ETV Bharat / city

Winter session in Belagavi: 2ನೇ ವಾರವೂ ಪ್ರತಿಪಕ್ಷದ ಗದ್ದಲಕ್ಕೆ ಬಲಿಯಾಗುವುದೇ ಅಧಿವೇಶನ?

author img

By

Published : Dec 19, 2021, 1:21 PM IST

ಮಂಗಳವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಕೆಲವೊಂದಿಷ್ಟು ಹೋರಾಟಗಳ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ವಿವಿಧ ಪ್ರಮುಖ ವಿಚಾರವನ್ನು ಮುಂದಿಟ್ಟು ನಾವು ಹೋರಾಟ ನಡೆಸುತ್ತಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಂಡಿದ್ದಾರೆ.

Winter session in Belagavi
ಬೆಳಗಾವಿ ಅಧಿವೇಶನ

ಬೆಳಗಾವಿ: ಬೆಳಗಾವಿ ಅಧಿವೇಶನದ 2ನೇ ವಾರದ ಕಲಾಪಗಳು ನಾಳೆ(ಸೋಮವಾರ) ಆರಂಭವಾಗಲಿದ್ದು, ಪ್ರತಿಪಕ್ಷಗಳ ವಿವಿಧ ಹೋರಾಟಕ್ಕೆ ಅಧಿವೇಶನ ಬಲಿಯಾಗುವ ಸಾಧ್ಯತೆ ಹೆಚ್ಚಾಗಿ ಗೋಚರಿಸುತ್ತಿದೆ.

ಅಧಿವೇಶನದ ಮೊದಲ ವಾರದ ಕೊನೆಯ ಎರಡು ದಿನಗಳು ಪ್ರತಿಪಕ್ಷಗಳ ಗದ್ದಲಕ್ಕೆ ಸಾಕ್ಷಿಯಾದವು. ಕೆಆರ್ ಪುರದಲ್ಲಿ ಅಣ್ಣಯ್ಯಪ್ಪ ಎಂಬವರಿಗೆ ಸೇರಿದ ಜಮೀನನ್ನು ಕಬಳಿಸಿರುವ ಪ್ರಕರಣ ವಿಚಾರವಾಗಿ ವಿಧಾನಸಭೆ ಹಾಗೂ ವಿಧಾನ ಪರಿಷತ್​​ನಲ್ಲಿ ವಿಚಾರ ಮಂಡಿಸಿದ ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಸಚಿವ ಭೈರತಿ ಬಸವರಾಜ್​​ ರಾಜೀನಾಮೆ ಇಲ್ಲವೇ, ಅವರ ವಜಾಕ್ಕೆ ಆಗ್ರಹಿಸಿ ಗದ್ದಲ ಎಬ್ಬಿಸಿದ್ದರು. ಇದರಿಂದಾಗಿ ಸುಗಮ ಕಲಾಪಕ್ಕೆ ತಡೆ ಉಂಟಾಗಿತ್ತು.

2ನೇ ವಾರ ಏನೇನು?:

  • ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ನಡೆಸಿರುವ ದಾಂಧಲೆ, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಾಳೆಯಿಂದಲೇ ಉಭಯ ಸದನಗಳಲ್ಲಿಯೂ ಹೋರಾಟ ಆರಂಭಿಸುವ ಸಾಧ್ಯತೆ ಇದೆ.
  • ಭೂಹಗರಣದ ಸಂಬಂಧ ಭೈರತಿ ಬಸವರಾಜ್​​ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಹೋರಾಟ ಒಂದು ತಾರ್ಕಿಕ ಅಂತ್ಯ ಕಾಣುವವರೆಗೂ ಮುಂದುವರಿಸುವುದಾಗಿ ರಾಜ್ಯ ಕಾಂಗ್ರೆಸ್​​ ನಾಯಕರು ಹೇಳಿಕೊಂಡಿದ್ದು, ಸೋಮವಾರವೇ ಈ ವಿಚಾರವನ್ನು ಮುಂದುವರಿಸುವ ಸಾಧ್ಯತೆ ಹೆಚ್ಚಿದೆ.
  • ಬಿಟ್ ಕಾಯಿನ್ ಹಾಗೂ 40% ವಿಚಾರವನ್ನು ಕಾಂಗ್ರೆಸ್ ಪಕ್ಷ ಮೊದಲ ವಾರವೇ ಆರಂಭಿಸಿ, ದೊಡ್ಡ ಮಟ್ಟದ ಹೋರಾಟ ನಡೆಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೆಆರ್ ಪುರ ಭೂಹಗರಣಕ್ಕಿಂತಲೂ ಇದನ್ನ ನಗಣ್ಯವಾಗಿಸಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಮಾಧ್ಯಮಗಳ ಪ್ರಶ್ನೆಗೆ ಸಮರ್ಪಕವಾಗಿ ಉತ್ತರ ನೀಡದ ಪ್ರತಿಪಕ್ಷ ನಾಯಕರು, ನಾವು ಈ ವಿಚಾರದ ಮೇಲೆ ಚರ್ಚೆಗೆ ಸಿದ್ಧವಿದ್ದೇವೆ. ಕಾಲಾವಕಾಶದ ಕೊರತೆ ಇದ್ದು, ಅಧಿವೇಶನವನ್ನು ಇನ್ನಷ್ಟು ದಿನ ವಿಸ್ತರಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದಿದ್ದಾರೆ.

ಕಾಂಗ್ರೆಸ್ ಎರಡು ಪ್ರಮುಖ ವಿಚಾರವನ್ನ ಮರೆತಿದೆ ಎಂಬ ಮಾತು ಕೇಳಿ ಬರುತ್ತಿರುವ ಹಿನ್ನೆಲೆ ಅವೈಚಾರಿಕವಾಗಿ ಮುಂದಿನ ವಾರದ ಅಧಿವೇಶನ ಸಂದರ್ಭ ಎರಡು ವಿಚಾರವನ್ನು ಸಹ ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಒಟ್ಟಾರೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಕರೆದಿರುವ ಅಧಿವೇಶನದಲ್ಲಿ ಪ್ರತಿಪಕ್ಷಗಳು ಕೇವಲ ಗದ್ದಲಕ್ಕೆ ತಮ್ಮನ್ನು ತಾವು ಸೀಮಿತಗೊಳಿಸಿಕೊಂಡಿವೆ ಎಂಬ ಆರೋಪ ಕೇಳಿಬರುತ್ತಿರುವ ಹಿನ್ನೆಲೆ ಮುಂದಿನ ದಿನಗಳಲ್ಲಿ ಮುಜುಗರಕ್ಕೆ ಇನ್ನಷ್ಟು ಒಳಗಾಗಬಾರದು ಎಂಬ ಕಾರಣಕ್ಕೆ ಕೆಲವೊಂದು ಹೋರಾಟವನ್ನು ಕೈಬಿಡುವ ಸಾಧ್ಯತೆ ಇದೆ.

ಮಂಗಳವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು ಕೆಲವೊಂದಿಷ್ಟು ಹೋರಾಟಗಳ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ವಿವಿಧ ಪ್ರಮುಖ ವಿಚಾರವನ್ನು ಮುಂದಿಟ್ಟು ನಾವು ಹೋರಾಟ ನಡೆಸುತ್ತಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಂಡಿದ್ದು, ಮುಂದಿನ ವಾರದ ಕಾಂಗ್ರೆಸ್ ಹೋರಾಟ ಯಾವ ರೀತಿ ಇರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ಕೈಗೊಳ್ಳುವ ಹೋರಾಟ ಸಂಬಂಧ ನಾಳೆ ಕೈ ನಾಯಕರ ಚರ್ಚೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.