ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ : ಸೆನ್ಸೆಕ್ಸ್​, ನಿಫ್ಟಿ ಹೂಡಿಕೆದಾರರಿಗೆ ಬಿಗ್​ ಶಾಕ್​

author img

By ETV Bharat Karnataka Desk

Published : Jan 17, 2024, 5:31 PM IST

Updated : Jan 17, 2024, 6:56 PM IST

ಷೇರು ಮಾರುಕಟ್ಟೆಯಲ್ಲಿ ಬ್ಲಡ್​ಬಾತ್

ಷೇರು ಮಾರುಕಟ್ಟೆಯಲ್ಲಿ ಬ್ಲಡ್​ಬಾತ್​ ಆಗಿದೆ. ಸೆನ್ಸೆಕ್ಸ್​, ನಿಫ್ಟಿ ಮಹಾಪತನ ಕಂಡಿದ್ದು, ಹೂಡಿಕೆದಾರರಿಗೆ ಭಾರಿ ನಷ್ಟ ಉಂಟಾಗಿದೆ. ಇದರಿಂದ ಅವರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.

ನವದೆಹಲಿ: ದಾಖಲೆಯ ಮೇಲೆ ದಾಖಲೆ ಬರೆಯುತ್ತಾ ಸಾಗಿದ್ದ ಮುಂಬೈ ಷೇರು ಸೂಚ್ಯಂಕ (ಬಿಎಸ್​ಸಿ) ಸೆನ್ಸೆಕ್ಸ್ ಮತ್ತು ನಿಫ್ಟಿ ಇಂದಿನ ವಹಿವಾಟಿನಲ್ಲಿ ಭಾರೀ ಕುಸಿತ ಕಂಡಿವೆ. ಸೆನ್ಸೆಕ್ಸ್​ 1600 ಕ್ಕೂ ಅಧಿಕ ಅಂಕ ಕಳೆದುಕೊಳ್ಳುವ ಮೂಲಕ ಒಂದೇ ದಿನದಲ್ಲಿ ಅತ್ಯಧಿಕ ಲಾಸ್​ ಕಂಡಿದೆ. ಇತ್ತ ನಿಫ್ಟಿ ಕೂಡ ಶೇಕಡಾ 2 ರಷ್ಟು ನಷ್ಟ ಕಂಡು ಹೂಡಿಕೆದಾರರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿದೆ.

ಬುಧವಾರದ ವಹಿವಾಟಿನ ಮುಕ್ತಾಯದ ವೇಳೆಗೆ ಬಿಎಸ್‌ಇ ಸೆನ್ಸೆಕ್ಸ್ ಶೇಕಡಾ 2.23 ರಷ್ಟು, 1,628 ಅಂಕ ನಷ್ಟವಾಗಿ 71,516 ಅಂಕಗಳಿಗೆ ಕುಸಿದಿದೆ. 22 ಸಾವಿರ ಅಂಕ ತಲುಪಿ ದಾಖಲೆ ಬರೆದಿದ್ದ ನಿಫ್ಟಿ ಒಂದೇ ದಿನದಲ್ಲಿ 460 (ಶೇಕಡಾ 2.09 ರಷ್ಟು) ಅಂಕ ಕುಸಿದು 21571 ಕ್ಕೆ ತಲುಪಿದೆ.

ಹೆಚ್​ಡಿಎಫ್​ಸಿ ಬ್ಯಾಂಕ್​ ನೇತೃತ್ವದಲ್ಲಿ ಖಾಸಗಿ ವಲಯದ ಬ್ಯಾಂಕುಗಳ ಷೇರು ಮಾರಾಟವೇ ಭಾರೀ ಕುಸಿತಕ್ಕೆ ಕಾರಣವಾಗಿದೆ. ಇಂದಿನ ವಹಿವಾಟಿನ ಮುಕ್ತಾಯದ ಅಂತ್ಯಕ್ಕೆ ಎಲ್ಲ ಷೇರುಗಳಲ್ಲಿ ತಲ್ಲಣ ಉಂಟಾಗಿದೆ. ಏರಿಕೆ ಕಂಡ ಒಂದು ಷೇರಿಗೆ ಎರಡು ಷೇರುಗಳು ಇಳಿಕೆಯಾಗಿವೆ. ಹೀಗಾಗಿ ದಿನದ ವಹಿವಾಟಿನಲ್ಲಿ 1096 ಷೇರುಗಳು ಏರಿಕೆ ದಾಖಲಿಸಿದ್ದರೆ, 2127 ಷೇರುಗಳು ಪಾತಾಳಕ್ಕೆ ಕುಸಿದವು. 53 ಷೇರುಗಳ ದರ ಯಥಾಸ್ಥಿತಿಯಲ್ಲಿವೆ.

