ETV Bharat / city

ಇಂದು ಉದ್ಯಮಿ ನಾಯಕ ಕೊಲೆ ಪ್ರಕರಣದ ತೀರ್ಪು ಪ್ರಕಟ: ಬನ್ನಂಜೆ ‌ರಾಜಾ ಸೇರಿ 13 ಆರೋಪಿಗಳ ಭವಿಷ್ಯ ನಿರ್ಧಾರ!

author img

By

Published : Mar 30, 2022, 7:15 AM IST

ಉದ್ಯಮಿ ಆರ್.ಎನ್. ನಾಯಕ ಕೊಲೆ ಪ್ರಕರಣದ ತೀರ್ಪು ಬೆಳಗಾವಿಯ ಕೋಕಾ ನ್ಯಾಯಾಲಯದಲ್ಲಿ ಇಂದು ಬೆಳಗ್ಗೆ 11ಕ್ಕೆ ಪ್ರಕಟವಾಗಲಿದೆ.

businessman nayaka murder case judgement will be announced today
ಇಂದು ಉದ್ಯಮಿ ನಾಯಕ ಕೊಲೆ ಪ್ರಕರಣದ ತೀರ್ಪು ಪ್ರಕಟ

ಬೆಳಗಾವಿ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ ಅದಿರು ಉದ್ಯಮಿ ಆರ್.ಎನ್. ನಾಯಕ ಕೊಲೆ ಪ್ರಕರಣದ ತೀರ್ಪು ಬೆಳಗಾವಿಯ ಕೋಕಾ ನ್ಯಾಯಾಲಯದಲ್ಲಿ ಇಂದು ಬೆಳಗ್ಗೆ 11ಕ್ಕೆ ಪ್ರಕಟವಾಗಲಿದೆ. ರಾಜ್ಯದ ಮೊದಲ ಕೋಕಾ ಪ್ರಕರಣ ಇದಾಗಿದ್ದು, ಭೂಗತ ಪಾತಕಿ ಬನ್ನಂಜೆ ‌ರಾಜಾ ಸೇರಿ 13 ಪಾತಕಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಘಟನೆ ನಡೆದು ಬರೋಬ್ಬರಿ 9 ವರ್ಷಗಳ ಬಳಿಕ ತೀರ್ಪು ಪ್ರಕಟವಾಗುತ್ತಿದೆ.

ವಿಶೇಷ ಅಭಿಯೋಜಕ ಕೆ.ಜಿ. ಪುರಾಣಿಕಮಠ

ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಕೆ.ಜಿ. ಪುರಾಣಿಕಮಠ ಅವರು ವಕಾಲತ್ತು ವಹಿಸಿದ್ದರು. ಈ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರತಾಪ್ ರೆಡ್ಡಿ, ಅಲೋಕ ಕುಮಾರ್, ಮಾಜಿ ಪೊಲೀಸ್ ‌ಅಧಿಕಾರಿಗಳಾದ ಭಾಸ್ಕರ್ ರಾವ್, ಅಣ್ಣಾ ಮಲೈ ಸೇರಿ ಒಟ್ಟು 210 ಜನರು ಸಾಕ್ಷಿ ನುಡಿದಿದ್ದಾರೆ. 1,027 ದಾಖಲೆ ಪತ್ರಗಳು ಹಾಗೂ 138 ಮುದ್ದೆಮಾಲನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

3 ಕೋಟಿ ರೂ. ಹಫ್ತಾ ಕೇಳಿದ್ದ ರಾಜಾ: ಶಿಕ್ಷಣ ಹಾಗೂ ಸಹಕಾರ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಆರ್.ಎನ್. ನಾಯಕ ಅದಿರು ಉದ್ಯಮಿಯೂ ಆಗಿದ್ದರು. ಈ ಕಾರಣಕ್ಕೆ ಬನ್ನಂಜೆ ರಾಜಾ ಆರ್.ಎನ್. ನಾಯಕ ಅವರನ್ನು ‌ಟಾರ್ಗೆಟ್ ಮಾಡಿದ್ದ. ವಿದೇಶದಲ್ಲಿ ಕುಳಿತುಕೊಂಡೇ ಬನ್ನಂಜೆ ರಾಜಾ ನಾಯಕರ ಬಳಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. 3 ಕೋಟಿ ರೂ. ಹಫ್ತಾ ನೀಡದಿದ್ದರೆ ಪ್ರಾಣ ತೆಗೆಯುವ ಬೆದರಿಕೆಯನ್ನು ಆರ್.ಎನ್. ನಾಯಕಗೆ ಹಾಕಲಾಗಿತ್ತು. ಈ ಸಂಬಂಧ ಆರ್.ಎನ್. ನಾಯಕ ಅಂಕೋಲಾ ಠಾಣೆಯಲ್ಲಿ ದೂರು ನೀಡಿದ್ದರು.

