ETV Bharat / city

ಪರಿಷತ್​ನಲ್ಲಿ ಕಾಂಗ್ರೆಸ್ ಸದಸ್ಯರ ಧರಣಿಗೆ ತೆರೆ ಎಳೆದ ಸಭಾಪತಿ ಹೊರಟ್ಟಿ..!

author img

By

Published : Dec 16, 2021, 4:54 PM IST

ಕಾಂಗ್ರೆಸ್ ಸದಸ್ಯರು ನಡೆಸುತ್ತಿರುವ ಧರಣಿ ವಿಷಯದ ಕುರಿತು ಸಭಾಪತಿ ಕಚೇರಿಯಲ್ಲಿ ನಡೆದ ಸಭೆಯ ನಿರ್ಧಾರಕ್ಕೆ ಬದ್ದವಾಗುವಂತೆ ಸಭಾಪತಿ ಬಸವರಾಜ ಹೊರಟ್ಟಿ ಸೂಚನೆ ನೀಡಿ ಕಲಾಪದಲ್ಲಿ ನಡೆಯುತ್ತಿದ್ದ ಗದ್ದಲಕ್ಕೆ ತೆರೆ ಎಳೆದರು. ರಾಜ್ಯದ ಸಚಿವ ಮತ್ತು ಶಾಸಕರೊಬ್ಬರು ಬೆಂಗಳೂರಿನಲ್ಲಿ ಬಹುಕೋಟಿ ಮೌಲ್ಯದ ಭೂಕಬಳಿಕೆ ಮಾಡಿರುವ ಪ್ರಕರಣದ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್​ ಸದಸ್ಯರು ಒತ್ತಾಯಿಸಿದರು.

congress-members-protest-in-council-winter-session
ಸಭಾಪತಿ ಹೊರಟ್ಟಿ

ಬೆಂಗಳೂರು : ರಾಜ್ಯದ ಸಚಿವ ಮತ್ತು ಶಾಸಕರೊಬ್ಬರು ಬೆಂಗಳೂರಿನಲ್ಲಿ ಬಹುಕೋಟಿ ಮೌಲ್ಯದ ಭೂಕಬಳಿಕೆ ಮಾಡಿರುವ ಪ್ರಕರಣದ ತನಿಖೆಗೆ ಆಗ್ರಹಿಸಿ ಸದನದಲ್ಲಿ ಕಾಂಗ್ರೆಸ್ ಸದಸ್ಯರು ನಡೆಸುತ್ತಿರುವ ಧರಣಿ ವಿಷಯದ ಕುರಿತು ಸಭಾಪತಿ ಕಚೇರಿಯಲ್ಲಿ ನಡೆದ ಸಭೆಯ ನಿರ್ಧಾರಕ್ಕೆ ಬದ್ದವಾಗುವಂತೆ ಸಭಾಪತಿ ಬಸವರಾಜ ಹೊರಟ್ಟಿ ಸೂಚನೆ ನೀಡಿ ಗದ್ದಲಕ್ಕೆ ತೆರೆ ಎಳೆದರು.

ಬೆಳಗಿನ ಕಲಾಪ ಮಧ್ಯಾಹ್ನ 1.20 ಕ್ಕೆ ಆರಂಭಗೊಂಡಿತು. ಕಲಾಪ ಆರಂಭಗೊಳ್ಳುತ್ತಿದ್ದಂತೆ ಮಾತನಾಡಿದ ಕಾನೂನು ಸಚಿವ ಜೆ.ಸಿ ಮಾಧುಸ್ಚಾಮಿ, ಸರ್ಕಾರದ ವಿರುದ್ಧ ಮಾಡುವ ಟೀಕೆಯನ್ನು ನಾವು ಸ್ವಾಗತಿಸಿದ್ದೇವೆ, ಆದರೆ, ಪೀಠದ ತೀರ್ಮಾನಕ್ಕೆ ವಿರುದ್ಧವಾಗಿ ಹೋಗುವುದು ಸರಿಯಲ್ಲ, ನಾವೆಲ್ಲಾ ಶಾಶ್ವತವಲ್ಲ, ಪರಿಷತ್ ಶಾಶ್ವತ, ಪೀಠವನ್ನೇ ಪ್ರಶ್ನೆ ಮಾಡಿದರೆ ಹೇಗೆ? ಮುಖ್ಯ ನ್ಯಾಯಮೂರ್ತಿಗಳ ನಿರ್ಧಾರವನ್ನೇ ಪ್ರಶ್ನಿಸಿದಂತಾಗಲಿದೆ.

