ETV Bharat / city

ವಿನಯ್ ಕುಲಕರ್ಣಿ ಬಿಡುಗಡೆ; ಚಿನ್ನದ ರಾಖಿಯೊಂದಿಗೆ ಅಣ್ಣನ ಸ್ವಾಗತಿಸಲು ಜೈಲಿಗೆ ಬಂದ ಶಾಸಕಿ ಹೆಬ್ಬಾಳ್ಕರ್

author img

By

Published : Aug 21, 2021, 11:36 AM IST

Updated : Aug 21, 2021, 11:57 AM IST

ಮಾಜಿ ಸಚಿವ ವಿನಯ್ ಕುಲಕರ್ಣಿ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಅವರನ್ನು ಸ್ವಾಗತಿಸಲು ಬೆಳಗಾವಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಚಿನ್ನದ ರಾಖಿ ಜೊತೆಗೆ ಜೈಲಿಗೆ ಆಗಮಿಸಿದ್ದಾರೆ. ಸಹೋದರತ್ವದ ಸಂಕೇತವಾಗಿರುವ ರಕ್ಷಾ ಬಂಧನ ಹಬ್ಬ ನಾಳೆ ಇದೆ. ಆದರೆ ವಿನಯ್ ಬಿಡುಗಡೆ ಬಳಿಕ ಬೆಂಗಳೂರಿಗೆ ತೆರಳಲಿದ್ದಾರೆ. ಹೀಗಾಗಿ ವಿನಯ್ ಹೊರಬರುತ್ತಿದ್ದಂತೆ ಇಂದೇ ರಾಖಿ ಕಟ್ಟಿ ಶುಭ ಕೋರಿದ್ದಾರೆ.

Tight police bandobast around hindalga prison
ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ಮಾಜಿ ಸಚಿವ ವಿನಯ್​ ಕುಲಕರ್ಣಿ ಅಣ್ಣನನ್ನು ಬರಮಾಡಿಕೊಳ್ಳಲು ಹಿಂಡಲಗಾ ಬಂದಿರುವುದಾಗಿ ಶಾಸಕಿ‌ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ನಾಳೆ ರಕ್ಷಾ ಬಂಧನ ಆಚರಣೆ ಇರುವ ಹಿನ್ನೆಲೆ ಇಂದೇ ವಿನಯ್​ ಅವರಿಗೆ ಜೈಲಿನ ಆವರಣದಲ್ಲಿ ರಾಖಿ ಕಟ್ಟಲು ಹೆಬ್ಬಾಳ್ಕರ್​ ಮುಂದಾಗಿದ್ದಾರೆ. ಚಿನ್ನದ ರಾಖಿ ಹಿಡಿದು ಅವರನ್ನು ಸ್ವಾಗತಿಸಲು ಜೈಲಿಗೆ ಬಂದಿದ್ದಾರೆ.

ಧಾರವಾಡ ಜಿ.ಪಂ ಸದಸ್ಯ ಯೋಗೀಶ್​ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ವಿನಯ್ ಕುಲಕರ್ಣಿ ಬಿಡುಗಡೆ ಆಗಿದ್ದು, ಅವರನ್ನು ಸ್ವಾಗತಿಸಲು ಬೆಳಗಾವಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಚಿನ್ನದ ರಾಖಿ ಜೊತೆಗೆ ಜೈಲಿಗೆ ಆಗಮಿಸಿದ್ದಾರೆ. ಸಹೋದತ್ವದ ಸಂಕೇತವಾಗಿರುವ ರಕ್ಷಾ ಬಂಧನ ಹಬ್ಬ ನಾಳೆ ಇದೆ. ಆದರೆ ವಿನಯ್ ಬಿಡುಗಡೆ ಬಳಿಕ ಬೆಂಗಳೂರಿಗೆ ತೆರಳಲಿದ್ದಾರೆ. ಹೀಗಾಗಿ ವಿನಯ್ ಹೊರಬರುತ್ತಿದ್ದಂತೆ ಇಂದೇ ರಾಖಿ ಕಟ್ಟಿ, ಶುಭ ಕೋರಿದ್ದಾರೆ ಶಾಸಕಿ ಹೆಬ್ಬಾಳ್ಕರ್. ವಿನಯ್ ಕುಲಕರ್ಣಿ ಅವರಿಗಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಚಿನ್ನದ ರಾಖಿ ತಂದಿದ್ದಾರೆ.

ಹಿಂಡಲಗಾ ಜೈಲಿನಿಂದ ಮಾಜಿ ಸಚಿವ ವಿನಯ್ ಕುಲಕರ್ಣಿ ಬಿಡುಗಡೆಯಾಗಿದ್ದು, ಮುಂಜಾಗ್ರತ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಮಾಜಿ ಸಚಿವ ವಿನಯ್​​ ಕುಲಕರ್ಣಿ ಸ್ವಾಗತಕ್ಕೆ ತಾಲೂಕಿನ ಹಿಂಡಲಗಾ ಜೈಲಿಗೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾಧ್ಯಮದವರೊಂದಿಗೆ ಮಾತನಾಡಿ, ವಿನಯ್​ ಕುಲಕರ್ಣಿ ನನ್ನ ಹಿರಿಯ ಸಹೋದರ, ಇವತ್ತು ಅವರು ಬೇಲ್ ಮೇಲೆ ಹೊರಗಡೆ ಬರುತ್ತಿದ್ದಾರೆ. ಹೀಗಾಗಿ ಅವರನ್ನು ಬರಮಾಡಿಕೊಳ್ಳಲು ಬಂದಿದ್ದೇನೆ. ರಾಜಕೀಯೇತರವಾಗಿ ನನಗೆ ಮತ್ತು ವಿನಯ್​ ಅಣ್ಣನಿಗೆ ಸಂಬಂಧವಿದೆ. ಹೀಗಾಗಿ ಅವರಿಗೆ ಧೈರ್ಯ ತುಂಬಲು ತಂಗಿಯಾಗಿ ಬಂದಿರುವುದಾಗಿ ಹರ್ಷ ವ್ಯಕ್ತಪಡಿಸಿದರು.

