ETV Bharat / city

ನಟ ಪುನೀತ್​ಗೆ ಪುನೀತ್ ಮಾತ್ರ ಸಾಟಿ.. ಹೆಲಿಕಾಪ್ಟರ್ ದುರಂತದ ತನಿಖೆಯಾಗಲಿ: ಸಿದ್ದರಾಮಯ್ಯ

author img

By

Published : Dec 13, 2021, 2:37 PM IST

Updated : Dec 13, 2021, 4:19 PM IST

ಪುನೀತ್ ಅವರು ಸಾಯುತ್ತಾರೆ ಎಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಇನ್ನೂ ದೀರ್ಘಕಾಲದವರೆಗೆ ಬದುಕಬೇಕಿದ್ದವರು. ಸರ್ಕಾರದ ಅನೇಕ ಇಲಾಖೆಗಳಲ್ಲಿ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದರು. ಪುನೀತ್​​​ಗೆ ಪುನೀತ್ ಮಾತ್ರ ಸಾಟಿ ಎಂದು ಸಿದ್ದರಾಮಯ್ಯ ಹೇಳಿದರು.

Siddaramaiah
ಸಿದ್ದರಾಮಯ್ಯ

ಬೆಳಗಾವಿ: ದಿವಂಗತ ನಟ ಪುನೀತ್ ರಾಜ್​​ಕುಮಾರ್ ಕೇವಲ ರಾಜ್​​ಕುಮಾರ್ ಮಗ ಎನ್ನುವ ಕಾರಣಕ್ಕೆ ಫೇಮಸ್ ಆಗಿದ್ದಲ್ಲ. ಅವರದ್ದೇ ಆದ ವ್ಯಕ್ತಿತ್ವ ರೂಪಿಸಿಕೊಂಡಿದ್ದರು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಿದೆ. ವಿಧಾನಸಭೆಯಲ್ಲಿ ಸಂತಾಪ ಸೂಚಕ ನಿರ್ಣಯದ ಮೇಲೆ ಮಾತನಾಡಿದ ಸಿದ್ದರಾಮಯ್ಯ, ನಿತ್ಯ ಎರಡು ಗಂಟೆಗಳ ಕಾಲ ಪುನೀತ್ ವರ್ಕೌಟ್ ಮಾಡುತ್ತಿದ್ದರು. ಅವರು ಸಾಯುತ್ತಾರೆ ಎಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಇನ್ನೂ ದೀರ್ಘಕಾಲದವರೆಗೆ ಬದುಕಬೇಕಿದ್ದವರು. ಸರ್ಕಾರದ ಅನೇಕ ಇಲಾಖೆಗಳಲ್ಲಿ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದರು. ಪುನೀತ್​​​ಗೆ ಪುನೀತ್ ಮಾತ್ರ ಸಾಟಿ ಎಂದು ಬಣ್ಣಿಸಿದರು.

ಪುನೀತ್ ರಾಜ್‍ಕುಮಾರ್ ತಂದೆಯನ್ನೂ ಮೀರಿ ತನ್ನದೇ ಆದ ಅಭಿಮಾನಿಗಳನ್ನು ಸಂಪಾದಿಸಿದ್ದರು. ತಂದೆಯ ಎಲ್ಲ ಗುಣಗಳನ್ನು ಅಳವಡಿಸಿಕೊಂಡಿದ್ದರು. ಪುನೀತ್ ನನ್ನನ್ನು ಮಾಮಾ ಅಂತಾ ಕರೆಯುತ್ತಿದ್ದರು. ಮಾಮಾ ನನ್ನ 'ರಾಜಕುಮಾರ' ಸಿನಿಮಾ ನೋಡಲೇಬೇಕು ಎಂದು ಹೇಳಿದ್ದರು. ಪುನೀತ್ ಹೇಳಿದ್ದಕ್ಕೆ ನಾನು ಮೈಸೂರಿನ ಥಿಯೇಟರ್​​ಗೆ ಹೋಗಿ ರಾಜಕುಮಾರ ಸಿನಿಮಾ ನೋಡಿದ್ದೆ ಎಂದು ಹೇಳಿದರು.