ಸಭಾಪತಿಗಳು ಕೂಡ ಮುಖ್ಯ ನ್ಯಾಯಮೂರ್ತಿ ಇದ್ದ ಹಾಗೆ, ನಿಮ್ಮ ತೀರ್ಮಾನ ಪ್ರಶ್ನಿಸಿದ್ದಾರೆ, ಹಾಗಾಗಿ ನಾವು ಕಾಂಗ್ರೆಸ್ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿದ್ದೇವೆ. ನಾವು ನಿನ್ನೆ ಸದಸ್ಯರ ಅಮಾನತು ಘಟನೆಗೆ ವಿಷಾಧಿಸಲಿದ್ದೇವೆ, ನಾನು ಕ್ರಮಕ್ಕೆ ಒತ್ತಡ ಹೇರಬಾರದಿತ್ತು, ಅದಕ್ಕೆ ವಿಷಾಧವಿದೆ ಅದನ್ನು ಒಪ್ಪಿಕೊಳ್ಳುತ್ತೇವೆ. ಈಗ ಸಭೆ ನಡೆಸಲು ಅವಕಾಶ ನೀಡಿ ಎಂದು ಮನವಿ ಮಾಡಿದರು.

ಪೊಲೀಸರ ಮೇಲೆ ಕ್ರಮಕೈಗೊಳ್ಳಿ: ನಂತರ ಮಾತನಾಡಿದ ಪ್ರತಿಪಕ್ಷ ನಾಯಕ ಎಸ್.ಆರ್‌ಪಾಟೀಲ್, ಬೆಳಗ್ಗೆಯಿಂದ ಇಲ್ಲಿಯವರೆಗೂ ನಮಗೆ ಸುವರ್ಣಸೌಧದ ಒಳಗೆ ಬರಲು ಪೊಲೀಸರು ಒಳಬಿಡಲಿಲ್ಲ, ಗೇಟ್ ಬಳಿಯೇ ತಡೆದರು, ಟ್ರ್ಯಾಕ್ಟರ್ ಗೆ ಪರವಾನಗಿ ಕೇಳಿದರು, ನಾವು ಟ್ರ್ಯಾಕ್ಟರ್, ಚಕ್ಕಡಿಯಲ್ಲಿ ಬರಬಹುದು ಎಂದರೂ ಕೇಳಲಿಲ್ಲ, ನಾನು ಸಭಾಪತಿ ಸುಪರ್ದಿಯಲ್ಲಿದ್ದೇವೆ ಸಿಎಂ ಸುಪರ್ದಿಯಲ್ಲಿ ಇಲ್ಲ, ಪೊಲೀಸರು ನಮ್ಮನ್ನು ಮುಟ್ಟಲು ಸಭಾಪತಿ ಅನುಮತಿ ಕೊಡಬೇಕು, ನಾವು ಸದನಕ್ಕೆ ಹೇಗೆ ಬರಬೇಕು ಎಂದು ವ್ಯವಸ್ಥೆ ಮಾಡುವ ಕೆಲಸ ಸಿಎಂ ದಲ್ಲ, ಸಭಾಪತಿಗಳದ್ದು, ನಮಗೆ ಸದನಕ್ಕೆ ಬರುವಂತೆ ವ್ಯವಸ್ಥೆ ಮಾಡುವುದು ಸಭಾಪತಿಗಳ ಕೆಲಸ.