ಹಿಂಡಲಗಾ ಜೈಲಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಹಿಂಡಲಗಾ ಜೈಲಿನ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್:

ಜಿಲ್ಲಾ ಪಂ‌ಚಾಯತ್​ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಇಂದು ಬಿಡುಗಡೆ ಹಿನ್ನೆಲೆ ಹಿಂಡಲಗಾ ಜೈಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕಳೆದ 9 ತಿಂಗಳಿಂದ ವಿನಯ್​ ಕುಲಕರ್ಣಿ ಹಿಂಡಲಗಾ ಜೈಲಿನಲ್ಲಿದ್ದರು. ಸುಪ್ರೀಂಕೋರ್ಟ್ ಹಾಗೂ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಆದ್ರೆ, ಜಾಮೀನು ಮಂಜೂರು ಮಾಡಿ ಎರಡು ದಿನ ಕಳೆದರೂ ಕೂಡ ಸರ್ಕಾರಿ ರಜೆ ಇರುವ ಹಿನ್ನೆಲೆ ಬಿಡುಗಡೆ ವಿಳಂಬವಾಗಿತ್ತು.

ನ್ಯಾಯಾಲಯ ತನ್ನ ಆದೇಶ ಪ್ರತಿಯನ್ನು ಹಿಂಡಲಗಾ ಜೈಲಿಗೆ ಪೋಸ್ಟ್ ಮಾಡಿದೆ. ಸದ್ಯದಲ್ಲೇ ನ್ಯಾಯಾಲಯದ ಆದೇಶ ಪ್ರತಿ ಜೈಲು ಸಿಬ್ಬಂದಿ ಕೈಸೇರಿದ್ದು, ಇದಾದ ಬಳಿಕ ಜಾಮೀನಿನ‌ ಶೂರಿಟಿ ಮುಚ್ಚಳಿಕೆ ಪತ್ರವನ್ನು ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇದಾದ ನಂತರ ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ ವಿನಯ್​ ಬಿಡುಗಡೆ ಆಗಿದ್ದಾರೆ.

ವಿನಯ ಕುಲಕರ್ಣಿ ಬಿಡುಗಡೆ ಹಿನ್ನೆಲೆ ಜೈಲಿನತ್ತ ಧಾರವಾಡ, ಬೆಳಗಾವಿ ಸೇರಿದಂತೆ ಇತರೆ ಕಡೆಯಿಂದ ಅವರ ಅಭಿಮಾನಿಗಳು ಬಂದಿದ್ದಾರೆ. ಈ ಹಿನ್ನೆಲೆ ಹಿಂಡಲಗಾ ಜೈಲಿನ ಹೊರಭಾಗದಲ್ಲಿ ಒಂದು‌ ಕೆಎಸ್‌ಆರ್‌ಪಿ ತುಕಡಿ ಮೊಕ್ಕಾಂ ಹೂಡಿದ್ದು, ಬಿಗಿ ಪೊಲೀಸ್ ಬಂದೋಬಸ್ತ್​ ನಿಯೋಜನೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಎಸಿಪಿ, ಸಿಪಿಐ, ಪಿಎಸ್ಐ ನೇತೃತ್ವದ ತಂಡ ಹಿಂಡಲಗಾ ಜೈಲಿನ ಬಳಿ ಬೀಡುಬಿಟ್ಟಿತ್ತು.

ಬೆಳಗಾವಿಯ ಹಿಂಡಲಗಾ ಜೈಲಿನಿಂದ ವಿನಯ್ ಕುಲಕರ್ಣಿ ಬಿಡುಗಡೆ ಆಗಿದ್ದು, ಅಲ್ಲಿಂದ ಅವರು ನೇರವಾಗಿ ಚೆನ್ನಮ್ಮ ವೃತ್ತದಲ್ಲಿರುವ ರಾಣಿ ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ಬಳಿಕ ಶಿವಬಸವ ನಗರದಲ್ಲಿರುವ ನಾಗನೂರು ರುದ್ರಾಕ್ಷಿ ಮಠಕ್ಕೆ ಭೇಟಿ ನೀಡಿ, ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. ರುದ್ರಾಕ್ಷಿಮಠಕ್ಕೆ ಭೇಟಿ ನೀಡಿದ ಬಳಿಕ ಮಧ್ಯಾಹ್ನ ಬೆಂಗಳೂರಿಗೆ ತೆರಳುವ ಸಾಧ್ಯತೆ ಇದ್ದು, ತಾಲೂಕಿನ ಸಾಂಬ್ರಾ ಏರ್‌ಪೋರ್ಟ್‌ನಿಂದ ಮಧ್ಯಾಹ್ನ 3.40ರ ಫ್ಲೈಟ್‌ಗೆ ಬೆಂಗಳೂರಿಗೆ ತೆರಲಿದ್ದಾರೆ ಎನ್ನಲಾಗ್ತಿದೆ.

Last Updated : Aug 21, 2021, 11:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.