ETV Bharat / city

ಜೈಲಿನಿಂದ ವಿನಯ್ ಕುಲಕರ್ಣಿ ಬಿಡುಗಡೆ.. ನಿಷೇಧಾಜ್ಞೆ ನಡುವೆ ಅದ್ಧೂರಿ ಮೆರವಣಿಗೆ

author img

By

Published : Aug 21, 2021, 11:55 AM IST

Updated : Aug 21, 2021, 1:36 PM IST

ಜಿಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ಜೈಲು ಸೇರಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಇಂದು ಬಿಡುಗಡೆಯಾಗಿದ್ದಾರೆ.

ವಿನಯ್ ಕುಲಕರ್ಣಿ ಜೈಲಿನಿಂದ ಬಿಡುಗಡೆ
ವಿನಯ್ ಕುಲಕರ್ಣಿ ಜೈಲಿನಿಂದ ಬಿಡುಗಡೆ

ಬೆಳಗಾವಿ: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಇಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಹಿಂಡಲಗಾ ಜೈಲಿನಿಂದ ಬಿಡುಗಡೆಯಾದರು. ಜೈಲಿನ ಮುಂದೆ ಸೇರಿದ್ದ ಬೆಂಬಲಿಗರು ಹೂ -ಮಳೆ ಸುರಿಸುವ ಮೂಲಕ ಮಾಜಿ ಸಚಿವರಿಗೆ ಅದ್ಧೂರಿ ಸ್ವಾಗತ ನೀಡಿದ್ದಾರೆ.

ವಿನಯ್ ಕುಲಕರ್ಣಿ ಜೈಲಿನಿಂದ ಬಿಡುಗಡೆ.. ಅದ್ಧೂರಿ ಸ್ವಾಗತ

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಕಳೆದ ಆಗಸ್ಟ್ 11ರಂದು ಸುಪ್ರೀಂಕೋರ್ಟ್ ಕೊಲೆ ಆರೋಪ ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು ನೀಡಿತ್ತು. ಆದರೆ, ಸಾಕ್ಷ್ಯ ನಾಶ ಪ್ರಕರಣದಲ್ಲಿ ಜಾಮೀನು ಸಿಕ್ಕರಲಿಲ್ಲ.

ಆಗಸ್ಟ್ 19 ರಂದು ಬೆಂಗಳೂರಿನ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯ ಸಾಕ್ಷ್ಯ ನಾಶ ಆರೋಪ ಪ್ರಕರಣದಲ್ಲಿಯೂ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಜಾಮೀನು ಆದೇಶದ ಪ್ರತಿ ಜೈಲು ಅಧಿಕಾರಿಗಳ ಕೈ ಸೇರಿದ ಬಳಿಕ ವಿನಯ್ ಕುಲಕರ್ಣಿ ಜೈಲಿನಿಂದ ಹೊರಬಂದಿದ್ದಾರೆ.

ಹಿಂಡಲಗಾ ಗಣಪತಿ ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸಿದ ವಿನಯ್ ಕುಲಕರ್ಣಿ

ಜೈಲಿನಿಂದ ಬಿಡುಗಡೆ ಆದ ವಿನಯ್ ಕುಲಕರ್ಣಿ ಅವರು ಹಿಂಡಲಗಾ ಗಣಪತಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಜೈಲಿನಿಂದ ದೇವಸ್ಥಾನವರೆಗೆ ತೆರೆದ ವಾಹನದಲ್ಲಿ ಬೃಹತ್ ಮೆರವಣಿಗೆ ನಡೆಯಿತು. ನಾಲ್ಕು ಕಿಮೀವರೆಗೆ ನಡೆದ ಮೆರವಣಿಗೆ ಅವರ ಅಭಿಮಾನಿಗಳು ಹೂಮಳೆ ಗೈದರು. ವಿನಯ್ ಪರ ಘೋಷಣೆ ಕೂಗಿ ಸಂಭ್ರಮಿಸಿದರು. ವಿನಯ್ ಅಭಿಮಾನಿಗಳ ಕಡೆ ಕೈಬಿಸಿ ಕೃತಜ್ಞತೆ ಸಲ್ಲಿಸಿದರು.

ವಿನಯ್ ಕುಲಕರ್ಣಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಾಥ್ ನೀಡಿದರು. ನಂತರ ರಾಣಿ ಚೆನ್ನಮ್ಮ ವೃತ್ತಕ್ಕೆ ಆಗಮಿಸಿ ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿದರು. ಬಳಿಕ ನಾಗನೂರು ರುದ್ರಾಕ್ಷಿ ಮಠಕ್ಕೆ ಭೇಟಿ ನೀಡಿದ ಅವರು ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಾಜಿ ಸಚಿವ ಪ್ರಕಾಶ ಹುಕ್ಕೇರಿ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಾಥ್ ನೀಡಿದರು.

ಹಿಂಡಲಗಾ ಗಣಪತಿ ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸಿದ ವಿನಯ್ ಕುಲಕರ್ಣಿ
ಹಿಂಡಲಗಾ ಗಣಪತಿ ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸಿದ ವಿನಯ್ ಕುಲಕರ್ಣಿ

ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣ ಹೆಚ್ಚಿರುವ ಹಿನ್ನೆಲೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ವೀಕೆಂಡ್ ಕರ್ಫ್ಯೂ ಇದ್ದರೂ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿ ಸ್ವಾಗತ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಬಿಡುಗಡೆಯಾದರೂ ಧಾರವಾಡಕ್ಕೆ ಎಂಟ್ರಿ ಇಲ್ಲ: ಜೈಲಿನಿಂದ ಬಿಡುಗಡೆ ಆಗಿರುವ ವಿನಯ್ ಕುಲಕರ್ಣಿ ಧಾರವಾಡಕ್ಕೆ ಭೇಟಿ ನೀಡುವಂತಿಲ್ಲ. ಏಕೆಂದರೆ ಸುಪ್ರೀಂಕೋರ್ಟ್ ಕೊಲೆ ಆರೋಪ ಪ್ರಕರಣದಲ್ಲಿ ಜಾಮೀನು ನೀಡುವ ವೇಳೆ ಷರತ್ತು ವಿಧಿಸಿದೆ. ಹೀಗಾಗಿ ವಿನಯ್ ಕುಲಕರ್ಣಿಗೆ ಜಾಮೀನು ಸಿಕ್ಕರೂ ಧಾರವಾಡ ಪ್ರವೇಶಿಸಲು ಅವಕಾಶ ಇಲ್ಲದಂತಾಗಿದೆ.

ಪ್ರಕರಣದ ಹಿನ್ನೆಲೆ : 2016ರ ಜೂನ್ 15ರಂದು ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ನಡೆದಿತ್ತು. ಜಿಮ್​​ನಿಂದ ಹೊರ ಬರುವ ವೇಳೆ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಆರೋಪ ಕೇಳಿ ಬಂದ ಹಿನ್ನೆಲೆ, ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಅದರಂತೆ ತನಿಖೆ ನಡೆಸಿದ್ದ ಸಿಬಿಐ ಆರೋಪಿ ವಿನಯ ಕುಲಕರ್ಣಿಯನ್ನು ನವೆಂಬರ್ 5ರಂದು ವಶಕ್ಕೆ ಪಡೆದಿತ್ತು. ಅಂದಿನಿಂದ ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನದಲ್ಲಿದ್ದರು.

Last Updated : Aug 21, 2021, 1:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.