ETV Bharat / city

ಟ್ರ್ಯಾಕ್ಟರ್ ಮೂಲಕ ಸುವರ್ಣಸೌಧ ಪ್ರವೇಶಕ್ಕೆ ಪೊಲೀಸರ ಅಡ್ಡಿ: ಹಕ್ಕುಚ್ಯುತಿ ಮಂಡಿಸಿದ ಕಾಂಗ್ರೆಸ್​

author img

By

Published : Dec 17, 2021, 2:31 PM IST

ಈ ವೇಳೆ ಸಚಿವ ನಾರಾಯಣಗೌಡ, ಕಾಂಗ್ರೆಸ್ ಸದಸ್ಯರನ್ನು ಕೆಣಿಕಿದರು. ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು, ಲಘುವಾಗಿ ಮಾತನಾಡಬೇಡಿ, ನಾವು ಹೇಗೆ ಬರಬೇಕು ಎಂದು ನೀವು ಹೇಳಬೇಕಿಲ್ಲ, ಮೈಮೇಲೆ‌ ಎಚ್ಚರ ಇದೆಯಾ? ನೀವು ಯಾರು ನಮಗೆ ಹೇಳಲು? ಮಂತ್ರಿ ಅನ್ನಿಸಿಕೊಳ್ಳುವ ಯೋಗ್ಯತೆ ಇಲ್ಲ, ಕನಿಷ್ಟ ಜ್ಞಾನ ಇಲ್ಲದ ಮಂತ್ರಿ, ನಾವು ರಿಕ್ಷಾದಲ್ಲಿ ಬೇಕಾದರೂ ಬರಲಿದ್ದೇವೆ. ನಾವು ಯಾವುದರಲ್ಲಿ ಬೇಕಾದರೂ ಬರಲಿದ್ದೇವೆ ಅದನ್ನು ಕೇಳಲು ನೀವು ಯಾರು? ಮಂತ್ರಿ ಅನ್ನಿಸಿಕೊಳ್ಳಲು ಯೋಗ್ಯತೆ ಇಲ್ಲ, ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು..

Privilege Motion
ಹಕ್ಕುಚ್ಯುತಿ ಮಂಡಿಸಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್

ಬೆಳಗಾವಿ : ನಗರದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸುವರ್ಣ ವಿಧಾನಸೌಧಕ್ಕೆ ಟ್ರ್ಯಾಕ್ಟರ್ ಮೂಲಕ ತೆರಳಿದ ಪರಿಷತ್ ಸದಸ್ಯರನ್ನು ಗೇಟ್​​ನಲ್ಲೇ ತಡೆದು ಮೂರು ಗಂಟೆ ಕಾಯಿಸಿದ ಪೊಲೀಸ್ ಅಧಿಕಾರಿಗಳ ವರ್ತನೆ ಖಂಡಿಸಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಹಕ್ಕುಚ್ಯುತಿ ನಿಲುವಳಿ ಮಂಡಿಸಿದ್ದು, ನಿಲುವಳಿಯನ್ನು ಪುರಸ್ಕರಿಸಿದ ಸಭಾಪತಿಗಳು ಹಕ್ಕುಭಾದ್ಯತಾ ಸಮಿತಿಗೆ ಕಳುಹಿಸಿಕೊಟ್ಟು ರೂಲಿಂಗ್ ನೀಡಿದರು.

ವಿಧಾನ ಪರಿಷತ್​​ನ ಶೂನ್ಯವೇಳೆ ನಂತರ ಸದನದಲ್ಲಿ ಎಸ್.ಆರ್. ಪಾಟೀಲ್ ಹಕ್ಕುಚ್ಯುತಿ ನಿಲುವಳಿ ಸೂಚನೆಯನ್ನು ಮಂಡಿಸಿದರು. ಬೆಳಗಾವಿ ರಾಣಿ ಚೆನ್ನಮ್ಮ ವೃತ್ತದಿಂದ‌ ಟ್ರ್ಯಾಕ್ಟರ್ ಮೂಲಕ ಬಂದಾಗ ಪೊಲೀಸ್ ಅಧಿಕಾರಿಗಳಾದ ತ್ಯಾಗರಾಜನ್, ಸತೀಶ್ ಕುಮಾರ್ ನಮ್ಮನ್ನು ತಡೆದು ಅಧಿವೇಶನಕ್ಕೆ ಹಾಜರಾಗದಂತೆ ಮಾಡಿದರು. ಇದರಿಂದ ಶಾಸಕರ‌ ಹಕ್ಕಿಗೆ‌ ಅಡ್ಡಿಯಾಗಿದೆ. ಹಾಗಾಗಿ, ಹಕ್ಕುಚ್ಯುತಿ ಮಂಡನೆ ಮಾಡುತ್ತಿದ್ದೇನೆ ಎಂದರು.

