ETV Bharat / business

ಮಳೆ ಅವಾಂತರಕ್ಕೆ ಐಟಿಬಿಟಿ ಕಂಪನಿಗಳೂ ಕಾರಣ: ಮೋಹನ್ ದಾಸ್ ಪೈಗೆ ಬಹಿರಂಗ ಪತ್ರ ಬರೆದ ಎನ್ ಆರ್ ರಮೇಶ್!

author img

By

Published : Sep 8, 2022, 1:19 PM IST

ಬೆಂಗಳೂರು ಮಳೆ ಮತ್ತು ಐಟಿ ಬಿಟಿ ಕಂಪನಿಗಳಿಗೆ ನಷ್ಟ ಕುರಿತು ಉದ್ಯಮಿ ಮೋಹನದಾಸ್​ ಪೈ ಸರ್ಕಾರಕ್ಕೆ ಬರೆದಿದ್ದ ಪತ್ರಕ್ಕೆ ಬಿಜೆಪಿ ಮುಖಂಡ ಎನ್​ ಆರ್​ ರಮೇಶ್ ಬಹಿರಂಗ​ ಪತ್ರ ಬರೆದು ಟಾಂಗ್​ ಕೊಟ್ಟಿದ್ದಾರೆ.

Bengaluru rain effect
ಬೆಂಗಳೂರು ಮಳೆ ಅವಾಂತರ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಇಂದಿನ ಮಳೆ ನೀರಿನ ಅವಾಂತರಕ್ಕೆ ಅತ್ಯಂತ ಪ್ರಮುಖ ಕಾರಣಗಳಲ್ಲಿ ತಾವು ಪ್ರತಿನಿಧಿಸುತ್ತಿರುವ ಬೆಂಗಳೂರು ಮಹಾನಗರದ ಐಟಿ ಬಿಟಿ ಕಂಪನಿಗಳು ಮತ್ತು ಟೆಕ್ ಪಾರ್ಕ್ ಗಳೂ ಸಹ ಕಾರಣ, ಐಟಿ ಸಂಸ್ಥೆಯ ಕಟ್ಟಡಗಳ ನಿರ್ಮಾಣದ ಹಂತದಲ್ಲಿ ಆ ಭಾಗಗಳಲ್ಲಿದ್ದಂತಹ ರಾಜಕಾಲುವೆಗಳನ್ನು ಮತ್ತು ರಾಜಕಾಲುವೆಗಳ ಬಫ್ಫರ್ ಜೋನ್ ಗಳನ್ನು ಬಹುತೇಕ ಒತ್ತುವರಿ ಮಾಡಿಕೊಂಡ ಪರಿಣಾಮ ಇಷ್ಟೆಲ್ಲಾ ಅವಾಂತರವಾಗಿದೆ ಎಂದು ಸೇವ್ ಬೆಂಗಳೂರು ಹೆಸರಿನಲ್ಲಿ ಮುಖ್ಯಮಂತ್ರಿ ಮತ್ತು ಪ್ರಧಾನಿಗೆ ಪತ್ರ ಬರೆದಿರುವ ಐಟಿ ಉದ್ಯಮಿ ಮೋಹನ್ ದಾಸ್ ಪೈಗೆ ಬಹಿರಂಗ ಪತ್ರದ ಮೂಲಕ ಬಿಜೆಪಿ ನಾಯಕ ಎನ್ ಆರ್‌ ರಮೇಶ್ ಟಾಂಗ್ ನೀಡಿದ್ದಾರೆ.

