ETV Bharat / business

4.50 ಲಕ್ಷ ರೆಮ್‌ಡೆಸಿವಿರ್‌ ಬಾಟಲ್​​ ಆಮದು: ಭಾರತಕ್ಕೆ ಇಂದು 75,000 ವೈಯಲ್‌ ಆಗಮನ!

author img

By

Published : Apr 30, 2021, 5:17 PM IST

Updated : Apr 30, 2021, 5:28 PM IST

ʻಎನ್‌ಪಿಪಿಎʼ 2021ರ ಏಪ್ರಿಲ್17ರಂದು ಔಷಧದ ಪರಿಷ್ಕೃತ ಗರಿಷ್ಠ ಚಿಲ್ಲರೆ ಮಾರಾಟ ದರವನ್ನು ನಿಗದಿಪಡಿಸಿದೆ. ಇದರಿಂದಾಗಿ ಎಲ್ಲಾ ಪ್ರಮುಖ ಬ್ರಾಂಡ್‌ಗಳ ವೆಚ್ಚವು ಪ್ರತಿ ಸೀಸೆಗೆ 3500 ರೂ.ಗಿಂತಲೂ ಕಡಿಮೆಯಾಗಿದೆ..

remdesvir
remdesvir

ನವದೆಹಲಿ : ದೇಶದಲ್ಲಿ ರೆಮ್‌ಡೆಸಿವಿರ್‌ ಕೊರತೆ ನೀಗಿಸಲು ಕೇಂದ್ರ ಸರ್ಕಾರವು ಈ ಪ್ರಮುಖ ಔಷಧವನ್ನು ಇತರ ದೇಶಗಳಿಂದ ಆಮದು ಮಾಡಿಕೊಳ್ಳಲು ಆರಂಭಿಸಿದೆ. ಇದರ ಭಾಗವಾಗಿ 75,000 ವೈಯಲ್‌ ಮೊದಲ ಕಂತಿನಡಿ ಇಂದು ಭಾರತಕ್ಕೆ ತಲುಪಲಿದೆ.

ಕೇಂದ್ರ ಸರ್ಕಾರ ಒಡೆತನದ ಕಂಪನಿಯಾದ ʻಎಚ್‌ಎಲ್ಎಲ್ ಲೈಫ್ ಕೇರ್ ಲಿಮಿಟೆಡ್ʼ ಅಮೆರಿಕದ ಔಷಧ ಕಂಪನಿ ಮೆಸರ್ಸ್ ʻಗಿಲ್ಯಾಡ್‌ ಸೈನ್ಸಸ್ ಐಎನ್‌ಸಿʼ ಮತ್ತು ಈಜಿಪ್ತ್‌ನ ಔಷಧ ಕಂಪನಿ ಮೆಸರ್ಸ್ ʻಇವಾ ಫಾರ್ಮಾʼನಿಂದ ರೆಮ್‌ಡೆಸಿವಿರ್‌ನ 4,50,000 ವೈಯಲ್​ ಖರೀದಿಗೆ ಬೇಡಿಕೆ ಇಟ್ಟಿದೆ.

ಅಮೆರಿಕದ ಗಿಲ್ಯಡ್ ಸೈನ್ಸಸ್ ಐಎನ್‌ಸಿ ಸಂಸ್ಥೆಯು ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ 75,000 ರಿಂದ 1,00,000 ಸೀಸೆಗಳನ್ನು ರವಾನಿಸುವ ನಿರೀಕ್ಷೆಯಿದೆ. ಮೇ 15ರೊಳಗಾಗಿ ಇನ್ನೂ ಒಂದು ಲಕ್ಷದಷ್ಟು ಸೀಸೆಗಳನ್ನು ಪೂರೈಸಲಿದೆ.

ಇವಾ ಫಾರ್ಮಾ ಆರಂಭದಲ್ಲಿ ಸುಮಾರು 10,000 ಸೀಸೆಗಳನ್ನು ಪೂರೈಸಲಿದೆ. ನಂತರ ಪ್ರತಿ 15 ದಿನಗಳಿಗೊಮ್ಮೆ ಅಥವಾ ಜುಲೈ ವರೆಗೆ 50,000 ಸೀಸೆಗಳನ್ನು ಪೂರೈಸಲಿದೆ. ಸರ್ಕಾರವು ದೇಶದಲ್ಲೂ ರೆಮ್‌ಡೆಸಿವಿರ್‌ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದೆ.

2021ರ ಏಪ್ರಿಲ್ 24ರ ವೇಳೆಗೆ ಪರವಾನಿಗೆ ಪಡೆದ ಏಳು ದೇಶೀಯ ತಯಾರಕ ಸಂಸ್ಥೆಗಳು ಉತ್ಪಾದನಾ ಸಾಮರ್ಥ್ಯವನ್ನು ತಿಂಗಳಿಗೆ 38 ಲಕ್ಷ ಸೀಸೆಗಳಿಂದ 1.03 ಕೋಟಿ ಸೀಸೆಗಳಿಗೆ ಹೆಚ್ಚಿಸಿವೆ. ಕಳೆದ ಏಳು ದಿನಗಳಲ್ಲಿ ಔಷಧ ಕಂಪನಿಗಳು ದೇಶಾದ್ಯಂತ ಒಟ್ಟು 13.73 ಲಕ್ಷ ಸೀಸೆಗಳನ್ನು ಪೂರೈಸಿವೆ.

ಏಪ್ರಿಲ್ 11ರಂದು 67,900 ಸೀಸೆಗಳಷ್ಟಿದ್ದ ದೈನಂದಿನ ಪೂರೈಕೆ 2021ರ ಏಪ್ರಿಲ್ 28ರ ವೇಳೆಗೆ 2.09 ಲಕ್ಷ ಸೀಸೆಗಳಿಗೆ ಹೆಚ್ಚಾಗಿದೆ. ರೆಮ್‌ಡೆಸಿವಿರ್‌ ಸಾಗಣೆ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವಾಲಯ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದೆ.

ಭಾರತದಲ್ಲಿ ಔಷಧದ ಲಭ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೆಮ್‌ಡೆಸಿವಿರ್‌ ರಫ್ತನ್ನೂ ಸರ್ಕಾರ ನಿಷೇಧಿಸಿದೆ. ಜನಸಾಮಾನ್ಯರು ಕೈಗೆಟಕುವ ದರದಲ್ಲಿ ಈ ಚುಚ್ಚುಮದ್ದನ್ನು ಖರೀದಿಸುವಂತಾಗಲು, ʻಎನ್‌ಪಿಪಿಎʼ 2021ರ ಏಪ್ರಿಲ್17ರಂದು ಔಷಧದ ಪರಿಷ್ಕೃತ ಗರಿಷ್ಠ ಚಿಲ್ಲರೆ ಮಾರಾಟ ದರವನ್ನು ನಿಗದಿಪಡಿಸಿದೆ. ಇದರಿಂದಾಗಿ ಎಲ್ಲಾ ಪ್ರಮುಖ ಬ್ರಾಂಡ್‌ಗಳ ವೆಚ್ಚವು ಪ್ರತಿ ಸೀಸೆಗೆ 3500 ರೂ.ಗಿಂತಲೂ ಕಡಿಮೆಯಾಗಿದೆ.

Last Updated : Apr 30, 2021, 5:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.