ETV Bharat / business

ಅಮೆರಿಕದಲ್ಲಿ ಬೃಹತ್ ಬ್ಯಾಟರಿ ಕಾರ್ಖಾನೆ ಆರಂಭಿಸಲಿದೆ ಹ್ಯುಂಡೈ ಮೋಟಾರ್ಸ್​

author img

By

Published : Apr 25, 2023, 4:54 PM IST

ಅಮೆರಿಕದಲ್ಲಿ 4.9 ಬಿಲಿಯನ್ ಡಾಲರ್ ವೆಚ್ಚದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಬ್ಯಾಟರಿ ಘಟಕ ನಿರ್ಮಾಣ ಮಾಡುವುದಾಗಿ ಹ್ಯುಂಡೈ ಮೋಟರ್​ ಗ್ರೂಪ್ ಘೋಷಣೆ ಮಾಡಿದೆ.

Hyundai, SK On to build $4.9 bn EV battery plant in US
Hyundai, SK On to build $4.9 bn EV battery plant in US

ಸಿಯೋಲ್ : ಎಸ್​ಕೆ ಗ್ರೂಪ್​ನ (SK Group) ಬ್ಯಾಟರಿ ಘಟಕ ಎಸ್​ಕೆ ಆನ್ (SK On) ಸಹಯೋಗದಲ್ಲಿ ಅಮೆರಿಕದಲ್ಲಿ 6.5 ಟ್ರಿಲಿಯನ್ ವಾನ್ (4.9 ಬಿಲಿಯನ್ ಡಾಲರ್) ವೆಚ್ಚದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಬ್ಯಾಟರಿ ತಯಾರಿಕಾ ಘಟಕ ಸ್ಥಾಪಿಸುವುದಾಗಿ ಹ್ಯುಂಡೈ ಮೋಟರ್​ ಗ್ರೂಪ್ ತಿಳಿಸಿದೆ. ಹುಂಡೈ ಮೋಟಾರ್ ಗ್ರೂಪ್‌ನ ಮೂರು ಪ್ರಮುಖ ಅಂಗಸಂಸ್ಥೆಗಳಾದ ಹುಂಡೈ ಮೋಟಾರ್, ಕಿಯಾ ಮತ್ತು ಹ್ಯುಂಡೈ ಮೊಬಿಸ್ ಮಂಗಳವಾರ ನಡೆದ ತಮ್ಮ ಪ್ರತ್ಯೇಕ ಮಂಡಳಿಯ ಸಭೆಗಳಲ್ಲಿ ಹೂಡಿಕೆ ಯೋಜನೆ ಅನುಮೋದಿಸಿವೆ. ಎಸ್‌ ಕೆ ಆನ್ ಗುರುವಾರ ಯೋಜನೆಗೆ ಅನುಮೋದನೆ ನೀಡಲು ಮಂಡಳಿಯ ಸಭೆ ನಡೆಸಲು ಯೋಜಿಸಿದೆ.

50:50 ಜಂಟಿ ಉದ್ಯಮದ ಅಡಿಯಲ್ಲಿ ಹ್ಯುಂಡೈ ಮೋಟಾರ್ ಗ್ರೂಪ್ ಮತ್ತು ಎಸ್‌ಕೆ ಆನ್ ಜಾರ್ಜಿಯಾದ ಬಾರ್ಟೋ ಕೌಂಟಿಯಲ್ಲಿ ಬ್ಯಾಟರಿ ಸ್ಥಾವರ ನಿರ್ಮಿಸಲು ಯೋಜಿಸಿವೆ. ಸ್ಥಾವರವು 2025 ರ ದ್ವಿತೀಯಾರ್ಧದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸುವ ಗುರಿ ಹೊಂದಿದೆ ಎಂದು ಹ್ಯುಂಡೈ ಮೋಟಾರ್ ಗ್ರೂಪ್ ತಿಳಿಸಿದೆ. ಬ್ಯಾಟರಿ ಸ್ಥಾವರವು ವರ್ಷಕ್ಕೆ 35 ಗಿಗಾವ್ಯಾಟ್ ಗಂಟೆಗಳ (GWh) ಸಾಮರ್ಥ್ಯದ ಬ್ಯಾಟರಿಗಳನ್ನು ಉತ್ಪಾದಿಸುತ್ತದೆ. ಇದರಲ್ಲಿ ಹೆಚ್ಚಿನ ಬ್ಯಾಟರಿಗಳನ್ನು ಹ್ಯುಂಡೈ ಮೋಟಾರ್ ಮತ್ತು ಕಿಯಾದ ಅಮೆರಿಕದ ಕಾರ್ಖಾನೆಗಳಲ್ಲಿ ಪ್ರತಿವರ್ಷ ತಯಾರಿಸಲಾಗುವ ಸುಮಾರು 3,00,000 ಎಲೆಕ್ಟ್ರಿಕ್ ವೆಹಿಕಲ್​ಗಳಿಗೆ ಬ್ಯಾಟರಿ ಜೋಡಿಸಲು ಬಳಸಲಾಗುತ್ತದೆ ಎಂದು ಹ್ಯುಂಡೈ ಹೇಳಿದೆ.

