ETV Bharat / business

ಜಾಗತಿಕ ಆರ್ಥಿಕ ಬೆಳವಣಿಗೆ 3 ದಶಕಗಳಲ್ಲೇ ಕನಿಷ್ಠ: ಭಾರತ. ಚೀನಾ ವಿಶ್ವಕ್ಕೆ ಆಶಾಕಿರಣ

author img

By

Published : Apr 7, 2023, 12:46 PM IST

ಈ ವರ್ಷ ಜಾಗತಿಕ ಆರ್ಥಿಕ ಬೆಳವಣಿಗೆ ದರವು ಶೇಕಡಾ ಮೂರಕ್ಕಿಂತ ಕಡಿಮೆಯಾಗಬಹುದು ಎಂದು ಐಎಂಎಫ್ ಮುಖ್ಯಸ್ಥ ಕ್ರಿಸ್ಟಲಿನಾ ಜಾರ್ಜಿವಾ ಎಚ್ಚರಿಸಿದ್ದಾರೆ. ಕೊರೊನಾ ವೈರಸ್ ಮತ್ತು ರಷ್ಯಾ ಉಕ್ರೇನ್ ಯುದ್ಧದಿಂದಾಗಿ ಜಾಗತಿಕ ಆರ್ಥಿಕತೆಯು 1990 ರ ನಂತರ ಅತ್ಯಂತ ದುರ್ಬಲ ಸ್ಥಿತಿಯತ್ತ ಸಾಗುತ್ತಿದೆ ಮತ್ತು ಇದು ಮುಂದಿನ ಐದು ವರ್ಷಗಳವರೆಗೆ ಇದೇ ರೀತಿಯಲ್ಲಿ ಉಳಿಯುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಜಾಗತಿಕ ಆರ್ಥಿಕ ಬೆಳವಣಿಗೆ 3 ದಶಕಗಳಲ್ಲೇ ಕನಿಷ್ಠ: ಭಾರತ. ಚೀನಾ ವಿಶ್ವಕ್ಕೆ ಆಶಾಕಿರಣ
Global economy heading for weakest phase of growth since 1990s: IMF chief

ಬೆಂಗಳೂರು : ವಿಶ್ವದ ಆರ್ಥಿಕ ಪರಿಸ್ಥಿತಿಯು ಪ್ರಸ್ತುತ ಕಳೆದ ಮೂರು ದಶಕಗಳಲ್ಲೇ ಅತ್ಯಂತ ದುರ್ಬಲ ಸ್ಥಿತಿಯಲ್ಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಎಚ್ಚರಿಕೆ ಹೇಳಿದ್ದು, ಮುಂದಿನ ಐದು ವರ್ಷಗಳಲ್ಲಿ ಜಾಗತಿಕ ಆರ್ಥಿಕ ದೃಷ್ಟಿಕೋನದ ಬಗ್ಗೆ ಎಚ್ಚರಿಕೆ ನೀಡಿದೆ. ಭೌಗೋಳಿಕ ರಾಜಕೀಯ ಒತ್ತಡದಿಂದ ಉಂಟಾಗುವ ಆರ್ಥಿಕ ಬಿಕ್ಕಟ್ಟನ್ನು ತಪ್ಪಿಸಲು ರಾಷ್ಟ್ರಗಳನ್ನು ಒತ್ತಾಯಿಸಿರುವ ಐಎಂಎಫ್ ಉತ್ಪಾದಕತೆಯನ್ನು ಹೆಚ್ಚಿಸುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡಿದೆ.