ನಮ್ಮನ್ನು ಪೊಲೀಸರು ತಡೆದಿದ್ದಾರೆ, ಸದನಕ್ಕೆ ಬರಲು ಬಿಡಲಿಲ್ಲ ಹಾಗಾಗಿ ಇದು ಸಭಾಪತಿಗಳ ಹಕ್ಕಿನ‌ ಚ್ಯುತಿಯಲ್ಲವೆ? ಪೊಲಿಸರ ವಿರುದ್ಧ ಹಕ್ಕುಚ್ಯುತಿ ಕುರಿತು ಮುಂದೆ ನಿರ್ಧರಿಸುತ್ತೇವೆ, ಇವತ್ತಿನ ಕಲಾಪ ಮೂರು ಗಂಟೆ ಹಾಳಾಯಿತು. ಇದಕ್ಕೆ ಪೊಲೀಸರೇ ಕಾರಣ, ನಮ್ಮನ್ನು ಪೊಲೀಸ್ ಜೀಪ್ ನಲ್ಲಿ ಹೋಗಿ ಅಂದರು ನಾವೇನು ಆರೋಪಿಗಳಾ? ಸದಸ್ಯರನ್ನು ತಡೆದು ನಿಲ್ಲಿಸವ ಧೈರ್ಯ ತೋರಿದ್ದಾರೆ, ಇದನ್ನು ನೀವು ಪ್ರಶ್ನಿಸಬೇಕು.

ಕಾನೂನು ಸುವ್ಯವಸ್ಥೆ ಎಡಿಜಿಪಿಗೆ ಶಿಕ್ಷೆಯಾಗಬೇಕು, ನಮ್ಮನ್ನು ತಡೆದರೆ ಸಭಾಪತಿಗೆ ಅವಮಾನ ಮಾಡಿದಂತೆ ಎಂದು ನಾನು ಪೊಲೀಸರಿಗೆ ಹೇಳಿದರೂ ಕೇಳಲಿಲ್ಲ ಹಾಗಾಗಿ ಉದ್ದಟತನದ ಅಧಿಕಾರಗಳ ವಿರುದ್ಧ ಕ್ರಮ ಆಗಬೇಕು, ನೀವು ನಿಮ್ಮ ಅಧಿಕಾರ ಚಲಾಯಿಸಿ ಎಂದು ಸಭಾಪತಿಗಳನ್ನು ಒತ್ತಾಯಿಸಿದರು.

ಯಾರನ್ನೂ ಅವಮಾನಿಸುವ ಉದ್ಧೇಶವಿಲ್ಲ : ಪ್ರತಿಪಕ್ಷ ನಾಯಕರ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ ಕಾನೂನು ಸಚಿವ ಮಾಧುಸ್ವಾಮಿ, ಸದನ ನಡೆಸಲು ಭದ್ರತೆ, ಕಾನೂನು ಸುವ್ಯವಸ್ಥೆ ಅಗತ್ಯ, ನಿಮ್ಮನ್ನು ತಡೆದಿದ್ದು ನಮಗೆ ಗೊತ್ತಿಲ್ಲ, ಗೊತ್ತಾದ ತಕ್ಷಣ ನಾವು ಸ್ಪಂದಿಸಿದೆವು, ನಿಮಗೆ ಆಗಿರುವ ಅವಮಾನವನ್ನು ನಾವು ಒಪ್ಪಲ್ಪ, ಸಿಎಂ ಕೂಡ ಶಾಸಕರು ಟ್ರ್ಯಾಕ್ಟರ್​ನಲ್ಲಿ ಬರಲು ಒಪ್ಪಿಗೆ ನೀಡಿದ್ದರು, ಎಲ್ಲೋ ಗೊಂದಲವಾಗಿದೆ.