ಹೊಸ ಬ್ಯಾಟರಿ ಪ್ಲಾಂಟ್ ಹ್ಯುಂಡೈನ ಅಲಬಾಮಾ ಸ್ಥಾವರ, ಕಿಯಾಸ್ ಜಾರ್ಜಿಯಾ ಸ್ಥಾವರ ಮತ್ತು ಜಾರ್ಜಿಯಾದಲ್ಲಿ ನಿರ್ಮಾಣವಾಗುತ್ತಿರುವ ಆಟೋಮೋಟಿವ್ ಗ್ರೂಪ್‌ನ ಮೀಸಲಾದ ಎಲೆಕ್ಟ್ರಿಕ್ ವೆಹಿಕಲ್ ಮತ್ತು ಬ್ಯಾಟರಿ ಸ್ಥಾವರಕ್ಕೆ ಹತ್ತಿರದಲ್ಲಿ ಸ್ಥಾಪನೆಯಾಗುತ್ತಿದೆ. ಮಾರಾಟದ ದೃಷ್ಟಿಯಿಂದ ನೋಡುವುದಾದರೆ ಹ್ಯುಂಡೈ ಮೋಟಾರ್ ಮತ್ತು ಕಿಯಾ ಒಟ್ಟಾಗಿ ಟೊಯೊಟಾ ಮೋಟಾರ್ ಮತ್ತು ಫೋಕ್ಸ್‌ವ್ಯಾಗನ್ ಗ್ರೂಪ್ ನಂತರ ವಿಶ್ವದ ಮೂರನೇ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿದೆ.

ಹ್ಯುಂಡೈ ಮೋಟಾರ್ ಗ್ರೂಪ್ ಎಸ್​ಕೆ ಆನ್‌ನೊಂದಿಗೆ ಬ್ಯಾಟರಿ ತಯಾರಿಸಲು ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದ ಐದು ತಿಂಗಳ ನಂತರ ಈ ಪ್ರಕಟಣೆ ಹೊರಬಿದ್ದಿದೆ. ಕಳೆದ ಆಗಸ್ಟ್​ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್​ ಹಣದುಬ್ಬರ ಇಳಿಕೆ ಕಾನೂನಿಗೆ ಸಹಿ ಹಾಕಿದ್ದರು. ಈ ಕಾನೂನಿನ ಅಡಿ, ಉತ್ತರ ಅಮೆರಿಕದಲ್ಲಿ ತಯಾರಾದ ಎಲೆಕ್ಟ್ರಿಕ್ ಕಾರುಗಳಿಗೆ 7,500 ಡಾಲರ್​ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಬೇರೆ ಕಡೆ ಅಸೆಂಬಲ್ ಮಾಡಲಾದ ಕಾರುಗಳಿಗೆ ಈ ವಿನಾಯಿತಿ ಲಭ್ಯವಿಲ್ಲ.

ಆದರೆ ಹ್ಯುಂಡೈ ಮತ್ತು ಕಿಯಾ ಕಂಪನಿಗಳು ತಮ್ಮ ಬಹುತೇಕ ಕಾರುಗಳನ್ನು ಅಮೆರಿಕದಿಂದ ಹೊರಗೆ ತಯಾರಿಸುತ್ತವೆ ಮತ್ತು ಅಮೆರಿಕಕ್ಕೆ ರಫ್ತು ಮಾಡುತ್ತವೆ. ಹೀಗಾಗಿ ಇವು ಅಮೆರಿಕದ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಹಿನ್ನಡೆ ಅನುಭವಿಸಬಹುದು ಎನ್ನಲಾಗಿದೆ. ಅಕ್ಟೋಬರ್‌ನಲ್ಲಿ, ಹ್ಯುಂಡೈ ಮೋಟಾರ್ ಗ್ರೂಪ್ ಜಾರ್ಜಿಯಾದಲ್ಲಿ ವರ್ಷಕ್ಕೆ 3,00,000 ಯೂನಿಟ್ ಎಲೆಕ್ಟ್ರಿಕ್ ವೆಹಿಕಲ್ ಮತ್ತು ಬ್ಯಾಟರಿ ಸ್ಥಾವರದ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿತ್ತು. 2025 ರ ಮೊದಲಾರ್ಧದಲ್ಲಿ ವಾಣಿಜ್ಯ ಉತ್ಪಾದನೆ ಪ್ರಾರಂಭಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ : ನಿಯಂತ್ರಿತ ಔಷಧ ಪೂರೈಕೆಗಾಗಿ ಲಿಕ್ವಿಡ್ ಮಾರ್ಬಲ್ ತಯಾರಿಸಿದ ಸಂಶೋಧಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.