ವರದಿಯ ಪ್ರಕಾರ, ಹೆಚ್ಚಿನ ಬಡ್ಡಿದರಗಳ ಕಾರಣದಿಂದ ಮುಂದಿನ ಅರ್ಧ ದಶಕದಲ್ಲಿ ವಿಶ್ವದ ಆರ್ಥಿಕತೆಯು ಕೇವಲ ಸುಮಾರು 3 ಪ್ರತಿಶತದಷ್ಟು ವಿಸ್ತರಿಸಬಹುದು ಎಂದು ಐಎಂಎಫ್​ನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಗುರುವಾರ ವಾಷಿಂಗ್ಟನ್‌ನಲ್ಲಿ ತಿಳಿಸಿದ್ದಾರೆ. ಇದು 1990 ರ ನಂತರ ಅತಿ ಕಡಿಮೆ ಪ್ರಮಾಣದ ಮಧ್ಯಮ ಅವಧಿಯ ಬೆಳವಣಿಗೆಯ ಮುನ್ಸೂಚನೆಯಾಗಿದೆ ಮತ್ತು ಕಳೆದ ಎರಡು ದಶಕಗಳಿಂದ ಐದು ವರ್ಷಗಳ ಸರಾಸರಿ ಬೆಳವಣಿಗೆ ದರವಾಗಿರುವ ಶೇಕಡಾ 3.8 ಕ್ಕಿಂತ ಕಡಿಮೆಯಾಗಿದೆ.

ಜಾಗತಿಕ ಒಟ್ಟು ದೇಶೀಯ ಉತ್ಪನ್ನವು ಶೇಕಡಾ 3 ಕ್ಕಿಂತ ಕಡಿಮೆಯಿರುವ ಸಾಧ್ಯತೆಯಿದೆ. ಇದು ಐಎಂಎಫ್​​ನ ಜನವರಿಯ ಮುನ್ಸೂಚನೆಯಾಗಿದ್ದ ಶೇ 2.9ಕ್ಕೆ ಅನುಗುಣವಾಗಿದೆ ಎಂದು ಕ್ರಿಸ್ಟಲಿನಾ ಜಾರ್ಜಿವಾ ತಿಳಿಸಿದ್ದಾರೆ. ಬಿಗಿಯಾದ ವಿತ್ತೀಯ ನೀತಿಗಳ ಕಾರಣದಿಂದ ಬೇಡಿಕೆಗಳು ಕಡಿಮೆಯಾಗುತ್ತವೆ ಮತ್ತು ಅಮೆರಿಕ - ಯೂರೋಪಿಯನ್ ದೇಶಗಳಲ್ಲಿ ಆರ್ಥಿಕ ಚಟುವಟಿಕೆಯು ನಿಧಾನಗೊಳ್ಳುವುದರಿಂದ ಸುಮಾರು ಶೇ 90 ರಷ್ಟು ಮುಂದುವರಿದ ಆರ್ಥಿಕತೆಗಳ ಬೆಳವಣಿಗೆ ಈ ವರ್ಷ ನಿಧಾನಗೊಳ್ಳಲಿದೆ ಎಂದು ಐಎಂಎಫ್ ಹೇಳಿದೆ. ವಿಶ್ವಬ್ಯಾಂಕ್‌ನೊಂದಿಗೆ ನಡೆದ ಚಳಿಗಾಲದ ಸಭೆಗಳ ಭಾಗವಾಗಿ ಐಎಂಎಫ್​ ಏಪ್ರಿಲ್ 11 ರಂದು ಹೆಚ್ಚು ವಿವರವಾದ ವರ್ಲ್ಡ್ ಎಕನಾಮಿಕ್ ಔಟ್‌ಲುಕ್ ವರದಿಯನ್ನು ಬಿಡುಗಡೆ ಮಾಡಲು ಯೋಜಿಸಿದೆ.

ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣದ ಕಾರಣದಿಂದ ಈಗಾಗಲೇ ಯುಎಸ್ ಮತ್ತು ಚೀನಾ ನಡುವಿನ ಸಂಬಂಧ ಹದಗೆಟ್ಟಿದೆ. ಈ ಮಧ್ಯೆ ಜಾಗತಿಕ ಹಣದುಬ್ಬರ ಬಿಕ್ಕಟ್ಟನ್ನು ಉಲ್ಬಣಗೊಳಿಸಿದ್ದು, ಪ್ರಪಂಚದಾದ್ಯಂತ ಆಹಾರ ಬಿಕ್ಕಟ್ಟನ್ನು ಸೃಷ್ಟಿಸಿದೆ. ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಹೆಚ್ಚುತ್ತಿರುವ ಹಣದುಬ್ಬರಗಳ ಕಾರಣದಿಂದ ಜಾಗತಿಕ ಆರ್ಥಿಕ ಸ್ಥಿತಿಯ ದೃಢವಾದ ಚೇತರಿಕೆಯು ಅಸ್ಪಷ್ಟವಾಗಿ ಉಳಿದಿದೆ ಎಂದು ಜಾರ್ಜಿವಾ ಹೇಳಿದರು.

