ETV Bharat / city

ಹಿಂದುಳಿದ ಸಮುದಾಯದ ವಿಚಾರ ಬಂದಾಗ ನಾನು ಸಿದ್ದರಾಮಯ್ಯ ಒಂದೇ.. ಶ್ರೀರಾಮುಲು

author img

By

Published : Aug 16, 2022, 12:18 PM IST

Updated : Aug 16, 2022, 1:23 PM IST

ಯಾವುದೇ ವಿಚಾರ ಹೇಳುವುದಕ್ಕೆ ನನಗೆ ಯಾರದ್ದೂ ಭಯವಿಲ್ಲ. ನಾನು ಯಾರಿಗೂ ಗುಲಾಮನಲ್ಲ, ನಾನು ಯಾರ ಕೈಯ್ಯಡಿಯಲ್ಲೂ ಕೆಲಸ ಮಾಡುತ್ತಿಲ್ಲ‌ ಎಂದು ಸಚಿವ ಶ್ರೀರಾಮುಲು ಹೇಳಿದರು.

Minister ShreeRamulu
ಸಚಿವ ಶ್ರೀರಾಮುಲು ಮಾತನಾಡಿದರು.

ಬಳ್ಳಾರಿ: ಭಗವಂತ ಅವಕಾಶ ಕೊಟ್ಟರೆ ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಲಿ ಎಂದು ಆಸೆ ಪಡುವ ವ್ಯಕ್ತಿಗಳಲ್ಲಿ ನಾನೂ ಒಬ್ಬ. ಹಿಂದುಳಿದ ಸಮುದಾಯ ಎಂಬುದು ಬಂದಾಗ ನಾನು ಸಿದ್ದರಾಮಯ್ಯ ಅವರು ಒಂದೇ ಎಂದು ಸಚಿವ ಬಿ. ಶ್ರೀರಾಮುಲು ಹೇಳುವ ಮೂಲಕ ಬಾದಾಮಿಯಲ್ಲಿ‌ ಸಿದ್ದರಾಮಯ್ಯ ಅವರ ವಿರುದ್ದ ಸ್ಪರ್ಧಿಸಿದ್ದಾರೆ ಎಂಬ ಕುರುಬ ಸಮುದಾಯದ ಅಸಮಾಧಾನವನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು.

ಬಳ್ಳಾರಿ ನಗರದಲ್ಲಿ ಕುರುಬ ಸಂಘದ ವಾಣಿಜ್ಯ ಮಳಿಗೆ ಹಾಗೂ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಮಾತನಾಡಿದ ಸಚಿವರು, ನಾವು ರಾಜಕೀಯಗೋಸ್ಕರ ಮಾತನಾಡುತ್ತೇವೆ. ವೈಯಕ್ತಿಕವಾಗಿ ನನಗೂ ಸಿದ್ದರಾಮಯ್ಯ ಅವರಿಗೂ ಏನು ಇರೋದಿಲ್ಲ. ನನಗೂ ಬಿಜೆಪಿಯಿಂದ ಮುಖ್ಯಮಂತ್ರಿಯಾಗುವ ಅವಕಾಶ‌ ಬಂದರೆ ಹಿಂದುಳಿದ ಸಮುದಾಯದಿಂದ ಆಗಲಿ, ರಾಮುಲು ಮುಖ್ಯಮಂತ್ರಿ ಆಗಬೇಕೆಂದು ಸಿದ್ದರಾಮಯ್ಯ ಅವರನ್ನು ಕೇಳಿದರೆ ಅವರೂ ಒಪ್ಪುತ್ತಾರೆ. ಜಾತಿ ವ್ಯವಸ್ಥೆಯಲ್ಲಿ ಇವೆಲ್ಲ ಮಾಡಬೇಕು. ಇವು ರಾಜಕಾರಣದ ತಂತ್ರಗಾರಿಕೆ, ಇದೆಲ್ಲ ಮಾಡಿಕೊಂಡು ಹೋದರೆ ಮಾತ್ರ ರಾಜಕಾರಣಕ್ಕೆ ಅರ್ಥ ಬರುತ್ತದೆ ಎಂದರು.

ಸಚಿವ ಶ್ರೀರಾಮುಲು ಮಾತನಾಡಿದರು.

