ETV Bharat / business

ಅದಾನಿ ಪವರ್​ ತೆಕ್ಕೆಗೆ ಡಿಬಿ ಪವರ್: 7,000 ಕೋಟಿ ರೂ. ಒಪ್ಪಂದ

author img

By

Published : Aug 20, 2022, 6:07 PM IST

ಡಿಬಿ ಪವರ್ ಸ್ವಾಧೀನಪಡಿಸಿಕೊಳ್ಳಲಿರುವ ಅದಾನಿ ಪವರ್. 7,017 ಕೋಟಿ ರೂ. ಬೆಲೆಗೆ ಸ್ವಾಧೀನ ಪಡಿಸಿಕೊಳ್ಳಲು ಒಡಂಬಡಿಕೆ. ಡಿಬಿ ಪವರ್ ಛತ್ತೀಸ್‌ಗಢದ ಜಾಂಜ್‌ಗೀರ್-ಚಂಪಾ ಜಿಲ್ಲೆಯಲ್ಲಿ ತಲಾ 600 ಮೆಗಾವ್ಯಾಟ್‌ನ 2 ಘಟಕಗಳನ್ನು ಹೊಂದಿದೆ.

ಅದಾನಿ ಪವರ್​ ತೆಕ್ಕೆಗೆ ಡಿಬಿ ಪವರ್: 7,000 ಕೋಟಿ ರೂ. ಒಪ್ಪಂದ
Adani Power to acquire DB Power for Rs 7000 cr

ಹೊಸದಿಲ್ಲಿ: ಗೌತಮ್ ಅದಾನಿ ನೇತೃತ್ವದ ಅದಾನಿ ಪವರ್ ಲಿಮಿಟೆಡ್ ಕಂಪನಿಯು ಡಿಬಿ ಪವರ್ ಲಿಮಿಟೆಡ್‌ನ (ಡಿಬಿಪಿಎಲ್) ಥರ್ಮಲ್ ಪವರ್ ಆಸ್ತಿಗಳನ್ನು ಸುಮಾರು 7,017 ಕೋಟಿ ರೂ. ಎಂಟರ್‌ಪ್ರೈಸ್ ಮೌಲ್ಯಮಾಪನ ಬೆಲೆಯಲ್ಲಿ ಖರೀದಿಸಲು ಒಪ್ಪಿಕೊಂಡಿದೆ ಎಂದು ಕಂಪನಿಯು ಶುಕ್ರವಾರ ಪ್ರಕಟಿಸಿದೆ. ಶುಕ್ರವಾರ ಮಧ್ಯಾಹ್ನ ಎರಡೂ ಕಂಪನಿಗಳು ಎಲ್ಲ ನಗದು ಒಪ್ಪಂದಕ್ಕೆ ಸಹಿ ಹಾಕಿವೆ. ಒಡಂಬಡಿಕೆಯ ಊರ್ಜಿತ ಅವಧಿಯು ಅಕ್ಟೋಬರ್ 31, 2022 ರಂದು ಸ್ವಾಧೀನವನ್ನು ಪೂರ್ಣಗೊಳಿಸುವವರೆಗೆ ಇರುತ್ತದೆ. ಅಗತ್ಯ ಬಿದ್ದರೆ ಒಡಂಬಡಿಕೆ ಅವಧಿಯನ್ನು ಪರಸ್ಪರ ಒಪ್ಪಂದದ ಮೂಲಕ ವಿಸ್ತರಿಸಬಹುದು.

ಡಿಬಿ ಪವರ್ ಛತ್ತೀಸ್‌ಗಢದ ಜಾಂಜ್‌ಗೀರ್-ಚಂಪಾ ಜಿಲ್ಲೆಯಲ್ಲಿ ತಲಾ 600 ಮೆಗಾವ್ಯಾಟ್‌ನ 2 ಘಟಕಗಳನ್ನು ಹೊಂದಿದೆ. ಈ ಸ್ವಾಧೀನವು ಛತ್ತೀಸ್‌ಗಢ ರಾಜ್ಯದಲ್ಲಿನ ಉಷ್ಣ ವಿದ್ಯುತ್ ವಲಯದಲ್ಲಿ ತನ್ನ ಕಾರ್ಯಾಚರಣೆಗಳನ್ನು ವಿಸ್ತರಿಸಲು ಕಂಪನಿಗೆ ಸಹಾಯ ಮಾಡಲಿದೆ ಎಂದು ಅದಾನಿ ಪವರ್​ ರೆಗ್ಯುಲೇಟರಿ ಫೈಲಿಂಗ್​​ನಲ್ಲಿ ಹೇಳಿದೆ. ಪ್ರಸ್ತಾವಿತ ವಹಿವಾಟು ಭಾರತದ ಸ್ಪರ್ಧಾತ್ಮಕ ಆಯೋಗದಿಂದ ಅನುಮೋದನೆಗೆ ಒಳಪಟ್ಟಿರುತ್ತದೆ.

ಅದಾನಿ ಪವರ್ ಡಿಪಿಪಿಎಲ್‌ನ ಒಟ್ಟು ವಿತರಿಸಿದ, ಚಂದಾದಾರರಾದ ಮತ್ತು ಪಾವತಿಸಿದ ಈಕ್ವಿಟಿ ಷೇರು ಬಂಡವಾಳ ಮತ್ತು ಆದ್ಯತೆಯ ಷೇರು ಬಂಡವಾಳದ 100 ಪ್ರತಿಶತವನ್ನು ಹೊಂದಿರುತ್ತದೆ. ಡಿಲಿಜೆಂಟ್ ಪವರ್ (ಡಿಪಿಪಿಎಲ್) ಕಂಪನಿ ಇದು ಡಿಬಿ ಪವರ್‌ನ ಹೋಲ್ಡಿಂಗ್ ಕಂಪನಿಯಾಗಿದೆ. ಪ್ರಸ್ತುತ, ಡಿಬಿ ಪವರ್ ತನ್ನ 923.5 ಮೆಗಾವ್ಯಾಟ್ ಸಾಮರ್ಥ್ಯದ ಘಟಕಗಳಿಗಾಗಿ ದೀರ್ಘ ಮತ್ತು ಮಧ್ಯಮ-ಅವಧಿಯ ವಿದ್ಯುತ್ ಖರೀದಿ ಒಪ್ಪಂದಗಳನ್ನು ಹೊಂದಿದೆ.

ಡಿಬಿ ಪವರ್ ಅನ್ನು ಅಕ್ಟೋಬರ್ 12, 2006 ರಂದು ಗ್ವಾಲಿಯರ್‌ನ ರಿಜಿಸ್ಟ್ರಾರ್ ಆಫ್ ಕಂಪನಿಗಳ ವ್ಯಾಪ್ತಿಯೊಳಗೆ ನೋಂದಣಿ ಮಾಡಲಾಗಿದೆ. ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಡಿಬಿ ಪವರ್‌ನ ವಹಿವಾಟು ಕ್ರಮವಾಗಿ- 3,488 ಕೋಟಿ ರೂ. (FY 2021-22 ಕ್ಕೆ); ರೂ 2,930 ಕೋಟಿ (FY 2020-21) ಮತ್ತು ರೂ 3,126 ಕೋಟಿ (FY 2019-20) ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.