ETV Bharat / business

ಅಮೆಜಾನ್‌ನಿಂದ 18 ಸಾವಿರ ಉದ್ಯೋಗ ಕಡಿತ ನಿರ್ಧಾರ!

author img

By

Published : Jan 5, 2023, 11:26 AM IST

ಆರ್ಥಿಕ ಹಿಂಜರಿತ, ಕುಸಿತ, ಸ್ಥಗಿತದ ಭೀತಿಯಿಂದಾಗಿ ಹಲವಾರು ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕಡಿತ ಮಾಡಿವೆ. ಇ ಕಾಮರ್ಸ್​ ಸಂಸ್ಥೆಯಾದ ಅಮೆಜಾನ್​ ಕೂಡ ತನ್ನ 18 ಸಾವಿರ ಉದ್ಯೋಗಿಗಳನ್ನು ಕಡಿತ ಮಾಡುವುದಾಗಿ ಘೋಷಿಸಿದೆ.

amazon-to-layoff
ನೌಕರರ ಕಡಿತ ಘೋಷಿಸಿದ ಅಮೆಜಾನ್​

ವಾಷಿಂಗ್ಟನ್ (ಯುಎಸ್): ಆರ್ಥಿಕ ಬಿಕ್ಕಟ್ಟಿನಿಂದಾಗಿ ಈವರೆಗೂ ಒಟ್ಟಾರೆ 18 ಸಾವಿರ ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಅಮೆಜಾನ್​ ಗುರುವಾರ ತಿಳಿಸಿದೆ. ಕಳೆದ ವರ್ಷದ ನವೆಂಬರ್​ನಿಂದ ಈ ಪ್ರಕ್ರಿಯೆ ನಡೆಸಿದ್ದು, ಕಂಪನಿಯ ವಿವಿಧ ವಿಭಾಗಗಳಲ್ಲಿ ಉದ್ಯೋಗ ಕಡಿತ ಮಾಡಲಾಗಿದೆ. ಅದರಲ್ಲಿ ಹೆಚ್ಚಾಗಿ ಸ್ಟೋರ್​ಗಳು ಮತ್ತು ಪಿಎಕ್ಸ್​ಟಿಗಳಲ್ಲಿ ಹೆಚ್ಚಿನ ನೌಕರರನ್ನು ಕೈಬಿಡಲಾಗುವುದು ಎಂದು ಸಂಸ್ಥೆ ತನ್ನ ಉದ್ಯೋಗಿಗಳಿಗೆ ಆಘಾತಕಾರಿ ಸುದ್ದಿ ನೀಡಿದೆ.

'ಉದ್ಯೋಗ ಕಳೆದುಕೊಳ್ಳುವವರು ಎಷ್ಟು ತೊಂದರೆಗೆ ಸಿಲುಕುತ್ತಾರೆ ಎಂಬುದನ್ನು ನಾವು ಬಲ್ಲೆವು. ಈ ನಿರ್ಧಾರವನ್ನು ಲಘುವಾಗಿ ಪರಿಗಣಿಸಿಲ್ಲ. ವಜಾಗೊಂಡ ನೌಕರರಿಗೆ ಪ್ರತ್ಯೇಕ ಪ್ಯಾಕೇಜ್​, ಬಾಹ್ಯ ಉದ್ಯೋಗಕ್ಕೆ ನೆರವು, ಆರೋಗ್ಯ ವಿಮೆಯನ್ನೂ ನೀಡಲಾಗುತ್ತದೆ' ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆ್ಯಂಡಿ ಜೆಸ್ಸಿ ತಿಳಿಸಿದರು.

ಕಳೆದ ನವೆಂಬರ್​ನಲ್ಲಿ ಸುಮಾರು 10 ಸಾವಿರ ಸಿಬ್ಬಂದಿ ಕಡಿತ ಮಾಡುವುದಾಗಿ ಸಂಸ್ಥೆ ತಿಳಿಸಿತ್ತು. ಅದರಲ್ಲಿ ಹಿರಿಯ ಉದ್ಯೋಗಿಗಳು ಮತ್ತು ತಾಂತ್ರಿಕ ವಿಭಾಗದವರನ್ನೇ ಹೆಚ್ಚಾಗಿ ಕಡಿತಗೊಳಿಸುವ ಬಗ್ಗೆ ಹೇಳಿತ್ತು. ಕೆಲವು ಉದ್ಯೋಗಿಗಳಿಗೆ ಸ್ವಯಂಪ್ರೇರಿತ ರಾಜೀನಾಮೆ ಕೊಡಿಸುವುದಾಗಿಯೂ ಸಂಸ್ಥೆಯ ಸಿಇಒ ಹೇಳಿದ್ದಾರೆ.

ಮಾನವ ಸಂಪನ್ಮೂಲ ಕಡಿತ ಅನಿವಾರ್ಯ: 'ಆರ್ಥಿಕ ಅನಿಶ್ಚಿತತೆ ಮುಂದುವರಿದ ಕಾರಣ ಈ ವರ್ಷವೂ ಉದ್ಯೋಗ ಕಡಿತ ಮುಂದುವರಿಯಲಿದೆ. ಇದರ ವಿಮರ್ಶೆಯೇ ಕಷ್ಟಕರವಾಗಿದೆ. ಕೆಲ ವರ್ಷಗಳಿಂದ ಕಂಪನಿ ವಿಪರೀತ ನೇಮಕಾತಿಗಳನ್ನು ಮಾಡಿಕೊಂಡಿದೆ. ಇದು ಆರ್ಥಿಕ ಹೊರೆ ಹೆಚ್ಚಿಸಿದೆ. ಹೀಗಾಗಿ ಮಾನವ ಸಂಪನ್ಮೂಲವನ್ನು ಕಡಿತ ಮಾಡಲಾಗುತ್ತಿದೆ' ಎಂದು ಸಂಸ್ಥೆ ತಿಳಿಸಿದೆ.

