ಬೆಳಗಾವಿ: ಮಹಾರಾಷ್ಟ್ರದಲ್ಲಿ ಮತ್ತೆ ಶಿವಸೇನೆ ಕಾರ್ಯಕರ್ತರು ಕನ್ನಡ ಧ್ವಜಕ್ಕೆ ಬೆಂಕಿಯಿಟ್ಟು ಕರ್ನಾಟಕ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ದುಂಡಾವರ್ತನೆ ಪ್ರದರ್ಶನ ಮಾಡಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಿದ್ದ ಮಹಾರಾಷ್ಟ್ರ ಸರ್ಕಾರವೇ, ಕಿಡಿಗೇಡಿಗಳಿಗೆ ಕುಮ್ಮಕ್ಕು ಕೊಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಅಪಮಾನ ಖಂಡಿಸಿ ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಎಂಇಎಸ್ ಕಾರ್ಯಕರ್ತರ ದುಂಡಾವರ್ತನೆ ಮಿತಿಮೀರಿದೆ. ಸಾಂಗಲಿ ಜಿಲ್ಲೆಯ ಮಿರಜ್‌ನ ಮಹಾರಾಣಾ ಪ್ರತಾಪ್ ಚೌಕ್‌ನಲ್ಲಿ ಶಿವಸೇನೆ ಕಿಡಿಗೇಡಿಗಳು ಮತ್ತೆ ಕರ್ನಾಟಕ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಉದ್ಧಟತನ ಪ್ರದರ್ಶನ ಮಾಡಿದ್ದಾರೆ.
ಇದಲ್ಲದೇ ಕರ್ನಾಟಕ -ಮಹಾರಾಷ್ಟ್ರ ಗಡಿಗೆ ನುಗ್ಗಿ ಪ್ರತಿಭಟನೆ ನಡೆಸ್ತೇವೆ ಎಂದು ಮೀರಜ್ ಶಿವಸೇನೆ ಕಾರ್ಯಕರ್ತ ಚಂದ್ರಕಾಂತ ಮೈನಗುರೆ ಉದ್ಧಟತನದ ಹೇಳಿಕೆ ನೀಡಿದ್ದಾನೆ.
ಇಂದು ಶಿವಸೇನೆ ಸದಸ್ಯರು ಕಾಗವಾಡ ಗಡಿಯಲ್ಲಿ ಬಂದು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.