ಆರ್.ಎನ್. ನಾಯಕ ಕೊಲೆ: ಹಫ್ತಾ ನೀಡದಿರುವುದಕ್ಕೆ 2013ರ ಡಿಸೆಂಬರ್ 21 ರಂದು ಆರ್.ಎನ್. ನಾಯಕ ಅವರನ್ನು ಹತ್ಯೆ ಮಾಡಲಾಗುತ್ತದೆ. ಉತ್ತರ ಪ್ರದೇಶ ಮೂಲದ ಶಾರ್ಪ್ ಶೂಟರ್ ವಿವೇಕ್ ಉಪಾಧ್ಯಾಯ ಎಂಬಾತ ಆರ್.ಎನ್. ನಾಯಕ ಅವರನ್ನು ಗುಂಡಿಕ್ಕಿ ಕೊಲೆಗೈಯುತ್ತಾನೆ. ಸ್ಥಳದಲ್ಲಿದ್ದ ಆರ್.ಎನ್ ನಾಯಕ ಅವರ ಗನ್​ ಮ್ಯಾನ್​​ ರಮೇಶ್ ಗೌಡ ಕೂಡ ವಿವೇಕ್ ಉಪಾಧ್ಯಾಯನನ್ನು ಅಟ್ಟಿಸಿಕೊಂಡು ಹೋಗಿ ಗುಂಡಿಕ್ಕಿ ಹತ್ಯೆ ಮಾಡುತ್ತಾನೆ.

ಘಟನೆ ನಡೆದ ಮರುದಿನವೇ ಕೆಲ ಮಾಧ್ಯಮಗಳಿಗೆ ಫೋನ್ ಮಾಡಿದ್ದ ಬನ್ನಂಜೆ ರಾಜಾ ಆರ್.ಎನ್ ನಾಯಕ ಅವರನ್ನು ಕೊಲೆ ಮಾಡಿಸಿದ್ದು ನಾನೇ ಎಂದು ಹೇಳಿಕೆ ನೀಡುತ್ತಾನೆ. ನಂತರ ಕರ್ನಾಟಕ ಪಶ್ಚಿಮ ವಲಯದ ಪೊಲೀಸರು ಬನ್ನಂಜೆ ರಾಜಾ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸುತ್ತಾರೆ.

ಮೊರಕ್ಕೋದಲ್ಲಿ ರಾಜಾ ಖೆಡ್ಡಾಕ್ಕೆ: ನಕಲಿ ಪಾಸ್‌ಪೋರ್ಟ್ ಹೊಂದಿದ ಆರೋಪದಡಿ 2015ರ ಫೆಬ್ರವರಿ 12ರಂದು ಬನ್ನಂಜೆ ರಾಜಾನನ್ನು ಮೊರಕ್ಕೊ ಪೊಲೀಸರು ಬಂಧಿಸಿದ್ದರು. ಬಳಿಕ ಭೂಗತ ಪಾತಕಿ ಬನ್ನಂಜೆ ರಾಜಾನನ್ನು ಭಾರತಕ್ಕೆ ಹಸ್ತಾಂತರಿಸಲಾಗಿತ್ತು. 2015ರ ಆಗಸ್ಟ್ 14ರಂದು ಬನ್ನಂಜೆ ರಾಜಾನನ್ನು ಕರೆತಂದು ಬೆಳಗಾವಿ ಕೋಕಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ(ಕೋಕಾ)ಯನ್ನು 2000ರಲ್ಲಿ ರಚಿಸಲಾಗಿತ್ತು. ಕಾಯ್ದೆ ರಚನೆ ಆದ ಬಳಿಕ ಬನ್ನಂಜೆ ರಾಜಾ ವಿರುದ್ಧವೇ ಮೊದಲ ಕೇಸ್ ದಾಖಲಾಗಿತ್ತು. 7 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಇಂದು ಅಂತಿಮ ತೀರ್ಪು ಪ್ರಕಟವಾಗಲಿದೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಜನಪ್ರತಿನಿಧಿಗಳ ಪೀಠಕ್ಕೆ ವರ್ಗಾವಣೆ!

ಆರೋಪಿಗಳು: ಆರ್. ಎನ್. ನಾಯಕ ಕೊಲೆ ಪ್ರಕರಣದಲ್ಲಿ ಒಟ್ಟು 16 ಆರೋಪಿಗಳಿದ್ದಾರೆ. ಈ ಪೈಕಿ ಮೂವರು ಯುಪಿ ಹಾಗೂ ಮೂವರು ಕೇರಳ ರಾಜ್ಯದವರಾಗಿದ್ದಾರೆ. ಇನ್ನುಳಿದವರು ಕರ್ನಾಟಕ ವಿವಿಧ ಭಾಗದವರು. ಈ ಪ್ರಕರಣದಲ್ಲಿನ ಇನ್ನೂ ಮೂವರು ತಲೆಮರಿಸಿಕೊಂಡಿದ್ದಾರೆ. ಶಾರ್ಪ್ ಶೂಟರ್ ವಿವೇಕ್​ ಉಪಾಧ್ಯಾಯ, ಜಗದೀಶ್ ಪಟೇಲ್ ಹಾಗೂ ಅಂಕಿತ್ ಕುಮಾರ್ ಕಶಪ್ ಯುಪಿ ಮೂಲದವರು. ಕೆ.ಎಂ ಇಸ್ಮಾಯಿಲ್, ರಬ್ದಿಮ್ ಸಲೀಂ ಹಾಗೂ ಸಂತೋಷ ಎಂ.ಬಿ ಕೇರಳದವರು. ಅಚ್ಛಂಗಿ ಮಹೇಶ, ಆನಂದ ನಾಯಕ ಸೇರಿ ಉಳಿದ ಆರು ಜನ ಆರೋಪಿತರು ಕರ್ನಾಟಕದವರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.