ಐದು ಪುಟಗಳ ಸುದೀರ್ಘ ಬಹಿರಂಗ ಪತ್ರ.. ಬರೆದಿರುವ ಅವರು, ಬೆಂಗಳೂರು ಮಹಾನಗರದಲ್ಲಿ ನಿರ್ಮಾಣಗೊಂಡು ಪ್ರಾರಂಭವಾದ ಐಟಿ ಬಿಟಿ ಸಂಸ್ಥೆಗಳು ಮತ್ತು ಟೆಕ್ ಪಾರ್ಕ್, ಬ್ಯುಸಿನೆಸ್ ಪಾರ್ಕ್ ಗಳ ಅನುಕೂಲಕ್ಕೆಂದೇ 1999 ರಿಂದ 2004 ರ 05 ವರ್ಷಗಳ ಅವಧಿಯಲ್ಲಿ ಬೆಂಗಳೂರು ಮಹಾನಗರದಲ್ಲಿ ಸುಮಾರು 4,500 ಕಿ. ಮೀ. ಗಳಷ್ಟು ಉದ್ದದ ರಸ್ತೆಗಳಲ್ಲಿ ಒಎಫ್ಸಿ ಡಕ್ಟ್ ಗಳನ್ನು ಹಾಕಿಕೊಳ್ಳಲು "ರಸ್ತೆ ಅಗೆತ ಶುಲ್ಕಗಳನ್ನು ಪಡೆದುಕೊಳ್ಳದೇ, ಸಂಪೂರ್ಣ ಉಚಿತವಾಗಿ ಅನುಮತಿಯನ್ನು ನೀಡಲಾಗಿತ್ತು ಮತ್ತು 4,500 ಕಿ. ಮೀ. ಉದ್ದದ ರಸ್ತೆಗಳ ಪುನಶ್ಚತನ ಕಾರ್ಯಕ್ಕೆಂದೇ ಸುಮಾರು 3,000 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ರಾಜ್ಯ ಸರ್ಕಾರವು ತನ್ನ ಖಜಾನೆಯಿಂದ ಭರಿಸಿತ್ತು ಎಂದು ಐಟಿ ಕಂಪನಿಗಳು ಸರ್ಕಾರದಿಂದ ಪಡೆದುಕೊಂಡಿರುವ ಅನುಕೂಲಗಳ ಬಗ್ಗೆ ಉಲ್ಲೇಖಿಸಿದ್ದಾರೆ.

bjp leader nr ramesh open letter to mohandas pai
ಉದ್ಯಮಿ ಮೋಹನದಾಸ್​ ಪೈಗೆ ಎನ್​ ಆರ್​ ರಮೇಶ್​ ಬಹಿರಂಗ ಪತ್ರ

