ರೆಪೋ ದರ ಏರಿಸಿದ ಆರ್‌ಬಿಐ: ಗೃಹ, ವಾಹನ ಸಾಲದ ಇಎಂಐ ಹೆಚ್ಚಳ ಹೊರೆ

ರೆಪೋ ದರ ಏರಿಸಿದ ಆರ್‌ಬಿಐ: ಗೃಹ, ವಾಹನ ಸಾಲದ ಇಎಂಐ ಹೆಚ್ಚಳ ಹೊರೆ
ಹಣದುಬ್ಬರ ನಿಯಂತ್ರಿಸುವ ಉದ್ದೇಶದಿಂದ ದೇಶದ ಕೇಂದ್ರ ಬ್ಯಾಂಕ್ ಆರ್‌ಬಿಐ ಮತ್ತೊಮ್ಮೆ ರೆಪೋ ದರ ಏರಿಸಿದೆ.
ಮುಂಬೈ: ಹಣದುಬ್ಬರ ಹೊಡೆತದಿಂದ ಹೊರಬರುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಇದೀಗ ಮತ್ತೊಮ್ಮೆ ರೆಪೋ ದರ ಏರಿಸಿದೆ. ಇದರಿಂದಾಗಿ ಗೃಹ, ವಾಹನ ಸಾಲಗಳ ಮೇಲಿನ ಇಎಂಐ ಮತ್ತಷ್ಟು ದುಬಾರಿಯಾಗಲಿದ್ದು, ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳಲಿದೆ. ಕಳೆದ ಮೂರು ದಿನಗಳಿಂದ ಹಣಕಾಸು ನೀತಿ ಸಮಿತಿ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದೆ. ಇಂದು ಸುದ್ದಿಗೋಷ್ಠಿ ನಡೆಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಈ ನಿರ್ಧಾರ ಪ್ರಕಟಿಸಿದರು. ರೆಪೋ ದರದಲ್ಲಿ ಶೇಕಡಾ 0.50 ಅಥವಾ 50 ಬೇಸಿಸ್ ಪಾಯಿಂಟ್‌ಗಳ ಹೆಚ್ಚಳವನ್ನು ಕೇಂದ್ರ ಬ್ಯಾಂಕ್ ಘೋಷಿಸಿದೆ.
ಪ್ರಸಕ್ತ ಸಾಲಿನ ಹಣಕಾಸು ಎರಡನೇ ತ್ರೈಮಾಸಿಕದಲ್ಲಿ ಶೇ 6.2 ರಷ್ಟು ಜಿಡಿಪಿ ಪ್ರಗತಿ ಅಂದಾಜಿಸಲಾಗಿದೆ. ಮೂರನೇ ತ್ರೈಮಾಸಿಕದಲ್ಲಿ ಶೇ 4.1 ಜಿಡಿಪಿ ಅಂದಾಜಿಸಲಾಗಿದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದರು. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು ಮೂರನೇ ರೆಪೋ ದರ ಏರಿಕೆಯಾಗಿದೆ. ಕಳೆದ ಜೂನ್ ತಿಂಗಳಲ್ಲಿ 50 ಮೂಲಾಂಶಗಳ ಏರಿಕೆಯೊಂದಿಗೆ ರೆಪೋ ದರ 4.90 ರಷ್ಟಿತ್ತು. ಇದೀಗ 50 ಮೂಲಾಂಶ ಏರಿಕೆಯೊಂದಿಗೆ 5.40 ರಷ್ಟಾಗಿದೆ.
ಇದನ್ನೂ ಓದಿ: ಮತ್ತೆ ರೆಪೋ ದರ ಏರಿಸಿದ RBI.. ಇಎಂಐ, ಸಾಲದ ಮೇಲಿನ ಬಡ್ಡಿ ದರ ಮತ್ತಷ್ಟು ದುಬಾರಿ
ಏನಿದು ರೆಪೋ ದರ?: ರೆಪೋ ದರ ಬ್ಯಾಂಕ್‌ಗೆ ಆರ್‌ಬಿಐ ಸಾಲ ನೀಡುವ ದರವಾಗಿದೆ. ಇದರ ಆಧಾರದ ಮೇಲೆ ಬ್ಯಾಂಕ್‌ಗಳು ಗ್ರಾಹಕರಿಗೆ ಸಾಲ ನೀಡುತ್ತವೆ. ಆರ್‌ಬಿಐ ರೆಪೊ ದರ ಹೆಚ್ಚಿಸಿದಾಗ, ಬ್ಯಾಂಕ್‌ಗಳ ಮೇಲಿನ ಹೊರೆಯೂ ಹೆಚ್ಚಾಗುತ್ತದೆ. ಇದರ ಪರಿಣಾಮ ಬಡ್ಡಿ ದರ ಏರಿಕೆಯ ಮೂಲಕ ಬ್ಯಾಂಕ್ ಗ್ರಾಹಕರ ಮೇಲೆ ಬೀಳುತ್ತದೆ.