ಆದಾಗ್ಯೂ ಕೆಲ ಉದಯೋನ್ಮುಖ ದೇಶಗಳ ಮಾರುಕಟ್ಟೆಗಳು ಪ್ರಬಲವಾಗುತ್ತಿವೆ. ಅದರಲ್ಲೂ ವಿಶೇಷವಾಗಿ ಏಷ್ಯಾದಲ್ಲಿ, ಭಾರತ ಮತ್ತು ಚೀನಾ ಜಾಗತಿಕ ಆರ್ಥಿಕ ಬೆಳವಣಿಗೆಗೆ ಅರ್ಧದಷ್ಟು ಪಾಲು ನೀಡಲಿವೆ ಎಂದು ನಿರೀಕ್ಷಿಸಲಾಗಿದೆ. ಆದರೆ ಕಡಿಮೆ ಆದಾಯದ ರಾಷ್ಟ್ರಗಳ ಸರಕುಗಳಿಗೆ ಬೇಡಿಕೆ ಕಡಿಮೆಯಾಗಿ ಅವುಗಳ ರಫ್ತು ಪ್ರಮಾಣ ಕುಸಿಯಬಹುದು. ಹೀಗಾಗಿ ಈ ರಾಷ್ಟ್ರಗಳ ತಲಾದಾಯ ಬೆಳವಣಿಗೆಯು ಅಭಿವೃದ್ಧಿಶೀಲ ರಾಷ್ಟ್ರಗಳಿಗಿಂತ ಕೆಳಮಟ್ಟಕ್ಕೆ ಉಳಿಯುವ ಸಾಧ್ಯತೆಗಳಿವೆ. ಕೊರೊನಾ ವೈರಸ್​ ಸಮಯದಲ್ಲಿ ಉಂಟಾದ ಬಡತನ ಮತ್ತು ಹಸಿವಿನ ಪ್ರಮಾಣ ಮತ್ತು ಹೆಚ್ಚಾಗಬಹುದು.

ಮಂಕಾದ ಬೆಳವಣಿಗೆಯ ದೃಷ್ಟಿಕೋನದ ಹೊರತಾಗಿಯೂ, ಹೆಚ್ಚಿನ ಹಣದುಬ್ಬರದ ಕಾರಣದಿಂದ ಅಮೆರಿಕ ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿ ಕೇಂದ್ರೀಯ ಬ್ಯಾಂಕುಗಳು ಬಡ್ಡಿದರಗಳನ್ನು ಹೆಚ್ಚಿಸುವುದನ್ನು ಮುಂದುವರಿಸಬೇಕು ಎಂದು ಜಾರ್ಜಿವಾ ಹೇಳಿದರು. ಬ್ಯಾಂಕಿಂಗ್ ವ್ಯವಸ್ಥೆಯು ಅಸ್ಥಿರವಾಗಿದ್ದರೆ ನೀತಿ ನಿರೂಪಕರು ಹಣದುಬ್ಬರ ಮತ್ತು ಹಣಕಾಸು ವ್ಯವಸ್ಥೆಯನ್ನು ರಕ್ಷಿಸುವ ನಡುವೆ ಹೆಚ್ಚು ಸಂಕೀರ್ಣವಾದ ವ್ಯಾಪಾರ ವಹಿವಾಟುಗಳನ್ನು ಎದುರಿಸಬೇಕಾಗುತ್ತದೆ ಎಂದು ಜಾರ್ಜಿವಾ ತಿಳಿಸಿದರು.

ಇದನ್ನೂ ಓದಿ : ವಿಶ್ವ ಆರೋಗ್ಯ ದಿನ 2023: ಎಲ್ಲರಿಗೂ ಆರೋಗ್ಯ ಈ ವರ್ಷದ ಘೋಷವಾಕ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.