ಪ್ರಧಾನ ಮಂತ್ರಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಪ್ರಸ್ತುತ ವರ್ಷ ಐಟಿ ಬಿಟಿ ಕಂಪೆನಿಗಳು ಮತ್ತು ಟೆಕ್ ಪಾರ್ಕ್ ಗಳು ಜಲಾವೃತಗೊಂಡಿರುವ ಬಗ್ಗೆ ಉಲ್ಲೇಖಿಸಿರುತ್ತೀರಿ.ಆದರೆ ಬೆಂಗಳೂರು ಮಹಾನಗರದ ಇಂದಿನ ಮಳೆ ನೀರಿನ ಅವಾಂತರಕ್ಕೆ ಅತ್ಯಂತ ಪ್ರಮುಖ ಕಾರಣಗಳಲ್ಲಿ ತಾವು ಪ್ರತಿನಿಧಿಸುತ್ತಿರುವ ಬೆಂಗಳೂರು ಮಹಾನಗರದ ಐಟಿ ಬಿಟಿ ಕಂಪೆನಿಗಳು ಮತ್ತು ಟೆಕ್ ಪಾರ್ಕ್‌ ಗಳೂ ಸಹ ಕಾರಣ. ವಿಶೇಷವಾಗಿ ಬೆಂಗಳೂರು ಹೊರ ವರ್ತುಲ ರಸ್ತೆ ಕಂಪನಿಗಳ ಸಂಘದಲ್ಲಿ ಇರುವಂತಹ 79 ಟೆಕ್ ಪಾರ್ಕ್ ಗಳು, ELCIA (Electronics City Industries Association) ಅಡಿಯಲ್ಲಿ ಇರುವಂತಹ 250 ಕ್ಕೂ ಹೆಚ್ಚು ಐಟಿ ಬಿಟಿ ಕಂಪೆನಿಗಳು ಹಾಗೂ ಮಹದೇವಪುರದ ಐಟಿಪಿಎಲ್ ನಲ್ಲಿರುವ 100 ಕ್ಕೂ ಹೆಚ್ಚು ಐಟಿ ಕಂಪೆನಿಗಳು ತಾವು ನಿರ್ಮಾಣ ಮಾಡಿರುವ ತಮ್ಮ ತಮ್ಮ ಸಂಸ್ಥೆಯ ಕಟ್ಟಡಗಳ ನಿರ್ಮಾಣದ ಹಂತದಲ್ಲಿ ಆ ಭಾಗಗಳಲ್ಲಿದ್ದಂತಹ ರಾಜಕಾಲುವೆಗಳನ್ನು ಮತ್ತು ರಾಜಕಾಲುವೆಗಳ ಬಫ್ಫರ್ ಜೋನ್ ಗಳನ್ನು ಬಹುತೇಕ ಒತ್ತುವರಿ ಮಾಡಿಕೊಳ್ಳಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪ್ರದೇಶದಲ್ಲಿರುವ ಜಾಗತಿಕ ಮಟ್ಟದಲ್ಲಿ ಅತ್ಯಂತ ಪ್ರಖ್ಯಾತಿಯನ್ನು ಗಳಿಸಿರುವ Infosys, Wipro, Biocon, Tech Mahindra, Siemens, Tata Power, Robert Bosch, IBM, TCS, HCL, C - Dot, HP (Hewlett - Packard) ನಂತಹ ಸಂಸ್ಥೆಗಳು ತಾವು ನಿರ್ಮಾಣ ಮಾಡಿರುವ ಕಟ್ಟಡಗಳ ವ್ಯಾಪ್ತಿಯಲ್ಲಿದ್ದಂತಹ ರಾಜಕಾಲುವೆಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡಿರುವುದು ಅಥವಾ ರಾಜಕಾಲುವೆಗಳ Primary Drain (ಬೃಹತ್ ಮಳೆ ನೀರುಗಾಲುವೆ) ಮತ್ತು Secondary Drain (ದ್ವಿತೀಯ ಹಂತದ ರಾಜಕಾಲುವೆ) ಗಳ ಅಗಲವನ್ನು ಕಡಿತಗೊಳಿಸಿ ಮಾರ್ಗಾಂತರ (Diversion) ಮಾಡಿರುವುದು ತಮಗೂ ತಿಳಿದಿದೆ ಎಂದು ಭಾವಿಸಿರುತ್ತೇನೆ ಎಂದು ಮೋಹನ್ ದಾಸ್ ಪೈಗೆ ತಿರುಗೇಟು ನೀಡಿದ್ದಾರೆ.

bjp leader nr ramesh open letter to mohandas pai
ಮೋಹನ್ ದಾಸ್ ಪೈಗೆ ಬಹಿರಂಗ ಪತ್ರ ಬರೆದ ಎನ್ ಆರ್ ರಮೇಶ್

