ETV Bharat / business

ಶೇರ್ ಟ್ರೇಡಿಂಗ್ ಮಾಡುವಿರಾ.. ಮೊದಲು ಈ ವಿಷಯಗಳನ್ನು ತಿಳಿದು ಹೂಡಿಕೆ ಮಾಡಿ..

author img

By

Published : Aug 13, 2022, 1:28 PM IST

Updated : Aug 13, 2022, 2:51 PM IST

ಹೂಡಿಕೆಯನ್ನು ರಕ್ಷಿಸುತ್ತಲೇ ಲಾಭ ಗಳಿಸಬೇಕು. ಇದು ಟ್ರೇಡಿಂಗ್​ನಲ್ಲಿ ಅನುಸರಿಸಬೇಕಾದ ಮುಖ್ಯ ತಂತ್ರವಾಗಿದೆ. ಸಣ್ಣ ಮೊತ್ತದೊಂದಿಗೆ ಟ್ರೇಡಿಂಗ್​ ಮಾಡುವಾಗ ಹೂಡಿಕೆಯ ಶೇಕಡಾ ಒಂದಕ್ಕಿಂತ ಹೆಚ್ಚು ನಷ್ಟವಾಗದಂತೆ ಎಚ್ಚರಿಕೆ ವಹಿಸಬೇಕು. ಹೀಗೆ ಮಾಡುವುದರಿಂದ ನೀವು ದೀರ್ಘಕಾಲದವರೆಗೆ ಟ್ರೇಡಿಂಗ್​ ಮಾಡಬಹುದು ಮತ್ತು ಲಾಭ ಪಡೆಯಬಹುದು.

ಶೇರ್ ಟ್ರೇಡಿಂಗ್ ಮಾಡುವಿರಾ? ಮೊದಲು ಈ ವಿಷಯಗಳನ್ನು ತಿಳಿದು ಹೂಡಿಕೆ ಮಾಡಿ..
Investors should know pros and cons before investing in stock market

ಹೈದರಾಬಾದ್​: ಇತ್ತೀಚೆಗೆ ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ಯುವಜನರ ಸಂಖ್ಯೆ ಹೆಚ್ಚುತ್ತಿದೆ ಎಂದು ಅಂಕಿ- ಅಂಶಗಳು ಹೇಳುತ್ತವೆ. ದೀರ್ಘಾವಧಿಯ ತಂತ್ರದೊಂದಿಗೆ ಹೂಡಿಕೆ ಮಾಡುವಾಗ ನಷ್ಟದ ಅಪಾಯವಿಲ್ಲ. ಆದರೆ, ಅಲ್ಪಾವಧಿಯಲ್ಲಿ ದುಪ್ಪಟ್ಟು ಲಾಭದ ನಿರೀಕ್ಷೆಯಲ್ಲಿ ಟ್ರೇಡಿಂಗ್ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿರುವುದು ಆತಂಕಕಾರಿ ಸಂಗತಿ.

ಸ್ಟಾಕ್ ಮಾರುಕಟ್ಟೆಯಲ್ಲಿನ ವಹಿವಾಟು ಅಲ್ಪಾವಧಿಯ ಹೂಡಿಕೆಗಳಲ್ಲಿ ಎಂದಿಗೂ ಉತ್ತಮ ಫಲಿತಾಂಶಗಳನ್ನು ನೀಡುವುದಿಲ್ಲ. ಶಿಸ್ತುಬದ್ಧ ದೀರ್ಘಕಾಲೀನ ಹೂಡಿಕೆದಾರರು ಲಾಭ ಪಡೆಯುತ್ತಾರೆ. ಆದ್ದರಿಂದ, ಹೂಡಿಕೆದಾರರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೊದಲು ಸಾಧಕ - ಬಾಧಕಗಳನ್ನು ತಿಳಿದಿರಬೇಕು.

