ETV Bharat / business

ಸೊರಗಿದ ಆದಾಯದ ಮೂಲ: ಬಜೆಟ್​​​ನಲ್ಲಿ ಹಲವು ಇಲಾಖೆಗಳ ಅನುದಾನಕ್ಕೆ ಬೀಳಲಿದೆ ಕತ್ತರಿ!

author img

By

Published : Feb 12, 2021, 4:32 AM IST

2021-22ರ ರಾಜ್ಯ ಬಜೆಟ್ ಮಂಡನೆಗೆ ಸಿಎಂ ಈಗಾಗಲೇ ಪೂರ್ವತಯಾರಿ ಆರಂಭಿಸಿದ್ದಾರೆ. ಮಾರ್ಚ್ ಮೊದಲ ವಾರ ಸಿಎಂ ಬಜೆಟ್ ಮಂಡನೆ ಮಾಡುವ ಸಾಧ್ಯತೆ ಇದೆ. ಈ ಬಾರಿಯ ಬಜೆಟ್ ಮಂಡನೆ ದೊಡ್ಡ ಸವಾಲಿನ ಕೆಲಸ. ಕೋವಿಡ್ ಹೇರಿದ ಲಾಕ್‌ಡೌನ್​ನಿಂದ ರಾಜ್ಯದ ಖಜಾನೆ ಬುಡಮೇಲಾಗಿದೆ. ರಾಜ್ಯದ ಪ್ರಮುಖ ಆದಾಯ ಮೂಲವೇ ಸೊರಗಿದೆ.

ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ

ಬೆಂಗಳೂರು: ಆರ್ಥಿಕ ಸಂಕಷ್ಟದ ಮಧ್ಯೆ ಈ ಬಾರಿ ಸಿಎಂ ಯಡಿಯೂರಪ್ಪ ಬಜೆಟ್ ಮಂಡನೆ ಮಾಡಲಿದ್ದಾರೆ. ಈಗಾಗಲೇ ಎಲ್ಲಾ ಇಲಾಖೆಗಳ ಜೊತೆ ಬಜೆಟ್ ಪೂರ್ವಭಾವಿ ಸಭೆ ನಡೆಸುತ್ತಿದ್ದಾರೆ. ಆದಾಯ ಕೊರತೆಯ ಹಿನ್ನೆಲೆ ಈ ಬಾರಿಯ ಬಜೆಟ್‌ನಲ್ಲಿ ಕೆಲ ಇಲಾಖೆಗಳ ಅನುದಾನ ಕಡಿತವಾಗಲಿದೆ.

2021-22ರ ರಾಜ್ಯ ಬಜೆಟ್ ಮಂಡನೆಗೆ ಸಿಎಂ ಈಗಾಗಲೇ ಪೂರ್ವತಯಾರಿ ಆರಂಭಿಸಿದ್ದಾರೆ. ಮಾರ್ಚ್ ಮೊದಲ ವಾರ ಸಿಎಂ ಬಜೆಟ್ ಮಂಡನೆ ಮಾಡುವ ಸಾಧ್ಯತೆ ಇದೆ. ಈ ಬಾರಿಯ ಬಜೆಟ್ ಮಂಡನೆ ದೊಡ್ಡ ಸವಾಲಿನ ಕೆಲಸ. ಕೋವಿಡ್ ಹೇರಿದ ಲಾಕ್‌ಡೌನ್​ನಿಂದ ರಾಜ್ಯದ ಖಜಾನೆ ಬುಡಮೇಲಾಗಿದೆ. ರಾಜ್ಯದ ಪ್ರಮುಖ ಆದಾಯ ಮೂಲವೇ ಸೊರಗಿದ್ದು, ಚೇತರಿಕೆಯ ಹಾದಿ ಕಾಣುತ್ತಿದ್ದರೂ ಆದಾಯ ಗುರಿ ಮುಟ್ಟುವುದು ಅಸಾಧ್ಯ ಎಂಬುದನ್ನು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಚ್ ಅಂತ್ಯದ ವೇಳೆಗೆ ಸರ್ಕಾರ ಸುಮಾರು 6,500 ಕೋಟಿ ರೂ. ಆದಾಯ ಕೊರತೆ ಎದುರಿಸುವ ಆತಂಕ ಎದುರಾಗಿದೆ. 2020-21 ಬಜೆಟ್ ನಲ್ಲಿ 1.25 ಲಕ್ಷ ಕೋಟಿ ರೂ. ತೆರಿಗೆ ಆದಾಯದ ಗುರಿ ಹೊಂದಲಾಗಿತ್ತು. ಅಬಕಾರಿ ಇಲಾಖೆಯೊಂದು ಹೊರತು ಪಡಿಸಿ ಉಳಿದೆಲ್ಲಾ ಇಲಾಖೆಗಳ ಆದಾಯದಲ್ಲಿ ಭಾರೀ ಖೋತಾ ಆಗಿದೆ. ಸುಮಾರು ಶೇ 12ರಷ್ಟು ಆದಾಯ ಕೊರತೆ ಎದುರಿಸುವ ಆತಂಕ ವ್ಯಕ್ತಪಡಿಸಲಾಗಿದೆ. ಹೀಗಾಗಿ ಈ ಬಾರಿಯ ಬಜೆಟ್ ಗಾತ್ರವನ್ನು ಕುಗ್ಗಿಸುವ ಅನಿವಾರ್ಯತೆ ಇದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಈಗಾಗಲೇ ತಿಳಿಸಿದ್ದಾರೆ.