ಗೃಹ ಸಚಿವರೂ ಟ್ರ್ಯಾಕ್ಟರ್​​​ಗೆ ಅನುಮತಿ ನೀಡಿದ್ದರು. ಸಿಎಂ ಕೂಡ ತಕ್ಷಣವೇ ನಿರ್ದೇಶನ ನೀಡಿ ಸದಸ್ಯರಿಗೆ ಒಳಬಿಡಲು ಸೂಚಿಸಿದ್ದರು. ನಿಮ್ಮನ್ನು ಒಳಗೆ ಬಿಡಲಿಲ್ಲ ಎನ್ನುವುದನ್ನು ನಾವು ಒಪ್ಪಿಕೊಂಡಿದ್ದೇವೆ, ನಮ್ಮಿಂದ ತಪ್ಪಾಗಿದೆ. ಸಿಎಂ ಸೇರಿ ನಾವೆಲ್ಲಾ ಸರಿಪಡಿಸಿದ್ದೇವೆ, ಯಾರನ್ನೂ ಅವಮಾನಿಸುವ ಉದ್ದೇಶ ಸರ್ಕಾರಕ್ಕಿಲ್ಲ. ಭದ್ರತಾ ಕಾರಣಕ್ಕೆ ಸ್ವಲ್ಪ ಗೊಂದಲ ಆಗಿದೆ ಹಾಗಾಗಿ ಇದನ್ನು ಇಲ್ಲಿಗೆ ನಿಲ್ಲಿಸಿ ಕಲಾಪ ನಡೆಸಲು ಸಹಕರಿಸಿ ಎಂದು ಮನವಿ ಮಾಡಿದರು.

ನಿಮ್ಮಂತೆ ಸುಸಂಸ್ಕೃತರಿಲ್ಲ : ಈ ವೇಳೆ ಮತ್ತೆ ಮಧ್ಯಪ್ರದೇಶ ಮಾಡಿದ ಪ್ರತಿಪಕ್ಷ ನಾಯಕ ಎಸ್.ಆರ್‌ ಪಾಟೀಲ್, ಕೆ.ಜೆ ಜಾರ್ಜ್ ಅವಧಿಯ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಮಾಧುಸ್ವಾಮಿ ಆಕ್ಷೇಪಿಸಿದರು, ಚರ್ಚೆಗೆ ಅವಕಾಶ ನೀಡಿದರೆ ನಾವೂ ಸಿದ್ದ ಎಂದರು. ಈ ವೇಳೆ, ಕಾಂಗ್ರೆಸ್ ಸಚೇತಕ ನಾರಾಯಣಸ್ವಾಮಿ ಸಚಿವ ಮಾಧುಸ್ವಾಮಿ ನಡುವೆ ಏರಿದ ಧನಿಯಲ್ಲಿ ಮಾತಿನ ಚಕಮಕಿ, ನಡೆಯಿತು.

ವೈಯಕ್ತಿಕ ಕಾರಣಕ್ಕೆ ಆರೋಪ ಮಾಡುವುದು ಸರಿಯಲ್ಲ. ನೀವೆಲ್ಲಾ ಸುಸಂಸ್ಕೃತವಂತರು, ನಿಮ್ಮನ್ನು ಬಿಟ್ಟರೆ ಸುಸಂಸ್ಕೃತರಿಲ್ಲ ಎಂದು ಟೀಕಿಸಿದರು. ನಿಮಗೆ ಆತ್ಮಸಾಕ್ಷಿ‌ ಮುಟ್ಟಿಕೊಂಡು ಹೇಳಿ ಸದನ ನಡೆಸಲು ನಿಮಗೆ ಇಷ್ಟವಿದೆಯಾ? ಎಂದು ಪ್ರತಿಪಕ್ಷ ನಾಯಕರನ್ನು ಮಾಧುಸ್ಚಾಮಿ ಪ್ರಶ್ನಿಸಿದರು. ವಿನಾಕಾರಣ ಸಮಯ ಹಾಳಾಗುತ್ತಿದೆ, ಇದನ್ನು ಮುಗಿಸಿ, ಸಾಕಷ್ಟು ಸಮಯ ನೀಡಿದ್ದೀರಿ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ : ಮತ್ತೆ ಮಾತಿಗಿಳಿದ ಎಸ್.ಆರ್‌ ಪಾಟೀಲ್, ಸಭಾಪತಿ ತೀರ್ಪು ವಿರೋಧಿಸಿ ನಾವು ಬಾವಿಗಿಳಿದಿದ್ದೇವೆ ಎನ್ನುವುದು ತಪ್ಪು, ಆದರೆ ಘಟನೆ ಬಗ್ಗೆ ಸಿಎಂ ಗಮನಕ್ಕೆ ಬರಲಿ, ಸಿಎಂಗೆ ಸಂಪುಟದಲ್ಲಿ ಯಾರನ್ನು ಇರಿಸಿಕೊಳ್ಳಬೇಕು, ಬಿಡಬೇಕು ಎಂದು ನಿರ್ಧರಿಸುವ ಅಧಿಕಾರವಿದೆ, ನಮ್ಮ ಸರ್ಕಾರದ ವೇಳೆ ಕೆ.ಜೆ ಜಾರ್ಜ್ ವಿರುದ್ಧ ಕೂಡ ಇಂತಹ ದೂರ ದಾಖಲಾಯಿತು ಆಗ ಜಾರ್ಜ್ ರಾಜಿನಾಮೆ ನೀಡಿದ್ದರು.

