ETV Bharat / city

ಸರ್ಕಾರಿ ‌ಕಚೇರಿಯಲ್ಲೂ ಎಂಇಎಸ್‌ನ ಶುಭಂ ಶೆಳಕೆ ಪುಂಡಾಟಿಕೆ

author img

By

Published : May 3, 2022, 10:15 AM IST

Updated : May 3, 2022, 1:23 PM IST

ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದಂತೆ ಭಾಷಾ ವೈಷಮ್ಯ ವಿಷಬೀಜ ಬಿತ್ತಿ ರಾಜಕೀಯ ಲಾಭ ಪಡೆಯುವ ಯತ್ನಕ್ಕೆ ಎಂಇಎಸ್ ಮುಂದಾಗಿದೆ ಎನ್ನಲಾಗ್ತಿದೆ.

MES leader Shubham Shelke
ಶುಭಂ ಶೆಳಕೆ

ಬೆಳಗಾವಿ: ಗಡಿವಿವಾದ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರಿಸುತ್ತಿದ್ದ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಯುವ ಘಟಕದ ಅಧ್ಯಕ್ಷ ಶುಭಂ ಶೆಳಕೆ ಇದೀಗ ಸರ್ಕಾರಿ ಕಚೇರಿಯಲ್ಲೂ ಪುಂಡಾಟ ಪ್ರದರ್ಶಿಸಿರುವುದು ಬೆಳಕಿಗೆ ಬಂದಿದೆ. ಮೂರು ದಿನಗಳ ಹಿಂದೆ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶಿಕ್ಷಣ ಇಲಾಖೆ ಸಿಆರ್‌ಪಿ ಕೌನ್ಸೆಲಿಂಗ್ ವೇಳೆ ಮರಾಠಿ ಶಾಲೆಗೆ ಕನ್ನಡಿಗ ಸಿಆರ್‌ಪಿ ನಿಯೋಜನೆ ಮಾಡಲಾಗಿದೆ. ಮರಾಠಿ ಶಿಕ್ಷಕರ ಮೇಲೆ ಕನ್ನಡ ಹೇರಿಕೆ ಮಾಡಲಾಗ್ತಿದೆ ಎಂದು ಆರೋಪಿಸಿ ಬೆಳಗಾವಿ ಡಿಡಿಪಿಐ ಕಚೇರಿಗೆ ನುಗ್ಗಿ ಶುಭಂ ಪು‌ಂಡಾಟಿಕೆ‌ ಪ್ರದರ್ಶಿಸಿದ್ದಾನೆ. ಶೈಕ್ಷಣಿಕ ಕ್ಷೇತ್ರದಲ್ಲಿ ಭಾಷಾ ವೈಷಮ್ಯದ ವಿಷಬೀಜ ಬಿತ್ತಲು ಎಂಇಎಸ್ ಯತ್ನಿಸುತ್ತಿದೆ. ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಅಧಿಕಾರಿ ಮನವಿ ಪತ್ರ ಕೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಆತ, ಮರಾಠಿ ಶಿಕ್ಷಕರೆಲ್ಲರನ್ನೂ ಸೇರಿಸಿ ಪ್ರತಿಭಟನೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಬೆಳಗಾವಿಯಲ್ಲಿ ನಡೆದಿದ್ದ ಚಳಿಗಾಲ ಅಧಿವೇಶನ ವೇಳೆ ಎಂಇಎಸ್ ಕಾರ್ಯಕರ್ತರು ಪುಂಡಾಟಿಕೆ ಮೆರೆದಿದ್ದರು. ಜೈಲು ಸೇರಿ ಜಾಮೀನಿನ ಮೇಲೆ ಹೊರ ಬಂದರೂ ಹಳೆಯ ಚಾಳಿ ನಿಲ್ಲಸಿಲ್ಲ. ದೇಶದ್ರೋಹ ಪ್ರಕರಣ ದಾಖಲಿಸಿ ಚಾರ್ಜ್‌ಶೀಟ್ ಸಲ್ಲಿಕೆ ವೇಳೆ ದೇಶದ್ರೋಹದ ಸೆಕ್ಷನ್ ಕೈ ಬಿಡಲಾಗಿತ್ತು. ನಿನ್ನೆಯಷ್ಟೇ ಶುಭಂ ಶೆಳಕೆ ವಿವಾದಿತ ನಕ್ಷೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು.

ಪೋಸ್ಟ್ ಡಿಲೀಟ್ ಮಾಡುವಂತೆ ಶುಭಂ ಶೆಳಕೆಗೆ ಪೊಲೀಸರು ವಾರ್ನಿಂಗ್ ಮಾಡಿದ್ದಾರೆ. ಪೊಲೀಸರು ಎಚ್ಚರಿಕೆ ನೀಡಿದರೂ ಪೋಸ್ಟ್ ಡಿಲೀಟ್ ಮಾಡಿಲ್ಲ. ಈ ಹಿಂದೆ ಕೋವಿಡ್ ವೇಳೆ ಜಿಲ್ಲಾಸ್ಪತ್ರೆಗೆ ನುಗ್ಗಿ ದಬ್ಬಾಳಿಕೆ ಪ್ರದರ್ಶಿಸಿದ್ದ. ಹೀಗಾಗಿ ಕಠಿಣ ಕ್ರಮಕ್ಕೆ ಕನ್ನಡಿಗರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ವಿವಾದಿತ ಪೋಸ್ಟ್ ಶೇರ್ ಮಾಡಿ ಮತ್ತೆ ಎಂಇಎಸ್ ಪುಂಡಾಟಿಕೆ

Last Updated : May 3, 2022, 1:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.