ETV Bharat / business

ಆಸ್ಟ್ರೇಲಿಯಾದ 3 ಕಂಪನಿಗಳ ನಿರ್ದೇಶಕ ಹುದ್ದೆ ತೊರೆದ ವಿನೋದ್​ ಅದಾನಿ

author img

By

Published : Apr 28, 2023, 7:11 PM IST

ಗೌತಮ್ ಅದಾನಿಯವರ ಸಹೋದರ ವಿನೋದ್​ ಅದಾನಿ ಆಸ್ಟ್ರೇಲಿಯಾದಲ್ಲಿನ ಮೂರು ಕಲ್ಲಿದ್ದಲು ಗಣಿಗಾರಿಕೆ ಕಂಪನಿಗಳ ನಿರ್ದೇಶಕ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಆಸ್ಟ್ರೇಲಿಯಾದ 3 ಕಂಪನಿಗಳ ನಿರ್ದೇಶಕ ಹುದ್ದೆ ತೊರೆದ ವಿನೋದ ಅದಾನಿ
Vinod Adani Steps Down From 3 Companies Connected to Adani's Australian Coal Mine

ನವದೆಹಲಿ : ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರ ಹಿರಿಯ ಸಹೋದರ ವಿನೋದ್ ಅದಾನಿ ಅವರು ಆಸ್ಟ್ರೇಲಿಯಾದ ಕಲ್ಲಿದ್ದಲು ಗಣಿಗಳಿಗೆ ಸಂಬಂಧಿಸಿದ 3 ಕಂಪನಿಗಳ ನಿರ್ದೇಶಕ ಹುದ್ದೆಯನ್ನು ತೊರೆದಿದ್ದಾರೆ. ಕಾರ್ಮೈಕಲ್ ರೈಲ್ ಮತ್ತು ಪೋರ್ಟ್ ಸಿಂಗಾಪುರ್, ಕಾರ್ಮೈಕಲ್ ರೈಲ್ ಸಿಂಗಾಪುರ್ ಮತ್ತು ಅಬಾಟ್ ಪಾಯಿಂಟ್ ಟರ್ಮಿನಲ್ ಎಕ್ಸ್​ಪ್ಯಾನ್ಷನ್ ಇವೇ ಆ ಕಂಪನಿಗಳಾಗಿವೆ. ಈ ಎಲ್ಲ ಕಂಪನಿಗಳು ಆಸ್ಟ್ರೇಲಿಯಾದಲ್ಲಿ ಅದಾನಿಯವರ ಕಲ್ಲಿದ್ದಲು ಗಣಿಗಾರಿಕೆಗೆ ಸಂಬಂಧಿಸಿವೆ. ಆದಾಗ್ಯೂ ವಿನೋದ್ ಸಿಂಗಾಪುರ ಮೂಲದ ಕಂಪನಿಯಾದ ಅಬಾಟ್ ಪಾಯಿಂಟ್ ಪೋರ್ಟ್ ಹೋಲ್ಡಿಂಗ್ಸ್ ಆಡಳಿತ ಮಂಡಳಿಯಲ್ಲಿ ಉಳಿದಿದ್ದಾರೆ. ಅದಾನಿ ಗ್ರೂಪ್‌ ಬಗ್ಗೆ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡುವ ಮೊದಲೇ ವಿನೋದ್​ ಅದಾನಿಯವರು ಈ ಕಂಪನಿಗಳಿಗೆ ರಾಜೀನಾಮೆ ನೀಡಿದ್ದರು ಎಂಬುದು ಗಮನಾರ್ಹ.

ಶಾರ್ಟ್​ ಸೆಲ್ಲರ್ ಫರ್ಮ್ ಆಗಿರುವ ಹಿಂಡೆನ್​ಬರ್ಗ್​ ಅದಾನಿ ಸಮೂಹ ಕಂಪನಿಗಳ ಬಗ್ಗೆ ವರದಿಯೊಂದನ್ನು ತಯಾರಿಸಿ ಬಿಡುಗಡೆ ಮಾಡಿತ್ತು. ಅದಾನಿ ಸಮೂಹವು ವಂಚನೆ, ಷೇರುಗಳಲ್ಲಿ ಹಸ್ತಕ್ಷೇಪಗಳಲ್ಲಿ ತೊಡಗಿದೆ ಎಂದು ವರದಿಯಲ್ಲಿ ಗಂಭೀರವಾಗಿ ಆರೋಪಿಸಲಾಗಿತ್ತು. ವರದಿಯಲ್ಲಿ ಗೌತಮ್ ಅದಾನಿ ಹಾಗೂ ವಿನೋದ ಅದಾನಿ ಹೆಸರುಗಳನ್ನು ಹಲವಾರು ಬಾರಿ ಉಲ್ಲೇಖಿಸಲಾಗಿದೆ. ವಿದೇಶದಲ್ಲಿ ನೆಲೆಸಿರುವ ವಿನೋದ್​ ಅದಾನಿ, ಅದಾನಿ ಸಮೂಹದಲ್ಲಿ ಹಣಕಾಸು ಅಕ್ರಮ ಎಸಗಲು ವಿದೇಶಗಳಲ್ಲಿ ಕಂಪನಿಗಳ ಜಾಲ ಸ್ಥಾಪಿಸಿದ್ದಾರೆ ಎಂದು ವರದಿ ಆರೋಪ ಮಾಡಿದೆ. ಮಾರುಕಟ್ಟೆ ನಿಯಂತ್ರಕ ಸೆಬಿ ಸದ್ಯ ಈ ಆರೋಪಗಳ ಬಗ್ಗೆ ತನಿಖೆ ಮಾಡುತ್ತಿದೆ.