ಹೊರ ವರ್ತಲ ರಸ್ತೆ ಸೇರಿದಂತೆ ಬೆಂಗಳೂರು ಮಹಾನಗರದಲ್ಲಿರುವಂತಹ ಸೆಸ್ನಾ ಟೆಕ್ ಪಾರ್ಕ್,ಇಕೋಸ್ಪೇಸ್ ಟೆಕ್ ಪಾರ್ಕ್,ಸಲಾರ್ ಪುರಿಯಾ ಟೆಕ್ ಪಾರ್ಕ್,ಮಾನ್ಯತಾ ಟೆಕ್ ಪಾರ್ಕ್, ಬಾಗ್ ಮನೆ ಟೆಕ್ ಪಾರ್ಕ್ ಸೇರಿದಂತೆ 79 ಟೆಕ್ ಪಾರ್ಕ್ ಗಳ 90,85,000 ಚ. ಅಡಿಗಳಷ್ಟು ಒಟ್ಟು ನಿರ್ಮಿತ ಪ್ರದೇಶಗಳ ಪೈಕಿ ಶೇ. 25% ರಷ್ಟು ನಿರ್ಮಿತ ಪ್ರದೇಶವನ್ನು ಸಂಪೂರ್ಣವಾಗಿ ರಾಜಕಾಲುವೆಗಳು ಮತ್ತು ಕೆರೆಗಳನ್ನು ಒತ್ತುವರಿ ಮಾಡಿಕೊಂಡೇ ನಿರ್ಮಿಸಿರುವಂತಹ ಕಟ್ಟಡಗಳಾಗಿವೆ. ಕೇವಲ ಈ 79 ಟೆಕ್ ಪಾರ್ಕ್ ಗಳು ಮಾತ್ರವೇ ಕನಿಷ್ಠ 06 ಲಕ್ಷ ಚ. ಅಡಿಗಳಷ್ಟು ವಿಸ್ತೀರ್ಣದ ರಾಜಕಾಲುವೆಗಳ ಪ್ರದೇಶವನ್ನು ಸಂಪೂರ್ಣವಾಗಿ ಕಬಳಿಕೆ ಮಾಡಿರುವಂತಹ ವಿಷಯ ದಾಖಲೆಗಳಿಂದ ಈಗಾಗಲೇ ರುಜುವಾತಾಗಿರುತ್ತದೆಯಲ್ಲದೇ, ಈ ಸಂಬಂಧ ವಿವಿಧ ನ್ಯಾಯಾಲಯಗಳಲ್ಲಿ ಕ್ರಿಮಿನಲ್‌ ಪ್ರಕರಣಗಳೂ ಸಹ ದಾಖಲಿಸಲ್ಪಟ್ಟಿರುತ್ತವೆ !!! ಅಲ್ಲದೇ ಮಹದೇವಪುರದ ಐಟಿಪಿಎಲ್ ನಲ್ಲಿರುವ ಅಕ್ಸೆಂಚರ್, ಎಂಯು ಸಿಗ್ಮಾ,ಏಜಿಸ್, ಟೆಸ್ಕೋ, ಡೆಲ್ ಗಳಂತಹ ಮಾಹಿತಿ ತಂತ್ರಜ್ಞಾನ ಸಮೂಹ ಸಂಸ್ಥೆಗಳು ಅವುಗಳಿಗೆ ಹೊಂದಿಕೊಂಡಂತಿರುವ ಗಿಡ್ಡನಕೆರೆ ಮತ್ತು ಕುಂದಲ ಹಳ್ಳಿ ಕೆರೆಗಳಿಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿಕೊಂಡಿರುವ ಸತ್ಯವನ್ನೂ ಸಹ ತಮಗೆ ತಿಳಿಸಲು ಇಚ್ಛಿಸುತ್ತೇನೆ ಎಂದು ಸೇವ್ ಬೆಂಗಳೂರು ಎಂದು ಪತ್ರ ಬರೆದಿದ್ದ ಪೈಗೆ ತಿರುಗೇಟು ನೀಡಿದ್ದಾರೆ.

ಸಿಎಸ್ಆರ್ ಅನುದಾನದಲ್ಲಿ ವಂಚನೆ: ಬೆಂಗಳೂರು ಮಹಾನಗರದಲ್ಲಿ 3,758 ಐಟಿ ಕಂಪೆನಿಗಳು, 92 ಬಿಟಿ ಕಂಪೆನಿಗಳು ಮತ್ತು 79 ಟೆಕ್ ಪಾರ್ಕ್ ಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರತೀ ವರ್ಷ ಎರಡು ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ವಾರ್ಷಿಕ ವಹಿವಾಟನ್ನು ನಡೆಸುತ್ತಿರುತ್ತವೆ. ನ್ಯಾಯಯುತವಾಗಿ ELCIA, ORRCA ಮತ್ತು ITPL ಇರುವ ಮೂರೂ ಪ್ರದೇಶಗಳ ಸಂಸ್ಥೆಗಳೇ ವಾರ್ಷಿಕವಾಗಿ ಸಿಎಸ್ಆರ್ ನಿಯಮಗಳಿಗೆ ಅನುಗುಣವಾಗಿ ಕನಿಷ್ಠ 2,500 ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತದ ಹಣವನ್ನು ಸಿಎಸ್ಆರ್ ನಿಧಿಯ ಮೂಲಕ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಯ ಮೂಲಕ ಸಾರ್ವಜನಿಕರ ಉಪಯೋಗದ ಕೆಲಸಗಳಿಗೆ ಉಪಯೋಗಿಸಬೇಕಿದ್ದರೂ ಸಹ ತಾವು ಕೇವಲ ಹತ್ತಾರು ಕೋಟಿ ರೂಪಾಯಿಗಳಷ್ಟನ್ನು ಮಾತ್ರವೇ ಈ ಅನುದಾನದಲ್ಲಿ ವಿನಿಯೋಗಿಸುತ್ತಾ, ಸಿಎಸ್ಆರ್ ಅನುದಾನದಲ್ಲೂ ಸಹ ಬೆಂಗಳೂರು ಮಹಾನಗರಕ್ಕೆ ಬೃಹತ್‌ ಮಟ್ಟದಲ್ಲಿ ವಂಚನೆ ಮಾಡಿರುತ್ತೀರಿ ಎಂದು ಗಂಭೀರ ಆರೋಪ ಮಾಡಿದ್ದಾರೆ.

