ETV Bharat / city

ಘನತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ಕಂಪನಿ: ಕಾನೂನು ಚೌಕಟ್ಟಿನಲ್ಲಿ ಪರಿಶೀಲಿಸಲು ಮುಂದಾದ ಹೈಕೋರ್ಟ್

author img

By

Published : Jul 7, 2021, 2:49 AM IST

ರಾಜ್ಯ ಸರ್ಕಾರ ಬೆಂಗಳೂರು ನಗರದ ಘನತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ಕಂಪನಿ ಆರಂಭಿಸಲು ನಿರ್ಧಾರ ಕೈಗೊಂಡಿದೆ. ಆದರೆ, ವಾಸ್ತವವಾಗಿ ಘನತ್ಯಾಜ್ಯ ನಿರ್ವಹಣಾ ಅಧಿನಿಯಮಗಳು-2016ರ ಅಡಿಯಲ್ಲಿ ಇಂತದ್ದೊಂದು ಸಂಸ್ಥೆ ಆರಂಭಿಸಲು ಸಾಧ್ಯವೇ ಎಂಬುದರ ಕುರಿತು ಪರಿಶೀಲಿಸಬೇಕಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

 A separate company for solid waste management
A separate company for solid waste management

ಬೆಂಗಳೂರು : ನಗರದ ಘನತ್ಯಾಜ್ಯ ನಿರ್ವಹಣೆಗಾಗಿ ಪ್ರತ್ಯೇಕ ಕಂಪನಿ ಸ್ಥಾಪಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕಾನೂನು ವ್ಯಾಪ್ತಿಯಲ್ಲಿ ಪರಿಶೀಲಿಸುವ ಅಗತ್ಯವಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಘನತ್ಯಾಜ್ಯ ನಿರ್ವಹಣೆಯಲ್ಲಿ ಬಿಬಿಎಂಪಿ ವಿಫಲವಾಗಿದೆ ಎಂದು ಆರೋಪಿಸಿ ವಿವಿಧ ಸಂಘಸಂಸ್ಥೆಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ವಾದ ಆಲಿಸಿದ ಪೀಠ, ರಾಜ್ಯ ಸರ್ಕಾರ ಬೆಂಗಳೂರು ನಗರದ ಘನತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ಕಂಪನಿ ಆರಂಭಿಸಲು ನಿರ್ಧಾರ ಕೈಗೊಂಡಿದೆ. ಆದರೆ, ವಾಸ್ತವವಾಗಿ ಘನತ್ಯಾಜ್ಯ ನಿರ್ವಹಣಾ ಅಧಿನಿಯಮಗಳು-2016ರ ಅಡಿಯಲ್ಲಿ ಇಂತದ್ದೊಂದು ಸಂಸ್ಥೆ ಆರಂಭಿಸಲು ಸಾಧ್ಯವೇ ಎಂಬುದರ ಕುರಿತು ಪರಿಶೀಲಿಸಬೇಕಿದೆ. ಆ ನಿಟ್ಟಿನಲ್ಲಿ ಜುಲೈ 28ರಂದು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿತು.ಅಲ್ಲದೆ, ಪಾಲಿಕೆ ಘನತ್ಯಾಜ್ಯ ನಿರ್ವಹಣೆಗೆ ಕ್ರಿಯಾ ಯೋಜನೆ ಇಲ್ಲದೆ ಹೇಗೆ ವಿಲೇವಾರಿ ಮಾಡುತ್ತಿದೆ ಎಂದು ಅಚ್ಚರಿ ವ್ಯಕ್ತಪಡಿಸಿತು.

2016ರ ನಿಯಮಗಳ ಪ್ರಕಾರ ಘನತ್ಯಾಜ್ಯ ವಿಲೇವಾರಿಗೆ ಯೋಜನೆ ಹಾಗೂ ಕಾರ್ಯತಂತ್ರ ಇರಬೇಕು. ಆದರೆ ಪಾಲಿಕೆ ತನ್ನ ಬಳಿ ಅಂತಹ ಯೋಜನೆಯೇ ಇಲ್ಲವೆನ್ನುತ್ತಿದೆ. ಹಾಗಿದ್ದರೆ ಯಾವ ರೀತಿ ವಿಲೇವಾರಿ ಮಾಡುತ್ತಿದೆ ಎಂದು ಪ್ರಶ್ನಿಸಿತು.

ಘನ ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಅನುಷ್ಠಾನಗೊಳಿಸದೆ, ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುತ್ತಾ ಹೋದರೆ ನಗರದ ತ್ಯಾಜ್ಯ ಬೃಹತ್ತಾಗುತ್ತದೆ. ಇದು ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿ, ಘನತ್ಯಾಜ್ಯ ನಿರ್ವವಹಣಾ ನಿಯಮಗಳು-2016ನ್ನು ಅನುಷ್ಠಾನಗೊಳಿಸುವ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸಿತು.

ಇದೇ ವೇಳೆ ನಿಯಮಗಳನ್ನು ಪಾಲಿಸದವರ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಪ್ರಕರಣಗಳೆಷ್ಟು, ಕೈಗೊಂಡಿರುವ ಇತರೆ ಕ್ರಮಗಳೇನು ಎಂಬ ಕುರಿತು ಮಾಹಿತಿ ನೀಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.