'ಜನವರಿ 18 ರಿಂದ ವಜಾಗೊಳ್ಳಲಿರುವ ನೌಕರರ ಜೊತೆಗೆ ಸಂಸ್ಥೆ ಜನವರಿ 18 ರಿಂದ ಮಾತುಕತೆ ನಡೆಸಲಿದೆ. ಸಂಸ್ಥೆ ಹೆಚ್ಚಿನ ಆರ್ಥಿಕ ಹಿಂಜರಿತ ಎದುರಿಸುತ್ತಿದೆ. ಇದೇ ಮಾರ್ಗದಲ್ಲಿ ಮುಂದುವರಿಯಲು ಅಸಾಧ್ಯವಾದ ಕಾರಣ ಸಿಬ್ಬಂದಿ ಕಡಿತ ಅನಿವಾರ್ಯವಾಗಿದೆ. ಇದಕ್ಕಾಗಿ ಸೂಚಿತ ನೌಕರರು ಉದ್ಯೋಗ ಕಳೆದುಕೊಳ್ಳಲಿದ್ದಾರೆ' ಎಂದು ಸಂಸ್ಥೆ ಮಾಹಿತಿ ನೀಡಿದೆ. 'ವಜಾಗೊಳ್ಳುತ್ತಿರುವ ಹೆಚ್ಚಿನ ನೌಕರರು ಯುರೋಪ್​ನವರಾಗಿದ್ದಾರೆ. ಸಂಸ್ಥೆಯ ಸದಸ್ಯರೊಬ್ಬರು ಈ ಬಗ್ಗೆ ಮಾಹಿತಿ ಸೋರಿಕೆ ಮಾಡಿದ್ದರಿಂದ ಈ ವಿಷಯವನ್ನು ಹಠಾತ್ತನೆ ಘೋಷಣೆ ಮಾಡಲಾಗಿದೆ' ಎಂದು ಸಿಇಒ ಆ್ಯಂಡಿ ಜೆಸ್ಸಿ ತಿಳಿಸಿದರು.

2020 ರಿಂದ 2022 ರ ನಡುವೆ ಅಮೆಜಾನ್​ ವಿಶ್ವಾದ್ಯಂತ ತನ್ನ ಉದ್ಯೋಗಿಗಳನ್ನು ಹೆಚ್ಚಿನ ರೀತಿಯಲ್ಲಿ ಹುದ್ದೆಗೆ ಸೇರಿಸಿಕೊಂಡಿತ್ತು. ಕೋವಿಡ್​ ಸಂದರ್ಭದಲ್ಲಿ ಬೇಡಿಕೆ ಹೆಚ್ಚಿದ್ದರಿಂದ ಪೂರೈಕೆ ಮಾಡಲು ನೌಕರರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಂಡಿತ್ತು. ಕಂಪನಿ ಸೆಪ್ಟೆಂಬರ್​ ಅಂತ್ಯದ ವೇಳೆಗೆ 15.40 ಲಕ್ಷ ಉದ್ಯೋಗಿಗಳನ್ನು ಹೊಂದಿತ್ತು.

ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಕಡಿತ: ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್​ಸ್ಟಾಗ್ರಾಂ, ವಾಟ್ಸ್​ಆ್ಯಪ್ ಒಡೆತನ ಹೊಂದಿರುವ ಮೆಟಾ ಕಂಪನಿ ತನ್ನ 11,000 ಮಂದಿಯನ್ನು ಕೆಲಸದಿಂದ ತೆಗೆದು ಹಾಕಿದೆ. ಅದಕ್ಕೂ ಮುನ್ನ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್​ 3,500ಕ್ಕೂ ಹೆಚ್ಚು ಮಂದಿಯನ್ನು ವಜಾ ಮಾಡಿತ್ತು. ಇದಕ್ಕೆ ವಿರೋಧ ಕೂಡ ವ್ಯಕ್ತವಾಗಿತ್ತು. ಟೆಕ್ ದೈತ್ಯ ಮೈಕ್ರೋಸಾಫ್ಟ್ ಸುಮಾರು 1,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು.

ಬಹುರಾಷ್ಟ್ರೀಯ ಕಂಪನಿಗಳಲ್ಲಿರುವ ತಾಂತ್ರಿಕ ಮತ್ತು ನೆರವು​ ವಿಭಾಗಗಳ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಆರ್ಥಿಕ ಹಿಂಜರಿಕೆ, ಆರ್ಥಿಕ ಕುಸಿತ, ಆರ್ಥಿಕ ಸ್ಥಗಿತದ ಭೀತಿ ಎಲ್ಲೆಡೆ ಕಾಡುತ್ತಿದೆ. ಆದಾಯ ಕುಂಠಿತಗೊಳ್ಳಬಹುದು ಎಂಬ ಭಯದಲ್ಲಿರುವ ಟೆಕ್ ಕಂಪನಿಗಳು ಉದ್ಯೋಗ, ಸೌಲಭ್ಯ ಕಡಿತದಂತಹ ಎಚ್ಚರಿಕೆಯ ಹೆಜ್ಜೆ ಇಡುತ್ತಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ: 1998ರ ರಸ್ತೆ ಕಾಮಗಾರಿ ಯೋಜನೆ: 5 ಕೋಟಿ ಬಾಕಿ ಹಣಕ್ಕೆ 300 ಕೋಟಿ ಬಡ್ಡಿ ಪಾವತಿಸಲು ಸರ್ಕಾರಕ್ಕೆ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.