ತೆಲಂಗಾಣದಲ್ಲಿ ಇರಲು ನಿಮಗೆ ಅಸಾಧ್ಯ: ಕಳೆದ ಮೂರು ತಿಂಗಳಿನಲ್ಲಿ ಮಾತ್ರವೇ ಬೆಂಗಳೂರು ಮಹಾನಗರದಲ್ಲಿ ಸುಮಾರು 899 ಮಿ. ಮೀ. ಗಳಷ್ಟು ಮಳೆಯಾಗಿರುತ್ತದೆ. ಕಳೆದ ಐದು ದಶಕದಲ್ಲಿಯೇ ಇಷ್ಟು ಬೃಹತ್ ಪ್ರಮಾಣದಲ್ಲಿ ಮಳೆಯಾಗಿರುವುದಿಲ್ಲ. ಇಂತಹ ಶತಮಾನದ ಎರಡನೇ ಅತೀ ದೊಡ್ಡ ಪ್ರಮಾಣದ ಮಳೆಯ ಜೊತೆಗೆ ಮೇಲೆ ತಿಳಿಸಿರುವ ಮೂರು ಪ್ರದೇಶಗಳಲ್ಲಿನ ಕಂಪೆನಿಗಳು ಆಯಾ ಭಾಗಗಳಲ್ಲಿದ್ದ ರಾಜಕಾಲುವೆಗಳು ಮತ್ತು ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವ ಕಾರಣಗಳಿಂದ - ಸದರಿ ಪ್ರದೇಶಗಳಲ್ಲಿ ಪ್ರವಾಹದ ಪರಿಸ್ಥಿತಿ ಏರ್ಪಟ್ಟಿರುವ ಸತ್ಯಾಂಶವನ್ನು ಜಾಣ ಕುರುಡರಾದ ತಾವು ಅರ್ಥ ಮಾಡಿಕೊಳ್ಳಬೇಕಿದೆ. ಆದರೆ, ಅದೇ ತೆಲಂಗಾಣ ರಾಜ್ಯದ ಹೈದರಾಬಾದ್ ಮಹಾನಗರದಲ್ಲಿ 2020 ರಲ್ಲಿ ಬಿದ್ದಂತಹ ಕೇವಲ 90 ಮಿ. ಮೀ. ನಷ್ಟು ಮಳೆಗೆ ಇಡೀ ಹೈದರಾಬಾದ್ ನಗರವೇ ತಿಂಗಳಾನುಗಟ್ಟಲೆ ಸ್ತಬ್ಧವಾಗಿತ್ತಲ್ಲದೇ, ಕೇವಲ ಅದೊಂದೇ ಮಳೆಯಿಂದಾಗಿ ಸುಮಾರು 685 ಮಿಲಿಯನ್ ಡಾಲ‌ಗಳಷ್ಟು (ಸುಮಾರು 5,200 ಕೋಟಿ ರೂಪಾಯಿಗಳು) ಮೊತ್ತದ ಆಸ್ತಿ ಪಾಸ್ತಿಗಳು ಸಂಪೂರ್ಣವಾಗಿ ನಾಶವಾಗಿತ್ತು !!!

bjp leader nr ramesh open letter to mohandas pai
ಮೋಹನ್ ದಾಸ್ ಪೈಗೆ ಬಹಿರಂಗ ಪತ್ರ ಬರೆದ ಎನ್ ಆರ್ ರಮೇಶ್