ಹಿಂಡನ್ ಬರ್ಗ್ ವರದಿ ಬಂದ ನಂತರ ಅದಾನಿ ಗ್ರೂಪ್ ಲಕ್ಷ ಕೋಟಿಗಟ್ಟಲೇ ನಷ್ಟ ಅನುಭವಿಸಿದೆ. ಅದಾನಿ ಗ್ಲೋಬಲ್‌ನ ದುಬೈ ಕಚೇರಿಯಲ್ಲಿ ವಿನೋದ್ ಅದಾನಿ ಕ್ಯಾಬಿನ್ ಹೊಂದಿದ್ದು, ಅಲ್ಲಿ ಅವರು ಪ್ರತಿದಿನ ಎರಡರಿಂದ ಮೂರು ಗಂಟೆಗಳ ಕಾಲ ಕಳೆಯುತ್ತಾರೆ ಎಂದು ಮಾಧ್ಯಮ ವರದಿ ಹೇಳಿದೆ. ಹತ್ತಾರು ಶೆಲ್ ಕಂಪನಿಗಳ ಮೂಲಕ ವಿನೋದ್ ಅದಾನಿ, ಅದಾನಿ ಗ್ರೂಪ್‌ಗೆ ಶತಕೋಟಿ ಡಾಲರ್‌ಗಳನ್ನು ಹರಿಬಿಟ್ಟಿದ್ದಾರೆ ಎಂದು ಹಿಂಡೆನ್‌ಬರ್ಗ್ ವರದಿ ಹೇಳಿದೆ. ಕೆಲ ಸಮಯದ ಹಿಂದೆ ವಿನೋದ್ ಅತ್ಯಂತ ಶ್ರೀಮಂತ ಅನಿವಾಸಿ ಭಾರತೀಯ ಎಂದು ಚರ್ಚೆಗೆ ಗ್ರಾಸವಾಗಿದ್ದರು.

ಗೌತಮ್ ಅದಾನಿ 32 ಶತಕೋಟಿ ಡಾಲರ್ (ಆದಾಯ) ಮೌಲ್ಯದ ಅದಾನಿ ಗ್ರೂಪ್‌ನ ಅಧ್ಯಕ್ಷರಾಗಿದ್ದಾರೆ. ಬಂದರುಗಳು, ವಿಮಾನ ನಿಲ್ದಾಣಗಳು, ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ, ಮತ್ತು ಹಸಿರು ಇಂಧನ ಇತ್ಯಾದಿಗಳಲ್ಲಿ ಅವರ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. 1988 ರಲ್ಲಿ ಸರಕುಗಳ ವ್ಯಾಪಾರ ಸಂಸ್ಥೆಯಾಗಿ ಪ್ರಾರಂಭವಾದ ಅದಾನಿ ಸಮೂಹವು ವಿಶಾಲವಾಗಿ ಬೆಳೆಯಿತು. ಅದಾನಿ ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ನಿರ್ವಾಹಕ ಕಂಪನಿಯಾಗಿದೆ ಮತ್ತು ತನ್ನ ತವರು ರಾಜ್ಯವಾದ ಗುಜರಾತ್‌ನಲ್ಲಿರುವ ಭಾರತದ ಅತಿದೊಡ್ಡ ಮುಂದ್ರಾ ಬಂದರನ್ನು ಸಹ ನಿಯಂತ್ರಿಸುತ್ತದೆ. 2022 ರಲ್ಲಿ ಸ್ವಿಸ್ ಸಂಸ್ಥೆ Holcim ನ ಭಾರತೀಯ ಆಸ್ತಿಯನ್ನು 10.5 ಶತಕೋಟಿ ಡಾಲರ್​ಗೆ ಸ್ವಾಧೀನಪಡಿಸಿಕೊಂಡ ನಂತರ ಅದಾನಿ ಭಾರತದ ಎರಡನೇ ಅತಿದೊಡ್ಡ ಸಿಮೆಂಟ್ ಉತ್ಪಾದಕ ಸಮೂಹವಾಯಿತು.

ಇದನ್ನೂ ಓದಿ : ಭಾರತದ ಷೇರು ಮಾರುಕಟ್ಟೆಯಲ್ಲಿ ನಿವ್ವಳ ಖರೀದಿದಾರರಾಗಿ ಉಳಿದ ಎಫ್​ಪಿಐಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.