ನೀವು ಇತ್ತೀಚೆಗೆ ಟ್ರೇಡ್ ಮಾಡಿದ್ದೀರಾ? ಏನೇ ಆದರೂ ನೀವು ಮಾಡಿದ ಟ್ರೇಡ್ ವಿವರಗಳನ್ನು ನಾಲ್ಕೈದು ಬಾರಿ ಪರಿಶೀಲಿಸಿ. ಏಕೆಂದರೆ.. ಶೇರ್ ಟ್ರೇಡಿಂಗ್ ಬಗ್ಗೆ ನಿಮಗೆ ಕಲಿಸಲು ವಿಶ್ವದ ಶ್ರೇಷ್ಠ ಪುಸ್ತಕವಾಗಿದೆ ನಿಮ್ಮ ಟ್ರೇಡಿಂಗ್ ಖಾತೆಯ ವಿವರ. ನೂರು ಟ್ರೇಡಿಂಗ್​ಗಳನ್ನು ಪೂರ್ಣಗೊಳಿಸಿದ ಸ್ಟಾಕ್ ಟ್ರೇಡರ್ ಒಬ್ಬ ಎಷ್ಟು ಸಾಧ್ಯವೋ ಅಷ್ಟೆಲ್ಲ ತಪ್ಪುಗಳನ್ನು ಮಾಡಿರುತ್ತಾನೆ ಎಂದು ತಜ್ಞರು ಅಂದಾಜಿಸಿದ್ದಾರೆ.

ತಪ್ಪುಗಳು ಮರುಕಳಿಸದಂತೆ ಕಾಳಜಿ ವಹಿಸಿ: ಆದ್ದರಿಂದ, ನಿಮ್ಮ ಟ್ರೇಡಿಂಗ್ ಮಾದರಿಯನ್ನು ಒಮ್ಮೆ ನೀವು ಗಮನಿಸಿದರೆ ಆ ತಪ್ಪುಗಳು ಮರುಕಳಿಸದಂತೆ ನೀವು ಕಾಳಜಿ ವಹಿಸಬಹುದು. ಷೇರುಪೇಟೆಯನ್ನು ಮೀರಿದ ‘ಹೂಡಿಕೆ ಗುರು’ ಬೇರೆ ಯಾರೂ ಇಲ್ಲ. ಟ್ರೇಡಿಂಗ್ ನಿಂದ ಹಣ ಕಳೆದುಕೊಂಡಿದ್ದೇವೆ ಎಂದು ಹಲವರು ಭಾವಿಸುತ್ತಾರೆ. ಆದರೆ, ಆ ನಷ್ಟವು ಯಾವ ಪಾಠಗಳನ್ನು ಕಲಿಸಿತು ಮತ್ತು ಅವಕಾಶಗಳನ್ನು ಗುರುತಿಸಲು ಮತ್ತು ಅವುಗಳನ್ನು ಲಾಭವಾಗಿ ಪರಿವರ್ತಿಸಲು ಏನು ಮಾಡಬೇಕು ಎಂಬುದನ್ನು ಅವರು ತಿಳಿಯದಿರುವುದು ವಿಪರ್ಯಾಸ. ಟ್ರೇಡಿಂಗ್ ಎನ್ನುವುದು ಒಂದು ಆಟದ ಹಾಗೆ ಎಂಬುದು ಗೊತ್ತಿರಲಿ.

ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಅನೇಕರು ನಷ್ಟವನ್ನು ಅನುಭವಿಸಬೇಕಾಗುತ್ತದೆ. ತಾವು ಆಯ್ದುಕೊಳ್ಳುವ ಶೇರ್ ಟ್ರೇಡಿಂಗ್ ಉತ್ತಮ ಲಾಭ ತಂದುಕೊಟ್ಟರೆ.. ತಮ್ಮ ನಿರ್ಧಾರವನ್ನು ಮೆಚ್ಚಿ, ಅಕಸ್ಮಾತ್ ನಷ್ಟವಾದರೆ ದುರಾದೃಷ್ಟವೇ ಕಾರಣ ಎಂದುಕೊಳ್ಳುತ್ತಾರೆ. ಇಲ್ಲಿ ನೆನಪಿಡಬೇಕಾದ ವಿಷಯವೆಂದರೆ.. ಟ್ರೇಡಿಂಗ್ ಒಂದು ಆಟವಾಗಿದೆ. ಗೆಲುವು ಮತ್ತು ನಷ್ಟಗಳು ವ್ಯಾಪಾರದ ಅವಿಭಾಜ್ಯ ಭಾಗವಾಗಿವೆ.

