ETV Bharat / city

ತಾಳೆ ಎಣ್ಣೆ ದರ ಗಗನಕ್ಕೆ ; ಹೋಟೆಲ್, ಬೀದಿಬದಿಯ ವ್ಯಾಪಾರಿಗಳಿಗೆ ಸಂಕಷ್ಟ

author img

By

Published : Feb 8, 2021, 6:44 PM IST

ಸಾಗಾಣಿಕಾ ವೆಚ್ಚವೂ ಏರಿಕೆಯಾಗಿದ್ದು, ಎಣ್ಣೆಯ ಬೆಲೆ ಗಗನಕ್ಕೇರಲು ಕಾರಣ ಎಂಬುದು ಹೋಲ್​ಸೇಲ್ ಮಳಿಗೆಗಳ ಮಾಲೀಕರ ಅಭಿಪ್ರಾಯ. ಬೆಳಗಾವಿಗೆ ಎಲ್ಲಾ ರೀತಿಯ ಅಡುಗೆ ಎಣ್ಣೆ ಮುಂಬೈನಿಂದಲೇ ಸರಬರಾಜಾಗುತ್ತಿದೆ..

Palm Oil
ತಾಳೆ ಎಣ್ಣೆ

ಬೆಳಗಾವಿ : ಈ ಸಾರಿಯ ಕೇಂದ್ರ ಬಜೆಟ್‌ನಲ್ಲಿ ತಾಳೆ ಎಣ್ಣೆ ದರ ಮೇಲೆ ಹಾಕಿರುವ ಬೆಲೆ ಏರಿಕೆಯಿಂದಾಗಿ ಹೋಟೆಲ್‌ ಉದ್ಯಮಿಗಳು ಮತ್ತು ಸಣ್ಣಪುಟ್ಟ ಬೀದಿಬದಿ ವ್ಯಾಪಾರ ನಡೆಸ್ತಿದ್ದವರಿಗೂ ಶಾಕ್‌ ನೀಡಿದೆ.

ಈಗಾಗಲೇ ಕೊರೊನಾದಿಂದ ಸಂಕಷ್ಟ ಎದುರಿಸುತ್ತಿರುವ ಹೋಟೆಲ್‌ ಉದ್ಯಮದ ಮೇಲೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ನಾಲ್ಕೈದು ತಿಂಗಳಿಂದಲೂ ತಾಳೆ ಎಣ್ಣೆ ದರ ಏರುತ್ತಿದೆ.

ಇದೀಗ ಈ ಎಣ್ಣೆ ಮೇಲೆ ಕೇಂದ್ರ ಸರ್ಕಾರ ಸೆಸ್ ವಿಧಿಸಿದ್ದರಿಂದಾಗಿ ದರ ಮತ್ತಷ್ಟು ಹೆಚ್ಚಳವಾಗಿದೆ. ಇದರಿಂದಾಗಿ ಎಲ್ಲಾ ಬಗೆಯ ಉಪಹಾರದ ಮೇಲೆ ದರವೂ ಏರಿಕೆಯಾಗಿದ್ದು, ಬಡ ಹಾಗೂ ಮಧ್ಯಮ ವರ್ಗದವರನ್ನು ಸಂಕಷ್ಟಕ್ಕೆ ದೂಡಿದೆ.

ವ್ಯಾಪಾರಕ್ಕೆ ಹೊಡೆತ : ತಾಳೆ ಎಣ್ಣೆ ಸೇರಿ ಇತರ ವಸ್ತುಗಳ ಬೆಲೆಯಲ್ಲೂ ಹೆಚ್ಚಳ ಕಂಡಿದೆ. ಲಾಕ್​​ಡೌನ್ ಸಡಿಲಿಕೆ ನಂತರ ಹೋಟೆಲ್ ಉದ್ಯಮದಲ್ಲಿ ತುಸು ಚೇತರಿಕೆ ಇತ್ತು. ಈಗ ಹೋಟೆಲ್​ ಸಾಮಗ್ರಿಗಳ ದರ ಹೆಚ್ಚಳದಿಂದ ಊಟದಲ್ಲೂ ಬೆಲೆ ಏರಿಸುತ್ತಿರುವ ಕಾರಣ, ಗ್ರಾಹಕರು ಹೋಟೆಲ್​ಗಳತ್ತ ಮುಖ ಮಾಡುತ್ತಿಲ್ಲ. ಇದರಿಂದ ವ್ಯಾಪಾರ ದಿಢೀರ್​ ಕುಸಿತ ಕಂಡಿದೆ.

ಇದನ್ನೂ ಓದಿ...ಪಾಮ್ ಆಯಿಲ್ ಮೇಲೆ ಕೃಷಿ ಸೆಸ್ : ಜನಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆ ಬಿಸಿ!

ರಿಟೇಲ್ ದರದಲ್ಲೂ ಭಾರಿ ಏರಿಕೆ : ಫೆ.1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್​ನಲ್ಲಿ ತಾಳೆ ಎಣ್ಣೆ ಮೇಲೆ ಕೃಷಿ ಹಾಗೂ ಮೂಲ ಸೌಕರ್ಯದ ಸೆಸ್ ವಿಧಿಸಿದ್ದಾರೆ.

ಇದರಿಂದ ಸಹಜವಾಗಿಯೇ ತಾಳೆ ಎಣ್ಣೆಯ ದರದಲ್ಲಿ ಏರಿದೆ. ಬೆಳಗಾವಿಯ ಸಗಟು ಮಳಿಗೆಗಳಲ್ಲಿ ಕೆಜಿ ಎಣ್ಣೆ ದರ ₹115 ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ₹135-₹150 ಆಗಿದೆ.

ಸಾಗಾಣಿಕಾ ವೆಚ್ಚವೂ ಏರಿಕೆಯಾಗಿದ್ದು, ಎಣ್ಣೆಯ ಬೆಲೆ ಗಗನಕ್ಕೇರಲು ಕಾರಣ ಎಂಬುದು ಹೋಲ್​ಸೇಲ್ ಮಳಿಗೆಗಳ ಮಾಲೀಕರ ಅಭಿಪ್ರಾಯ. ಬೆಳಗಾವಿಗೆ ಎಲ್ಲಾ ರೀತಿಯ ಅಡುಗೆ ಎಣ್ಣೆ ಮುಂಬೈನಿಂದಲೇ ಸರಬರಾಜಾಗುತ್ತಿದೆ.

ನಗರ ಪ್ರದೇಶದ ರೀಟೆಲ್ ಮಳಿಗೆಗಳಲ್ಲಿ ತಾಳೆ ಎಣ್ಣೆಯ ದರ ಒಂದಿದ್ರೆ, ಗ್ರಾಮೀಣ ಭಾಗದಲ್ಲಿ ಇನ್ನಷ್ಟು ಹೆಚ್ಚಿಸಲಾಗಿದೆ. ಹೀಗಾಗಿ, ತಾಳೆ ಎಣ್ಣೆಯ ಮೇಲಿನ ಸೆಸ್ ತೆಗೆಯುವಂತೆ ವ್ಯಾಪಾರಿಗಳು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.