ಹಿಂದುಳಿದ ಜಾತಿಗಳನ್ನು ಒಂದು ಮಾಡುವ ಪ್ರಯತ್ನವನ್ನು ಸಿದ್ದರಾಮಯ್ಯ ಮತ್ತು ನಾವು ಮಾಡುತ್ತಿದ್ದೇವೆ. ಹಿಂದುಳಿದ ಸಮುದಾಯಗಳು ಒಂದಾದರೆ ರಾಜ್ಯ ಮತ್ತು ದೇಶದಲ್ಲಿ ಕ್ರಾಂತಿ ಮಾಡಬಹುದು. ನಮ್ಮಲ್ಲಿ ಒಗ್ಗಟ್ಟು ಪ್ರದರ್ಶನ ಆಗಬೇಕು. ಹಿಂದುಳಿದ ವಿಚಾರ ಬಂದಾಗ ನಾನು ಮತ್ತು ಸಿದ್ದರಾಮಯ್ಯ ಎಲ್ಲರೂ ಕೂಡ ಒಂದೇ ಎಂದರು.

ನಾನು ಯಾರ ವಿರುದ್ಧವೂ ಅಲ್ಲ: ನೀವು ಶ್ರೀ ರಾಮುಲು ಅವರು ಕುರುಬ ಸಮಾಜ ಮತ್ತು ಸಿದ್ದರಾಮಯ್ಯ ವಿರುದ್ದ ಎಂದು ತಿಳಿದುಕೊಳ್ಳಬೇಡಿ. ಸಿದ್ದರಾಮಯ್ಯ ಮತ್ತು ನಾನು ಎರಡೆರಡು ಕ್ಷೇತ್ರದಲ್ಲಿ ನಿಂತು ಒಂದರಲ್ಲಿ ಗೆದ್ದು, ಮತ್ತೊಂದು ಕ್ಷೇತ್ರದಲ್ಲಿ ಸೋತಿದ್ದೇವೆ. ಯಾವುದೇ ವಿಚಾರ ಹೇಳುವುದಕ್ಕೆ ನನಗೆ ಯಾರದ್ದೂ ಭಯವಿಲ್ಲ. ನಾನು ಯಾರಿಗೂ ಗುಲಾಮನಲ್ಲ, ನಾನು ಯಾರ ಕೈಯ್ಯಡಿಯಲ್ಲೂ ಕೆಲಸ ಮಾಡುತ್ತಿಲ್ಲ‌ ಎಂದರು.

ಸಿದ್ದರಾಮಯ್ಯ ಮತ್ತು ನಾನು ವಿರುದ್ಧ ಪಕ್ಷದಲ್ಲಿದ್ದೇವೆ. ಆದರೆ, ನಾವಿಬ್ಬರು ಬಹಳಷ್ಟು ದೋಸ್ತಿಗಳು. ನಾವು ಒಳಗೊಳಗೆ ಏನೋ ಮಾಡಿಕೊಳ್ಳುತ್ತೇವೆ ಎನ್ನುತ್ತಾ ಅಲ್ಲಿದ್ದ ಜನರಿಗೆ ಹಾಸ್ಯ ಚಟಾಕಿ ಹಾರಿಸಿದರು. ಇಬ್ಬರು ರಾಜಕಾರಣದಲ್ಲಿರಬೇಕು. ಒಬ್ಬರು ಇದ್ದು, ಇನ್ನೊಬ್ಬರು ಹೊರಗಡೆ ಹೋಗಬೇಕಾ? ಇಬ್ಬರು ಇರಬೇಕಲ್ಲ ಎಂದು ನೆರೆದ ಜನರನ್ನು ಪ್ರಶ್ನಿಸುತ್ತಾ, ಏನೋ ಮಾಡಿಕೊಂಡು ಇಬ್ಬರು ವಿಧಾನಸಭೆ ಪ್ರವೇಶ ಮಾಡುತ್ತೇವೆ. ಏಕೆ ಯೋಚನೆ ಮಾಡುತ್ತೀರಿ ಎಂದು ಹೇಳಿದರು.

ಸಿದ್ದರಾಮಾನಂದ ಸ್ವಾಮಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದರು. ಶಾಸಕ ಬಿ.ನಾಗೇಂದ್ರ, ಮೇಯರ್ ರಾಜೇಶ್ವರಿ, ಕುರುಬ ಸಂಘದ ಅಧ್ಯಕ್ಷ ಎರ್ರೆಗೌಡ, ಬುಡಾ ಅಧ್ಯಕ್ಷ ಪಾಲಣ್ಣ ಸೇರಿದಂತೆ ಇತರರು ಇದ್ದರು.

ಇದನ್ನೂ ಓದಿ : ನರೇಂದ್ರ ಮೋದಿ ಹುಟ್ಟಿರೋದೆ ಹಿಂದೂರಾಷ್ಟ್ರ ನಿರ್ಮಾಣಕ್ಕೆ.. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

Last Updated : Aug 16, 2022, 1:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.