ತಂತ್ರಗಾರಿಕೆ, ಎಚ್ಚರಿಕೆ, ಸರಿಯಾದ ಊಹೆ: ನೀವು ಮಾಡಲಿರುವ ಸಾವಿರಾರು ಟ್ರೇಡಿಂಗ್ ವಹಿವಾಟುಗಳಲ್ಲಿ ಇದು ಕೇವಲ ಒಂದು. ನಿಮ್ಮ ತಂತ್ರ ಸರಿಯಾಗಿದ್ದರೆ.. ನೀವು ದೀರ್ಘಾವಧಿಯಲ್ಲಿ ಲಾಭ ಗಳಿಸಬಹುದು. ಮಾರುಕಟ್ಟೆಯು ನಿಮಗೆ ಪಾಠಗಳನ್ನು ಕಲಿಸಿದಂತೆ ನೀವು ಏನು ಮಾಡುತ್ತಿರುವಿರಿ ಎಂಬುದನ್ನು ಅರಿತುಕೊಳ್ಳಿ. ಒಂದು ಸಣ್ಣ ತಪ್ಪು ಕೂಡ ನಿಮ್ಮ ಸಂಪೂರ್ಣ ಹೂಡಿಕೆಯನ್ನು ಸೊನ್ನೆಯಾಗಿಸಬಹುದು.

ಮಾರುಕಟ್ಟೆಯಲ್ಲಿ ನೀವು ಸುರಕ್ಷಿತವಾಗಿರುವಂತೆ ಯಾವಾಗಲೂ ಹೂಡಿಕೆ ಮಾಡಿ. ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದವರಿಗೆ ಟ್ರೇಡಿಂಗ್ ಸೂಕ್ತವಲ್ಲ. ವಿಶೇಷವಾಗಿ, ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಇದ್ದಾಗ, ಅಂಥ ಏರಿಳಿತಗಳಿಂದ ನಷ್ಟವನ್ನು ಕವರ್ ಮಾಡಲಾಗುತ್ತದೆ. ಏನು ಮಾಡಬೇಕು ಮತ್ತು ಯಾವಾಗ ಮಾಡಬೇಕು ಈ ಎರಡು ಅಂಶಗಳು ಟ್ರೇಡಿಂಗ್​ನಲ್ಲಿ ಅರ್ಧದಷ್ಟು ಯಶಸ್ಸಿಗೆ ಕಾರಣವಾಗುತ್ತವೆ.

ಹೂಡಿಕೆಯನ್ನು ರಕ್ಷಿಸುತ್ತಲೇ ಲಾಭ ಗಳಿಸಬೇಕು. ಇದು ಟ್ರೇಡಿಂಗ್​ನಲ್ಲಿ ಅನುಸರಿಸಬೇಕಾದ ಮುಖ್ಯ ತಂತ್ರವಾಗಿದೆ. ಸಣ್ಣ ಮೊತ್ತದೊಂದಿಗೆ ಟ್ರೇಡಿಂಗ್​ ಮಾಡುವಾಗ ಹೂಡಿಕೆಯ ಶೇಕಡಾ ಒಂದಕ್ಕಿಂತ ಹೆಚ್ಚು ನಷ್ಟವಾಗದಂತೆ ಎಚ್ಚರಿಕೆ ವಹಿಸಬೇಕು. ಹೀಗೆ ಮಾಡುವುದರಿಂದ ನೀವು ದೀರ್ಘಕಾಲದವರೆಗೆ ಟ್ರೇಡಿಂಗ್​ ಮಾಡಬಹುದು ಮತ್ತು ಲಾಭ ಪಡೆಯಬಹುದು. ಲಾಭವು ನಷ್ಟವನ್ನು ಮೀರಿಸುವವರೆಗೆ, ನಿಮ್ಮ ತಂತ್ರಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದುಕೊಳ್ಳಿ. ಸಣ್ಣ ಮೊತ್ತದ ಟ್ರೇಡಿಂಗ್​ಗಳನ್ನು​ ಮಾಡುವುದರಿಂದ ಒಮ್ಮೆಲೇ ದೊಡ್ಡ ನಷ್ಟವಾಗುವುದನ್ನು ತಪ್ಪಿಸಬಹುದು.

