ETV Bharat / city

ಕೃಷ್ಣ ಮೇಲ್ದಂಡೆ ಯೋಜನೆ ಅನುಷ್ಠಾನ ವಿಳಂಬದಲ್ಲಿ ಕಾಂಗ್ರೆಸ್ ಅಪರಾಧಿ: ಪಾದಯಾತ್ರೆ ಮಾಡಿ ದೇಹದ ತೂಕ ಮಾತ್ರ ಇಳಿಸಿಕೊಂಡ್ರು - ಕಾರಜೋಳ

author img

By

Published : Dec 23, 2021, 4:04 PM IST

Updated : Dec 23, 2021, 4:37 PM IST

2013 ರಲ್ಲಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡಿ ತಮ್ಮ ದೇಹದ ತೂಕ ಇಳಿಸಿಕೊಂಡರೇ ಹೊರತು ಕೃಷ್ಣ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಜನತೆಯ ಭಾರ ಕಡಿಮೆ ಮಾಡಲಿಲ್ಲ ಎಂದು ಸಚಿವ ಗೋವಿಂದ ಕಾರಜೋಳ ಕಿಡಿಕಾರಿದರು.

govinda karajola
ಸಚಿವ ಗೋವಿಂದ ಎಂ ಕಾರಜೋಳ

ಬೆಳಗಾವಿ: ಕೃಷ್ಣ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕೆ ಒತ್ತಾಯಿಸಿ 2013 ರಲ್ಲಿ ಜನವರಿ 7 ರಿಂದ ಜನವರಿ 14ರ ವರೆಗೆ ಪಾದಯಾತ್ರೆ ಮಾಡಿ ಕಾಂಗ್ರೆಸ್ ನಾಯಕರು ತಮ್ಮ ದೇಹದ ತೂಕ ಇಳಿಸಿಕೊಂಡರೇ ಹೊರತು ಜನತೆಯ ಭಾರ ಕಡಿಮೆ ಮಾಡಲಿಲ್ಲ. ಈ ವಿಷಯದಲ್ಲಿ ಅಪರಾಧಿ ಸ್ಥಾನದಲ್ಲಿರುವುದು ಕಾಂಗ್ರೆಸ್ ಹೊರತು ಬಿಜೆಪಿ ಅಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ ಕಾರಜೋಳ ವಿಧಾನ ಪರಿಷತ್ತಿನಲ್ಲಿ ವ್ಯಂಗ್ಯವಾಡಿದರು.

ಪರಿಷತ್ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್​​ನ ಪರಿಷತ್ ಸದಸ್ಯರದಾದ ಪ್ರಕಾಶ್ ಕೆ. ರಾಠೋಡ್​​ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡುತ್ತಾ, 2013 ರಲ್ಲಿ ಕಾಂಗ್ರೆಸ್​ನವರ ಪಾದಯಾತ್ರೆ ಸಂದರ್ಭದಲ್ಲಿ ವಿಶೇಷ ಪುರವಣಿ ಪ್ರಕಟಿಸಿ ಅಬ್ಬರದ ಪ್ರಚಾರ ಮಾಡಿದ ಕಾಂಗ್ರೆಸ್ ಪಕ್ಷ ಕೃಷ್ಣ ಕೊಳ್ಳದ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ 10,000 ಕೋಟಿ ವೆಚ್ಚ ಮಾಡುವುದಾಗಿ ಘೋಷಿಸಿತ್ತು.

ಆರೂವರೆ ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಮತ್ತು ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಗೆ ಖರ್ಚು ಮಾಡಿದ್ದು, ಕೇವಲ 7,728 ಕೋಟಿ ರೂಪಾಯಿಗಳು ಎಂದು ವಿವರಿಸಿದರು.

ವಿಧಾನ ಪರಿಷತ್​ನಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಎಂ ಕಾರಜೋಳ

ಇದನ್ನೂ ಓದಿ: ಆಗ ಸಹಿ ಈಗೇಕೆ ವಿರೋಧ?..ಬಿಜೆಪಿ 'ದಾಖಲೆ' ಬಾಣಕ್ಕೆ 'ಕೈ' ಗಲಿಬಿಲಿ..ಮಾಧುಸ್ವಾಮಿ-ಸಿದ್ದರಾಮಯ್ಯ 'ಮತಾಂತರ' ಜಟಾಪಟಿ

ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲ್ ಅವರು ವಿಜಯಪುರ ಜಿಲ್ಲೆಯವರಾಗಿದ್ದರೂ ಕೃಷ್ಣ ಮೇಲ್ದಂಡೆ ಯೋಜನೆಗೆ ಯಾವುದೇ ಕಾಳಜಿ ತೋರಲಿಲ್ಲ ಎಂದು ಗೋವಿಂದ ಕಾರಜೋಳ ವಿಷಾದ ವ್ಯಕ್ತಪಡಿಸಿದರು.