ಈಗ ಅಂತಹ ಘಟನೆ ನಡೆದಿದೆ ಇದನ್ನ ಪ್ರಶ್ನಿಸಿದ್ದಕ್ಕೆ ಪ್ರತಿಪಕ್ಷ ನಾಯಕನೂ ಸೇರಿ ನಮ್ಮನ್ನೆಲ್ಲಾ ಪರಿಷತ್ ಕಲಾಪದಿದ ಒಂದು ದಿನದ ಮಟ್ಟಿಗೆ ಅಮಾನತು ಮಾಡಿದರು. ಇಂತಹ ಘಟನೆ ಇದೇ ಮೊದಲಾಗಿದ್ದು, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಧರಣಿ ತಪ್ಪಿಸಿದ ಸಭಾಪತಿ : ಚರ್ಚೆ ಮತ್ತೆ ಹಾದಿ ತಪ್ಪುತ್ತಿರುವುದನ್ನು ಮನಗಂಡ ಸಭಾಪತಿ ಬಸವರಾಜ ಹೊರಟ್ಟಿ, ಈಗ ನಮ್ಮ ಮುಂದೆ ಜಾರ್ಜ್ ವಿಷಯ ಇಲ್ಲ. ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ನಿನ್ನೆ ನಡೆದ ಸಭೆಯಲ್ಲಿ ಆಡಳಿತ ಪಕ್ಷದವರು ತಿಳಿಸಿದ್ದಾರೆ. ಅದಕ್ಕೆ ಎಲ್ಲರೂ ಒಪ್ಪಿಕೊಂಡು ಸದನ ನಡೆಸಲು ಸಹಕರಿಸುವ ತೀರ್ಮಾನವಾಗಿದೆ ಅದರ ಪ್ರಕಾರ ಇಂದು ಸದನ ಆರಂಭಿಸಬೇಕು.

ಆದರೆ, ಈಗ ಸದಸ್ಯರನ್ನು ಒಳಬಿಡದ ಘಟನೆ ಆಗಿದೆ ಬೇರೆ ವಿದ್ಯಮಾನ ನಡೆದಿದೆ ಅದರ ಬಗ್ಗೆಯೂ ಈಗ ಎಲ್ಲ ಸ್ಪಷ್ಟೀಕರಣ ಬಂದಿದೆ. ಸರ್ಕಾರ ನಿಮ್ಮ ಬೇಡಿಕೆಗೆ ಒಪ್ಪಿದೆ, ಸ್ಥಳಕ್ಕೆ ಮರಳಿ ಎಂದು ಮನವಿ ಮಾಡುತ್ತಾ ಈ ಚರ್ಚೆ ಇಲ್ಲಿಗೆ ಮುಕ್ತಾಯವಾಗಿದೆ ಎಂದು ಪ್ರಕಟಿಸಿ ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಿಕೆ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.