ಕೆಲ ಇಲಾಖೆಗಳಿಗೆ ಅನುದಾನ ಕಡಿತ:

ತೀವ್ರ ಆರ್ಥಿಕ ಸಂಕಷ್ಟ ಎದುರಾಗಿರುವ ಹಿನ್ನೆಲೆ ಈ ಬಾರಿ ಬಜೆಟ್ ಗಾತ್ರ ಕುಗ್ಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಕೆಲ ಇಲಾಖೆಗಳಿಗೆ ಅನುದಾನ ಕಡಿತ ಮಾಡುವುದು ಅನಿವಾರ್ಯತೆಯಾಗಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಸಿಎಂ ಎಲ್ಲಾ ಇಲಾಖೆಗಳ ಜೊತೆ ಬಜೆಟ್ ಪೂರ್ವಭಾವಿ ಸಭೆಗಳನ್ನು ಪ್ರಾರಂಭಿಸಿದ್ದಾರೆ. ಸಭೆಯಲ್ಲೂ ಸಿಎಂ ಹಣಕಾಸಿನ ಇತಿಮಿತಿಯೊಳಗೆ ಬಜೆಟ್ ಮಂಡಿಸಬೇಕಾಗಿದ್ದು, ಅನುದಾನ ಕಡಿತಗೊಳಿಸುವುದು ಅನಿವಾರ್ಯ ಎಂಬ ಮುನ್ಸೂಚನೆ ನೀಡಿದ್ದಾರೆ. ಹೀಗಾಗಿ ಈ ಬಾರಿಯ ಬಜೆಟ್ ನಲ್ಲಿ ಕೆಲ ಇಲಾಖೆಗಳಿಗೆ ಅನುದಾನ ಕಡಿತವಾಗಲಿದೆ.

ಇದನ್ನೂ ಓದಿ: ಮಾರ್ಚ್ 28 ರಿಂದ 22 ಇಂಡಿಗೊ ವಿಮಾನಗಳ ಹಾರಾಟ

ಕೆಲ ಇಲಾಖೆಗಳಿಗೆ ಸುಮಾರು ಶೇ 15-20ರಷ್ಟವರೆಗೆ ಅನುದಾನ ಕಡಿತಗೊಳಿಸಲು ಚಿಂತನೆ‌ ನಡೆದಿದೆ. ಈ ಸಂಬಂಧ ಸಿಎಂ ಈಗಾಗಲೇ ಕೆಲ ಇಲಾಖೆ ಸಚಿವರಿಗೆ ಮುನ್ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಾರಿ‌ ಬಜೆಟ್ ನಲ್ಲಿ ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಇಲಾಖೆ, ಕಾನೂನು ಹಾಗೂ ಸಂಸದೀಯ ವ್ಯವಹಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಬಂದರು ಹಾಗೂ ಮೀನುಗಾರಿಕೆ ಇಲಾಖೆ, ಕಾರ್ಮಿಕ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ, ಯುವ ಜನ ಸಬಲೀಕರಣ ಮತ್ತು ಕ್ರೀಡೆ ಇಲಾಖೆ, ಪೌರಾಡಳಿತ ಇಲಾಖೆಗಳಿಗೆ ಅನುದಾನ ಕಡಿತ ಮಾಡಲು ಚಿಂತನೆ ನಡೆದಿದೆ. ಪ್ರಮುಖವಾಗಿ ಕೋವಿಡ್ ಹಿನ್ನೆಲೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗೆ ಹೆಚ್ಚಿನ ಅನುದಾನ ನೀಡಲಾಗುತ್ತದೆ ಎನ್ನಲಾಗಿದೆ.