ಇವೆಲ್ಲಾ ವಿಷಯಗಳು ಒಂದೆಡೆಯಾದರೆ ತಾವು ತೆಲಂಗಾಣ ರಾಜ್ಯಕ್ಕೆ ವಲಸೆ ಹೋಗುವುದಾಗಿ “ಬೆದರಿಕೆ ತಂತ್ರ'ದ ಮೂಲಕ ರಾಜ್ಯ ಸರ್ಕಾರವನ್ನು ಬೆದರಿಸುವ ಕೆಲಸವನ್ನು ಮಾಡಿರುತ್ತೀರಿ. ಈ ಸಂಬಂಧ ತಮ್ಮ ಗಮನಕ್ಕೆ ಒಂದು ವಿಷಯವನ್ನು ತರಲು ಇಚ್ಛಿಸುತ್ತೇನೆ. ನಕ್ಸಲ್ ಪೀಡಿತ ಪ್ರದೇಶವೆಂದೇ ಕುಖ್ಯಾತಿ ಪಡೆದಿರುವ ತೆಲಂಗಾಣ ಪ್ರದೇಶದಲ್ಲಿ ತಮ್ಮ ಸಂಸ್ಥೆಗಳಾಗಲೀ, ಅಲ್ಲಿ ನಿರ್ಮಾಣವಾಗುವ ಸಂಸ್ಥೆಗಳಲ್ಲಿನ ಉದ್ಯೋಗಿಗಳಾಗಲೀ ಒಂದು ದಿನವೂ ಸಹ ನೆಮ್ಮದಿಯಿಂದ ಜೀವಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಒತ್ತುವರಿ ತರೆವು ಮಾಡಿಕೊಡಿ: ಇನ್ನು ಮುಂದಾದರೂ ರಾಜ್ಯ ಸರ್ಕಾರವನ್ನು ಬೆದರಿಸುವ ತಂತ್ರಗಾರಿಕೆಯನ್ನು ಮಾಡದೆ ನ್ಯಾಯಯುತವಾಗಿ ತಮ್ಮ ನೇತೃತ್ವದ ELCIA, ORRCA ಮತ್ತು ITPL ಅಡಿಯ ಪ್ರದೇಶಗಳ ಐಟಿ ಬಿಟಿ ಸಂಸ್ಥೆಗಳು ಮತ್ತು ಟೆಕ್ ಪಾರ್ಕ್ ಗಳು ಒತ್ತುವರಿ ಮಾಡಿಕೊಂಡಿರುವ ರಾಜಕಾಲುವೆಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿಕೊಟ್ಟಲ್ಲಿ, ಬೆಂಗಳೂರಿನ ಮಳೆಗಾಲದ ಸಮಸ್ಯೆಯು ಶಾಶ್ವತವಾಗಿ ಪರಿಹಾರ ಮಾಡಲು ಸಾಧ್ಯವಾಗುತ್ತದೆ ಎಂಬ ಸತ್ಯಾಂಶವನ್ನು ತಮಗೆ ತಿಳಿಸಲು ಇಚ್ಛಿಸುತ್ತೇನೆ. ತಮಗೇನಾದರೂ ಈ ಬಗ್ಗೆ ಅಸಮಾಧಾನವಿದ್ದಲ್ಲಿ ತಾವು ಮಾಧ್ಯಮಗಳ ಸಮಕ್ಷಮದಲ್ಲಿ ಬಹಿರಂಗ ಚರ್ಚೆಗೆ ಬರುವುದಾದಲ್ಲಿ ನಾವೂ ಸಹ ಎಲ್ಲಾ ದಾಖಲೆಗಳೊಂದಿಗೆ ಚರ್ಚೆಗೆ ಸಿದ್ಧವಿರುತ್ತೇವೆಂದು ಮತ್ತೊಮ್ಮೆ ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ ಎಂದಿದ್ದಾರೆ.