ಇಂದಿನ ವಹಿವಾಟಿನಲ್ಲಿ ಟೆಕ್ ಷೇರುಗಳು ಮಾತ್ರ ಮಾರುಕಟ್ಟೆಗೆ ಸ್ವಲ್ಪ ಬೆಂಬಲ ನೀಡಿದವು. ಎಚ್‌ಸಿಎಲ್ ಟೆಕ್ ಶೇ.1.34ರಷ್ಟು ಹೆಚ್ಚು ಬಲಗೊಂಡಿದೆ. ಇನ್ಫೋಸಿಸ್ ಶೇ.0.55ರಷ್ಟು, ಟೆಕ್ ಮಹೀಂದ್ರಾ ಶೇ.0.54 ಮತ್ತು ಟಿಸಿಎಸ್ ಶೇ.0.38ರಷ್ಟು ಏರಿಕೆ ಕಂಡಿದೆ. ಮತ್ತೊಂದೆಡೆ ಎಚ್‌ಡಿಎಫ್‌ಸಿ ಬ್ಯಾಂಕ್ ಶೇ.8 ರ ವರೆಗೆ ಕುಸಿತ ಕಂಡಿದೆ. ಟಾಟಾ ಸ್ಟೀಲ್ ಶೇ.4ಕ್ಕಿಂತ ಹೆಚ್ಚು ಕುಸಿದಿದೆ. ಕೋಟಕ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ಬಜಾಜ್ ಫಿನ್‌ಸರ್ವ್ ಷೇರುಗಳು ಶೇ.2.38ರಿಂದ ಶೇ.3.66ರಷ್ಟು ಕುಸಿದಿವೆ.

ಷೇರು ನಷ್ಟಕ್ಕೆ ಕಾರಣಗಳು: ಅಮೆರಿಕದ ಫೆಡರಲ್​ ಬ್ಯಾಂಕ್​ ವಿತ್ತೀಯ ನೀತಿಯಲ್ಲಿ ಬದಲಾವಣೆಗಳು ಕಾಣದೇ ಇರುವುದು ಷೇರು ಕುಸಿತಕ್ಕೆ ಕಾರಣವಾಗಿದೆ. ಅಲ್ಲಿನ ಬಡ್ಡಿ ದರ ಇಳಿಕೆಯಾಗುವ ನಿರೀಕ್ಷೆಯಲ್ಲಿದ್ದ ಹೂಡಿಕೆದಾರರು ನಿರಾಸೆ ಅನುಭವಿಸಿದರು. ದೇಶದಲ್ಲಿ ಹಣದುಬ್ಬರ ಹೆಚ್ಚಿರುವ ಕಾರಣ ಇಲ್ಲಿನ ರೆಪೋ ದರ ಇಳಿಕೆಯಾಗುವ ಲಕ್ಷಣವೂ ಇಲ್ಲವಾಗಿ ಷೇರು ಹೂಡಿಕೆದಾರರು ನಷ್ಟಕ್ಕೀಡಾದರು.

ಜಾಗತಿಕ ಷೇರುಗಳು ಕೂಡ ಇಳಿಕೆ ಕಂಡಿವೆ. ಇದು ದೇಶಿಯ ಮಾರುಕಟ್ಟೆ ಮೇಲೂ ಪ್ರಭಾವ ಬೀರಿದೆ. ಅವುಗಳ ಕೈಗೊಂಡ ದಿಢೀರ್​ ನಿರ್ಧಾರಗಳು ಫಲಿಸದ ಕಾರಣ, ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದ ಹೂಡಿಕೆದಾರರು ನಷ್ಟದ ಹಾದಿ ಹಿಡಿದರು.

ಇದನ್ನೂ ಓದಿ: ತೆಲಂಗಾಣದಲ್ಲಿ ವಿವಿಧ ಯೋಜನೆಗೆ 12,400 ಕೋಟಿ ಹೂಡಿಕೆ ಒಡಂಬಡಿಕೆ ಸಹಿ ಹಾಕಿದ ಅದಾನಿ

Last Updated :Jan 17, 2024, 6:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.