ETV Bharat / city

ಬೆಳಗಾವಿ ಸಿಟಿ ರೌಂಡ್ಸ್ ಹಾಕಿದ ಸಚಿವ ಭೈರತಿ ಬಸವರಾಜ್; ಕಾಮಗಾರಿ ಪರಿಶೀಲನೆ

author img

By

Published : Jan 7, 2021, 10:42 PM IST

ಬೆಳಗಾವಿಯ ನೆಹರು ನಗರದಲ್ಲಿರುವ ಎಪಿಎಂಸಿ ಕಾಂಪ್ಲೆಕ್ಸ್, ಬಸ್ ನಿಲ್ದಾಣ, ಪೌರಕಾರ್ಮಿಕರಿಗೆ ನಿರ್ಮಿಸಲಾದ ಮನೆಗಳ ಗುಣಮಟ್ಟವನ್ನು ಸಚಿವ ಭೈರತಿ ಬಸವರಾಜ್ ಪರಿಶೀಲನೆ ನಡೆಸಿದರು.

ಭೈರತಿ ಬಸವರಾಜ್
ಭೈರತಿ ಬಸವರಾಜ್

ಬೆಳಗಾವಿ: ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಎರಡು ದಿನಗಳ ಕಾಲ ಬೆಳಗಾವಿ ಪ್ರವಾಸ ಕೈಗೊಂಡಿದ್ದು, ಇಂದು ಮಧ್ಯಾಹ್ನದಿಂದ ಸಂಜೆಯವರೆಗೆ ನಗರದಲ್ಲಿ ರೌಂಡ್ಸ್ ಹಾಕಿ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು.

ಬೆಳಗಾವಿಯ ನೆಹರು ನಗರದಲ್ಲಿರುವ ಎಪಿಎಂಸಿ ಕಾಂಪ್ಲೆಕ್ಸ್, ಬಸ್ ನಿಲ್ದಾಣ, ಪೌರಕಾರ್ಮಿಕರಿಗೆ ನಿರ್ಮಿಸಲಾದ ಮನೆಗಳ ಗುಣಮಟ್ಟವನ್ನು ಸಚಿವರು ಪರಿಶೀಲನೆ ನಡೆಸಿದರು. ಬಳಿಕ ನಗರದ ಇತರ ಪ್ರದೇಶಗಳಿಗೆ ಭೇಟಿ ನೀಡಿ ಶುಚಿತ್ವವನ್ನು ವೀಕ್ಷಿಸಿದರು. ಕೆಲವಡೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯದ ಮಹಾನಗರ ಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪೌರಕಾರ್ಮಿಕರಿಗೆ ಉಚಿತವಾಗಿ ಮನೆ ನಿರ್ಮಿಸಿ ಕೊಡಲಾಗುತ್ತಿದೆ. ಬೆಳಗಾವಿ ಮಹಾನಗರದಲ್ಲಿ ಮೊದಲ ಹಂತದಲ್ಲಿ 48 ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. ಎರಡನೇ ಹಂತದಲ್ಲಿ 148 ಮನೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದರು.

ಬೆಳಗಾವಿ ಸಿಟಿ ರೌಂಡ್ಸ್ ಹಾಕಿದ ಸಚಿವ ಭೈರತಿ ಬಸವರಾಜ್

ನಗರದಲ್ಲಿ ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ 200 ಮಳಿಗೆಗಳ ಕಾಮಗಾರಿಯ ಗುಣಮಟ್ಟ ಪರಿಶೀಲನೆ ಮಾಡಿದ್ದೇನೆ. ಎರಡು ತಿಂಗಳಲ್ಲಿ ಹರಾಜು ಮೂಲಕ ಮಳಿಗೆಗಳನ್ನು ನೀಡಲಾಗುವುದು. ಮಹಾನಗರ ಪಾಲಿಕೆಗೆ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ. ಅಲ್ಲದೇ ಸ್ಮಾರ್ಟ್‍ಸಿಟಿ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಸಾರ್ವಜನಿಕರಿಂದ ನಮಗೆ ಸಾಕಷ್ಟು ದೂರುಗಳು ಬಂದಿವೆ. ಹೀಗಾಗಿ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಬೆಳಗಾವಿ ಮಹಾನಗರಕ್ಕೆ ನಗರೋತ್ಥಾನ ಯೋಜನೆಯಡಿ 125 ಕೋಟಿ ರೂ., ಬಿಡುಗಡೆ ಮಾಡಿದ್ದೇನೆ. ಅಲ್ಲದೇ ಕ್ರಿಯಾ ಯೋಜನೆಗೂ ಒಪ್ಪಿಗೆ ಸೂಚಿಸಿದ್ದೇನೆ. ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರ್ಗಿಯಲ್ಲಿ ನಿರಂತರ ಕುಡಿಯುವ ನೀರು ಯೋಜನೆ ಜಾರಿಗೆಗೆ ಯೋಜನೆ ಹಮ್ಮಿಕೊಂಡಿದ್ದೇವೆ. 2,800 ಕೋಟಿ ರೂ. ವೆಚ್ಚದ ಈ ಕಾಮಗಾರಿಗೆ ಮುಖ್ಯಮಂತ್ರಿಗಳು ಶೀಘ್ರವೇ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.