ಹಕ್ಕುಚ್ಯುತಿ ಮಂಡಿಸಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್

ಪೊಲೀಸರಿಗೆ ಅಧಿಕಾರ ಕೊಟ್ಟಿದ್ಯಾರು?: ಎರಡು ವರ್ಷದ ನಂತರ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದೆ. ನಾವು ಈ ಭಾಗದ ಸಮಸ್ಯೆಗಳ ಮೇಲೆ‌ ಚರ್ಚಿಸಬೇಕಿದೆ. ಇದನ್ನೆಲ್ಲಾ ಪೊಲೀಸರಿಗೆ ತಿಳಿಸಿದೆವು, ಅಡ್ಡಿಪಡಿಸಿದರೆ ಹಕ್ಕುಚ್ಯುತಿ ಆಗಲಿದೆ ಎಂದರೂ ನಮ್ಮನ್ನು ಮೂರು ಗಂಟೆ ಗೇಟ್ ಮುಂದೆ ಕಾಯಿಸಿದ್ದಾರೆ.

ಅಧಿವೇಶನಕ್ಕೆ ನಮ್ಮನ್ನ ಒಳಬಿಡದಿರುವ ಅಧಿಕಾರ ಇವರಿಗೆ ಯಾರು ಕೊಟ್ಟರು? ಸಭಾಪತಿ ಸುಪರ್ದಿಯಲ್ಲಿ ನಾವಿದ್ದಾಗ ನಮ್ಮನ್ನ ಒಳಬಿಡದೇ ಇದ್ದಾಗ ನಿಮ್ಮ ಹಕ್ಕುಚ್ಯುತಿ ಕೂಡ ಆಗಿದೆ. ಇವರಿಗೆ ಸರಿಯಾದ ಶಾಸ್ತಿ ಆಗಬೇಕು ಎಂದರು.

ಈ ವೇಳೆ ಸಚಿವ ನಾರಾಯಣಗೌಡ, ಕಾಂಗ್ರೆಸ್ ಸದಸ್ಯರನ್ನು ಕೆಣಿಕಿದರು. ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು, ಲಘುವಾಗಿ ಮಾತನಾಡಬೇಡಿ, ನಾವು ಹೇಗೆ ಬರಬೇಕು ಎಂದು ನೀವು ಹೇಳಬೇಕಿಲ್ಲ, ಮೈಮೇಲೆ‌ ಎಚ್ಚರ ಇದೆಯಾ? ನೀವು ಯಾರು ನಮಗೆ ಹೇಳಲು? ಮಂತ್ರಿ ಅನ್ನಿಸಿಕೊಳ್ಳುವ ಯೋಗ್ಯತೆ ಇಲ್ಲ, ಕನಿಷ್ಟ ಜ್ಞಾನ ಇಲ್ಲದ ಮಂತ್ರಿ, ನಾವು ರಿಕ್ಷಾದಲ್ಲಿ ಬೇಕಾದರೂ ಬರಲಿದ್ದೇವೆ.

ನಾವು ಯಾವುದರಲ್ಲಿ ಬೇಕಾದರೂ ಬರಲಿದ್ದೇವೆ ಅದನ್ನು ಕೇಳಲು ನೀವು ಯಾರು? ಮಂತ್ರಿ ಅನ್ನಿಸಿಕೊಳ್ಳಲು ಯೋಗ್ಯತೆ ಇಲ್ಲ, ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಸದನದ ಬಾವಿಗಿಳಿದ ಕಾಂಗ್ರೆಸ್ ಸದಸ್ಯರು