ಯೋಜನೆಯ ಅಂತಾರಾಜ್ಯ ವಿವಾದ ಸುಪ್ರೀಂಕೋರ್ಟ್​ನಲ್ಲಿದೆ

ಕೃಷ್ಣ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಣೆ ಮಾಡಲು ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಾಶ್ ರಾಠೋಡ್ ಕೇಳಿದ ಪ್ರಶ್ನೆಗೆ ಉತ್ತರವಾಗಿ, ಯಾವುದೇ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸಬೇಕಾದರೆ ಅಂತಾರಾಜ್ಯ ಜಲವಿವಾದ ಪೂರ್ಣವಾಗಿ ಬಗೆಹರಿದಿರಬೇಕು.

ಆದರೆ, ಕೃಷ್ಣ ಮೇಲ್ದಂಡೆ ಯೋಜನೆಯ ಅಂತಾರಾಜ್ಯ ವಿವಾದ ಸುಪ್ರೀಂಕೋರ್ಟ್​ನಲ್ಲಿ ಇರುವುದರಿಂದ ವಿಳಂಬವಾಗಿದೆ. ಯೋಜನೆಯ ನ್ಯಾಯಾಧೀಕರಣದ ಅಂತಿಮ ತೀರ್ಪು ಗೆಜೆಟ್​ನಲ್ಲಿ ಪ್ರಕಟಗೊಂಡ ತಕ್ಷಣ ಈ ವಿವಾದ ಬಗೆ ಹರಿಯುತ್ತದೆ.

ಅದಾದ ನಂತರ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸಲು ಅನುಕೂಲವಾಗುವಂತೆ ಪೂರ್ವ ಸಿದ್ಧತಾ ವರದಿಯನ್ನು ದಿನಾಂಕ 12-11-2020 ರಂದು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆಯೆಂದು ಸಚಿವರು ವಿವರಿಸಿದರು.

ಹೆಚ್ಚುವರಿ ಅನುದಾನಕ್ಕೆ ನಿರ್ಧಾರ

ಕೃಷ್ಣ ಮೇಲ್ದಂಡೆ ಯೋಜನೆ 3ನೇ ಹಂತದ ಭೂಸ್ವಾಧೀನ ಕಾಮಗಾರಿಗಳಿಗೆ ಪ್ರಸ್ತುತ ಮುಂಗಡ ಪತ್ರದಲ್ಲಿ ಎಷ್ಟು ಅನುದಾನ ನೀಡಲಾಗಿದೆ ಎಂದು ಕೇಳಿದ ಮೂಲ ಪ್ರಶ್ನೆಗೆ ಉತ್ತರವನ್ನು ಈಗಾಗಲೇ ಮುಂಗಡ ಪತ್ರದಲ್ಲಿ 970 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿತ್ತು.

ದಿನಾಂಕ 24-08-2021 ರಂದು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ 2,500 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ಒದಗಿಸಲು ನಿರ್ಧರಿಸಲಾಗಿದೆ ಹಾಗೂ ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಬಸವರಾಜ ಬೊಮ್ಮಾಯಿಯವರ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಮೂರು ಸಾರಿ ನವದೆಹಲಿಗೆ ಪ್ರಯಾಣ ಮಾಡಿ ಕೇಂದ್ರ ಜಲಶಕ್ತಿ ಸಚಿವರು ಮತ್ತು ಸಚಿವಾಲಯದ ಉನ್ನತ ಅಧಿಕಾರಿಗಳೊಂದಿಗೆ ಕರ್ನಾಟಕದ ಯೋಜನೆಗಳನ್ನು ತ್ವರಿತವಾಗಿ ಅನುಮೋದಿಸುವಂತೆ ಕೋರಲಾಗಿದೆ. ದಿನಾಂಕ 04-12-2021 ರಂದು ನಾನೂ ಸಹ ಕೇಂದ್ರ ಜಲಶಕ್ತಿ ಸಚಿವರಿಗೆ ಪತ್ರ ಬರೆದು ಕೃಷ್ಣ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದೇನೆ ಎಂದು ತಿಳಿಸಿದರು.

Last Updated : Dec 23, 2021, 4:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.