ಉಳಿದಂತೆ ಇತರ ಪ್ರಮುಖ ಇಲಾಖೆಗಳಾದ ಜಲಸಂಪನ್ಮೂಲ, ಸಣ್ಣ ನೀರಾವರಿ, ಗೃಹ ಇಲಾಖೆ, ಕಂದಾಯ, ಗ್ರಾಮೀಣಾಭಿವೃದ್ಧಿ, ಬೆಂಗಳೂರು ಅಭಿವೃದ್ಧಿ ಇಲಾಖೆಗೆ ಅನುದಾನ ಕಡಿತಗೊಳಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ.

ತೆರಿಗೆ ಸಂಗ್ರಹದ ಸ್ಥಿತಿಗತಿ ಹೀಗಿದೆ:

ತೆರಿಗೆ ಸಂಗ್ರಹದಲ್ಲಿ ಅಬಕಾರಿ ಇಲಾಖೆ ಹೊರತು ಪಡಿಸಿ ಉಳಿದೆಲ್ಲಾ ಇಲಾಖೆಗಳು ಆದಾಯ ಖೋತಾ ಅನುಭವಿಸಿವೆ. ಅಬಕಾರಿ ಇಲಾಖೆಯಲ್ಲಿ‌ ಕಳೆದ ಬಾರಿಗಿಂತ ಸುಮಾರು ಶೇ 6ರಷ್ಟು ಸಂಗ್ರಹದಲ್ಲಿ ಏರಿಕೆಯಾಗಿದೆ. ಡಿಸೆಂಬರ್ ಅಂತ್ಯಕ್ಕೆ ಸ್ವಂತ ತೆರಿಗೆ ರಾಜಸ್ವ ರೂಪದಲ್ಲಿ 66,436 ಕೋಟಿ ರೂ. ತೆರಿಗೆ ಸಂಗ್ರಹಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ಶೇ 11ರಷ್ಟು ತೆರಿಗೆ ಕೊರತೆಯಾಗಿದೆ. ಈ ಪೈಕಿ ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಕಳೆದ ಬಾರಿಗಿಂತ ಈ ಆರ್ಥಿಕ ವರ್ಷದಲ್ಲಿ ಶೇ 12.80ರಷ್ಟು ತೆರಿಗೆ ಕೊರತೆಯಾಗಿದೆ. ಮೋಟಾರು ವಾಹನ‌ ತೆರಿಗೆ ಸಂಗ್ರಹದಲ್ಲಿ ಶೇ 26ರಷ್ಟು, ಮುಂದ್ರಾಂಕ ಮತ್ತು ನೋಂದಾಣಿ ಶುಲ್ಕ ಸಂಗ್ರಹದಲ್ಲಿ ಶೇ 18.56ರಷ್ಟು, ಇತರೆ ತೆರಿಗೆ ಸಂಗ್ರಹದಲ್ಲಿ ಸುಮಾರು ಶೇ 17ರಷ್ಟು ಆದಾಯ ಅಭಾವ ಎದುರಾಗಿದೆ.

ಇನ್ನು ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆಯಲ್ಲಿ ಈ ಹಣಕಾಸು ವರ್ಷದಲ್ಲಿ ಸುಮಾರು ಶೇ 40ರಷ್ಟು ಕಡಿತವಾಗಿದೆ. ಇತ್ತ ಕೇಂದ್ರ ಸರ್ಕಾರದ‌ ಸಹಾಯಾನುದಾನದಲ್ಲಿ‌ ಸುಮಾರು ಶೇ 22.39ರಷ್ಟು ಕಡಿತವಾಗಿದೆ ಎಂದು ಆರ್ಥಿಕ ಇಲಾಖೆ ನೀಡಿರುವ ಅಂಕಿಅಂಶದಲ್ಲಿ ತಿಳಿಸಲಾಗಿದೆ. ಹೀಗಾಗಿ ಈ ಬಾರಿಯ ಬಜೆಟ್​​ನಲ್ಲಿ ಹಲವು ಇಲಾಖೆಗಳ ಅನುದಾನದಲ್ಲಿ ಗಣನೀಯ ಕಡಿತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.