ಕಾಂಗ್ರೆಸ್​​ನ ಪ್ರತಾಪ್ ಚಂದ್ರ ಶೆಟ್ಟಿ, ಬಿಕೆ ಹರಿಪ್ರಸಾದ್, ಪ್ರತಿಪಕ್ಷ ಸಚೇತಕ ನಾರಾಯಣ ಸ್ವಾಮಿ ಸೇರಿ ಕೈ ನಾಯಕರು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. ಈ ಬೇಳೆ ಸಚಿವ ನಾರಾಯಣಗೌಡ ಕೂಡ ವಾಗ್ದಾಳಿ ನಡೆಸಿದರು. ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟ ಸಭಾಪತಿ‌ಗಳು, ಕಡೆಗೆ ಪೀಠದಿಂದ ಎದ್ದು‌ನಿಂತು ಗದರಿದ‌ ಘಟನೆಯೂ ನಡೆಯಿತು. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ಲ. ಸದನದ ಬಾವಿಗಿಳಿದ ಕಾಂಗ್ರೆಸ್ ಸದಸ್ಯರು ಸಚಿವ ನಾರಾಯಣಗೌಡ ವಿರುದ್ಧ ಧರಣಿ ಆರಂಭಿಸಿ ಕ್ಷಮೆ ಯಾಚನೆಗೆ ಪಟ್ಟುಹಿಡಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಇನ್ನೊಮ್ಮೆ ಈ ರೀತಿ ಮಾತನಾಡುವಂತಿಲ್ಲ. ಸದನದಲ್ಲಿ ಸಭಾಪತಿಗಳ ಅನುಮತಿ ಪಡೆದು ಮಾತನಾಡಬೇಕು. ಸುಮ್ಮನೆ ಎದ್ದು ನಿಂತು ಮಾತನಾಡುವುದಲ್ಲ ಎಂದು ಸಚಿವ ನಾರಾಯಣಗೌಡರಿಗೆ ವಾರ್ನಿಂಗ್ ನೀಡಿದರು. ಸದನದಲ್ಲಿ‌ ಸಚಿವರು, ಸದಸ್ಯರು ಎಲ್ಲರೊಗೂ ಒಂದೇ ಗೌರವವಿದೆ, ಒಂದು‌ ವಿಷಯ ಮಾತನಾಡುವಾಗ ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಸಚಿವರಿಗೆ ಸೂಚಿಸಿ ಸಚಿವರು ಬಳಸಿದ ಪದಗಳನ್ನು,ಕಡತದಿಂದ ತೆಗೆದು ಹಾಕಿ ಎಂದು ರೂಲಿಂಗ್ ನೀಡಿದರು.

ಇದನ್ನೂ ಓದಿ: ಅತ್ಯಾಚಾರದ ಕುರಿತ ಹೇಳಿಕೆ.. ಮಹಿಳೆಯರಿಗೆ ನೋವಾಗಿದ್ರೇ ಪ್ರಾಮಾಣಿಕವಾಗಿ ಕ್ಷಮೆ ಕೋರುವೆ.. ರಮೇಶ್​ ಕುಮಾರ್​

ನಂತರ ಹಕ್ಕುಚ್ಯುತಿ ನಿಲುವಳಿ ಸೂಚನೆ ಮೇಲೆ ಮಾತು ಮುಂದುವರೆಸಿದ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಐಪಿಎಸ್ ಆಗಿರುವವರಿಗೆ ಜ್ಞಾನವಿಲ್ಲವೇ? ರೈತರ ವಾಹನ‌ ಟ್ರ್ಯಾಕ್ಟರ್,‌ರೈತನ ವಾಹನ ಎಂದರೆ ಇವರಿಗೆಲ್ಲಾ ಅವಮಾನವೇ ಎಂದು ಪ್ರಶ್ನಿಸಿದರು. ಪ್ರತಿಪಕ್ಷ ನಾಯಕರು ಮಾತನಾಡುವ ವೇಳೆ ಪದೇಪದೆ ಮಾತನಾಡಿದ ಬಿಜೆಪಿ ಸದಸ್ಯರ ಬಗ್ಗೆ ಕಾಂಗ್ರೆಸ್‌ನ ಹರಿಪ್ರಸಾದ್ ಆಕ್ಷೇಪ ವ್ಯಕ್ತಪಡಿಸಿದರು.

ಸಭಾಪತಿ, ಸಭಾ ನಾಯಕ, ಪ್ರತಿಪಕ್ಷ ನಾಯಕರು ಮಾತನಾಡುವಾಗ ಮಧ್ಯೆ ಮಾತನಾಡಬಾರದು ಆದರೂ ಬಿಜೆಪಿಯವರು ಅಡ್ಡಿ ಮಾಡುತ್ತಿದ್ದಾರೆ. ಹೀಗೆ ಆಗೋದಿದ್ದರೆ ಆಗಲಿ ನೋಡೋಣ ನಾವೂ ಇದನ್ನೇ ಮಾಡುತ್ತೇವೆ ಎಂದರು.

ಪದೇ ಪದೇ ಹೇಳಲು ಇವರೇನು ಸಣ್ಣಮಕ್ಕಳಾ?

ಇದಕ್ಕೆ ಅಸಮಾಧಾನಗೊಂಡ ಸಭಾಪತಿ ಹೊರಟ್ಟಿ, ಪದೇಪದೆ ಹೇಳಲು ಇವರೇನು ಸಣ್ಣಮಕ್ಕಳಾ? ಎಲ್ಲಿ ಹೇಗೆ ಮಾತನಾಡಬೇಕು ಎಂದು ತಿಳಿದುಕೊಳ್ಳಬೇಕು ಎಂದು ಸೂಚ್ಯವಾಗಿ ಆಡಳಿತ ಪಕ್ಷದ ಸದಸ್ಯರಿಗೆ ತಿವಿದರು. ನಂತರ ಪ್ರತಿಪಕ್ಷ ನಾಯಕ ಎಸ್.ಆರ್‌ ಪಾಟೀಲ್ ಮಂಡಿಸಿದ ಹಕ್ಕುಚ್ಯುತಿ ನಿಲುವಳಿ ಸೂಚನೆಯನ್ನು ಒಪ್ಪಿಕೊಂಡು ಸದನದ ಹಕ್ಕುಭಾದ್ಯತಾ ಸಮಿತಿಗೆ ಕಳುಹಿಸಿಕೊಡುತ್ತೊದ್ದೇನೆ ಎಂದು ಸಭಾಪತಿ ರೂಲಿಂಗ್ ನೀಡಿದರು.