ಅಧಿವೇಶನದಲ್ಲಿ ಸಿದ್ದರಾಮಯ್ಯ ಭಾಷಣ

ಹೆಲಿಕಾಪ್ಟರ್ ದುರಂತದ ತನಿಖೆ ಆಗಬೇಕು

ಸಿಡಿಎಸ್ ಬಿಪಿನ್ ರಾವತ್ ಹೆಲಿಕಾಪ್ಟರ್ ಅಪಘಾತದ ಬಗ್ಗೆ ತನಿಖೆ ಆಗಬೇಕು. ಈ ಬಗ್ಗೆ ಸಂಶಯ ಇದೆ. ರಷ್ಯಾ ನಿರ್ಮಿಸಿದ ಹೆಲಿಕಾಪ್ಟರ್ ಅದು. ಅಪಘಾತದ ಕಾರಣ ಏನು ಎಂಬುವುದು ತಿಳಿಯಬೇಕು. ಅಡ್ವಾನ್ಸ್ ಇಂಜಿನ್ ಹೆಲಿಕಾಪ್ಟರ್ ಅಪಘಾತದಿಂದ ಮೃತಪಟ್ಟಿದ್ದಾರೆ ಎಂಬುವುದೇ ಆಶ್ಚರ್ಯ. ನಾನು ಯಾರ ಕೈವಾಡ ಇದೆ ಎಂಬ ಶಂಕೆ ಪಡುವುದಿಲ್ಲ.

ಆದರೆ, ಅಪಘಾತ ಹೇಗಾಯಿತು, ರಾವತ್ ಸೇರಿದಂತೆ 13 ಮಂದಿ ಹೇಗೆ ಸತ್ತರು ಎಂಬುದು ನಿಗೂಢವಾಗಿದೆ. ಈ ಬಗ್ಗೆ ಜನರಿಗೆ ಗೊತ್ತಾಗಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಇದನ್ನೂ ಓದಿ: ನಟ ಪುನೀತ್ ರಾಜ್​​ಕುಮಾರ್​ಗೆ ಶೀಘ್ರದಲ್ಲೇ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು : ಸಿಎಂ ಬಸವರಾಜ ಬೊಮ್ಮಾಯಿ

ಬಿಪಿನ್ ರಾವತ್ ಮೂರು ಸೇನೆಗಳ ಮೊದಲನೇ ಮುಖ್ಯಸ್ಥರಾಗಿ ಕೆಲಸ ಮಾಡಿದ್ರು. ನಿವೃತ್ತಿ ಬಳಿಕ ಅವರು ಬೇಡ ಅಂದರು ದೇಶಕ್ಕೆ ಅವರ ಸೇವೆ ಅಗತ್ಯ ಎಂದು ನೇಮಕ ಮಾಡಿದ್ರು. ದೇಶದ ಸೇವೆಗೆ ಬಹಳ ವರ್ಷಗಳಿಂದ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಮಾಜಿ ರಾಜ್ಯಪಾಲ ಕೆ. ರೋಸಯ್ಯ ಅವರಿಗೆ ಸಂತಾಪ ಸಲ್ಲಿಸಿದ ಸಿದ್ದರಾಮಯ್ಯ, ರೋಸಯ್ಯ ಅವರು ವಿದ್ಯಾರ್ಥಿ ದೆಸೆಯಿಂದಲೇ ನಾಯಕ ಗುಣ ಹೊಂದಿದ್ದವರು. ಆಂಧ್ರಪ್ರದೇಶದಲ್ಲಿ 16 ಬಾರಿ ಹಣಕಾಸು ಬಜೆಟ್​ ಮಾಡಿದ್ದರು. ಅಂತಹ ಧೀಮಂತ ನಾಯಕನನ್ನು ಕಳೆದುಕೊಂಡಿದ್ದೇವೆ. ಇನ್ನು ಹಿರಿಯ ನಟ ಶಿವರಾಂ ಅವರ ಅಗಲಿಕೆಯೂ ಆಕಸ್ಮಿಕವಾಗಿದೆ. ನೂರಾರು ಚಿತ್ರಗಳಲ್ಲಿ ನಟಿಸಿ ಜನಮಣ್ಣನೆ ಗಳಿಸಿದ್ದರು.

ಅವರ ನೆನಪಿಗೆ ಲೈಬ್ರರಿ ಏನಾದರೂ ಮಾಡಲು ಸಾಧ್ಯವಾಗುತ್ತದೆಯೇ ಅಂತಾ ಸರ್ಕಾರ ಗಮನಿಸಬೇಕು ಎಂದು ಸಲಹೆ ನೀಡಿದ ಸಿದ್ದರಾಮಯ್ಯ ಅವರು, ಅಗಲಿದ ವಿರೂಪಾಕ್ಷಪ್ಪ ಅಗಡಿ, ಡಾ. ಎಂ.ಪಿ. ಕರ್ಕಿ, ಎರಡು ಬಾರಿ ಶಾಸಕರಾಗಿದ್ದ ರಾಮಭಟ್ ಅವರಿಗೆ ಸಂತಾಪ ಸೂಚಿಸಿದರು.

Last Updated : Dec 13, 2021, 4:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.