ETV Bharat / city

ಮತ್ತೆ ಆ್ಯಕ್ಟಿವ್ ಆದ ರಮೇಶ್ ‌ಜಾರಕಿಹೊಳಿ: ಸಂಪುಟ ಸೇರಲು ಕಸರತ್ತು!

author img

By

Published : Jun 3, 2021, 3:03 PM IST

ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಮಾಜಿ ಸಚಿರ ರಮೇಶ್​​ ಜಾರಕಿಹೊಳಿ ಸಿ.ಡಿ ಪ್ರಕರಣದ ವಿಚಾರಣೆ ಅಂತಿಮ ಘಟ್ಟಕ್ಕೆ ತಲುಪಿದೆ. ಕ್ಲೀನ್ ಚಿಟ್ ಸಿಗುವ ವಿಶ್ವಾಸದಲ್ಲಿ ಜಾರಕಿಹೊಳಿ‌ ಸಹೋದರರಿದ್ದಾರೆ. ಹೀಗಾಗಿ ಮತ್ತೆ ಆ್ಯಕ್ಟಿವ್ ಆಗಿರುವ ರಮೇಶ ಜಾರಕಿಹೊಳಿ‌ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಕಸರತ್ತು ಆರಂಭಿಸಿದ್ದಾರೆ ಎನ್ನಲಾಗ್ತಿದೆ.

ರಮೇಶ್ ‌ಜಾರಕಿಹೊಳಿ
ರಮೇಶ್ ‌ಜಾರಕಿಹೊಳಿ

ಬೆಳಗಾವಿ: ಸಿ.ಡಿ‌ ಪ್ರಕರಣದಿಂದಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ‌ ನೀಡಿರುವ ರಮೇಶ್ ಜಾರಕಿಹೊಳಿ‌ ಅವರೀಗ ಮತ್ತೆ ಸಂಪುಟ ಸೇರಲು ಕಸರತ್ತು ಆರಂಭಿಸಿದ್ದಾರೆ. ಸಹೋದರನಿಗೆ ಮತ್ತೆ ಸಚಿವ ಸ್ಥಾನ ಕಲ್ಪಿಸುವ ನಿಟ್ಟಿನಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಕೂಡ ರಾಜ್ಯಮಟ್ಟದಲ್ಲಿ ಲಾಬಿ ಆರಂಭಿಸಿದ್ದಾರೆ.

ಸಿ.ಡಿ. ಪ್ರಕರಣದ ವಿಚಾರಣೆ ಅಂತಿಮ ಘಟ್ಟಕ್ಕೆ ತಲುಪಿದೆ. ಕ್ಲೀನ್ ಚಿಟ್ ಸಿಗುವ ವಿಶ್ವಾಸದಲ್ಲಿ ಜಾರಕಿಹೊಳಿ‌ ಸಹೋದರರಿದ್ದಾರೆ. ಹೀಗಾಗಿ ಮತ್ತೆ ಆ್ಯಕ್ಟಿವ್ ಆಗಿರುವ ರಮೇಶ ಜಾರಕಿಹೊಳಿ‌ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಕಸರತ್ತು ಆರಂಭಿಸಿದ್ದಾರೆ.

ಜೋಶಿ ಭೇಟಿಯಾಗಿ ಗೌಪ್ಯ ಮಾತುಕತೆ: ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ರಮೇಶ್ ಜಾರಕಿಹೊಳಿ‌ ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದರು. ಹುಬ್ಬಳ್ಳಿಯ ಖಾಸಗಿ ಹೋಟೆಲ್​ನಲ್ಲಿ ಜೋಶಿ ಅವರನ್ನು ಭೇಟಿ ಮಾಡಿದ ರಮೇಶ್, ಕೆಲಹೊತ್ತು ಗೌಪ್ಯ ಮಾತುಕತೆ ನಡೆಸಿದ್ದಾರೆ. ಜೋಶಿ ಮೂಲಕ ಕೇಂದ್ರ ನಾಯಕರನ್ನು ಮನವೊಲಿಸಲು ಮುಂದಾಗಿದ್ದಾರೆ ಎಂಬ‌ ಮಾಹಿತಿ ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ.

