ETV Bharat / business

ಏರ್​ ಇಂಡಿಯಾ ಖರೀದಿಗೆ ಟಾಟಾ ಗ್ರೂಪ್​ ಒಲವು: ತಿಂಗಳಾಂತ್ಯಕ್ಕೆ ಬಿಡ್ ಸಲ್ಲಿಕೆ ಸಾಧ್ಯತೆ !

author img

By

Published : Aug 24, 2020, 8:49 PM IST

ಟಾಟಾ ಗ್ರೂಪ್ ಮಾತ್ರವಲ್ಲದೆ ಜರ್ಮನಿಯ ಲುಫ್ಥಾನ್ಸ್​, ಯುಎಇಯ ಎತಿಹಾದ್​ ಏರ್​ವೇಸ್ ನಂತಹ ಕೆಲ ಸಂಸ್ಥೆಗಳು ಕೂಡ ಏರ್ ಇಂಡಿಯಾದಲ್ಲಿ ತಮ್ಮ ಪಾಲು ಹೂಡಿಕೆ ಮಾಡಲು ಆಸಕ್ತಿ ತಳೆದಿವೆ ಎಂದು ಮೂಲಗಳು ಹೇಳಿವೆ.

Air India
ಏರ್ ಇಂಡಿಯಾ

ನವದೆಹಲಿ: ಏರ್ ಇಂಡಿಯಾದ ಬಿಡ್​​ ಗಡುವನ್ನು ಆಗಸ್ಟ್ 31ರ ನಂತರ ನಾಲ್ಕನೇ ಬಾರಿಗೆ ಸರ್ಕಾರ ವಿಸ್ತರಿಸುವುದಿಲ್ಲ ಹಾಗೂ ಟಾಟಾ ಗ್ರೂಪ್ ಈ ತಿಂಗಳ ಅಂತ್ಯದ ವೇಳೆಗೆ ಔಪಚಾರಿಕ ಬಿಡ್ ಸಲ್ಲಿಸುವ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳು ಈಟಿವಿ ಭಾರತಗೆ ತಿಳಿಸಿವೆ.

ಟಾಟಾ ಗ್ರೂಪ್ ಮಾತ್ರವಲ್ಲದೆ ಜರ್ಮನಿಯ ಲುಫ್ಥಾನ್ಸ್​, ಯುಎಇಯ ಎತಿಹಾದ್​ ಏರ್​ವೇಸ್ ನಂತಹ ಕೆಲ ಸಂಸ್ಥೆಗಳು ಕೂಡ ಏರ್ ಇಂಡಿಯಾದಲ್ಲಿ ತಮ್ಮ ಪಾಲು ಹೂಡಿಕೆ ಮಾಡಲು ಆಸಕ್ತಿ ತಳೆದಿವೆ ಎಂದು ಮೂಲಗಳು ಹೇಳಿವೆ.

ಪ್ರಸ್ತುತ, ಸ್ಟೀಲ್-ಟು-ಆಟೋಸ್ ಸಂಘಟಿತ ಟಾಟಾ ಗ್ರೂಪ್ ವಿಸ್ತಾರಾ ಮತ್ತು ಏರ್ ಏಷ್ಯಾ ಇಂಡಿಯಾ ಎಂಬ ಎರಡು ವಿಮಾನಯಾನ ಸಂಸ್ಥೆಗಳಲ್ಲಿ ಹೆಚ್ಚಿನ ಷೇರು ಹೊಂದಿದೆ. ಉದ್ಯಮದ ತಜ್ಞರ ಪ್ರಕಾರ, ಟಾಟಾ ಗ್ರೂಪ್ ಏರ್ ಇಂಡಿಯಾಕ್ಕೆ ಯಶಸ್ವಿಯಾಗಿ ಬಿಡ್ ಮಾಡಿದರೆ, ಈ ಗುಂಪು 146 ವಿಮಾನಗಳನ್ನು ಹೊಂದಲಿದೆ ಎಂದು ಹೇಳುತ್ತಾರೆ.

1932ರಲ್ಲಿ ಏರ್ ಇಂಡಿಯಾ ಸಂಸ್ಥೆಯನ್ನು ಟಾಟಾ ಸನ್ಸ್ ಲಿಮಿಟೆಡ್‌ನ ವಿಭಾಗವಾಗಿ ಟಾಟಾ ಕಂಪನಿ ಆರಂಭಿಸಿತು. ಇದನ್ನು 1946ರವರೆಗೆ ಟಾಟಾ ಏರ್‌ಲೈನ್ಸ್ ಆಗಿ ಮುನ್ನಡೆಸಲಾಯಿತು. ನಂತರ ಅದನ್ನು ಸಾರ್ವಜನಿಕ ಕಂಪನಿಯಾಗಿ ಮಾರ್ಪಾಡು ಮಾಡಿ ಏರ್ ಇಂಡಿಯಾ ಎಂದು ಮರುನಾಮಕರಣ ಮಾಡಲಾಯಿತು.

ಕೊರೊನಾ ವೈರಸ್​ ಜಾಗತಿಕವಾಗಿ ಹಬ್ಬಿ ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿಯುಂಟುಮಾಡಿದ ಕಾರಣ ಕೇಂದ್ರವು ಜೂನ್ 31ರವರೆಗೆ ಏರ್ ಇಂಡಿಯಾದ ಇಒಐ (ಆಸಕ್ತಿಯ ಅಭಿವ್ಯಕ್ತಿ) ಸಲ್ಲಿಸುವ ಗಡುವು ವಿಸ್ತರಿಸಿತು. ಇದು ಏರ್ ಇಂಡಿಯಾ ಷೇರು ಮಾರಾಟಕ್ಕೆ ಮೋದಿ ಸರ್ಕಾರದ ಎರಡನೇ ಪ್ರಯತ್ನವಾಗಿದೆ. 2018ರಲ್ಲಿ ಸರ್ಕಾರವು ಶೇ 76ರಷ್ಟು ಷೇರು ಮಾರಾಟಕ್ಕೆ ಮುಂದಾಗಿತ್ತು. ಆದರೆ ಆ ವೇಳೆ ಯಾವುದೇ ಬಿಡ್ ಸ್ವೀಕರಿಸದ ಕಾರಣ ಅದು ವಿಫಲವಾಗಿತ್ತು.

ಜನವರಿಯಲ್ಲಿ ಏರ್ ಇಂಡಿಯಾ ಮತ್ತು ಏರ್​ಲೈನ್​ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಮತ್ತು ಅದರ ಜಂಟಿ ಉದ್ಯಮವಾದ ಏರ್ ಇಂಡಿಯಾ ಎಸ್ಎಟಿಎಸ್ ಏರ್ಪೋರ್ಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್​ನಲ್ಲಿ ತನ್ನ ಸಂಪೂರ್ಣ ಪಾಲು ತ್ಯಜಿಸಲು ಸರ್ಕಾರವು ಪ್ರಾಥಮಿಕ ಬಿಡ್​ಗಳನ್ನು ಆಹ್ವಾನಿಸಿತ್ತು.

2019ರ ಮಾರ್ಚ್ 31ರ ವೇಳೆಗೆ ವಿಮಾನಯಾನ ಒಟ್ಟು 60,074 ಕೋಟಿ ರೂ. ಸಾಲ ಹೊಂದಿತ್ತು. ಈಗ ಇದರ ಪ್ರಮಾಣ ಏರಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.