಎಲ್​ಗೆ ವಿನಾಯಿತಿ ನೀಡುವ ಅಗತ್ಯತೆಯ ಬಗ್ಗೆ ಯಾವುದೇ ಬಲವಾದ ಕಾರಣ ಕಾಣುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಅಷ್ಟೇ ಅಲ್ಲ, ಹಣಕಾಸು ಇಲಾಖೆಯೂ ಈ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿತ್ತು. ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್ಎನ್ ಪ್ರಸಾದ್ ಅವರು ಎಜಿ ಅಭಿಪ್ರಾಯದ ಹಿನ್ನೆಲೆ ಕೆಟಿಟಿಪಿ ಕಾಯ್ದೆಗೆ ತಿದ್ದುಪಡಿ ತರುವುದು ಸಂಮಜಸವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

KTTP Act amendment
ಕೆಟಿಟಿಪಿ ಕಾಯ್ದೆಗೆ ತಿದ್ದುಪಡಿ

ಇತ್ತ ಕಾನೂನು ಇಲಾಖೆಯೂ ತಿದ್ದುಪಡಿಗೆ ತನ್ನ ವಿರೋಧ ವ್ಯಕ್ತಪಡಿಸಿತ್ತು. 2019-20ರಲ್ಲೇ ಸರ್ಕಾರ ಕೆಟಿಟಿಪಿ ಕಾಯ್ದೆ ಸಡಿಲಿಸಿ ಅಧಿಸೂಚನೆ ಹೊರಡಿಸಿತ್ತು. ಇದನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಲಾಗಿತ್ತು. ಕಾನೂನು ಇಲಾಖೆ ಈ ವಿಚಾರವನ್ನು ಉಲ್ಲೇಖಿಸಿದ್ದು, ಈ ವಿನಾಯಿತಿ ಸಂಬಂಧದ ತಿದ್ದುಪಡಿ ಪ್ರಶ್ನಿಸಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಹೀಗಾಗಿ, ತಿದ್ದುಪಡಿ ತರುವುದು ಸೂಕ್ತವಲ್ಲ. ನ್ಯಾಯಾಲಯದಲ್ಲಿ ಕೆಟಿಟಿಪಿ ಕಾಯ್ದೆ ತಿದ್ದುಪಡಿ ಅನೂರ್ಜಿತಗೊಳ್ಳುವ ಸಾಧ್ಯತೆ ಇದೆ ಎಂದು ಸ್ಪಷ್ಟವಾಗಿ ಎಚ್ಚರಿಕೆ ನೀಡಿತ್ತು.

ಎಜಿ, ಕಾನೂನು ಇಲಾಖೆ ಹಾಗೂ ಹಣಕಾಸು ಇಲಾಖೆಯ ಬಲವಾದ ಆಕ್ಷೇಪ ಇದ್ದರೂ ರಾಜ್ಯ ಸರ್ಕಾರ ವಿವಾದಿತ ಕೆಟಿಟಿಪಿ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: ಗೋವಿನ ಹೆಸರಲ್ಲಿ ಹಿಂಸೆ ಹಿಂದುತ್ವ ವಿರೋಧಿ ನಡೆ; ದೇಶದಲ್ಲಿ ಹಿಂದೂ ಅಥವಾ ಮುಸ್ಲಿಂ ಪ್ರಾಬಲ್ಯ ಸಾಧ್ಯವಿಲ್ಲ: ಮೋಹನ್ ಭಾಗವತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.