ಸಭಾಪತಿಗಳ ರೂಲಿಂಗ್ ನಂತರ ಮಾತನಾಡಿದ ಜೆಡಿಎಸ್‌ನ ಮರಿತಿಬ್ಬೇಗೌಡ, ಸದನ ನಡೆಯುವಾಗ ಶಾಸಕರಿಗೆ ಸದನಕ್ಕೆ ಬಾರದಂತೆ ನಿರ್ಬಂಧ ಮಾಡಿ 24 ಗಂಟೆ ಆದರೂ ಸರ್ಕಾರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಮಾಮೂಲಾಗಿ ಹಕ್ಕು ಚ್ಯುತಿ ಸಮಿತಿಗೆ ವಹಿಸಿದರೆ ಹೇಗೆ? 24 ಗಂಟೆ ಒಳಗೆ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು ಎಂದು ಸೂಚಿಸಬೇಕು.

ತಪ್ಪು ಮಾಡಿದವರ ವಿರುದ್ಧ ಕ್ರಮ ಆಗಬೇಕು. ಒಂದು ದಿನ ಆದರೂ ಇನ್ನು ಕ್ರಮ ಆಗಿಲ್ಲ ಎನ್ನುವುದನ್ನು ನೋಡಿದರೆ ಸರ್ಕಾದ್ದೇ ಕುಮ್ಮಕ್ಕು ಇರಬೇಕು ಎನ್ನುವ ಆರೋಪ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಭಾಪತಿಗಳು, ನಮ್ಮ ಮುಂದೆ ಹಕ್ಕುಚ್ಯುತಿ ನಿಲುವಳಿ ಮಾತ್ರ ಇದೆ. ಹಾಗಾಗಿ, ಆ ಬಗ್ಗೆ ಮಾತ್ರ ರೂಲಿಂಗ್ ನೀಡಿದ್ದೇನೆ, ತಕ್ಷಣವೇ ಹಕ್ಕು ಬಾಧ್ಯತಾ ಸಮಿತಿ ಮೊದಲ ಸಭೆ ನಡೆಸಿ ಆದಷ್ಟು ಬೇಗ ವರದಿ ನೀಡಬೇಕು ಎಂದು ಸೂಚಿಸಿದರು.

ಈ ವೇಳೆ ಕಾಂಗ್ರೆಸ್ ನ ಪಿ.ಆರ್ ರಮೇಶ್ ಪಾಯಿಂಟ್ ಆಫ್ ಆರ್ಡರ್ ರೈಸ್ ಮಾಡಲು ಮುಂದಾದರು. ಇದಕ್ಕೆ ಅವಕಾಶ ನೀಡದ ಸಭಾಪತಿಗಳು ಹಕ್ಕು ಚ್ಯುತಿ ಆಗಿದೆ ಎಂದು ನಿಲುವಳಿ ಸೂಚನೆ ಮಂಡಿಸಿದ್ದಾರೆ. ಅದನ್ನು ಒಪ್ಪಿ ಸಮಿತಿಗೆ ಕಳಿಸಲಾಗಿದೆ. ಇದರಲ್ಲಿ ಪಾಯಿಂಟ್ ಆಫ್ ಆರ್ಡರ್ ಪ್ರಶ್ನೆ ಬರಲ್ಲ, ಇಷ್ಟೇ ದಿನದಲ್ಲಿ ವರದಿ ನೀಡಿ ಎಂದು ಸೂಚಿಸಲಾಗಲ್ಲ. ಹಕ್ಕು ಚ್ಯುತಿ ಆಗಿದೆ ಎನ್ನುವ ನಿರ್ಣಯ ಒಪ್ಪಿ ಹಕ್ಕು ಬಾಧ್ಯತಾ ಸಮಿತಿಗೆ ಕಳಿಸಲಾಗುತ್ತದೆ, ಸದನ ಮುಗಿದ ಕೂಡಲೇ ಮೊದಲ ಸಭೆ ನಡೆಸಿ ಆದಷ್ಟು ಬೇಗ ವರದಿ ನೀಡಿ ಎಂದು ಸೂಚಿಸಿ ಚರ್ಚೆಗೆ ತೆರೆ ಎಳೆದರು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.