ಜಲಸಂಪನ್ಮೂಲ ಖಾತೆ ಮೇಲೆ ಕಣ್ಣು: ಮತ್ತೆ ಸಂಪುಟ ಸೇರಲು ಹಪಹಪಿಸುತ್ತಿರುವ ರಮೇಶ್ ಜಾರಕಿಹೊಳಿ‌ ಮರಳಿ ಜಲಸಂಪನ್ಮೂಲ ‌ಖಾತೆ ಪಡೆಯಲು ಯತ್ನಿಸುತ್ತಿದ್ದಾರೆ. ರಾಜೀನಾಮೆ ಬಳಿಕ ಆ ಖಾತೆ ಸಿಎಂ ಬಳಿಯೇ ಇದೆ. ರಮೇಶ್ ಅವರು​​ ಸಿಎಂ ಯಡಿಯೂರಪ್ಪನವರ ಜೊತೆಗೂ ಉತ್ತಮ ಒಡನಾಟ ಹೊಂದಿದ್ದಾರೆ. ಎಸ್ಐಟಿಯಿಂದ ಕ್ಲೀನ್ ಚಿಟ್ ಸಿಕ್ಕ ಬಳಿಕ ಜಲಸಂಪನ್ಮೂಲ ಖಾತೆ ಪಡೆಯಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಪ್ರಹ್ಲಾದ್ ಜೋಶಿ ಅವರ ಮೂಲಕ ಕೇಂದ್ರ ನಾಯಕರ ಮನವೊಲಿಸಲು ರಮೇಶ್ ‌ಜಾರಕಿಹೊಳಿ ಯತ್ನಿಸುತ್ತಿದ್ದಾರೆ ಎನ್ನಲಾಗ್ತಿದೆ.

ಪ್ರತಿಪಕ್ಷ ನಾಯಕರನ್ನು ಎದುರಿಸುವುದೇ ಸವಾಲು: ಈ ಹಿಂದೆ ರಾಸಲೀಲೆ ‌ಹಾಗೂ ನೀಲಿಚಿತ್ರ ವೀಕ್ಷಣೆ ಸಂಬಂಧ ಹಲವು ನಾಯಕರು‌ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅಧಿವೇಶನ ವೇಳೆ ನೀಲಿಚಿತ್ರ ವೀಕ್ಷಿಸಿದ್ದ ಲಕ್ಷ್ಮಣ ಸವದಿ, ಸಿ ಸಿ ಪಾಟೀಲ, ಕೃಷ್ಣಾ ಪಾಲೇಮರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ರಾಸಲೀಲೆ ‌ಸಿ.ಡಿ ಪ್ರಕರಣ ಸಂಬಂಧ ಎಚ್.ವೈ ಮೇಟಿ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಸರ್ಕಾರದ ಅವಧಿ ಮುಗಿಯುವ ತನಕ ಯಾರೊಬ್ಬರೂ ಮರಳಿ ಸಂಪುಟಕ್ಕೆ ಸೇರಿರಲಿಲ್ಲ. ಒಂದು ವೇಳೆ ರಮೇಶ್ ‌ಜಾರಕಿಹೊಳಿ ಹಾಲಿ ಸರ್ಕಾರದಲ್ಲಿ ಸಂಪುಟಕ್ಕೆ ಸೇರಿದ್ರೆ ದಾಖಲೆ ನಿರ್ಮಾಣವಾಗಲಿದೆ. ಮತ್ತೊಂದೆಡೆ ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಅವರು ರಮೇಶ್ ಜಾರಕಿಹೊಳಿ‌ ಬಂಧನಕ್ಕೆ ಆಗ್ರಹಿಸುತ್ತಿದ್ದಾರೆ. ಜಾರಕಿಹೊಳಿ‌ ಸಹೋದರರಿಗೆ ಇದೀಗ ಪ್ರತಿಪಕ್ಷ ನಾಯಕರನ್ನು ಎದುರಿಸುವುದೇ ದೊಡ್ಡ ಸವಾಲಾಗಿದೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.