ನೋಡಿ ಕಲಿಯುವುದರಲ್ಲಿ ತಪ್ಪೇನಿಲ್ಲ: ಟ್ರೇಡಿಂಗ್​ನಲ್ಲಿ ಯಶಸ್ವಿಯಾದವರನ್ನು ನೋಡಿ ಕಲಿಯುವುದರಲ್ಲಿ ತಪ್ಪೇನಿಲ್ಲ. ಆದರೆ, ಅವರ ತಂತ್ರಗಳನ್ನೇ ಕುರುಡಾಗಿ ಅನುಸರಿಸುವುದು ತಪ್ಪು. ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ತಮ್ಮ ಸಾಧನೆಗಳನ್ನು ಹೇಳಿಕೊಳ್ಳುತ್ತಿರುತ್ತಾರೆ. ಆದರೆ ಅವರು ಆ ತಂತ್ರಗಳನ್ನು ತುಂಬಾ ಪರಿಶ್ರಮದಿಂದ ಕಲಿತಿರುತ್ತಾರೆ. ಅವುಗಳನ್ನು ಅರ್ಥಮಾಡಿಕೊಳ್ಳದೆ ಅನುಕರಿಸಬೇಡಿ. ಒಬ್ಬ ಟ್ರೇಡರ್ ಹಣದೊಂದಿಗೆ ತನ್ನ ಅಮೂಲ್ಯ ಸಮಯವನ್ನು ಖರ್ಚು ಮಾಡಿ ಟ್ರೇಡಿಂಗ್ ಮಾಡುತ್ತಾನೆ. ಸಾಮಾಜಿಕ ಜಾಲತಾನಗಳಲ್ಲಿ ಬರುವ ಮೆಸೇಜ್​ಗಳನ್ನು ನೋಡಿ ಯಾವುದೋ ಶೇರ್ ಮೇಲೆ ಏಕಾಏಕಿ ದುಡ್ಡು ಹಾಕುವುದು ಎಂದಿಗೂ ಸರಿಯಲ್ಲ.

ಶೇರ್ ಟ್ರೇಡಿಂಗ್ ಪ್ರಾರಂಭಿಸುವಾಗ ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಹೂಡಿಕೆ, ಆದಾಯ ಹೇಗೆ ಬರುತ್ತದೆ, ವೆಚ್ಚಗಳೇನು ಮತ್ತು ನಷ್ಟದ ಸಾಧ್ಯತೆಗಳ ಬಗ್ಗೆ ಪರಿಶೀಲಿಸಬೇಕು. ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಮೊದಲು ಇವುಗಳನ್ನು ರಕ್ಷಿಸಲು ಅಗತ್ಯ ಸಂಪನ್ಮೂಲಗಳನ್ನು ನೀವು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ. ಟ್ರೇಡಿಂಗ್ ಖಾತೆಯೊಂದನ್ನು ತೆರೆಯುವುದು, ಷೇರು ಖರೀದಿಸುವುದು ಟ್ರೇಡಿಂಗ್ ಎಂದರೆ ಇದಿಷ್ಟೇ ಎಂದು ಅನೇಕರು ತಿಳಿದುಕೊಂಡಿದ್ದಾರೆ. ಆದರೆ ಇದು ಟ್ರೇಡಿಂಗ್​ ಅಲ್ಲ. ಟ್ರೇಡಿಂಗ್​ ಎಂಬುದು ತುಂಬಾ ಸಂಕೀರ್ಣ ಕೆಲಸವಾಗಿದೆ.