ಶ್ವೇತಪತ್ರ ಬಿಡುಗಡೆ ಮಾಡಿ: ಇನ್ನು, ಮುಂದಾದರೂ ಸಿಎಸ್ಆರ್ ನಿಯಮಗಳಿಗೆ ಅನುಗುಣವಾಗಿ ಐಟಿ ಬಿಟಿ ಸಂಸ್ಥೆಗಳು ಮತ್ತು ಟೆಕ್ ಪಾರ್ಕ್ ಗಳು ಕಾನೂನು ರೀತ್ಯಾ ತಾವು ನೀಡಲೇಬೇಕಿರುವ ಸಾರ್ವಜನಿಕ ಕಾರ್ಯಗಳಿಗೆ ವರ್ಷಂಪ್ರತಿ ಬಿಡುಗಡೆ ಮಾಡಿರುವ ಸಿಎಸ್ಆರ್ ನಿಧಿಯ ವಿವರಗಳನ್ನು ಒಳಗೊಂಡ ಶ್ವೇತ ಪತ್ರ' ಗಳನ್ನು ಬಹಿರಂಗವಾಗಿ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಅಭಿಯಾನ ಐಟಿ ಬಿಟಿ ಕಂಪನಿಗಳ ವಿರುದ್ಧ ಮಾಡಿ: ನಿಜಕ್ಕೂ ತಾವು “ಸೇವ್ ಬೆಂಗಳೂರು" ಅಭಿಯಾನ ನಡೆಸಬೇಕಿರುವುದು ಸ್ವತಃ ತಮ್ಮದೇ ನೇತೃತ್ವ ಹೊಂದಿರುವ ECLIA, ORRCA ಮತ್ತು ITPL ಪ್ರದೇಶಗಳಲ್ಲಿ ರಾಜಕಾಲುವೆಗಳನ್ನು ಮತ್ತು ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಸದ್ಯದ ಪ್ರವಾಹ ಪರಿಸ್ಥಿತಿಗೆ ಕಾರಣವಾಗಿ ಬೆಂಗಳೂರು ಮಹಾನಗರಕ್ಕೆ ಜಾಗತಿಕ ಮಟ್ಟದಲ್ಲಿ ನಕಾರಾತ್ಮಕ ಅಭಿಪ್ರಾಯ ಬರಲು ಪ್ರಮುಖ ಕಾರಣಕರ್ತವಾಗಿರುವ ಐಟಿ ಬಿಟಿ ಕಂಪೆನಿಗಳು ಮತ್ತು ಟೆಕ್ ಪಾರ್ಕ್ ಗಳ ವಿರುದ್ಧ ಮತ್ತು ತಮ್ಮ ಒಟ್ಟು ನಿರ್ಮಿತ ಪ್ರದೇಶಗಳ ಪೈಕಿ ಶೇ. 50% ಕ್ಕೂ ಹೆಚ್ಚು ನಿರ್ಮಿತ ಪ್ರದೇಶಗಳ ಮಾಹಿತಿಯನ್ನು ಮರೆಮಾಚಿ ಪ್ರತಿ ವರ್ಷ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನೂರಾರು ಕೋಟಿ ಆಸ್ತಿ ತೆರಿಗೆ ವಂಚಿಸಿರುವ,ವಂಚಿಸುತ್ತಿರುವ ಹಾಗೂ ನ್ಯಾಯಯುತವಾಗಿ ವೆಚ್ಚ ಮಾಡಲೇಬೇಕಿರುವ ಸಿಎಸ್ಆರ್ ನಿಧಿಯ ಮೊತ್ತದಲ್ಲಿ ಶೇ. 95% ಕ್ಕೂ ಹೆಚ್ಚು ಮೊತ್ತವನ್ನು ವಂಚಿಸುತ್ತಿರುವ ಇದೇ ಸಂಸ್ಥೆಗಳ ವಿರುದ್ಧ' ಎಂಬ ಪರಮ ಸತ್ಯವನ್ನು ತಾವು ಅರಿತುಕೊಳ್ಳಬೇಕು ಎಂದು ಬಹಿರಂಗ ಪತ್ರದಲ್ಲಿ ತಿಳಿಸಿದ್ದಾರೆ.

ಸಂಬಂಧಿತ ಸುದ್ದಿ-ಬೆಂಗಳೂರು ಮಳೆ.. ಅತ್ಯಧಿಕ ಭ್ರಷ್ಟಾಚಾರ, ಕೆಟ್ಟ ಆಡಳಿತ.. ಸರ್ಕಾರದ ವಿರುದ್ಧ ಮೋಹನ್​ದಾಸ್​ ಪೈ ಗರಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.