ತಾಳ್ಮೆ ಬಹಳ ಮುಖ್ಯ: ಮಾರುಕಟ್ಟೆಯನ್ನು ಹತ್ತಿರದಿಂದ ನೋಡಿದವರಿಗೆ, ಮಾರುಕಟ್ಟೆಯು ಹಣ ಸಂಪಾದಿಸಲು ಸೀಮಿತ ಅವಕಾಶಗಳನ್ನು ನೀಡುತ್ತದೆ ಎಂಬ ತತ್ವ ತಿಳಿದಿರುತ್ತದೆ. ಆದ್ದರಿಂದ, ಅವರು ಅಂಥ ಅವಕಾಶಗಳಿಗಾಗಿ ತಾಳ್ಮೆಯಿಂದ ಕಾಯುತ್ತಾರೆ. 10 ರಲ್ಲಿ ಮೂರು ಅಥವಾ ನಾಲ್ಕು ಬಾರಿ ಮಾತ್ರ ನಿರ್ಧಾರಗಳು ಸರಿ ಆಗಬಹುದು. ಇನ್ನುಳಿದ ಹೆಚ್ಚಿನ ಸಂದರ್ಭಗಳಲ್ಲಿ ನಷ್ಟದ ಅಪಾಯಕ್ಕೆ ಒಡ್ಡಿಕೊಳ್ಳಲು ಸಿದ್ಧವಿರಬೇಕಾಗುತ್ತದೆ.

ಶೇರ್ ಟ್ರೇಡಿಂಗ್ ಎಂಬುದು ಒಂದು ಯಂತ್ರದಂತೆ ಮತ್ತು ಅದರ ಎಲ್ಲ ಬಿಡಿ ಭಾಗಗಳು ಸರಿಯಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಅದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಶೇರ್ ಮಾರ್ಕೆಟ್​ನಲ್ಲಿ ಟ್ರೇಡಿಂಗ್ ಮಾಡುವವರು ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಟ್ರೇಡಿಂಗ್ ಮಾಡಲು ಕಲಿಯಲು ಪ್ರಯತ್ನಿಸುವಾಗ ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿ. ಯಾವುದೇ ಸಂದರ್ಭದಲ್ಲೂ ಸಾಲ ಮಾಡಿ ಟ್ರೇಡಿಂಗ್ ಮಾಡಬೇಡಿ.

ಲಾಭವಾದಾಗ ಅತಿ ಉತ್ಸಾಹ ತೋರಬೇಡಿ, ಹಾಗೆಯೇ ನಷ್ಟವಾದಾಗ ಚಿಂತೆಗೆ ಬೀಳಬೇಡಿ. ನೀವು ನಿಮ್ಮ ಭಾವನೆಗಳ ಮೇಲೆ ನಿಯಂತ್ರಣ ಹೊಂದಿದ್ದರೆ ಮತ್ತು ಲಾಭ ನಷ್ಟಗಳನ್ನು ಸಮಾನವಾಗಿ ತಡೆಯುವ ಸಾಮರ್ಥ್ಯ ಇದ್ದರೆ ಮಾತ್ರ ಟ್ರೇಡಿಂಗ್ ಮಾಡಿ ಎನ್ನುತ್ತಾರೆ ಎಂದು ಟ್ರೇಡ್‌ಸ್ಮಾರ್ಟ್‌ನ ಸಿಇಒ ವಿಕಾಸ್ ಸಿಂಘಾನಿಯಾ.

ಇದನ್ನು ಓದಿ:ಅರ್ಜೆಂಟೀನಾದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಹಣದುಬ್ಬರ: ಕಂಗಾಲಾದ ಜನರು

Last Updated : Aug 13, 2022, 2:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.